Asianet Suvarna News Asianet Suvarna News

ಅಪರಿಚಿತರಿಂದ ಪ್ರಾದೇಶಿಕ ಪಕ್ಷಗಳಿಗೆ 445.77 ಕೋಟಿ ರು.

  • 2019-20ನೇ ಸಾಲಿನಲ್ಲಿ ದೇಶದ ಪ್ರಾದೇಶಿಕ ಪಕ್ಷಗಳು ಅಪರಿಚಿತ ಮೂಲಗಳಿಂದ ಬರೋಬ್ಬರಿ 445.774 ಕೋಟಿ ರು. ದೇಣಿಗೆ
  • ಪ್ರಾದೇಶಿಕ ಪಕ್ಷಗಳಿಗೆ ಲಭಿಸಿದ ಒಟ್ಟಾರೆ ಆದಾಯದಲ್ಲಿ ಇಂತಹ ದೇಣಿಗೆಯ ಪಾಲು ಶೇ.55.50ರಷ್ಟಿದೆ
regional parties in india earned rs 445  crore from unknown sources snr
Author
Bengaluru, First Published Nov 12, 2021, 11:20 AM IST

ನವದೆಹಲಿ (ನ.12):  2019-20ನೇ ಸಾಲಿನಲ್ಲಿ ದೇಶದ ಪ್ರಾದೇಶಿಕ ಪಕ್ಷಗಳು ಅಪರಿಚಿತ ಮೂಲಗಳಿಂದ ಬರೋಬ್ಬರಿ 445.774 ಕೋಟಿ ರು. ದೇಣಿಗೆಯನ್ನು ಸ್ವೀಕಾರ ಮಾಡಿವೆ. ಆ ವರ್ಷದಲ್ಲಿ ಪ್ರಾದೇಶಿಕ ಪಕ್ಷಗಳಿಗೆ (local parties) ಲಭಿಸಿದ ಒಟ್ಟಾರೆ ಆದಾಯದಲ್ಲಿ (Income) ಇಂತಹ ದೇಣಿಗೆಯ ಪಾಲು ಶೇ.55.50ರಷ್ಟಿದೆ ಎಂದು ಚುನಾವಣಾ ಹಕ್ಕುಗಳ ಪರ ಹೋರಾಡುವ ಅಸೋಸಿಯೇಷನ್‌ ಫಾರ್‌ ಡೆಮೊಕ್ರಟಿಕ್‌ ರೀಫಾರ್ಮ್ (ADR) ಸಂಸ್ಥೆ ಹೇಳಿದೆ.

ಪ್ರತಿ ವರ್ಷ ಚುನಾವಣಾ ಆಯೋಗಕ್ಕೆ (Election comission) ರಾಜಕೀಯ ಪಕ್ಷಗಳು (Political parties) ತಮ್ಮ ಆದಾಯ ತೆರಿಗೆ ರಿಟರ್ನ್‌ (Income tax) ಹಾಗೂ ದೇಣಿಗೆ ಕುರಿತ ವಿವರವನ್ನು ನೀಡುತ್ತವೆ. ಆದರೆ 20 ಸಾವಿರ ರು. ಒಳಗೆ ದೇಣಿಗೆ ನೀಡಿದ ವ್ಯಕ್ತಿ ಅಥವಾ ಸಂಘಟನೆಗಳ ಹೆಸರನ್ನು ಬಹಿರಂಗಪಡಿಸಬೇಕಿಲ್ಲ. ಇದರ ಪರಿಣಾಮವಾಗಿ ರಾಜಕೀಯ ಪಕ್ಷಗಳಿಗೆ 20 ಸಾವಿರ ರು. ಒಳಗಿನ ದೇಣಿಗೆ ರೂಪದಲ್ಲೇ ಬಹುತೇಕ ಕೊಡುಗೆ ಬರುತ್ತದೆ. ಕೊಟ್ಟವರ ಹೆಸರು ಬಹಿರಂಗವಾಗುವುದಿಲ್ಲ ಎಂದು ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

445.774 ಕೋಟಿ ರು. ಪೈಕಿ ಶೇ.95.616ರಷ್ಟುಅಂದರೆ 426.233 ಕೋಟಿ ರು. ಚುನಾವಣಾ ಬಾಂಡ್‌ಗಳ (Election Bond) ರೂಪದಲ್ಲಿ ಬಂದಿದೆ. 4.976 ಕೋಟಿ ರು. ಸ್ವಯಂ ಪ್ರೇರಿತ ದೇಣಿಗೆಯಿಂದ ಸಿಕ್ಕಿದೆ ಎಂದು ಪಕ್ಷಗಳು ಹೇಳಿಕೊಂಡಿವೆ.

ಯಾವ ಪಕ್ಷಕ್ಕೆ ಎಷ್ಟು?:  ಅಪರಿಚಿತ ಮೂಲದಿಂದ ಅತಿ ಹೆಚ್ಚು ದೇಣಿಗೆ ಸ್ವೀಕರಿಸಿರುವ ಪ್ರಾದೇಶಿಕ ಪಕ್ಷಗಳ ಪಟ್ಟಿಯಲ್ಲಿ ಅವಿಭಜಿತ ಆಂಧ್ರ ಪ್ರದೇಶದ ಮೂರು ಪಕ್ಷಗಳೇ ಪ್ರಥಮ ಮೂರು ಸ್ಥಾನದಲ್ಲಿವೆ.

ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್‌ ಮೊದಲ ಸ್ಥಾನದಲ್ಲಿದೆ. ಆ ಪಕ್ಷಕ್ಕೆ 89.158 ಕೋಟಿ ರು. ಲಭಿಸಿದೆ. ತೆಲುಗುದೇಶಂ (81.694), ಆಂಧ್ರ ಪ್ರದೇಶದ (Andhra pradesh) ಆಡಳಿತಾರೂಢ ವೈಎಸ್ಸಾರ್‌ (YSR) ಕಾಂಗ್ರೆಸ್‌ (Congress) (74.75 ಕೋಟಿ ರು.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಬಿಜೆಡಿ (50,586 ಕೋಟಿ ರು.) ಹಾಗೂ ಡಿಎಂಕೆ (45.50 ಕೋಟಿ ರು.) ನಂತರದ ಸ್ಥಾನದಲ್ಲಿವೆ.

ಯಾವ ಪಕ್ಷಕ್ಕೆ ಎಷ್ಟು?

1. ಟಿಆರ್‌ಎಸ್‌ .89 ಕೋಟಿ

2. ತೆಲುಗುದೇಶಂ .81 ಕೋಟಿ

3. ವೈಎಸ್ಸಾರ್‌ .74 ಕೋಟಿ

4. ಬಿಜೆಡಿ .50 ಕೋಟಿ

5. ಡಿಎಂಕೆ .45 ಕೋಟಿ

ಪ್ರಾದೇಶಿಕ ಪಕ್ಷಗಳು ದುರ್ಬಲವಾಗುತ್ತವೆಯೇ..?

ದೇಶ ಸಾಂಸ್ಥಿಕ ಸುಸ್ಥಿರತೆಯತ್ತ ಮುನ್ನಡೆಯುತ್ತಿದೆ. ಸಂಸ್ಥೆಗಳು ಸಬಲವಾಗಿದ್ದರೆ ದೇಶ ಪ್ರಬಲವಾಗುತ್ತದೆ. ಸಂವಿಧಾನಾತ್ಮಕ ಅಧಿಕಾರವನ್ನು ಹೊಂದಿದ ಸಂಸ್ಥೆಗಳು ಕ್ರಮಬದ್ಧವಾದ ಕಾರ್ಯಭಾರವನ್ನು ಮಾಡುವಂತಹ ವಾತಾವರಣ ಮತ್ತು ಕಟ್ಟುಪಾಡು ಇಂದು ನಿರ್ಮಾಣವಾಗುತ್ತಿದೆ.

ಗುಣಾತ್ಮಕ ಬದಲಾವಣೆಯ ಮೂಲಕ ದೇಶದ ಪ್ರಗತಿಗೆ ಈ ಸಂಸ್ಥೆಗಳು ಅಣಿಯಾಗಿವೆ. ನಿಗದಿತ ಮತ್ತು ನಿಸ್ಪಕ್ಷಪಾತ ಚುನಾವಣೆಗಳನ್ನು ನಡೆಸುವ ಮೂಲಕ ಚುನಾವಣಾ ಆಯೋಗ ಪ್ರಜಾಪ್ರಭುತ್ವ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಈಗ ಅದರ ಕಾರ್ಯಕ್ಷಮತೆಯನ್ನು ಮತ್ತಷ್ಟುಹೆಚ್ಚಿಸುವ, ಅನಪೇಕ್ಷಿತ ಒತ್ತಡವನ್ನು ಕಡಿಮೆ ಮಾಡುವ, ಚುನಾವಣೆಯ ನೆಪದಲ್ಲಿ ಇಡೀ ಸರ್ಕಾರಿ ಯಂತ್ರ ಜನರ ಕುಂದುಕೊರತೆಗಳನ್ನು ಆಲಿಸುವ, ಪರಿಹರಿಸುವ ಮೂಲಭೂತ ಕೆಲಸವನ್ನು ಬಿಟ್ಟು ತಿಂಗಳುಗಟ್ಟಲೆ ಚುನಾವಣಾ ಕೆಲಸವನ್ನು ಮಾಡುವುದನ್ನು ತಪ್ಪಿಸುವ ಹಾಗೂ ಜನಪರ ಅಭಿವೃದ್ಧಿಗೆ ಬಳಕೆಯಾಗಬೇಕಾದ ಅಪಾರ ಹಣ ಚುನಾವಣಾ ವೆಚ್ಚಕ್ಕೆ ಪೋಲಾಗುವುದನ್ನು ತಗ್ಗಿಸುವ ಮಹತ್ತರವಾದ ಆಲೋಚನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ.

ಅದುವೇ ಒಂದು ದೇಶ ಒಂದು ಚುನಾವಣೆ ಎಂಬ ಚಿಂತನೆ. ಚುನಾವಣೆ ಆಯೋಗ ಸಹ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕ ಚುನಾವಣೆ ನಡೆಸಲು ಸಿದ್ಧ ಎಂದು ತನ್ನ ಸಮ್ಮತಿ ಸೂಚಿಸಿದೆ. ಈ ಆಲೋಚನೆ ಕಾರ್ಯಗತವಾಗಬೇಕಾದರೆ ಚುನಾವಣಾ ನಿಯಮಗಳಿಗೆ ತಿದ್ದುಪಡಿ ತರಬೇಕಾಗಿದೆ.

ಚುನಾವಣಾ ವೆಚ್ಚ ಇಳಿಕೆ

ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಸಂಸತ್ತಿನವರೆಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಲುವಾಗಿ ದೇಶದ ಒಂದಿಲ್ಲೊಂದು ಭಾಗದಲ್ಲಿ ನಿರಂತರ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಕಾಲಕಾಲಕ್ಕೆ ನಡೆಯುವ ಚುನಾವಣೆಗಳು ಪ್ರಜಾಪ್ರಭುತ್ವದ ಜೀವಂತಿಕೆಯನ್ನು ಪ್ರತಿನಿಧಿಸುತ್ತವೆ. ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬಗಳು. ಆದರೆ ಅಕಾಲಿಕವಾಗಿ ನಡೆಯುವ ಚುನಾವಣೆಗಳು ಪ್ರಜಾಪ್ರಭುತ್ವದ ವಿರೂಪತೆಯನ್ನು ತೋರಿಸುತ್ತವೆæ. ಈ ಹಿನ್ನೆಲೆಯಲ್ಲಿ ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳಿಗೆ ಏಕಕಾಲಕ್ಕೆ ಚುನಾವಣೆಯನ್ನು ನಡೆಸುವ ಮೂಲಕ ಚುನಾವಣಾ ವೆಚ್ಚವನ್ನು ತಗ್ಗಿಸಬಹುದು. ಆದರೆ, ಲೋಕಸಭೆ ಮತ್ತು ರಾಜ್ಯ ಶಾಸನಸಭೆಗಳಿಗೆ ಏಕ ಚುನಾವಣೆ ನಡೆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಅಥವಾ ರಾಷ್ಟ್ರೀಯ ಪಕ್ಷಗಳು ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆಯುವ ಅವಕಾಶವಿದೆ.

ಇದು ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ ಏಕ ಚುನಾವಣೆ ನಡೆಸುವ ಸಲುವಾಗಿ ಸದ್ಯ ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳನ್ನು ಪದಚ್ಯುತಗೊಳಿಸಬೇಕಾಗುತ್ತದೆ. ಹೀಗೆ ಏಕ ಚುನಾವಣೆ ನಡೆದು ಅಧಿಕಾರಕ್ಕೆ ಬರುವ ರಾಜ್ಯ ಸರ್ಕಾರ ಯಾವುದೋ ಕಾರಣಕ್ಕೆ ಬಹುಮತ ಕಳೆದುಕೊಂಡರೆ ಮತ್ತೆ ಅಕಾಲಿಕ ಚುನಾವಣೆ ಅನಿವಾರ್ಯವಾಗುತ್ತದೆ. ಇಂತಹ ಅನಿವಾರ್ಯ ಚುನಾವಣೆಗಳನ್ನು ತಪ್ಪಿಸುವುದಕ್ಕೆ ಯಾವ ಪರ್ಯಾಯಗಳಿವೆ ಎಂಬುದನ್ನು ಆಲೋಚಿಸಬೇಕಾಗಿದೆ.

ಹೆಚ್ಚು ಎಲೆಕ್ಷನ್‌ ಕಂಡ ದೇಶ

ಭಾರತದ ಚುನಾವಣಾ ಇತಿಹಾಸ ಗಮನಿಸಿದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಚುನಾವಣೆಗಳನ್ನು ಕಂಡ ದೇಶ ನಮ್ಮದು. ದೇಶದ 626 ಜಿಲ್ಲೆಗಳ 543 ಲೋಕಸಭೆ ಸ್ಥಾನಗಳಿಗೆ, 4120 ರಾಜ್ಯ ವಿಧಾನಸಭೆ ಸ್ಥಾನಗಳಿಗೆ, ರಾಜ್ಯಸಭೆಯ 250 ಸ್ಥಾನಗಳಿಗೆ ಹಾಗೂ 5 ರಾಜ್ಯಗಳ ವಿಧಾನ ಪರಿಷತ್ತಿನ ಸುಮಾರು 393 ಸ್ಥಾನಗಳಿಗೆ ನಿಗದಿತವಾಗಿ ಚುನಾವಣೆಗಳು ನಡೆಯತ್ತವೆ.

ಒಂದು ಸರ್ಕಾರ ಬಹುಮತ ಕಳೆದುಕೊಂಡು ಹೊರ ನಡೆದರೆ, ಉಳಿದ ಅವಧಿಗೆ ಬೇರೆ ಸರ್ಕಾರ ರಚನೆಯಾಗದಿದ್ದರೆ ಅನಿವಾರ್ಯವಾಗಿ ದೇಶದ ಮೇಲೆ ಅಕಾಲಿಕ ಚುನಾವಣೆಯ ಹೇರಿಕೆಯಾಗುತ್ತದೆ. ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿ ನಿಧನರಾದರೆ ಅಥವಾ ರಾಜೀನಾಮೆ ನೀಡಿದರೆ ಅಥವಾ ಸದನದಿಂದ ಉಚ್ಚಾಟಿಸಲ್ಪಟ್ಟರೆ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತದೆ. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಅಧಿಕಾರ ಮತ್ತು ಪ್ರತಿಷ್ಠೆಯ ಕಾರಣಗಳಿಗಾಗಿ ಉಪ ಚುನಾವಣೆ, ಮರು ಚುನಾವಣೆಗಳು ಹೇರಲ್ಪಟ್ಟಿವೆ.

ಸಾಮಾನ್ಯನೂ ಸ್ಪರ್ಧಿಸಬಹುದು

2019ರಲ್ಲಿ ನಡೆದ ಲೋಕಸಭೆ ಚುನಾವಣೆಗೆ ಒಟ್ಟಾರೆ 55,000 ಕೋಟಿ ರು. ಹಣ ವೆಚ್ಚವಾಗಿದೆ! ಸರ್ಕಾರ ಈ ಚುನಾವಣೆ ನಡೆಸಲು 3426 ಕೋಟಿ ಖರ್ಚು ಮಾಡಿದೆ. ಪ್ರಜಾಪ್ರಭುತ್ವ ಇಷ್ಟೊಂದು ದುಬಾರಿಯಾಗುವುದು ದೇಶಕ್ಕೆ ದೊಡ್ಡ ಹೊರೆ. ಚುನಾವಣಾ ದುಂದು ವೆಚ್ಚ ಮತ್ತು ಕಪ್ಪು ಹಣದ ಪ್ರಾಬಲ್ಯವನ್ನು ತಪ್ಪಿಸಿ ಸರಳ ಮತ್ತು ಪ್ರಜಾತಾಂತ್ರಿಕ ರೀತಿಯಲ್ಲಿ ಚುನಾವಣೆಗಳು ನಡೆಯಬೇಕಾಗಿದೆ.

ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ವಾಂಛೂ ಮತ್ತು ತಾರ್ಕುಂಡೆ ಸಮಿತಿಗಳು ನೀಡಿದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು. ಅಮೆರಿಕ, ಬ್ರಿಟನ್‌, ಜರ್ಮನಿ, ಆಸ್ಪ್ರೇಲಿಯಾ, ಕೆನಡಾ, ಫ್ರಾನ್ಸ್‌ನಂತಹ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸುತ್ತವೆ. ಇದರಿಂದ ಹಣಬಲವಿಲ್ಲದ ಜನಸಾಮಾನ್ಯನೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗುತ್ತದೆ. ಅಬ್ಬರದ ಪ್ರಚಾರ, ಮದ್ಯ-ಮಾಂಸಗಳ ಸರಬರಾಜು, ಹಣ ಮತ್ತು ಬೆಲೆಬಾಳುವ ವಸ್ತುಗಳ ಹಂಚಿಕೆ, ಬ್ಯಾನರ್‌ ಮತ್ತು ಪೋಸ್ಟರ್‌ಗಳ ಅಸಹ್ಯ ಪ್ರಚಾರಕ್ಕೆ ತಡೆ ಬೀಳ್ಳುತ್ತದೆ.

Follow Us:
Download App:
  • android
  • ios