ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇನಾ ಮುಖ್ಯಸ್ಥರ ಜೊತೆ ಉನ್ನತ ಮಟ್ಟದ ಸಭೆ ನಡೆಸಿದರು. 'ಆಪರೇಷನ್ ಸಿಂಧೂರ್'ನಲ್ಲಿ ೧೦೦ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಭಾರತ ಪ್ರತೀಕಾರಕ್ಕೆ ಸಿದ್ಧ ಎಂದು ಸಿಂಗ್ ಹೇಳಿದರು. ಪಾಕಿಸ್ತಾನದ ದಾಳಿಗಳನ್ನು ಭಾರತ ವಿಫಲಗೊಳಿಸಿತು. ಗಡಿಯಲ್ಲಿ ಹಲವು ಪಾಕಿಸ್ತಾನಿ ನೆಲೆಗಳು ನಾಶವಾಗಿವೆ.
ನವದೆಹಲಿ (ಮೇ.9): ಪಾಕಿಸ್ತಾನದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಬೆಳಿಗ್ಗೆ ಸೌತ್ ಬ್ಲಾಕ್‌ನಲ್ಲಿ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥರು ಇತ್ತೀಚಿನ ಭದ್ರತಾ ಬೆಳವಣಿಗೆಗಳು ಮತ್ತು ಕಾರ್ಯತಂತ್ರದ ಯೋಜನೆಗಳ ಕುರಿತು ರಕ್ಷಣಾ ಸಚಿವರಿಗೆ ಈ ವೇಳೆ ವಿವರಣೆ ನಿಡಿದ್ದಾರೆ.
ಗುರುವಾರದಂದು, ಕೇಂದ್ರ ಸರ್ಕಾರ ಆಯೋಜಿಸಿದ್ದ ಸರ್ವಪಕ್ಷ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, 'ಆಪರೇಷನ್ ಸಿಂಧೂರ್' ಅಡಿಯಲ್ಲಿ ನಡೆಸಲಾದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ವಿರೋಧ ಪಕ್ಷದ ನಾಯಕರಿಗೆ ತಿಳಿಸಿದ್ದರು. ಇತ್ತೀಚಿನ ದಿನಗಳಲ್ಲಿ ಇದು ಅತ್ಯಂತ ವ್ಯಾಪಕವಾದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ಅವರು ಬಣ್ಣಿಸಿದರು.
ರಾಜನಾಥ್ ಸಿಂಗ್ ಅವರ ಪ್ರಕಾರ, ಗಡಿಯುದ್ದಕ್ಕೂ ಭಯೋತ್ಪಾದಕ ಶಿಬಿರಗಳು ಮತ್ತು ಮೂಲಸೌಕರ್ಯಗಳ ಮೇಲೆ ಗುರಿಯಿಟ್ಟು ನಡೆಸಿದ ದಾಳಿಗಳಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದೆ ಎಂದಿದ್ದರು.
'ಆಪರೇಷನ್ ಸಿಂಧೂರ್' ಇನ್ನೂ ಮುಂದುವರೆದಿದೆ ಮತ್ತು ಭಾರತೀಯ ಪಡೆಗಳು ಹೆಚ್ಚಿನ ಅಲರ್ಟ್‌ನಲ್ಲಿದೆ. ಪಾಕಿಸ್ತಾನದಿಂದ ಯಾವುದೇ ಪ್ರಚೋದನೆಯ ಕೃತ್ಯಗಳಿಗೆ ಪ್ರತಿಕ್ರಿಯಿಸಲು ಸಿದ್ಧವಾಗಿವೆ ಎಂದು ಸಿಂಗ್ ಪುನರುಚ್ಚರಿಸಿದ್ದರು. "ಪರಿಸ್ಥಿತಿ ಉಲ್ಬಣ ಮಾಡುವ ಉದ್ದೇಶವಿಲ್ಲ, ಆದರೆ ಶತ್ರು ಪಡೆಗಳು ಮತ್ತೆ ದಾಳಿ ಮಾಡಿದರೆ, ನಾವು ಪ್ರತೀಕಾರ ತೀರಿಸಿಕೊಳ್ಳಲು ಹಿಂಜರಿಯುವುದಿಲ್ಲ" ಎಂದು ಕೇಂದ್ರ ಸಚಿವ ಸಿಂಗ್ ಬ್ರೀಫಿಂಗ್ ಸಮಯದಲ್ಲಿ ಹೇಳಿದರು.
ಪಾಕಿಸ್ತಾನ ತನ್ನದೇ ಆದ ಮಿಲಿಟರಿ ಪ್ರತಿಕ್ರಿಯೆಯನ್ನು ಪರಿಗಣಿಸುತ್ತಿದೆ ಎಂದು ಸೂಚಿಸುವ ದೃಢೀಕರಿಸದ ವರದಿಗಳ ಮಧ್ಯೆ ಅವರು ಈ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ ಇತರರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸುದ್ದಿಗಾರರೊಂದಿಗೆ ಮಾತನಾಡಿ, ಈ ಸಭೆಯು ಭಾರತೀಯ ರಾಜಕೀಯದಲ್ಲಿ ಏಕತೆಯ "ಅಪರೂಪದ ಕ್ಷಣ" ವನ್ನು ಪ್ರತಿಬಿಂಬಿಸುತ್ತದೆ, ಎಲ್ಲಾ ನಾಯಕರು ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು ಮತ್ತು ಸರ್ಕಾರದ ಕ್ರಮಗಳಿಗೆ ಅಚಲ ಬೆಂಬಲವನ್ನು ವ್ಯಕ್ತಪಡಿಸಿದರು ಎಂದಿದ್ದರು.
ನಿನ್ನೆ ರಾತ್ರಿ 8:30 ರ ಸುಮಾರಿಗೆ ಪ್ರಾರಂಭವಾದ ಪಾಕಿಸ್ತಾನದ ಸೇನಾ ನೆಲೆಗಳು ಮತ್ತು ರಾಜಸ್ಥಾನ, ಗುಜರಾತ್ ಮತ್ತು ಪಂಜಾಬ್‌ನ ಹಲವಾರು ನಗರಗಳ ಮೇಲೆ ನಡೆದ ಎರಡನೇ ಸುತ್ತಿನ ವಾಯುದಾಳಿಯನ್ನು ಭಾರತ ವಿಫಲಗೊಳಿಸಿತು. ಪಾಕಿಸ್ತಾನವು ಜಮ್ಮು, ಪಠಾಣ್‌ಕೋಟ್ ಮತ್ತು ಉಧಂಪುರದಲ್ಲಿನ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿತು, ಭಾರತೀಯ ಸೇನೆಯು ತ್ವರಿತವಾಗಿ ಪ್ರತೀಕಾರ ತೀರಿಸಿಕೊಂಡಿತು. ಶ್ರೀನಗರ, ಜಮ್ಮು ಮತ್ತು ಪಂಜಾಬ್ ಮತ್ತು ರಾಜಸ್ಥಾನದ ಹಲವಾರು ಸ್ಥಳಗಳಲ್ಲಿ ರಾತ್ರಿಯಿಡೀ ಸೇನೆ ಬ್ಲಾಕ್‌ಔಟ್ ಘೋಷಣೆ ಮಾಡಿತ್ತು.
ಗಡಿಯಾಚೆಗಿನ ಗುಂಡಿನ ದಾಳಿಗೆ ಭಾರತೀಯ ಪಡೆಗಳು ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿದ್ದರಿಂದ ನಿಯಂತ್ರಣ ರೇಖೆಯ ಉದ್ದಕ್ಕೂ ಇರುವ ಅನೇಕ ಪಾಕಿಸ್ತಾನಿ ಮಿಲಿಟರಿ ಪೋಸ್ಟ್‌ಗಳು ನಾಶವಾಗಿವೆ ಎಂದು ಮೂಲಗಳು ತಿಳಿಸಿವೆ. ಮಿಲಿಟರಿ ಪೋಸ್ಟ್‌ಗಳ ಮೇಲೆ ದಾಳಿ ಮಾಡಲು ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದರು.
"ಪಾಕಿಸ್ತಾನ ಸಶಸ್ತ್ರ ಪಡೆಗಳು 2025 ರ ಮೇ 08 ಮತ್ತು 09 ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ಡ್ರೋನ್‌ಗಳು ಮತ್ತು ಇತರ ಯುದ್ಧಸಾಮಗ್ರಿಗಳನ್ನು ಬಳಸಿ ಅನೇಕ ದಾಳಿಗಳನ್ನು ನಡೆಸಿದವು. ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕ್ ಪಡೆಗಳು ಹಲವಾರು ಕದನ ವಿರಾಮ ಉಲ್ಲಂಘನೆಗಳನ್ನು (CFV) ಆಶ್ರಯಿಸಿವೆ" ಎಂದು ಸೇನೆ ತಿಳಿಸಿದೆ.


