ರಾಮ ಮಂದಿರ ಚಳವಳಿಯ ಹಿರಿಯ ಸಂತ ಮತ್ತು ಮಾಜಿ ಸಂಸದ ಡಾ. ರಾಮ್ ವಿಲಾಸ್ ದಾಸ್ ವೇದಾಂತಿ ಅವರು ಮಧ್ಯಪ್ರದೇಶದ ರೇವಾದಲ್ಲಿ ನಿಧನರಾಗಿದ್ದಾರೆ. ರಾಮ ಜನ್ಮಭೂಮಿ ನ್ಯಾಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದ ಅವರು, ರಾಮಕಥಾ ಪ್ರವಚನದ ವೇಳೆ ಆರೋಗ್ಯ ಹದಗೆಟ್ಟು ಕೊನೆಯುಸಿರೆಳೆದಿದ್ದಾರೆ.
ರೇವಾ: ರಾಮ ಮಂದಿರ ಚಳವಳಿಯ ಹಿರಿಯ ಸಂತ ಮತ್ತು ಬಿಜೆಪಿ ಮಾಜಿ ಸಂಸದ ಡಾ. ರಾಮ್ ವಿಲಾಸ್ ದಾಸ್ ವೇದಾಂತಿ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಮಧ್ಯಪ್ರದೇಶದ ರೇವಾದಲ್ಲಿ ಅವರು ಕೊನೆಯುಸಿರೆಳೆದರು. ರಾಮ ಜನ್ಮಭೂಮಿ ನ್ಯಾಸ್ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದ ರಾಮ್ ವಿಲಾಸ್ ದಾಸ್ ಅವರಿಗೆ ಹಠಾತ್ ಆರೋಗ್ಯ ಸಮಸ್ಯೆ ಉಂಟಾಗಿ ನಿಧನರಾಗಿದ್ದಾರೆ. ಡಾ. ರಾಮ್ ವಿಲಾಸ್ ದಾಸ್ ವೇದಾಂತಿ ಅವರು ಡಿಸೆಂಬರ್ 7 ರಂದು ಅಯೋಧ್ಯೆಯಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ಅವರು ವಿಎಚ್‌ಪಿಯ ಕೇಂದ್ರ ಮಾರ್ಗದರ್ಶಕ ಮಂಡಲದ ಸಭೆಯಲ್ಲಿ ಭಾಗವಹಿಸಿದ್ದರು. ಡಿಸೆಂಬರ್ 10 ರಂದು ಅವರು ದೆಹಲಿಯಿಂದ ರೇವಾ ತಲುಪಿದರು. ಅಲ್ಲಿ ಅವರು ರಾಮಕಥಾ ಪ್ರವಚನ ನಡೆಸುತ್ತಿದ್ದರು. ಈ ಅವಧಿಯಲ್ಲಿಯೇ ಅವರ ಆರೋಗ್ಯ ಹದಗೆಟ್ಟು ಅವರು ಸಾವನ್ನಪ್ಪಿದ್ದಾರೆ.
2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ರಾಮ್ ವಿಲಾಸ್ ದಾಸ್:
ಕಳೆದ ಎರಡು ದಿನಗಳ ಹಿಂದೆ ಡಾ. ವೇದಾಂತಿ ಅವರನ್ನು ರೇವಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಭಾನುವಾರ, ಮಧ್ಯಪ್ರದೇಶ ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ ಅವರು, ವೇದಾಂತಿ ಅವರನ್ನು ಸುಧಾರಿತ ಚಿಕಿತ್ಸೆಗಾಗಿ ಭೋಪಾಲ್‌ನ ಏಮ್ಸ್ ಆಸ್ಪತ್ರೆಗೆ ವಿಮಾನದಲ್ಲಿ ಏರ್‌ಲಿಫ್ಟ್ ಮಾಡಲು ನಿರ್ಧರಿಸಿದರು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ, ಏರ್ ಆಂಬ್ಯುಲೆನ್ಸ್‌ಗೆ ಇಳಿಯಲು ಅನುಮತಿ ಸಿಗಲಿಲ್ಲ. ಪರಿಣಾಮವಾಗಿ, ಅವರನ್ನು ಏಮ್ಸ್‌ಗೆ ಸಾಗಿಸಲು ಸಾಧ್ಯವಾಗಲಿಲ್ಲ. ಈ ನಡುವೆ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿತು ಮತ್ತು ಸೋಮವಾರ ಬೆಳಗ್ಗೆ 12.20 ಕ್ಕೆ ಅವರು ನಿಧನರಾದರು. ಅವರ ಉತ್ತರಾಧಿಕಾರಿಯಾಗಿರುವ ಮಹಂತ್ ರಾಘವೇಶ್ ದಾಸ್ ವೇದಾಂತಿ ಅವರು ರಾಮ್ ವಿಲಾಸ್ ಅವರು ನಿಧರಾದ ಸುದ್ದಿಯನ್ನು ಖಚಿತಪಡಿಸಿದ್ದಾರೆ ಮತ್ತು ಮಹಾರಾಜಿ ಅವರ ಪಾರ್ಥಿವ ಶರೀರವನ್ನು ಇಂದು ಅಯೋಧ್ಯೆಗೆ ತರಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದುಬೈನಲ್ಲಿ ಕುಳಿತು ಕರಾವಳಿಯಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಹಾಕುತ್ತಿದ್ದವನ ಹೆಡೆಮುರಿ ಕಟ್ಟಿದ ಮಂಗಳೂರು ಪೊಲೀಸರು
ವೇದಾಂತಿ ಮಹಂತ್ ಅಭಿರಾಮ್ ದಾಸ್ ಅವರ ಶಿಷ್ಯ
ರಾಮವಿಲಾಸ್ ದಾಸ್ ವೇದಾಂತಿ ಅವರು ಉತ್ತರ ಪ್ರದೇಶದ ಹನುಮಾನ್‌ಗಢಿಯ ಮಹಾಂತ ಅಭಿರಾಮ್ ದಾಸ್ ಅವರ ಶಿಷ್ಯರಾಗಿದ್ದು, ಅವರು ಅಯೋಧ್ಯೆಯ ನಯಾ ಘಾಟ್‌ನ ಹಿಂದೂ ಧಾಮದಲ್ಲಿ ವಾಸಿಸುತ್ತಿದ್ದರು ಮತ್ತು ವಶಿಷ್ಠ ಭವನ ಎಂಬ ಆಶ್ರಮವನ್ನು ಸಹ ಅಲ್ಲಿ ಆರಂಭಿಸಿದ್ದರು. ಹಲವು ದಶಕಗಳ ಕಾಲ ಅವರು ರಾಮಲಲ್ಲಾನ ಮುಂದೆ ಮತ್ತು ಹನುಮಾನ್‌ಗಢಿಯಲ್ಲಿ ರಾಮಕಥೆಯನ್ನು ಪಠಿಸುತ್ತಿದ್ದರು. ಸಂಸ್ಕೃತದಲ್ಲಿ ಭಾರಿ ಪಾಂಡಿತ್ಯವನ್ನು ಹೊಂದಿದ್ದ ಅವರು ವಿಶಿಷ್ಟ ವಿದ್ವಾಂಸರೆಂದು ಹೆಸರು ಮಾಡಿದ್ದರು. ಅಯೋಧ್ಯೆಗೆ ಸಂಬಂಧಿಸಿದ ಸಂತರಲ್ಲಿ ಇವರು ಪ್ರಮುಖ ಸ್ಥಾನವನ್ನು ಹೊಂದಿದ್ದರು.
ರಾಮ ಜನ್ಮಭೂಮಿ ನ್ಯಾಸ್‌ನ ಸದಸ್ಯ, ಬಿಜೆಪಿಯಿಂದ ಸಂಸದರಾಗಿದ್ದ ವೇದಾಂತಿ
ಡಾ. ವೇದಾಂತಿ ರಾಮ ಜನ್ಮಭೂಮಿ ನ್ಯಾಸ್‌ನ ಸದಸ್ಯರಾಗಿದ್ದರು ಮತ್ತು ಬಿಜೆಪಿ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿ ಸಂಸತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಉತ್ತರ ಪ್ರದೇಶದ ಪ್ರತಾಪ್‌ಗಢದಿಂದ 12ನೇ ಲೋಕಸಭೆಗೆ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು, 1996 ರಲ್ಲಿ ಅವರು ಜೌನ್‌ಪುರದ ಮಚ್ಲಿಶಹರ್ ಕ್ಷೇತ್ರವನ್ನು ಸಂಸದರಾಗಿ ಪ್ರತಿನಿಧಿಸಿದ್ದರು. ಶ್ರೀರಾಮ ಮಂದಿರ ಆಂದೋಲನವನ್ನು ಬಲಪಡಿಸುವಲ್ಲಿ ಅವರು ನೀಡಿದ ಮಹತ್ವದ ಕೊಡುಗೆಯಿಂದಾಗಿ, ಅವರಿಗೆ ರಾಮ ಮಂದಿರ ಜನ್ಮಭೂಮಿ ನ್ಯಾಸದ ಕಾರ್ಯನಿರ್ವಾಹಕ ಅಧ್ಯಕ್ಷರ ಜವಾಬ್ದಾರಿ ನೀಡಲಾಗಿತ್ತು.
ಇದನ್ನೂ ಓದಿ: ನಿದ್ರಿಸುತ್ತಿದ್ದ ಪೋಷಕರ ಮಧ್ಯೆ ಸಿಲುಕಿ ನವಜಾತ ಶಿಶು ಸಾವು
ಸಿಎಂ ಯೋಗಿ ಸಂತಾಪ ಗೌರವ
ಡಾ. ರಾಮ್ ವಿಲಾಸ್ ದಾಸ್ ವೇದಾಂತಿ ಅವರ ನಿಧನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪೂಜ್ಯ ಸಂತ ಡಾ. ವೇದಾಂತಿಯವರ ನಿಧನದಿಂದ ಸನಾತನ ಸಂಸ್ಕೃತಿಗೆ ತುಂಬಲಾರದ ನಷ್ಟವಾಗಿದೆ. ಅವರ ನಿಧನವು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ ಮತ್ತು ಧರ್ಮ, ಸಮಾಜ ಮತ್ತು ರಾಷ್ಟ್ರಕ್ಕೆ ಸಮರ್ಪಿತವಾದ ಅವರ ಜೀವನವು ಯುವಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಯೋಗಿ ಆದಿತ್ಯನಾಥ್ ಅವರು ಬರೆದುಕೊಂಡಿದ್ದಾರೆ.
ಬಾಬರಿ ಪ್ರಕರಣದಲ್ಲಿ ಆರಂಭಿಕ ಜೀವನ ಮತ್ತು ಖುಲಾಸೆ
ಡಾ. ರಾಮವಿಲಾಸ್ ದಾಸ್ ವೇದಾಂತಿ ಅವರು 1958 ರ ಅಕ್ಟೋಬರ್ 7ರಂದು ರೇವಾದ ಗುಧ್ವಾ ಗ್ರಾಮದಲ್ಲಿ ಜನಿಸಿದ್ದರು. ಕೇವಲ ಎರಡು ವರ್ಷದವರಾಗಿದ್ದಾಗ ತಾಯಿಯನ್ನು ಕಳೆದುಕೊಂಡಿದ್ದರು. ವೇದಾಂತಿ ಅವರ ತಂದೆ ರಾಮ್ ಸುಮನ್ ತ್ರಿಪಾಠಿ ಅವರು ಮಾಜಿ ಕೇಂದ್ರ ಸಚಿವ ಅರ್ಜುನ್ ಸಿಂಗ್ ಅವರ ಪುರೋಹಿತರು ಮತ್ತು ಗುರುಗಳಾಗಿದ್ದರು. ಡಾ. ವೇದಾಂತಿ ಅವರು 12 ನೇ ವಯಸ್ಸಿನಲ್ಲಿ ಅಯೋಧ್ಯೆಗೆ ಆಗಮಿಸಿ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಯಿತು. ಆದರೆ 2020 ರಲ್ಲಿ, ವಿಶೇಷ ಸಿಬಿಐ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತು, ಧ್ವಂಸದ ಹಿಂದೆ ಯಾವುದೇ ಪಿತೂರಿ ಇಲ್ಲ ಎಂದು ಹೇಳಿತು.


