ಮನೆ ಮುಂದೆ ಹಸು ಸಗಣಿ ಹಾಕಿದ ವಿಚಾರಕ್ಕೆ ಸಂಬಂಧಿಕರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ. ತಾಯಿ ಮತ್ತು ಅತ್ತೆಯ ಜಗಳ ಬಿಡಿಸಲು ಹೋದ ಕಾನೂನು ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.
ನವದೆಹಲಿ: ಹಸುವಿನ ಸೆಗಣಿಗೆ ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಭಾವವಿದೆ. ಮನೆಯಲ್ಲಿ ನಡೆಯುವ ಪೂಜ ಕಾರ್ಯ ಅಥವಾ ಸುದ್ದಿ ಕಾರ್ಯಗಳಲ್ಲಿ ಗೋಮಯ ಇರಲೇಬೇಕು. ಆದರೆ ಇಲ್ಲೊಂದು ಕಡೆ ಮನೆ ಮುಂದೆ ಹಸು ಸಗಣಿ ಹಾಕಿದ್ದಕ್ಕೆ ಯುವಕನ ಕೊಲೆಯೇ ನಡೆದಿದೆ. ಹೌದು ಮನೆ ಮುಂದೆ ಹಸು ಸಗಣಿ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರ ಮಧ್ಯೆಯೇ ನಡೆದ ಜಗಳ ಯುವಕನ ಕೊಲೆಯೊಂದರಲ್ಲಿ ಅಂತ್ಯವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಸಂಗಮ್ ವಿಹಾರದ ಬಳಿ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಕೊಲೆಯಾದ ಹಾಗೂ ಕೊಲೆ ಮಾಡಿದ ಎರಡು ಕುಟುಂಬಗಳು ಪರಸ್ಪರ ಅಕ್ಕಪಕ್ಕದ ಮನೆಯ ನಿವಾಸಿಗಳಾಗಿದ್ದು, ಸಂಬಂಧಿಕರು ಕೂಡ ಆಗಿದ್ದಾರೆ. ಕೊಲೆಯಾದ ಯುವಕನ ತಾಯಿ ಮನೆಯಲ್ಲಿ ಒಂದು ಹಸುವನ್ನು ಸಾಕಿದ್ದರು. ಈ ಹಸು ಹಾಕಿದ ಸಗಣಿಯ ವಿಚಾರಕ್ಕೆ ಯುವಕನ ತಾಯಿ ಹಾಗೂ ಪಕ್ಕದ ಮನೆಯಲ್ಲಿ ವಾಸ ಮಾಡ್ತಿದ್ದ ಆಕೆಯ ಅತ್ತಿಗೆಯ ಮಧ್ಯೆ ಆಗಾಗ ಜಗಳಗಳಾಗುತ್ತಿದ್ದವು.
ಶುಕ್ರವಾರ ವಾಗ್ವಾದ ವಿಕೋಪಕ್ಕೆ ತಿರುಗಿದೆ. ಈ ವೇಳೆ ಮಹಿಳೆಯ ಮಗ ಈ ಕೊಲೆಯಾದ ಯುವಕ ತಾಯಿ ಹಾಗೂ ಅತ್ತೆಯ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದಾನೆ. ಆದರೆ ಜಗಳ ಮತ್ತಷ್ಟು ತೀವ್ರಗೊಂಡಿದೆ. ಈ ವೇಳೆ ಯುವಕ ಅತ್ತೆ ತನ್ನ ಪತಿ ಹಾಗೂ ತನ್ನ ಅಪ್ರಾಪ್ತ ವಯಸ್ಕ ಮಗನನ್ನು ಸ್ಥಳಕ್ಕೆ ಕರೆಸಿದ್ದಾರೆ. ನಂತರ ನಡೆದ ಗಲಾಟೆಯಲ್ಲಿ ಆರೋಪಿಗಳು ಯುವಕನಿಗೆ ಚಾಕುವಿನಿಂದ ಇರಿದಿದ್ದಾರೆ.
ಮೃತ ಯುವಕನ ಸಹೋದರಿ ಹೇಳುವಂತೆ, ತನ್ನ ತಾಯಿ ಮನೆಯ ಬಳಿ ತ್ಯಾಜ್ಯ ಹಾಕುವ ಬಗ್ಗೆ ನೆರೆಹೊರೆಯವರೊಂದಿಗೆ ಮಾತನಾಡುತ್ತಿದ್ದಾಗ ನಮ್ಮ ಅತ್ತೆ ಅವಳನ್ನು ನಿಂದಿಸಲು ಪ್ರಾರಂಭಿಸಿದರು. ಈ ವೇಳೆ ಅಲ್ಲಿಗೆ ಹೋದ ನನ್ನ ಸಹೋದರ ಮೊದಲು ನನ್ನ ತಾಯಿಯನ್ನು ಅಲ್ಲಿಂದ ಒಳಗೆ ಕರೆದೊಕೊಂಡು ಹೋಗಿದ್ದಾನೆ. ಆದರೆ ಅವನು ಮತ್ತೆ ಹೊರಗೆ ಬಂದಾಗ ಅವರು ಹಲ್ಲೆ ನಡೆಸಿದರು. ಒಬ್ಬ ವ್ಯಕ್ತಿ ನನ್ನ ಸಹೋದರನನ್ನು ಹಿಂದಿನಿಂದ ಹಿಡಿದುಕೊಂಡರೆ, ಇನ್ನೊಬ್ಬ ಅವನಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಯುವಕನ ಸೋದರಿ ಕಣ್ಣೀರಿಟ್ಟಿದ್ದಾರೆ. ಯುವಕನ ಕೊಲೆ ಮಾಡಿದ ಇಬ್ಬರು ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವಕ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೃತನ ಅತ್ತೆ ಹಾಗೂ ಆತನ 15 ವರ್ಷದ ಸೋದರ ಸಂಬಂಧಿಯನ್ನು ಬಂಧಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವ ಬಗ್ಗೆ ಗಲಾಟೆಯೇ ಈ ಕೊಲೆಗೆ ಕಾರಣವಾಗಿದೆ. ಮೃತ ಯುವಕ ಪ್ರಥಮ ವರ್ಷದ ಎಲ್‌ಎಲ್‌ಬಿ ಓದುತ್ತಿದ್ದ ಎಂದು ತಿಳಿದು ಬಂದಿದೆ. ಬೆಳಿಗ್ಗೆ 11.30 ರ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಘಟನೆಯ ಬಗ್ಗೆ ಕರೆ ಬಂದಿತು, ಅದರ ನಂತರ ಪೊಲೀಸ್ ತಂಡ ಸ್ಥಳಕ್ಕೆ ತಲುಪಿದಾಗ ವಿದ್ಯಾರ್ಥಿ ಗಾಯಗೊಂಡಿರುವುದು ಕಂಡು ಬಂದಿತು. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು, ಆತ ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಹಸು ಸೆಗಣಿ ಹಾಕುವ ವಿಚಾರಕ್ಕೆ ಆರಂಭವಾದ ಜಗಳವೊಂದು ಯುವಕನ ಕೊಲೆಯಲ್ಲಿ ಅಂತ್ಯವಾಗಿರುವುದು ವಿಪರ್ಯಾಸವೇ ಸರಿ.

