ರಾಜ್ಯದಲ್ಲಿ ಗ್ಯಾರಂಟಿ ಬಂದ್ ಆಗಲ್ಲ: ಸಿಎಂ ಸಿದ್ದರಾಮಯ್ಯ
ಮುಸ್ಲಿಮರಿಗೆ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ನಾವು ಹಿಂದೂಗಳ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡುತ್ತಿದ್ದೇವೆ ಅಂತ ಮೋದಿ ಸುಳ್ಳು ಹೇಳುತ್ತಿದ್ದಾರೆ. ಹೀಗೆ ಹೇಳುವ ಮೂಲಕ ಅವರು ತಮ್ಮ ಪ್ರಧಾನಿ ಸ್ಥಾನಕ್ಕೆ ಚ್ಯುತಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ
ವಿಜಯಪುರ(ಏ.27): ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿಗಳನ್ನು ನಿಲ್ಲಿಸಲಾಗುತ್ತದೆ ಎಂದು ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ನಾವು ಯಾವುದೇ ಕಾರಣಕ್ಕೂ ಈ ಗ್ಯಾರಂಟಿಗಳನ್ನು ಸ್ಥಗಿತ ಮಾಡೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟ ಭರವಸೆ ನೀಡಿದರು.
ನಗರದ ಸೊಲ್ಲಾಪೂರ ರಸ್ತೆಯಲ್ಲಿರುವ ಎಎಸ್‌ಪಿ ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಮುಸ್ಲಿಮರಿಗೆ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ನಾವು ಹಿಂದೂಗಳ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡುತ್ತಿದ್ದೇವೆ ಅಂತ ಮೋದಿ ಸುಳ್ಳು ಹೇಳುತ್ತಿದ್ದಾರೆ. ಹೀಗೆ ಹೇಳುವ ಮೂಲಕ ಅವರು ತಮ್ಮ ಪ್ರಧಾನಿ ಸ್ಥಾನಕ್ಕೆ ಚ್ಯುತಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೀಳು ಮಟ್ಟಕ್ಕೆ ಇಳಿದ ಪ್ರಧಾನಿ ಮೋದಿ ಮೇಲೂ ಆಯೋಗ ಕ್ರಮ ಕೈಗೊಳ್ಳಲಿ: ಎಂ.ಬಿ.ಪಾಟೀಲ
ಬಿಜೆಪಿ ಅಧಿಕಾರದಲ್ಲಿದ್ದಾಗ ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಮುಸ್ಲಿಮರಿಗೆ ಇದ್ದ ಶೇ.4 ಮೀಸಲಾತಿ ತೆಗೆದು ಹಾಕಿದರು. ಆಗ ಇದನ್ನು ಪ್ರಶ್ನಿಸಿ ಮುಸ್ಲಿಂ ಮುಖಂಡರು ಸುಪ್ರೀಂಗೆ ಅರ್ಜಿ ಹಾಕಿದರು. ಆ ವೇಳೆ ಇದೆ ಬಿಜೆಪಿಯವರು ಕೋರ್ಟ್‌ಗೆ ಅಫಿಡವಿಟ್ ಹಾಕಿ ನಾವು ಯಥಾಸ್ಥಿತಿ ಕಾಪಾಡುತ್ತೇವೆ ಎಂದು ನ್ಯಾಯಾಲಯದಲ್ಲಿ ತಿಳಿಸಿ ನಂತರ ಅದನ್ನು ಯಥಾಸ್ಥಿತಿ ಮುಂದುವರೆಸಿದ್ದಾರೆ. ನಾವು ಅದನ್ನೇ ಮುಂದುವರಿಸಿದ್ದೇವೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಹೊಸದಾಗಿ ಮೀಸಲಾತಿ ಕೊಡುತ್ತಾರೆ ಎಂಬುದು ಅತೀ ಸುಳ್ಳು. ಮೋದಿ ಸುಳ್ಳು ಹೇಳುವುದರಲ್ಲಿ ಪ್ರವೀಣರು. ಭಾರತದಲ್ಲಿ ಬಂದ ಪ್ರಧಾನಿಗಳಲ್ಲಿ ಸುಳ್ಳು ಹೇಳುವವರು ಯಾರಾದರೂ ಇದ್ರೆ ಅದು ಮೋದಿ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.
ಸಂವಿಧಾನ ವಿರೋಧಿ ಬಿಜೆಪಿ:
ಈ ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಮೋದಿ ಅವರಿಗೆ ಗೊತ್ತಾಗಿದೆ. ನಾವು 400 ಸೀಟ್ ಗೆಲ್ಲುತ್ತೇವೆ ಎಂದು ಹೇಳುತ್ತಿರುವುದು ಅವರಿಗೆ ಸಂವಿಧಾನ ಬದಲಾವಣೆ ಮಾಡಲು ಬೇಕಾಗಿವೆ. ಇವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದ ಅವರು, ಇದುವರೆಗೂ ಅಭಿವೃದ್ಧಿಯನ್ನೇ ಮಾಡದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನು ಸೋಲಿಸಿ, ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಸಿಎಂ ಮನವಿ ಮಾಡಿದರು.
ಬಿಜೆಪಿಯಿಂದ ಧರ್ಮ ರಾಜಕಾರಣ:
ರಾಜ್ಯದಲ್ಲಿನ 28 ಕ್ಷೇತ್ರಗಳಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಉಳಿದ 14 ಕ್ಷೇತ್ರಗಳಿಗೆ ಮೇ 7ರಂದು ಚುನಾವಣೆ ಇದೆ. ನಾವು ನಮ್ಮ ಪಕ್ಷದ ವತಿಯಿಂದ ಅಭ್ಯರ್ಥಿಯನ್ನು ನಿಲ್ಲಿಸಿದ್ದೇವೆ. ಬಿಜೆಪಿ ಹಾಗೂ ಜೆಡಿಎಸ್ ಸೇರಿ ಅವರು ಒಂದು ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ನಿಮಗೆ ಇದು ಮಹತ್ವದ ಚುನಾವಣೆ ಇದೆ. ಮುಂದಿನ ಐದು ವರ್ಷ ಯಾರು ಅಧಿಕಾರದಲ್ಲಿ ಇರಬೇಕು ಎಂಬುದು ತೀರ್ಮಾನ ಮಾಡುತ್ತದೆ. ಮೋದಿ ಕಳೆದ 10 ವರ್ಷದಲ್ಲಿ ಬಡವರು, ಹಿಂದುಳಿದವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆಯೇ ಎಂಬುದನ್ನು ಯೋಚನೆ ಮಾಡಿ. ನೀರಾವರಿ ಯೋಜನೆ, ಅಭಿವೃದ್ಧಿ ಬಗ್ಗೆ ಏನೂ ಮಾಡಿಲ್ಲ. ಇದುವರೆಗೂ ಅವರು ಮಾಡಿದ ಅಭಿವೃದ್ದಿ ಮಾಡಿದ ವಿಚಾರ ಹೇಳಿಲ್ಲ. ಕೇವಲ ಧರ್ಮ ಧರ್ಮಗಳ ಮಧ್ಯೆ ಗಲಭೆ ಉಂಟು ಮಾಡಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹತಾಶರಾಗಿರುವ ಮೋದಿ:
ಪ್ರಧಾನಿ ಮೋದಿ ಅವರ ಇತ್ತೀಚಿನ ಭಾಷಣ ನೋಡಿದರೆ ಅವರು ಗೆಲ್ಲೋದಿಲ್ಲ ಎಂಬುವುದು ಅವರಿಗೆ ಅರಿವಾಗಿ ಹತಾಶರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ 25 ಸಂಸದರನ್ನು ಕಳಿಸಿಕೊಟ್ಟಿದ್ದೀರಿ. 25 ಜನರಲ್ಲಿ ಒಬ್ಬರೂ ಬಾಯಿ ಬಿಡಲಿಲ್ಲ. ನಿಮ್ಮೆ ಜಿಲ್ಲೆಯವರಾದ ಜಿಗಜಿಣಗಿ ಮಂತ್ರಿಯಾದರೂ ಮಾತಾಡಿಲ್ಲ. ಇವರಿಗೆ ಮಾತಾಡಲು ಭಯವಿದೆ. ಇವರು ನಡಗುತ್ತಾರೆ. ಹಾಗಾಗಿ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡುವವರು, ಅನ್ಯಾಯದ ಬಗ್ಗೆ ಮಾತಾಡುವವರು ಲೋಕಸಭೆಗೆ ಹೋಗಬೇಕು. ಅದಕ್ಕೆ ಕಾಂಗ್ರೆಸ್ ಬೇಕು ಎಂದು ಮನವಿ ಮಾಡಿದರು.
ಅದಾನಿ, ಅಂಬಾನಿ ಸಾಲಮನ್ನಾ:
ಮನಮೋಹನಸಿಂಗ್ ಅವರು ಪ್ರಧಾನಿ ಇದ್ದಾಗ ₹72 ಸಾವಿರ ಕೋಟಿ ಸಾಲಮನ್ನಾ ಮಾಡಿದರು. ಕಳೆದ ಅವಧಿಯಲ್ಲಿ ನಾನು ಸಿಎಂ ಇದ್ದಾಗ ಸೊಸೈಟಿಗಳಲ್ಲಿದ್ದ ₹50 ಸಾವಿರದವರೆಗಿನ ಸಾಲ ಸೇರಿ ಒಟ್ಟು 27 ಲಕ್ಷ ರೈತರ ₹8145 ಕೋಟಿ ರೈತರ ಸಾಲ ಮನ್ನಾ ಮಾಡಿದಿನಿ. ಆದರೆ ಇವರು ಸಾಲಮನ್ನಾ ಮಾಡಿದ್ದು ಅಂಬಾನಿ, ಅದಾನಿ ಸೇರಿ ₹16 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ. ರೈತರ ಸಾಲಮನ್ನಾ ಮಾಡಿ ಅಂದರೆ ದುಡ್ಡಿಲ್ಲ ಅಂತಾರೆ. ಬಂಡವಾಳ ಶಾಹಿಗಳ ಸಾಲಮನ್ನಾ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಬಿಜೆಪಿ ಅಧಿಕಾರದಲ್ಲಿ ಆರ್ಥಿಕ ದಿವಾಳಿ:
ಈ ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ, ನಮ್ಮ ವಿ.ಎಸ್. ಉಗ್ರಪ್ಪನವರು ಕೌನ್ಸಿಲ್‌ನಲ್ಲಿ ಸಾಲ ಮನ್ನಾದ ಪ್ರಶ್ನೆ ಕೇಳಿದಾಗ ಆಗ ಯಡಿಯೂರಪ್ಪನವರು ನೋಟ್ ಪ್ರಿಂಟ್ ಮಾಡಲು ನಮ್ಮ ಬಳಿ ಮಶೀನ್ ಇಲ್ಲ ಎಂದರು. ಇವರ ಬಳಿ ನೋಟು ಎಣಿಸಲು ಮಶೀನ್ ಇದೆ. ಆದ್ದರಿಂದಲೇ ರಾಜ್ಯವನ್ನುಲೂಟಿ ಹೊಡೆದರು. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ಅಭಿವೃದ್ದಿ ಕೆಲಸ ಮಾಡದೆ 3 ವರ್ಷ 10 ತಿಂಗಳಲ್ಲಿ ಆರ್ಥಿಕವಾಗಿ ದಿವಾಳಿ ಮಾಡಿದರು ಎಂದು ಆರೋಪಿಸಿದರು.
ಪ್ರಧಾನಿಯಿಂದ ದೊಡ್ಡ ಸುಳ್ಳುಗಳು:
೧೦ ವರ್ಷ ಪ್ರಧಾನಿಯಾಗಿದ್ದ ಮೋದಿ ೨೦೧೪ ರಲ್ಲಿ ಏನು ಹೇಳಿದ್ದರೂ ನೆನಪಿಸಿಕೊಳ್ಳಿ. ವಿದೇಶದಲ್ಲಿ ಕಪ್ಪುಹಣ ಇದೆ. ಅದನ್ನು ತಂದು ಎಲ್ಲ ಕುಟುಂಬಗಳಿಗೆ ₹೧೫ ಲಕ್ಷ ಹಣ ಖಾತೆಗೆ ಹಾಕಿ ಜನರಿಗೆ ಹಂಚುತ್ತೇನೆ ಎಂದಿದ್ದರು. ೧೦ ವರ್ಷ ಆಯ್ತು ಹೇಳಿ, ೧೫ ಪೈಸೆ ಆದರೂ ಬಂದಿದೆಯಾ? ಇದು ಅವರು ಹೇಳಿದ ಮೊದಲನೇ ಸುಳ್ಳು. ನಿರುದ್ಯೋಗಿ ಯುವಕ ಯುವತಿಯರಿಗೆ ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇನೆ ಎಂದು ಹೇಳಿದರು. ೧೦ ವರ್ಷದಲ್ಲಿ ೨೦ ಲಕ್ಷ ಉದ್ಯೋಗ ಮಾಡಿಲ್ಲ. ಕೆಲಸ ಕೇಳಿದರೆ ಬೋಂಡಾ, ಪಕೋಡಾ ಮಾರಲು ಹೋಗಿ ಅಂತ ಬೇಜವಾಬ್ದಾರಿಯಿಂದ ಹೇಳ್ತಾರೆ ಇದು ಎರಡನೇ ದೊಡ್ಡ ಸುಳ್ಳು. ೨೦೨೦ವೇಳೆಗೆ ರೈತರ ಆದಾಯ ೨ ಪಟ್ಟು ಹೆಚ್ಚು ಮಾಡುತ್ತೇನೆ ಎಂದರು. ೧ ಲಕ್ಷ ಆದಾಯ ಬರ್ತಿದ್ದರೆ ೨ ಲಕ್ಷ ಬರುವ ಹಾಗೆ ಮಾಡುತ್ತೇನೆ ಎಂದರು, ರೈತರ ಖರ್ಚು ಹೆಚ್ಚಾಗಿದೆ ಆದಾಯ ಆಗಲಿಲ್ಲ. ಇದು ಮೂರನೇ ಸುಳ್ಳು. ಎಲ್ಲ ವಸ್ತುಗಳ ಬೆಲೆ ಕಡಿಮೆ ಮಾಡುತ್ತೇನೆ ಅಚ್ಚೇದಿನ್ ಆಯೇಗಾ ಅಂದರು. ಪೆಟ್ರೋಲ್, ಗ್ಯಾಸ್, ದಿನಬಳಕೆ, ವಸ್ತುಗಳು ಕಡಿಮೆ ಆಗಲಿಲ್ಲ. ಸ್ವಾಮಿನಾಥನ ವರದಿ ಜಾರಿ ಮಾಡಲಿಲ್ಲ. ಎಂಎಸ್‌ಪಿ ಕೊಡಲಿಲ್ಲ. ನಿಮಗೆ ಮೋಸ ಮಾಡಿದ್ದಾರೆ, ದ್ರೋಹ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.ವೇದಿಕೆ ಮೇಲೆ ಸಚಿವರಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಕಾಂಗ್ರೆಸ್ ಉಸ್ತುವಾರಿ ರಂದೀಪ ಸುರ್ಜೆವಾಲ, ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ, ಶಾಸಕರಾದ ವಿಠ್ಠಲ ಕಟಕದೊಂಡ, ಯಶವಂತರಾಯಗೌಡ ಪಾಟೀಲ್, ಸಿ.ಎಸ್.ನಾಡಗೌಡ, ಅಶೋಕ ಮನಗೂಳಿ, ಪ್ರಕಾಶ ರಾಠೋಡ, ಮಾಜಿ ಶಾಸಕರಾದ ಡಾ.ಮಕ್ಬುಲ್ ಬಾಗವಾನ, ಶರಣಪ್ಪ ಸುಣಗಾರ, ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಮುಖಮಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಕಾಂತಾ ನಾಯಕ ಸೇರಿದಂತೆ ಇತರರು ಇದ್ದರು.
ಅಕ್ಕಿಯಲ್ಲಿ ಕೇಂದ್ರದಿಂದ ಮಹಾ ಅನ್ಯಾಯ
2023ನಲ್ಲಿ ನಾವು 5 ಗ್ಯಾರಂಟಿಗಳ ಪ್ರಣಾಳಿಕೆ ಬಿಡುಗಡೆ ಮಾಡಿದ್ದೆವು. ಅಧಿಕಾರ ಸ್ವೀಕಾರ ಮಾಡಿದ ದಿನವೇ ಆದೇಶ ಹೊರಡೆದ್ದೆವು. ಜೂನ್ 11ರಿಂದ ಇಂದಿನವರೆಗೆ ₹196 ಕೋಟಿ ಮಹಿಳೆಯರು ಫ್ರೀಯಾಗಿ ಸರ್ಕಾರಿ ಬಸ್‌ನಲ್ಲಿ ಟ್ರಾವೆಲ್ ಮಾಡಿದ್ದಾರೆ. ಅನ್ನಭಾಗ್ಯ ನಾನು ಮೊದಲ ಅವಧಿಯಲ್ಲಿ 7 ಕೆಜಿ ಪ್ರತಿ ಕುಟುಂಬದ ಸದಸ್ಯರಿಗೆ ಕೊಡುತ್ತಿದ್ದೇವೆ. ಯಡಿಯೂರಪ್ಪ ಬಂದ ಮೇಲೆ ಅದನ್ನು 5 ಕೆಜಿಗೆ ಇಳಿಸಿದರು. ಆಗ ನಾನು ಯಡಿಯೂರಪ್ಪಗೆ ಕೇಳಿದೆ ಅವರು ಒಪ್ಪಲಿಲ್ಲ. ಮತ್ತೆ ನಾವು ಕಳೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅವರು ಕೊಡುವ ಐದು ಕೇಜಿ ಜೊತೆಗೆ ಹೆಚ್ಚುವರಿಯಾಗಿ ಇನ್ನೂ 5 ಕೆಜಿ ಕೊಡ್ತೆವೆ ಎಂದು ಮಾತು ಕೊಟ್ಟಿದ್ದೆವು. ಅದರಂತೆ ಅಕ್ಕಿ ಕೊಡಬೇಕು ಎಂದು ಫುಡ್ ಕಾರ್ಪೊರೇಷನ್ ಇಂಡಿಯಾದವರಿಗೆ ಕೇಳಿದೆ. ಅವರು ಕೊಡುತ್ತೇವೆ ಎಂದರು. ಬಳಿಕ ಮೂರು ದಿನ ಬಿಟ್ಟು ಕೇಂದ್ರ ಸರ್ಕಾರ ನಮಗೆ ರಾಜ್ಯಕ್ಕೆ ಅಕ್ಕಿ ಕೊಡಬೇಡಿ ಎಂದಿದೆ. ಸರ್ಕಾರದ ಆಜ್ಞೆಯನ್ನು ಧಿಕ್ಕರಿಸಲು ಆಗಲ್ಲ ಅಂದರು. ಇದು ಮೋದಿ ಬಡವರಿಗೆ ಮಾಡಿದ ಮಹಾ ಅನ್ಯಾಯ ಎಂದು ಗುಡುಗಿದರು.
ನಾನು ಬಸವಣ್ಣನ ಅನುಯಾಯಿ
ಬಸವಾದಿ ಶರಣರು ಕೊಟ್ಟ ಮಾತಿನಂತೆ ಹೇಗೆ ನಡೆದರು ನಾವು ಹಾಗೆಯೇ ನಡೆದುಕೊಂಡಿದ್ದೇವೆ. ಬಸವಾದಿ ಶರಣರ ಅನುಯಾಯಿ ಆಗಿದ್ದುಕೊಂಡು ನಾವು ಅವರಂತೆ ನುಡಿದಂತೆ ನಡೆದಿದ್ದೇವೆ. ಅದಕ್ಕಾಗಿಯೇ ನಾವು ವಿಶ್ವಗುರು ಬಸವಣ್ಣನವರನ್ನು ಸಾಂಸ್ಕ್ರತಿಕ ನಾಯಕ ಅಂತ ಮಾಡಿದೇವೆ. ಆದರೆ ಇದೇ ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಇದ್ದಾಗ ಈ ಕೆಲಸ ಮಾಡಿಲ್ಲ ಎಂದರು.
ಒಣದ್ರಾಕ್ಷಿಯ ಹಾರದಿಂದ ಸ್ವಾಗತ
ಬಳಿಕ ವಾಹನದ ಮೂಲಕ ವೇದಿಕೆಗೆ ಆಗಮಿಸಿದ ರಾಹುಲಗಾಂಧಿ ಸಾರ್ವಜನಿಕ ಸಭೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು. ಇದಕ್ಕೂ ಮೊದಲು ರಾಹುಲ್‌ಗಾಂಧಿ ಅವರಿಗೆ ಸಚಿವ ಎಂ.ಬಿ.ಪಾಟೀಲ್ ಹಾಗೂ ರಂದೀಪ ಸುರ್ಜೆವಾಲ್‌ಗೆ ಸಚಿವ ಶಿವಾನಂದ ಪಾಟೀಲ್ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಒಣದ್ರಾಕ್ಷಿ ಹಾರಗಳನ್ನು ಹಾಕಿ ಸ್ವಾಗತ ಮಾಡಿಕೊಂಡರು.
ಲೋಕಸಭಾ ಚುನಾವಣೆ 2024: ಇಂಡಿಯಾ ಮೈತ್ರಿಕೂಟಕ್ಕೆ 400 ಸೀಟು, ಸೈಯ್ಯದ ಬರಾಹಾನುದ್ದೀನ್
ರಾಜ್ಯದಂತೆ ಎಐಸಿಸಿ ಕೂಡ 25 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಅದಕ್ಕೆ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಯಕ ರಾಹುಲಗಾಂಧಿ ಅವರು ಸೈನ್ ಮಾಡಿ ಮನೆಮನೆಗೆ ಗ್ಯಾರಂಟಿ ಕಾರ್ಡ್ ಕೊಡುತ್ತಿದಾರೆ. ಬಡ ಕುಟುಂಬದ ಮಹಿಳೆಗೆ ವರ್ಷಕ್ಕೆ ₹1 ಲಕ್ಷ ಕೊಡುತ್ತಿದ್ದು, ಪ್ರತಿ ತಿಂಗಳು 8500 ಬಂದಂತೆ ಆಗುತ್ತದೆ. ಅದರ ಜೊತೆಗೆ ರಾಜ್ಯ ಸರ್ಕಾರ ವರ್ಷಕ್ಕೆ ₹24 ಸಾವಿರ ಕೊಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊಟ್ಟಿರುವ ಕಾಂಗ್ರೆಸ್ ಗ್ಯಾರಂಟಿ ಮನೆ ಮನೆ ಮಾತಾಗಿದೆ. ಪ್ರತಿ ಕುಟುಂಬ ಇದರ ಉಪಯೋಗ ಪಡೆದುಕೊಂಡಿದ್ದಾರೆ. ಈ ಬಾರಿ ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದ್ದಾರೆ.
ಇಂದು ಮೊದಲ ಹಂತದ ಚುನಾವಣೆ ಇರುವುದರಿಂದ ನಾನು ವೋಟ್ ಹಾಕುವ ಸಲುವಾಗಿ ನಮ್ಮೂರಿಗೆ ಹೋಗಿದ್ದೆ. ನಮ್ಮೂರಲ್ಲಿ ವೋಟ್ ಹಾಕಿ ಇಲ್ಲಿಗೆ ಬರುವುದರಲ್ಲಿ ತಡವಾಗಿದೆ ಎಂದು ಸಿಎಂ ಹೇಳಿದರು.