ಉತ್ತರ ಪ್ರದೇಶದಲ್ಲಿ, ರೀಲ್ಸ್ ಮಾಡುವಾಗ ಯುವತಿಯೊಬ್ಬಳು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾಳೆ. ನೇಣು ಹಾಕಿಕೊಳ್ಳುವಂತೆ ವಿಡಿಯೋ ಚಿತ್ರೀಕರಿಸುತ್ತಿದ್ದಾಗ, ಆಕೆ ನಿಂತಿದ್ದ ಸ್ಟೂಲ್ ಜಾರಿ ನೇಣು ಬಿಗಿಗೊಂಡು ದುರಂತ ಸಂಭವಿಸಿದ್ದು, ಆಕೆಯ ಸಾವಿನಿಂದ ನಾಲ್ಕು ವರ್ಷದ ಮಗು ತಬ್ಬಲಿಯಾಗಿದೆ.
ರೀಲ್ಸ್ ಮಾಡೋಕೆ ಹೋಗಿ ಪ್ರಾಣನೇ ಹೋಯ್ತು:
ಇತ್ತೀಚೆಗೆ ಜನ ರೀಲ್ಸ್ ಮಾಡುವುದಕ್ಕೆ ಜೀವವನ್ನೇ ಬಲಿ ಕೊಡುವುದಕ್ಕೂ ಸಿದ್ಧರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಬೇಕೆಂದು ಭಿನ್ನ ವಿಭಿನ್ನ ಸಾಹಸ ಮಾಡುವುದಕ್ಕೆ ಹೋಗಿ ತಮ್ಮದೇ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಇಂತಹ ಅನೇಕ ಘಟನೆಗಳು ಈಗಾಗಲೇ ಆಗಿದ್ದರೂ ಕೂಡ ತಮ್ಮ ಹುಚ್ಚಾಟ ಬಿಡುವುದಿಲ್ಲ, ಹಾಗೆಯೇ ಇಲ್ಲೊಬ್ಬಳು ಮಹಿಳೆ ರೀಲ್ಸ್ ಮಾಡುವುದಕ್ಕೆ ಹೋಗಿ ಅಚಾನಕ್ ಆಗಿ ಸಾವನ್ನಪ್ಪಿದ್ದು, ಆಕೆಯ 4 ವರ್ಷ ಮಗು ಅಮ್ಮನಿಲ್ಲದೇ ತಬ್ಬಲಿಯಾಗಿದೆ.
ರೀಲ್ಸ್‌ಗಾಗಿ ಹಾಕಿದ ನೇಣು ನಿಜವಾಗಿಯೂ ಕುತ್ತಿಗೆಗೆ ಬಿಗಿದು ಸಾವು
ರೀಲ್ಸ್ ಮಾಡುವುದಕ್ಕೆ ಎಂದು ಸುಮ್ಮನೇ ನೇಣು ಹಾಕಲು ಹೋಗಿ ನಿಜವಾಗಿಯೂ ನೇಣಿನ ಕುಣಿಕೆ ಬಿಗಿದುಕೊಂಡು ಯುವತಿಯೊಬ್ಬಳು ಸಾವನ್ನಪ್ಪಿದಂತಹ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮಹಿಳೆಯೊಬ್ಬಳು ಮನೆಯಲ್ಲಿ ರೀಲ್ಸ್ ಮಾಡ್ತಾ ಇದ್ದಾಗ ಈ ದುರಂತ ಸಂಭವಿಸಿದೆ. ರೀಲ್ಸ್‌ಗಾಗಿಯೇ ಆಕೆ ಸ್ಟೂಲ್ ಮೇಲೆ ನಿಂತು ನೇಣಿನ ಹಗ್ಗ ಕತ್ತಿಗೆ ಹಾಕಿಕೊಂಡಿದ್ದಾಳೆ. ಆದರೆ ದುರಾದೃಷ್ಟವಶಾತ್ ಆಕೆ ನಿಂತಿದ್ದ ಸ್ಟೂಲ್ ಮಗುಚಿದ ಪರಿಣಾಮ ನೇಣಿನ ಹಗ್ಗ ಕತ್ತಿಗೆ ಬಿಗಿದುಕೊಂಡು ಆಕೆ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ: ತಲೆಗೆ ಒಟ್ಟು 1.61 ಕೋಟಿ ಬಹುಮಾನ ಘೋಷಿಸಲ್ಪಟ್ಟಿದ್ದ 51 ಮಾವೋವಾದಿ ನಕ್ಸಲರ ಶರಣಾಗತಿ
ಉತ್ತರ ಪ್ರದೇಶ ಬಂದಾ ಎಂಬಲ್ಲಿ ಈ ಘಟನೆ ನಡೆದಿದೆ. 27 ವರ್ಷದ ಮಹಿಳೆಯೊಬ್ಬಳು ನೇಣು ಬಿಗಿದುಕೊಳ್ಳುವಂತಹ ರೀಲ್ಸ್ ಮಾಡುತ್ತಿದ್ದಳು. ಇದಕ್ಕಾಗಿ ಆಕೆ ಮನೆಯ ಸೀಲಿಂಗ್‌ಗೆ ನೇಣು ಬಿಗಿದು ಅದನ್ನು ಹಿಡಿದುಕೊಂಡು ಸ್ಟೂಲ್ ಮೇಲೆ ನಿಂತಿದ್ದಳು. ಆದರೆ ಆಕೆಯ ಕಾಲಿನ ಕೆಳಗೆ ಇದ್ದ ಸ್ಟೂಲ್ ಅಚಾನಕ್ ಆಗಿ ಕೆಳಗೆ ಬಿದ್ದಿದ್ದು, ಕತ್ತಿಗೆ ತಮಾಷೆಗೆಂದು ಹಾಕಿದ ನೇಣಿನ ಕುಣಿಕೆ ಬಿಗಿಗೊಂಡು ಆಕೆ ಸಾವನ್ನಪ್ಪಿದ್ದಾಳೆ. ಘಟನೆ ನಡೆದ ಕೆಲವೇ ಸೆಕೆಂಡ್‌ಗಳಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಮೃತಳಿಗೆ 4 ವರ್ಷದ ಮಗಳಿದ್ದು, ಮಗು ತಾಯಿ ನೇಣು ಬಿಗಿದುಕೊಂಡಿರುವುದನ್ನು ನೋಡಿ ಅಳುವುದಕ್ಕೆ ಶುರು ಮಾಡಿದೆ. ಮಗುವಿನ ಅಳು ಕೇಳಿ ನೆರೆಹೊರೆಯ ಮನೆಯವರು ಬಂದು ನೋಡಿದಾಗ ಈ ದುರಂತ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಮೋಹಿನಿ ಎಂದು ಗುರುತಿಸಲಾಗಿದೆ. ಈಕೆ ಜಗದೀಶ್ ಎಂಬುವವರ ಪತ್ನಿ.
ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಮಹಜರು ಮಾಡಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೇ ಪ್ರಕರಣದ ಬಗ್ಗೆ ಪ್ರತಿಯೊಂದು ಆಯಾಮದಿಂದಲೂ ತನಿಖೆ ಮಾಡುತ್ತಿದ್ದಾರೆ. ಪ್ರಾಥಮಿಕ ತನಿಖೆಗಳು ಇದೊಂದು ರೀಲ್ಸ್ ಮಾಡುವ ವೇಳೆ ಆಕಸ್ಮಿಕವಾಗಿ ನಡೆದ ಅನಾಹುತ ಎಂಬುದನ್ನು ಸಾಬೀತು ಮಾಡಿವೆ.
ಇದನ್ನೂ ಓದಿ: ಭಾರತ-ಅಮೆರಿಕ ಒಪ್ಪಂದ: ಇನ್ಮುಂದೆ ಅಮೆರಿಕಾದ ಈ ವಸ್ತುಗಳು ಭಾರತದಲ್ಲಿ ಅಗ್ಗ?


