ವರದಕ್ಷಿಣೆ ಸಾವು ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡಿ ಸುಪ್ರೀಂ ಕೆಂಗಣ್ಣಿಗೆ ಗುರಿಯಾಗಿದ್ದ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಾಧೀಶ ಪಂಕಜ್‌ ಭಾಟಿಯಾ, ಕಳೆದ 3 ತಿಂಗಳಲ್ಲಿ ಇಂತಹದ್ದೇ 508 ಪ್ರಕರಣಗಳಲ್ಲೂ ಆರೋಪಿಗಳಿಗೆ ಜಾಮೀನು ನೀಡಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ನವದೆಹಲಿ: ವರದಕ್ಷಿಣೆ ಸಾವು ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡಿ ಸುಪ್ರೀಂ ಕೆಂಗಣ್ಣಿಗೆ ಗುರಿಯಾಗಿದ್ದ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಾಧೀಶ ಪಂಕಜ್‌ ಭಾಟಿಯಾ, ಕಳೆದ 3 ತಿಂಗಳಲ್ಲಿ ಇಂತಹದ್ದೇ 508 ಪ್ರಕರಣಗಳಲ್ಲೂ ಆರೋಪಿಗಳಿಗೆ ಜಾಮೀನು ನೀಡಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾಟಿಯಾ ಇತ್ತೀಚೆಗೆ ನೀಡಿದ್ದ ತೀರ್ಪುಗಳ ಬಗ್ಗೆ ಪರಿಶೀಲನೆ

ಭಾಟಿಯಾ ವಿರುದ್ಧ ಸುಪ್ರೀಂ ಕೋರ್ಟ್‌ ಚಾಟಿ ಬೆನ್ನಲ್ಲೇ ಆಂಗ್ಲ ಮಾಧ್ಯವೊಂದು ಭಾಟಿಯಾ ಇತ್ತೀಚೆಗೆ ನೀಡಿದ್ದ ತೀರ್ಪುಗಳ ಬಗ್ಗೆ ಪರಿಶೀಲನೆ ನಡೆಸಿತ್ತು. ಈ ವೇಳೆ ಕಳೆದ ಅಕ್ಟೋಬರ್‌ನಿಂದ ಡಿಸೆಂಬರ್‌ ತನಕ ಒಟ್ಟು 510 ವರದಕ್ಷಿಣೆ ಸಾವು ಪ್ರಕರಣದ ಅರ್ಜಿಗಳನ್ನು ಭಾಟಿಯಾ ವಿಚಾರಣೆ ನಡೆಸಿದ್ದರು. ಈ ಪೈಕಿ 2 ಪ್ರಕರಣ ಹೊರತು ಪಡಿಸಿ ಉಳಿದ ಎಲ್ಲ ಕೇಸುಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದಾರೆ. ಅಲ್ಲದೇ ಜಾಮೀನು ನೀಡುವ ವೇಳೆಯಲ್ಲಿನ ಅವರ ಆದೇಶ, ಭಾಷೆ ಹಾಗೂ ಅವರು ಆದೇಶಿಸಿದ ಬಾಂಡ್‌ ಮೊತ್ತ 20,000 ರು. ಎಲ್ಲವೂ ಒಂದೇ ಆಗಿತ್ತು ಎನ್ನುವುದು ಗಮನಾರ್ಹ. ಅಲ್ಲದೇ ಆರು ಪ್ರಕರಣಗಳಲ್ಲಿ ಮೃತ ಮಹಿಳೆ ಗರ್ಭಿಣಿಯಾಗಿದ್ದರೂ ಜಾಮೀನು ನೀಡಿದ್ದರು.

ಸುಪ್ರೀಂ ಚಾಟಿ:

ಕಳೆದ ಫೆ.9ರಂದು ನ್ಯಾ। ಪಂಕಜ್‌ ಭಾಟಿಯಾ ಅವರಿಗೆ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿತ್ತು. ವರದಕ್ಷಿಣೆ ಸಾವು ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದ್ದಕ್ಕೆ ಕಳವಳ ವ್ಯಕ್ತಪಡಿಸಿದ್ದ ನ್ಯಾಯಾಲಯ ‘ ಅತ್ಯಂತ ಆಘಾತಕಾರಿ ಮತ್ತು ನಿರಾಶದಾಯಕ’ ಎಂದಿತ್ತು. ಅಲ್ಲದೇ ಆರೋಪಿಯ ಜಾಮೀನು ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ನ್ಯಾ। ಪಂಕಜ್‌ ಅವರು ತಮ್ಮನ್ನು ಜಾಮೀನು ಅರ್ಜಿಗಳ ವಿಚಾರಣೆಗೆ ನಿಯೋಜಿಸದಂತೆ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿದ್ದರು.