ಹರಿಹರ(Harihara)ದ ಬನ್ನಿಕೋಡಿನಲ್ಲಿ ಮಂಗಳವಾರ ಬಂಧಿಸಲಾದ ಉತ್ತರ ಪ್ರದೇಶ(Uttarapradesh) ಮೂಲದ ಶಂಕಿತ ಉಗ್ರ ಸೋಹೆಲ್‌(Suspected terrorist Sohail) (20) ವಿಚಾರಣೆ ವೇಳೆ ದೇಶವನ್ನೇ ಬೆಚ್ಚಿ ಬೀಳಿಸುವಂತಹ ಸ್ಫೋಟಕ ಮಾಹಿತಿ ಬಯಲಾಗಿದೆ.

  • ಹರಿಹರದ ಬನ್ನಿಕೋಡಿನಲ್ಲಿ ಮಂಗಳವಾರ ಉತ್ತರಪ್ರದೇಶದ ಸೋಹೆಲ್‌ (20) ಎಂಬಾತನ ಬಂಧನ
  • ಈತನ ಮೊಬೈಲ್‌ನಲ್ಲಿ ಹಿಂದಿ-ಉರ್ದು ಮಿಶ್ರಿತ ಆಡಿಯೋ, ಮೆಸೇಜ್‌ಗಳು, ಉಗ್ರರ ಚಿತ್ರಗಳು ಪತ್ತೆ
  • ಪಾಕಿಸ್ತಾನದ ರಾಣಾ ಎಂಬಾತನ ಜತೆ ಸಂವಹನ. ಅಯೋಧ್ಯೆ ಮಂದಿರ ಸ್ಫೋಟಿಸುವ ಇಂಗಿತ
  • ಪಾಕಿಸ್ತಾನದ ಹಲವು ಉಗ್ರಗಾಮಿ ಸಂಘಟನೆಗಳ ವಾಟ್ಸಾಪ್‌ ಗ್ರೂಪ್‌ನಲ್ಲಿ ಸಕ್ರಿಯನಾಗಿದ್ದ ಈತ

--

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಾವಣಗೆರೆ (ಜೂ.25): ಹರಿಹರ(Harihara)ದ ಬನ್ನಿಕೋಡಿನಲ್ಲಿ ಮಂಗಳವಾರ ಬಂಧಿಸಲಾದ ಉತ್ತರ ಪ್ರದೇಶ(Uttarapradesh) ಮೂಲದ ಶಂಕಿತ ಉಗ್ರ ಸೋಹೆಲ್‌(Suspected terrorist Sohail) (20) ವಿಚಾರಣೆ ವೇಳೆ ದೇಶವನ್ನೇ ಬೆಚ್ಚಿ ಬೀಳಿಸುವಂತಹ ಸ್ಫೋಟಕ ಮಾಹಿತಿ ಬಯಲಾಗಿದೆ. ‘ಕೋಟ್ಯಂತರ ಹಿಂದುಗಳ ಆರಾಧ್ಯ ದೈವದ ನೆಲೆಯಾದ ಅಯೋಧ್ಯೆಯ ರಾಮಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸಲು ನಾನು ಬಯಸಿದ್ದೆ’ ಎಂದು ಈತ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ.

ಸುಳಿವು ನೀಡಿದ ಉಗ್ರನ ಮೊಬೈಲ್!

ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಲಖ್ನೋತಿ ಗ್ರಾಮದವನಾದ ಈತನ ಮೊಬೈಲ್ ಜಾಡು ಹಿಡಿದು ಹೋದ ತನಿಖಾಧಿಕಾರಿಗಳಿಗೆ ಆಘಾತಕಾರಿ ಸಂಗತಿಗಳು ದೊರೆತಿವೆ. ಹಿಂದಿ-ಉರ್ದು ಮಿಶ್ರಿತ ಆಡಿಯೋಗಳು, ಮೆಸೇಜ್‌ಗಳು, ಕೈಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದ ಫೋಟೋಗಳು, ಉಗ್ರರನ್ನು ಹೋಲುವ ಚಿತ್ರಗಳು, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಿಸುವ, ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ, ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸುವಂತಹ ವಿಚಾರ ಹೊಂದಿದ್ದ ಬಗ್ಗೆ ಆತನ ಮೊಬೈಲ್ ಸುಳಿವು ನೀಡಿದೆ.

ಪಾಕಿಸ್ತಾನದ ರಾಣಾ ಎಂಬುವವನ ಸಂಪರ್ಕದಲ್ಲಿದ್ದ ಉಗ್ರ

ಪಾಕಿಸ್ತಾನ ಮೂಲದ ರಾಣಾ ಎಂಬ ವ್ಯಕ್ತಿ ಜೊತೆ ಈತ ಉರ್ದುಮಿಶ್ರಿತ ಉತ್ತರ ಪ್ರದೇಶ ಶೈಲಿಯ ಹಿಂದಿಯಲ್ಲಿ ಮಾತನಾಡಿದ್ದು, ‘ನಾನು ಅಯೋಧ್ಯೆಯ ರಾಮಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸಲು ಬಯಸಿದ್ದು, ಇದಕ್ಕಾಗಿ ಸ್ಕೆಚ್‌ ಹಾಕುತ್ತಿದ್ದೇನೆ’ ಎಂದು ತಿಳಿಸಿದ್ದ. ಅಲ್ಲದೆ, ದೇಶದ ರಕ್ಷಣೆ, ಭದ್ರತೆಗೆ ಧಕ್ಕೆ ತರುವಂತಹ ಹಲವು ಸಂದೇಶಗಳನ್ನು ರಾಣಾಗೆ ಕಳಿಸಿದ್ದ. ರಾಣಾ ಜೀ ಎಂಬ ಹೆಸರಿನಲ್ಲಿ ಆತನ ನಂಬರನ್ನು ಸೇವ್ ಮಾಡಿಕೊಂಡಿದ್ದ.

ಜೊತೆಗೆ, ಅಂತಾರಾಷ್ಟ್ರೀಯ ಕರೆಗಳನ್ನು ಮಾಡಿರುವುದು ಸಹ ಮೊಬೈಲ್‌ನಲ್ಲಿ ದಾಖಲಾಗಿದೆ. ಪಾಕ್ ಮೂಲದ ಹಲವು ಉಗ್ರ ಸಂಘಟನೆಗಳ ವಾಟ್ಸಪ್‌ ಗ್ರೂಪ್‌ಗಳಲ್ಲಿ ಈತ ಸಕ್ರಿಯನಾಗಿದ್ದ. ಮೆಮೊನ್‌ ಆ್ಯಂಡ್ ಜುಟ್ಟೂ 333, ರಾಣಾ ಬಾಯಿ ಗ್ರೂಪ್ 333...., ವಿಐಪಿ ಪಬ್ಲಿಕ್‌ ಚಾನಲ್‌ಗಳಿಗೆ ಸಬ್‌ಸ್ಕ್ರೈಬ್‌ ಆಗಿದ್ದಾನೆ. ಅಲ್ಲದೆ, ಮೊಬೈಲ್‌ನಲ್ಲಿ ಹಲವಾರು ಅಪ್ಲಿಕೇಷನ್‌ ಹೊಂದಿದ್ದು, ಇವುಗಳಲ್ಲಿ ಪಾಕಿಸ್ತಾನ ಮೂಲದ ಮೊಬೈಲ್ ನಂಬರ್‌ಗಳ ಜೊತೆ ಚಾಟ್‌ ಮಾಡಿರುವುದು ಪತ್ತೆಯಾಗಿದೆ.

ಸೋಹೆಲ್‌ಗೆ ನ್ಯಾಯಾಂಗ ಬಂಧನ:

ಪೇಂಟರ್ ಕೆಲಸಗಾರನ ಹೆಸರಲ್ಲಿ ಕಳೆದ 15-20 ದಿನಗಳಿಂದ ಬನ್ನಿಕೋಡು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಈತನನ್ನು ಮಂಗಳವಾರ ಬೆಳಗಿನ ಜಾವ ಬಂಧಿಸಲಾಗಿತ್ತು. ಬುಧವಾರ ಈತನನ್ನು ತುಮಕೂರಿಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು. ಇತ್ತೀಚೆಗಷ್ಟೇ ತುಮಕೂರಿನಲ್ಲಿ ಅಲ್ಲಾಭಕ್ಷಿ ಎಂಬಾತನನ್ನು ಬಂಧಿಸಲಾಗಿದ್ದು, ಈತನ ಪ್ರಕರಣಕ್ಕೂ, ಆತನ ಬಂಧನಕ್ಕೂ ಸಾಮ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈತನನ್ನು ತುಮಕೂರಿಗೆ ಕರೆದೊಯ್ಯಲಾಗಿತ್ತು. ಬಳಿಕ, ಹರಿಹರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಈತನಿಗೆ ಒಂದು ದಿನದ ನ್ಯಾಯಾಂಗ ಬಂಧ‌ನ ವಿಧಿಸಿದೆ. ಗುರುವಾರ ಮತ್ತೆ ಈತನನ್ನು ಕೋರ್ಟ್‌ಗೆ ಹಾಜರುಪಡಿಸಲಾಗುವುದು.