ರಾಯ್‌ಬರೇಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶಕ್ಕೆ ಹಿಂದೆಂದೂ ಕಂಡಿರದ ಆರ್ಥಿಕ ಆಘಾತ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ. ಇದು ಯುವಕರು, ರೈತರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಪರಿಣಾಮ ಬೀರಲಿದ್ದು, ಸರ್ಕಾರ ತನ್ನ ಮಾತು ಕೇಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

  • ನಾನು ಎಚ್ಚರಿಸಿದರೂ ಸರ್ಕಾರ ಕೇಳ್ತಿಲ್ಲ: ಆರೋಪ
  • ಯುವಕರು, ಕಾರ್ಮಿಕರು, ರೈತರ ಮೇಲೆ ಪರಿಣಾಮ
  • ಅದಾನಿ, ಅಂಬಾನಿಗೆ ಇದ್ರಿಂದ ಏನೂ ಆಗದು: ವ್ಯಂಗ್ಯ
  • ದೇಶಕ್ಕೆ ಹೇಳಿ ಮೋದಿಯೇ ಮಿತವ್ಯಯ ಮಾಡ್ತಿಲ್ಲ

ರಾಯ್‌ಬರೇಲಿ(ಉ.ಪ್ರ.): ‘ದೇಶಕ್ಕೆ ಕಷ್ಟದ ಪರಿಸ್ಥಿತಿ ಬಂದೊದಗಲಿದ್ದು, ಆರ್ಥಿಕ ಆಘಾತ ಎದುರಿಸಬೇಕಾಗುವುದು’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಎಚ್ಚರಿಕೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ತಮ್ಮ ಕ್ಷೇತ್ರವಾದ ರಾಯ್‌ಬರೇಲಿಯಲ್ಲಿ ಸಾರ್ವಜನಿಕ ಸಭೆ ನಡೆಸಿದ ಅವರು, ‘ಇಷ್ಟು ವರ್ಷದಲ್ಲಿ ನಾವ್ಯಾರೂ ಕಂಡಿರದ ಆರ್ಥಿಕ ಆಘಾತವೊಂದು ಬರಲಿದೆ. ಇದನ್ನು ಯಾರೂ ತಡೆಯಲಾಗದು. ಇದು ಯುವಕರು, ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು, ಉದ್ಯಮಿಗಳ ಮೇಲೆ ಪರಿಣಾಮ ಬೀರಲಿದೆಯೇ ಹೊರತು, ನಾಲ್ಕೂ ದಿಕ್ಕುಗಳಿಂದ ಸುಭದ್ರರಾಗಿರುವ ಅದಾನಿ ಅಂಬಾನಿ, ಮೋದಿಗೆ ಯಾವುದೇ ಕಷ್ಟವಾಗದು’ ಎಂದರು.

‘ಪೆಟ್ರೋಲ್‌ ದರ, ಹಣದುಬ್ಬರ ಇನ್ನೂ ಏರಲಿದೆ. ಇದನ್ನು ಕಂಡುಕೊಂಡೇ, ಸಾರ್ವಜನಿಕರು, ರೈತರನ್ನು ರಕ್ಷಿಸಲು ಕ್ರಮ ಕೈಗೊಳ್ಳಿ ಎಂದು (ಸರ್ಕಾರಕ್ಕೆ) ಆಗ್ರಹಿಸುತ್ತಿದ್ದೇನೆ. ಹಾಗೆ ಮಾಡದಿದ್ದರೆ ದೇಶ ಭಾರೀ ನಷ್ಟವನ್ನನುಭವಿಸಬೇಕಾಗುವುದು ಎಂದು ಎಚ್ಚರಿಸುತ್ತಿದ್ದೇನೆ. ಆದರೆ ರಾಹುಲ್‌ ಏನೂ ತಿಳಿಯದು ಎಂದು ಅವರು ಹೇಳುತ್ತಾರೆ’ ಎಂದು ರಾಹುಲ್‌ ಹೇಳಿದ್ದಾರೆ.

ಮೋದಿ ಮಿತವ್ಯಯ ಮಾಡ್ತಿಲ್ಲ

ಇದೇ ವೇಳೆ ಪಂಚರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದಿರುವ ರಾಹುಲ್‌, ‘ಚಿನ್ನ ಖರೀದಿಸಬೇಡಿ, ವಿದ್ಯುತ್‌ ಚಾಲಿತ ವಾಹನಗಳನ್ನು ಬಳಸಿ, ವಿದೇಶಿ ಪ್ರವಾಸಗಳನ್ನು ಮಾಡಬೇಡಿ ಎಂದು ದೇಶವಾಸಿಗಳಿಗೆ ಆಗ್ರಹಿಸಿದ ಮೋದಿ, ಕೂಡಲೇ ಪ್ರವಾಸಕ್ಕೆ ಹೊರಟುಬಿಟ್ಟಿದ್ದಾರೆ. ಅವರೇ ಮಿತವ್ಯಯ ಮಾಡುತ್ತಿಲ್ಲ’ ಎಂದು ಆರೋಪಿಸಿದ್ದಾರೆ. ಜತೆಗೆ, ‘ನಾರ್ವೆಗೆ ಹೋಗಿ, ಅದಾನಿಗೆ, ಅಂಬಾನಿಗೆ ಸಹಾಯ ಮಾಡಿ ಎಂದು ಮೋದಿ ಕೇಳುತ್ತಾರೆ. ನಿಮ್ಮ(ಜನರ) ದುಡ್ಡೆಲ್ಲಾ ಅವರ ಜೇಬು ಸೇರುತ್ತದೆ’ ಎಂದೂ ಎಚ್ಚರಿಸಿದರು.