1950ರ ಜನವರಿ 26 ರಂದು ಭಾರತ ಗಣರಾಜ್ಯವಾದರೂ, ಅದರ ಹಿಂದಿನ 'ಪೂರ್ಣ ಸ್ವರಾಜ್' ಶಪಥ, ಸಂವಿಧಾನ ರಚನೆಯ ಮೂರು ವರ್ಷಗಳ ಶ್ರಮ ಮತ್ತು ಮೊದಲ ಪರೇಡ್ ಇರ್ವಿನ್ ಕ್ರೀಡಾಂಗಣದಲ್ಲಿ ನಡೆದಂತಹ ಅನೇಕ ರೋಚಕ ಸತ್ಯಗಳಿವೆ. ಈ ಲೇಖನವು ಗಣರಾಜ್ಯೋತ್ಸವದ ಕುರಿತಾದ ಇಂತಹ ಅಜ್ಞಾತ ಐತಿಹಾಸಿಕ ಸಂಗತಿಗಳನ್ನು ಅನಾವರಸಿದೆ.
ಭಾರತವು 2026ರ ಜನವರಿ 26 ರಂದು ತನ್ನ ಗಣರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲು ಸಜ್ಜಾಗಿದೆ. ಕೇವಲ ಪರೇಡ್ ಮತ್ತು ಸಾಂಸ್ಕೃತಿಕ ವೈಭವವನ್ನಷ್ಟೇ ಕಾಣುವ ನಮಗೆ, ಈ ದಿನದ ಹಿಂದೆ ಅಡಗಿರುವ ಐತಿಹಾಸಿಕ ರಹಸ್ಯಗಳು ಮತ್ತು ರೋಚಕ ಸಂಗತಿಗಳು ತಿಳಿದಿರುವುದು ವಿರಳ. ನಮ್ಮ ಸಂವಿಧಾನ ಹೇಗೆ ಜನಸಾಮಾನ್ಯರ ಧ್ವನಿಯಾಯಿತು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಸ್ವಾತಂತ್ರ್ಯ ಬಂದರೂ ಭಾರತ ತಕ್ಷಣವೇ ಗಣರಾಜ್ಯವಾಗಿರಲಿಲ್ಲ!
1947ರ ಆಗಸ್ಟ್ 15 ರಂದು ಬ್ರಿಟಿಷರಿಂದ ಮುಕ್ತಿ ಸಿಕ್ಕರೂ, ಭಾರತ ಕೂಡಲೇ ಸಂಪೂರ್ಣ ಸ್ವತಂತ್ರ ಗಣರಾಜ್ಯವಾಗಿರಲಿಲ್ಲ. ಎರಡು ವರ್ಷಗಳಿಗೂ ಹೆಚ್ಚು ಕಾಲ ದೇಶವು ಸಾಂವಿಧಾನಿಕ ರಾಜಪ್ರಭುತ್ವದ ಅಡಿಯಲ್ಲೇ ಇತ್ತು. ಬ್ರಿಟಿಷ್ ದೊರೆಯ ಪರವಾಗಿ ಗವರ್ನರ್ ಜನರಲ್ ಇಲ್ಲಿನ ಆಡಳಿತದ ಮುಖ್ಯಸ್ಥರಾಗಿದ್ದರು. 1950ರ ಜನವರಿ 26 ರಂದು ಸಂವಿಧಾನ ಜಾರಿಯಾದ ಬಳಿಕವೇ ನಾವು ಅಧಿಕೃತವಾಗಿ 'ಗಣರಾಜ್ಯ' ಎಂಬ ಹೆಗ್ಗಳಿಕೆಗೆ ಪಾತ್ರವಾದೆವು.
ಜನವರಿ 26 ದಿನಾಂಕದ ಹಿಂದಿದೆ 'ಪೂರ್ಣ ಸ್ವರಾಜ್' ಶಪಥ!
ಗಣರಾಜ್ಯೋತ್ಸವಕ್ಕೆ ಜನವರಿ 26ನ್ನೇ ಏಕೆ ಆರಿಸಲಾಯಿತು ಗೊತ್ತೇ? ಇದರ ಬೇರು 1930ರ ಜನವರಿ 26ರಲ್ಲಿದೆ. ಅಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟಿಷರ ವಿರುದ್ಧ 'ಪೂರ್ಣ ಸ್ವರಾಜ್' (ಸಂಪೂರ್ಣ ಸ್ವಾತಂತ್ರ್ಯ) ಘೋಷಿಸಿತ್ತು. ಸುಮಾರು 17 ವರ್ಷಗಳ ಕಾಲ ಈ ದಿನವನ್ನೇ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತಿತ್ತು. ಆ ಐತಿಹಾಸಿಕ ಭರವಸೆಗೆ ಗೌರವ ನೀಡಲು 1950ರಲ್ಲಿ ಇದೇ ದಿನಾಂಕವನ್ನು ಸಂವಿಧಾನ ಜಾರಿಗೆ ಆಯ್ಕೆ ಮಾಡಲಾಯಿತು.
ವಿಶ್ವದ ಬೃಹತ್ ಸಂವಿಧಾನಕ್ಕೆ ಬೇಕಾಯಿತು ಮೂರು ವರ್ಷಗಳ ಶ್ರಮ!
ನಮ್ಮ ಸಂವಿಧಾನ ಅಷ್ಟು ಸುಲಭವಾಗಿ ಸಿದ್ಧವಾಗಿದ್ದಲ್ಲ. ಇದನ್ನು ರಚಿಸಲು ಬರೋಬ್ಬರಿ 2 ವರ್ಷ, 11 ತಿಂಗಳು ಮತ್ತು 18 ದಿನಗಳ ಕಾಲ ಸತತ ಚರ್ಚೆಗಳು ನಡೆದವು. ಒಟ್ಟು 11 ಅಧಿವೇಶನಗಳಲ್ಲಿ 165 ದಿನಗಳ ಕಾಲ ನಡೆದ ಈ ಮಂಥನದಲ್ಲಿ ದೇಶದ ಪ್ರತಿಯೊಂದು ವೈವಿಧ್ಯತೆ ಮತ್ತು ಮೌಲ್ಯಗಳನ್ನು ಗಣನೆಗೆ ತೆಗೆದುಕೊಂಡು ಅಂತಿಮ ಹಸ್ತಪ್ರತಿ ಸಿದ್ಧಪಡಿಸಲಾಯಿತು.
ಮೂಲ ಸಂವಿಧಾನವನ್ನು ಕೈಯಿಂದ ಬರೆಯಲಾಗಿದೆ
ಹೆಚ್ಚಿನ ರಾಷ್ಟ್ರಗಳ ಸಂವಿಧಾನಗಳು ಟೈಪ್ ಅಥವಾ ಪ್ರಿಂಟ್ ಆಗಿವೆ. ಆದರೆ ಭಾರತದ ಮೂಲ ಸಂವಿಧಾನವನ್ನು ಪ್ರೇಮ್ ಬಿಹಾರಿ ನರೈನ್ ರೈಜಾಡಾ ಅವರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸುಂದರವಾದ ಕ್ಯಾಲಿಗ್ರಫಿ ಶೈಲಿಯಲ್ಲಿ ಕೈಯಿಂದಲೇ ಬರೆದಿದ್ದಾರೆ. ಪ್ರತಿಯೊಂದು ಪುಟವನ್ನೂ ಕಲಾತ್ಮಕವಾಗಿ ಅಲಂಕರಿಸಲಾಗಿದ್ದು, ಈ ಅಸಲಿ ಪ್ರತಿಗಳನ್ನು ಇಂದಿಗೂ ಸಂಸತ್ತಿನ ಗ್ರಂಥಾಲಯದಲ್ಲಿ ವಿಶೇಷವಾಗಿ ಸಂರಕ್ಷಿಸಿಡಲಾಗಿದೆ.
ಅಂಬೇಡ್ಕರ್ ನೇತೃತ್ವದಲ್ಲಿ ಮಿಂಚಿದ 300 ಧೀಮಂತ ಶಕ್ತಿಗಳು
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮುಖ್ಯ ಶಿಲ್ಪಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರೊಂದಿಗೆ 300ಕ್ಕೂ ಹೆಚ್ಚು ತಜ್ಞ ಸದಸ್ಯರು ತಂಡವಾಗಿ ಕೆಲಸ ಮಾಡಿದ್ದರು. ಈ ಬೃಹತ್ ತಂಡದ ಸಾಮೂಹಿಕ ಪ್ರಯತ್ನದಿಂದಾಗಿ ಭಾರತೀಯರಿಗೆ ಸಮಾನತೆ, ನ್ಯಾಯ ಮತ್ತು ವೈಯಕ್ತಿಕ ಹಕ್ಕುಗಳ ಅಡಿಪಾಯ ಸಿಗುವಂತಾಯಿತು.
ಭಾರತದ ಮೊದಲ ಗಣರಾಜ್ಯೋತ್ಸವ ಮೆರವಣಿಗೆ ಬೇರೆಡೆ ನಡೆಯಿತು
ಇಂದು ನಮಗೆಲ್ಲಾ ಗಣರಾಜ್ಯೋತ್ಸವ ಅಂದ ಕೂಡಲೇ ರಾಜ್‌ಪಥ್ (ಈಗಿನ ಕರ್ತವ್ಯ ಪಥ್) ನೆನಪಾಗುತ್ತದೆ. ಆದರೆ 1950ರ ಮೊದಲ ಮೆರವಣಿಗೆ ನಡೆದಿದ್ದು ದೆಹಲಿಯ ಇರ್ವಿನ್ ಕ್ರೀಡಾಂಗಣದಲ್ಲಿ (ರಾಷ್ಟ್ರೀಯ ಕ್ರೀಡಾಂಗಣ). 1955ರ ನಂತರವಷ್ಟೇ ರಾಜ್‌ಪಥ್ ಈ ಮೆರವಣಿಗೆಯ ಶಾಶ್ವತ ತಾಣವಾಯಿತು.
ಬ್ರಿಟಿಷ್ ರಾಜನನ್ನು ಬದಲಾಯಿಸಿದ ಅಧ್ಯಕ್ಷರು!
1950ರ ಗಣರಾಜ್ಯೋತ್ಸವದ ಪ್ರಮುಖ ಘಟನೆಯೆಂದರೆ ಡಾ. ರಾಜೇಂದ್ರ ಪ್ರಸಾದ್ ಅವರು ಭಾರತದ ಮೊದಲ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದು. ಇದು ಬ್ರಿಟಿಷ್ ವಸಾಹತುಶಾಹಿ ಅಧಿಕಾರದ ಸಂಪೂರ್ಣ ಅಂತ್ಯದ ಸಂಕೇತವಾಗಿತ್ತು. ಭಾರತ ತನ್ನದೇ ಆದ ಸಾರ್ವಭೌಮ ಮುಖ್ಯಸ್ಥರನ್ನು ಹೊಂದುವ ಮೂಲಕ ವಿಶ್ವದ ಬಲಿಷ್ಠ ಪ್ರಜಾಪ್ರಭುತ್ವವಾಗಿ ಅಂದೇ ಅಡಿಯಿಟ್ಟಿತು.
ಆಚರಣೆಯ ಘನವಾದ ಮುಕ್ತಾಯವೇ 'ಬೀಟಿಂಗ್ ರಿಟ್ರೀಟ್'
ಜನವರಿ 26ರ ಮೆರವಣಿಗೆಯ ನಂತರ, ಆಚರಣೆಗಳು ಅಧಿಕೃತವಾಗಿ ಮುಕ್ತಾಯಗೊಳ್ಳುವುದು ಜನವರಿ 29ರಂದು ನಡೆಯುವ 'ಬೀಟಿಂಗ್ ರಿಟ್ರೀಟ್' ಮೂಲಕ. ಮಿಲಿಟರಿ ಬ್ಯಾಂಡ್‌ಗಳ ದೇಶಭಕ್ತಿ ಸಂಗೀತದ ನಡುವೆ ಗೌರವಪೂರ್ವಕವಾಗಿ ಧ್ವಜಗಳನ್ನು ಕೆಳಗಿಳಿಸಲಾಗುತ್ತದೆ. ಇದು ನಮ್ಮ ಸಶಸ್ತ್ರ ಪಡೆಗಳ ಶಿಸ್ತು ಮತ್ತು ಸಂಪ್ರದಾಯವನ್ನು ಪ್ರತಿಬಿಂಬಿಸುವ ಒಂದು ಗಂಭೀರ ಮತ್ತು ಶಾಂತಿಯುತ ಸಮಾರಂಭವಾಗಿದೆ.


