ರದ್ದಾದರೂ, 6691 ಕೋಟಿ ಮೌಲ್ಯದ 2000 ರು. ನೋಟು ಇನ್ನೂ ಜನರ ಬಳಿ: ಆರ್‌ಬಿಐ
ಚಲಾವಣೆಯಿಂದ ಹಿಂಪಡೆದ ನಂತರವೂ, ₹6691 ಕೋಟಿ ಮೌಲ್ಯದ 2000 ರೂ. ನೋಟುಗಳು ಇನ್ನೂ ಜನರ ಬಳಿಯೇ ಇವೆ ಎಂದು RBI ಹೇಳಿದೆ.
ಮುಂಬೈ: ಬಳಕೆಯಿಂದ ಹಿಂದಕ್ಕೆ ಪಡೆದರೂ, 2000 ರು. ಮುಖಬೆಲೆಯ 6691 ಕೋಟಿ ರು. ಮೌಲ್ಯದ ನೋಟುಗಳು ಇನ್ನೂ ಜನರ ಬಳಿಯೇ ಉಳಿದುಕೊಂಡಿದೆ ಎಂದು ಆರ್‌ಬಿಐ ಹೇಳಿದೆ. 2023 ಮೇ 19ರಂದು ಚಲಾವಣೆಯಿಂದ 2000 ಮುಖಬೆಲೆಯ ನೋಟು ಹಿಂಪಡೆವ ವೇಳೆ ಮಾರುಕಟ್ಟೆಯಲ್ಲಿ 3.56 ಲಕ್ಷ ಕೋಟಿ ರು. ಮೌಲ್ಯದ ನೋಟುಗಳು ಚಲಾವಣೆಯಲ್ಲಿತ್ತು. 2024ರ ಡಿ.31ರ ವೇಳೆಗೆ 6691 ಕೋಟಿ ರು. ಮೌಲ್ಯದ ನೋಟು ಹೊರತುಪಡಿಸಿ ಉಳಿದ ಶೇ.98.12ರಷ್ಟು ಆರ್‌ಬಿಐಗೆ ಮರಳಿದೆ ಎಂದು ಆರ್‌ಬಿಐ ಹೇಳಿದೆ.
2016ರಲ್ಲಿ ಹಳೆಯ 500 ರು. ಮತ್ತು 1000 ನೋಟುಗಳ ಅಮಾನ್ಯೀಕರಣ ವೇಳೆ ನೋಟಿನ ಕೊರತೆ ನೀಗಿಸುವ ಪರಿಚಯಿಸಿದ್ದ 2000 ಮುಖಬೆಲೆಯ ನೋಟುಗಳನ್ನು 2023ರ ಮೇನಲ್ಲಿ ಹಿಂಪಡೆಯಲು ಆರ್‌ಬಿಐ ನಿರ್ಧರಿಸಿತ್ತು.
ಭಾರತದ ಜಿಡಿಪಿ ಪ್ರಗತಿಯು ಶೇ.6.6
ಮುಂಬರುವ 2025ರಲ್ಲಿ ಭಾರತದ ಜಿಡಿಪಿ ಪ್ರಗತಿಯು ಶೇ.6.6ರಲ್ಲಿ ಇರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂದಾಜಿಸಿದೆ. ಹಣಕಾಸು ಸ್ಥಿರತಾ ವರದಿಯನ್ನು ಬಿಡುಗಡೆ ಮಾಡಿದ್ದು, 2023ರಲ್ಲಿ ಶೇ.8.2 ಮತ್ತು ಶೇ.8.1ರ ಬೆಳವಣಿಗೆಯಲ್ಲಿದ್ದ ಜೆಡಿಪಿಯು 2024ರಲ್ಲಿ ಶೇ.6ಕ್ಕೆ ಕುಸಿತಕಂಡಿತ್ತು. ಆದರೆ ಮುಂಬರುವ ವರ್ಷದಲ್ಲಿ ಶೇ.6.6 ಇರಲಿದೆ. ಬ್ಯಾಂಕಿಂಗ್‌ನಲ್ಲಿನ ಗುಣಾತ್ಮಕ ಬದಲಾವಣೆ, ಸರ್ವೀಸ್ ಕ್ಷೇತ್ರದಲ್ಲಿನ ರಫ್ತು, ಹೂಡಿಕೆಯಲ್ಲಿ ಹೆಚ್ಚಳ ಮತ್ತು ಸುಲಲಿತ ಹಣಕಾಸು ಪರಿಸ್ಥಿತಿಯು ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಪ್ರಗತಿಗೆ ಕಾರಣವಾಗಲಿದೆ. ಹವಾಮಾನ ಬದಲಾವಣೆಯಿಂದಾಗ ಆಹಾರ ಪದಾರ್ಥಗಳ ಹಣದುಬ್ಬರ ಏರಿಕೆಯಾಗಲಿದೆ’ ಎಂದು ಹೇಳಿದೆ.
ಇದನ್ನೂ ಓದಿ: ಜನವರಿ 1 ರಿಂದ 3 ಬಗೆಯ ಬ್ಯಾಂಕ್ ಖಾತೆಗಳನ್ನು ಮುಚ್ಚಲು ನಿರ್ಧರಿಸಿದ ಆರ್‌ಬಿಐ
ರೈತರಿಗೆ 2ಲಕ್ಷ ವರೆಗೆ ಖಾತರಿ ರಹಿತ ಸಾಲ: ಆರ್‌ಬಿಐ ಆದೇಶ
ಜ.1ರಿಂದ ಜಾರಿಗೆ ಬರುವಂತೆ ರೈತರ ಖಾತರಿ ರಹಿತ ಸಾಲದ ಮಿತಿಯನ್ನು 1.6 ಲಕ್ಷ ದಿಂದ 2 ಲಕ್ಷ ರು.ಗೇರಿಸಿ ಆರ್‌ಬಿಐ ಆದೇಶಿಸಿದೆ. ಆರ್‌ಬಿಐನ ಈ ನಡೆಯಿಂದ ದೇಶದ ಸಣ್ಣ ಮತ್ತು ಬಡ ರೈತರಿಗೆ ಅನುಕೂಲ ಆಗಲಿದೆ.
ಕೃಷಿ ಸಚಿವಾಲಯ ಪ್ರಕಾರ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಕ್ಕೆ ಪರಿಹಾರವಾಗಿ ಮತ್ತು ಕೃಷಿ ಸಾಲದಲ್ಲಿ ಸುಧಾರಣೆ ತರಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ದೇಶದಲ್ಲಿ ಶೇ.86ರಷ್ಟಿರುವ ಸಣ್ಣ ಮತ್ತು ಬಡ ರೈತರಿಗೆ ಅನುಕೂಲ ಆಗಲಿದೆ. ಶೇ.4 ಬಡ್ಡಿದರದಲ್ಲಿ 3ಲಕ್ಷ ವರೆಗೆ ಸಾಲ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಸುಧಾರಿತ ಬಡ್ಡಿ ಸಹಾಯಧನ ಯೋಜನೆಯ ಅನುಕೂಲ ಪಡೆಯುವುದು ರೈತರಿಗೆ ಮತ್ತಷ್ಟು ಸುಲಭವಾಗಲಿದೆ.
ಇದನ್ನೂ ಓದಿ: 5 ಸಾವಿರ ರೂಪಾಯಿ ನೋಟು ರಿಲೀಸ್ ಆಗಲಿದ್ಯಾ? ಆರ್‌ಬಿಐ ಹೇಳಿದ್ದಿಷ್ಟು