ಕರ್ನಾಟಕದಲ್ಲಿ ಒಬಿಸಿ ಮೀಸಲು ಕಸಿದು ಮುಸ್ಲಿಮರಿಗೆ: ನಡ್ಡಾ ಟೀಕೆ
2024ರ ಚುನಾವಣೆ ಸಂಬಂಧ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಬಹುಸಂಖ್ಯಾತರ ಕುರಿತ ಕಾಂಗ್ರೆಸ್‌ನ ನಿಲುವುಗಳನ್ನು ಸ್ಪಷ್ಟಪಡಿಸುವುದರ ಜೊತೆಗೆ, ಎಸ್‌ಸಿ, ಎಸ್ಟಿ ಮತ್ತು ಒಬಿಸಿಗಳ ಕುರಿತಾದ ದ್ವೇಷವನ್ನು ಒತ್ತಿ ಹೇಳುತ್ತದೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ. ಜೆ.ಪಿ.ನಡ್ಡಾ
ನವದೆಹಲಿ(ಏ.27): ’ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಒಬಿಸಿಗಳ ಮೀಸಲು ಕಸಿದು ಮುಸ್ಲಿಮರಿಗೆ ನೀಡಿದೆ. ಒಬಿಸಿ, ಎಸ್ಸಿ, ಎಸ್ಟಿಗಳ ಮೀಸಲು ಕಸಿಯುವುದು ಕಾಂಗ್ರೆಸ್‌ನ ರಹಸ್ಯ ಕಾರ್ಯಸೂಚಿಯಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ. ಜೆ.ಪಿ.ನಡ್ಡಾ ಆರೋಪಿಸಿದ್ದಾರೆ.
ಕರ್ನಾಟಕ ಸೇರಿದಂತೆ ದೇಶದ 13 ರಾಜ್ಯಗಳ 88 ಕ್ಷೇತ್ರಗಳಿಗೆ ಶುಕ್ರವಾರ ಚುನಾವಣೆ ನಡೆದ ಹೊತ್ತಿನಲ್ಲೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ನಡ್ಡಾ, ‘ಅಲ್ಪಸಂಖ್ಯಾತ ಸಮುದಾಯವನ್ನು ಹಿಂದುಳಿದ ವರ್ಗ ಎಂದು ಘೋಷಿಸಿ ಅವರಿಗೆ ಮೀಸಲು ಕಲ್ಪಿಸಲು ಹಲವು ಸಮಯದಿಂದ ವಿಪಕ್ಷವು ವೇದಿಕೆ ಸಿದ್ಧಪಡಿಸುತ್ತಿದೆ. 2006ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ದೇಶದ ಸಂಪತ್ತಿನ ಮೇಲೆ ಅಲ್ಪಸಂಖ್ಯಾತರಿಗೆ, ಅದರಲ್ಲೂ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದಿದ್ದರು. ಬಳಿಕ ಆಂಧ್ರದಲ್ಲೂ ಮುಸ್ಲಿಮರಿಗೆ ಮೀಸಲು ನೀಡುವ ಯತ್ನ ನಡೆಯಿತಾದರೂ ಕೋರ್ಟ್ ಮಧ್ಯಪ್ರವೇಶದಿಂದ ಅದು ಸ್ಥಗಿತಗೊಂಡಿತು. ಕರ್ನಾಟಕದಲ್ಲಿ ಅದೇ ರೀತಿ ಆಯಿತು. ಆದರೆ ಅಲ್ಲಿ ನಮ್ಮ ಸರ್ಕಾರ ಬಂದ ಬಳಿಕ ಅದನ್ನು ರದ್ದು ಮಾಡಿದ್ದೆವು. ಆದರೆ ಇದೀಗ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರ ಮರಳಿ ಒಬಿಸಿ ಮೀಸಲು ಕಸಿದು ಮುಸ್ಲಿಮರಿಗೆ ನೀಡಿದೆ’ ಎಂದು ಟೀಕಿಸಿದರು.
ಬಿಜೆಪಿಯಲ್ಲಿ ಎಲ್ಲರಿಗೂ ಒಂದೇ ನ್ಯಾಯ: ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ
‘2024ರ ಚುನಾವಣೆ ಸಂಬಂಧ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಬಹುಸಂಖ್ಯಾತರ ಕುರಿತ ಕಾಂಗ್ರೆಸ್‌ನ ನಿಲುವುಗಳನ್ನು ಸ್ಪಷ್ಟಪಡಿಸುವುದರ ಜೊತೆಗೆ, ಎಸ್‌ಸಿ, ಎಸ್ಟಿ ಮತ್ತು ಒಬಿಸಿಗಳ ಕುರಿತಾದ ದ್ವೇಷವನ್ನು ಒತ್ತಿ ಹೇಳುತ್ತದೆ’ ಎಂದು ನಡ್ಡಾ ಆರೋಪಿಸಿದರು.