ಹಳೆ ನಿಯಮ ತಿದ್ದುಪಡಿ, ನೀವು ಪಾಸ್‌ಪೋರ್ಟ್‌ಗೆ ಅರ್ಜಿ ಹಾಕುವಾಗ ಈ ದಾಖಲೆ ಕಡ್ಡಾಯ
ನೀವು ಪಾಸ್‌ಪೋರ್ಟ್‌ಗೆ ಪಡೆಯಲು ಅರ್ಜಿ ಹಾಕುತ್ತಿದ್ದೀರಾ? ಮಾರ್ಚ್ ತಿಂಗಳಿನಿಂದ ಹೊಸ ನಿಯಮ ಜಾರಿಯಾಗಿದೆ. ನೀವು ಪಾಸ್‌ಪೋರ್ಟ್ ಪಡೆಯಲು ನಿಮ್ಮಲ್ಲಿ ಈ ದಾಖಲೆ ಕಡ್ಡಾಯವಾಗಿ ಇರಬೇಕು. ಏನಿದು ಹೊಸ ನಿಯಮ?

ಭಾರತಕ್ಕೆ ಇದೀಗ ವಿಶ್ವದಲ್ಲಿ ಮಾನ್ಯತೆ ಇದೆ. ಭಾರತೀಯರನ್ನು ಗೌರವದಿಂದ ಕಾಣುತ್ತಾರೆ. ಅಮೆರಿಕ ಸೇರಿದಂತೆ ಹಲವು ದೇಶಗಳ ಪ್ರಮುಖ ಹುದ್ದೆಯಲ್ಲಿ ಭಾರತೀಯರಿದ್ದಾರೆ. ಸದ್ಯ ವಿಶ್ವ ಮಟ್ಟದಲ್ಲಿ ಭಾರತದ ಪಾಸ್‌ಪೋರ್ಟ್‌ಗೆ 80ನೇ ಸ್ಥಾನ. ಇದೀಗ ಭಾರತ ಪಾಸ್‌ಪೋರ್ಟ್ ನಿಯಮದಲ್ಲಿ ಕೆಲ ತಿದ್ದುಪಡಿ ಮಾಡಿದೆ. ಇಷ್ಟೇ ಅಲ್ಲ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಅಧಿಸೂಚನೆ ಹೊರಡಿಸಿರುವ ಈ ಆದೇಶ, ಸರ್ಕಾರಿ ಗೆಜೆಟ್‌ನಲ್ಲಿ ಪ್ರಕಟವಾದ ನಂತರ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಪಾಸ್‌ಪೋರ್ಟ್ ಪಡೆಯಲು ಹೊಸ ನಿಯಮ ಜಾರಿಗೊಳಿಸಲಾಗುತ್ತಿದೆ. ಇದು ಮತ್ತಷ್ಟು ಸುರಕ್ಷತೆಗೆ ನೆರವಾಗಲಿದೆ ಎಂದು ಸರ್ಕಾರ ಹೇಳಿದೆ.
ಸರ್ಕಾರದ ಹೊಸ ನಿಯಮದ ಪ್ರಕಾರ, ಅಕ್ಟೋಬರ್ 1, 2023 ರ ನಂತರ ಜನಿಸಿದವರು ಪಾಸ್‌ಪೋರ್ಟ್ ಪಡೆಯಲು ಬರ್ತ್ ಸರ್ಟಿಫಿಕೇಟ್ ಕಡ್ಡಾಯ ಇರಬೇಕು. ಪಾಸ್‌ಪೋರ್ಟ್ ಅರ್ಜಿ ಹಾಕುವಾಗ ಜನನ ಪ್ರಮಾಣ ಪತ್ರ ಲಗತ್ತಿಸಬೇಕು. ಈ ಜನನ ಪ್ರಮಾಣ ಪತ್ರ ಕೂಡ ವೆರಿಫಿಕೇಶನ್ ನಡೆಯಲಿದೆ. ಹೀಗಾಗಿ ಡೇಟ್ ಆಫ್ ಬರ್ತ್ ಕಡ್ಡಾಯವಾಗಿ ಇರಲೇಬೇಕು. ಇಲ್ಲದಿದ್ದರೂ 2023, ಅಕ್ಟೋಬರ್ 1ರ ಬಳಿಕ ಜನಿಸಿದವರು ಪಾಸ್‌ಪೋರ್ಟ್ ಪಡೆಯಲು ಸಾಧ್ಯವಿಲ್ಲ.
ಜನ್ಮ ಮತ್ತು ಮರಣ ನೋಂದಣಾಧಿಕಾರಿ, ಪುರಸಭೆ ಅಥವಾ 1969 ರ ಜನ್ಮ ಮತ್ತು ಮರಣ ನೋಂದಣಿ ಕಾಯಿದೆಯಡಿ ನೀಡಲಾದ ಜನ್ಮ ಪ್ರಮಾಣಪತ್ರವನ್ನು ಪರಿಗಣಿಸಲಾಗುತ್ತದೆ. ಅಕ್ಟೋಬರ್ 1, 2023ರ ಬಳಿಕ ಜನಿಸಿದವ ಬಹುತೇಕರಲ್ಲಿ ಜನನ ಪ್ರಮಾಣ ಪತ್ರ ಇದೆ. ಇಲ್ಲದಿದ್ದರೂ ಪಾಸ್‌ಪೋರ್ಟ್ ಪಡೆಯಲು ಜನ್ಮ ಮತ್ತು ಮರಣ ನೋಂದಣಾಧಿಕಾರಿ, ಪುರಸಭೆಯಿಂದ ಪತ್ರ ಮಾಡಿಸಿಕೊಳ್ಳಬೇಕು.
ಈ ಹಿಂದೆ ಜನ್ಮ ದಿನಾಂಕದ ಪುರಾವೆಯಾಗಿ ಡ್ರೈವಿಂಗ್ ಲೈಸೆನ್ಸ್ ಅಥವಾ 10ನೇ ತರಗತಿ ಶಾಲಾ ಪ್ರಮಾಣಪತ್ರ ನೀಡಬಹುದಿತ್ತು. ಈಗಲೂ 2023 ಅಕ್ಟೋಬರಿ 1ಕ್ಕಿಂತ ಹಿಂದೆ ಜನಿಸಿದವರಿಗೂ ಈ ನಿಯಮ ಅನ್ವಯವಾಗಲಿದೆ. ಆದರೆ ನಂತರ ಜನಿಸಿದವರಿಗೆ ಬರ್ತ್ ಸರ್ಟಿಫಿಕೇಟ್ ಕಡ್ಡಾಯ ಮಾಡಲಾಗಿದೆ. ಹೀಗಾಗಿ ಪಾಸ್‌ಪೋರ್ಟ್ ಅರ್ಜಿ ಸಲ್ಲಿಸುವಾಗ ಹೊಸ ನಿಯಮದ ಕುರಿತು ಗಮನಹರಿಸಿ, ಕೊನೆ ಕ್ಷಣದಲ್ಲಿ ಸಂಕಷ್ಟಕ್ಕೆ ಸಿಲುಕಬೇಡಿ.
ಪ್ರಸ್ತುತ ಭಾರತದಲ್ಲಿ ಮೂರು ರೀತಿಯ ಪಾಸ್‌ಪೋರ್ಟ್‌ಗಳನ್ನು ನೀಡಲಾಗುತ್ತದೆ: ಸಾಮಾನ್ಯ, ಅಧಿಕೃತ ಮತ್ತು ರಾಜತಾಂತ್ರಿಕ. ಸಾಮಾನ್ಯ ಪಾಸ್‌ಪೋರ್ಟ್ ಸಾಮಾನ್ಯ ನಾಗರಿಕರಿಗೆ. ಇದು 10 ವರ್ಷಗಳವರೆಗೆ ಮಾನ್ಯವಾಗಿರುತ್ತದೆ.ಅಧಿಕೃತ ಪಾಸ್‌ಪೋರ್ಟ್ ಅನ್ನು ಸರ್ಕಾರಿ ಅಧಿಕಾರಿಗಳ ವಿದೇಶ ಪ್ರವಾಸಕ್ಕಾಗಿ ನೀಡಲಾಗುತ್ತದೆ.ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಉನ್ನತ ಸರ್ಕಾರಿ ಅಧಿಕಾರಿಗಳು ಮತ್ತು ರಾಜತಾಂತ್ರಿಕರಿಗೆ ನೀಡಲಾಗುತ್ತದೆ.
ಪಾಸ್‌ಪೋರ್ಟ್ ಪ್ರಕ್ರಿಯೆ ಸುರಕ್ಷಿತ ಮಾಡಲು ಈ ನಿಯಮ ತರಲಾಗಿದೆ. ಹೊಸ ನಿಯಮದಿಂದ ಭಾರತದ ಪಾಸ್‌ಪೋರ್ಟ್ ಸುರಕ್ಷತೆ ಮತ್ತಷ್ಟು ಹೆಚ್ಚಾಗಲಿದೆ. ಇನ್ನು ವೆರಿಫಿಕೇಶನ್ ಪ್ರಕ್ರಿಯೆಯಲ್ಲಿ ಕೆಲ ಬದಲಾವಣೆಗೆ ಚಿಂತನೆ ನಡೆಸಲಾಗಿದೆ. ಈ ಮೂಲಕ ಭಾರತೀಯ ಪಾಸ್‌ಪೋರ್ಟ್ ಹೆಚ್ಚು ಸುರಕ್ಷಿತ ಮಾಡಲು ಕೇಂದ್ರ ಸರ್ಕಾರ ಭಾರಿ ತಯಾರಿ ನಡೆಸುತ್ತಿದೆ.