ಸರ್ಕಾರಿ ಶಾಲೆ ಶಿಕ್ಷಕ ಹಾಗೂ ಅವರ 24 ವರ್ಷದ ಪುತ್ರ ತಾವು ಮನೆಯಲ್ಲಿ ಸಾಕಿದ್ದ ಬೆಕ್ಕು ಕಚ್ಚಿದ ಪರಿಣಾಮ ಸಾವಿಗೀಡಾದ ಘಟನೆ ನಡೆದಿದೆ. ಒಂದೇ ವಾರದೊಳಗೆ ಅಪ್ಪ ಹಾಗೂ ಮಗ ಇಬ್ಬರೂ ಸಾವಿನ ಮನೆ ಸೇರಿದ್ದಾರೆ.
ಲಕ್ನೋ: ಸರ್ಕಾರಿ ಶಾಲೆ ಶಿಕ್ಷಕ ಹಾಗೂ ಅವರ 24 ವರ್ಷದ ಪುತ್ರ ತಾವು ಮನೆಯಲ್ಲಿ ಸಾಕಿದ್ದ ಬೆಕ್ಕು ಕಚ್ಚಿದ ಪರಿಣಾಮ ಸಾವಿಗೀಡಾದ ಘಟನೆ ನಡೆದಿದೆ. ಒಂದೇ ವಾರದೊಳಗೆ ಅಪ್ಪ ಹಾಗೂ ಮಗ ಇಬ್ಬರೂ ಸಾವಿನ ಮನೆ ಸೇರಿದ್ದಾರೆ. ಬೆಕ್ಕು ಕಚ್ಚಿದ ನಂತರ ಉಂಟಾದ ರೇಬಿಸ್ ಸೋಂಕಿನ ಪರಿಣಾಮ ಈ ಘಟನೆ ನಡೆದಿದೆ. ಉತ್ತರಪ್ರದೇಶದ ಖಾನ್‌ಪುರ್ ದೆಹತ್ ಜಿಲ್ಲೆಯ ಅಕ್ಬರ್‌ಪುರ ನಗರದಲ್ಲಿ ಈ ಘಟನೆ ನಡೆದಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಇವರ ಮನೆ ಬೆಕ್ಕಿಗೆ ಬೀದಿನಾಯಿಯೊಂದು ಕಚ್ಚಿತ್ತು, ಆ ನಾಯಿ ರೇಬಿಸ್ ಸೋಂಕಿಗೊಳಗಾಗಿದ್ದರಿಂದ ಬೆಕ್ಕೂ ಕೂಡ ರೋಗಕ್ಕೆ ತುತ್ತಾಗಿ ತನ್ನ ಸಾಕಿದ್ದ ಮನೆ ಮಾಲೀಕರಿಗೆ ಕಚ್ಚಿದೆ. ಘಟನೆ ಹಿನ್ನೆಲೆಯಲ್ಲಿ ಆ ಪ್ರದೇಶಕ್ಕೆ ಆರೋಗ್ಯ ಇಲಾಖೆಯ ತಂಡ ಭೇಟಿ ನೀಡಿದೆ. ಹಾಗೂ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಖಾನ್‌ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲೋಕ್ ಸಿಂಗ್ ಹೇಳಿದ್ದಾರೆ.
ಅಂತ್ಯಕ್ರಿಯೆಗೆ ಪ್ರಿಯತಮೆ ಆಹ್ವಾನಿಸಿ ಲೈವಲ್ಲೇ ಪ್ರಾಣಬಿಟ್ಟ ರೇಬಿಸ್ ಪೀಡಿತ!
ಪ್ರಾಥಮಿಕ ಶಾಲೆಯಲ್ಲಿ 58 ವರ್ಷದ ಇಮ್ತಿಯಾಜುದ್ದೀನ್ ಹಾಗೂ ಅವರ 24 ವರ್ಷಅಜೀಮ್ ಅಖ್ತರ್ ಬೆಕ್ಕು ಕಡಿತಕ್ಕೊಳಗಾಗಿ ಸಾವನ್ನಪ್ಪಿದವರು, ಅಜೀಮ್ ಅಖ್ತರ್ ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ರಜೆಗಾಗಿ ಮನೆಗೆ ಬಂದಿದ್ದ ವೇಳೆ ಅವರಿಗೆ ಬೆಕ್ಕು ಕಚ್ಚಿತ್ತು. ಆದರೆ ತಮ್ಮ ಬೆಕ್ಕಿಗೆ ನಾಯಿ ಕಚ್ಚಿದ ಬಗ್ಗೆ ಈ ಕುಟುಂಬದವರಿಗೆ ಯಾವುದೇ ಮಾಹಿತಿ ಇರಲಿಲ್ಲ, ಹೀಗಾಗಿ ಆಂಟಿ ರೇಬಿಸ್ ಇಂಜೆಕ್ಷನ್ ಬದಲು ಅಪ್ಪ ಮಗ ಇಬ್ಬರೂ ಟೆಟನಸ್ ಇಂಜೆಕ್ಷನ್ ಪಡೆದು ಸುಮ್ಮನಾಗಿದ್ದರು. ಈ ನಡುವೆ ಕೆಲ ದಿನಗಳ ಹಿಂದೆ ಇವರಿಗೆ ಕಚ್ಚಿದ ಬೆಕ್ಕು ಸಾವನ್ನಪ್ಪಿದ್ದರೂ ಇವರಿಗೆ ಮಾತ್ರ ಇದರ ಅರಿವಿರಲಿಲ್ಲ, ನವಂಬರ್ 21 ರಂದು ಈ ಕುಟುಂಬ ಮದುವೆಯೊಂದರಲ್ಲಿ ಭಾಗಿಯಾಗುವುದಕ್ಕೆ ಭೋಪಾಲ್‌ಗೆ ತೆರಳಿದ್ದು ಅಲ್ಲಿಅಜೀಮ್ ಅವರ ಆರೋಗ್ಯ ಕ್ಷೀಣಿಸಿದೆ.
ಭೋಪಾಲ್‌ನಲ್ಲಿ ಇದಕ್ಕೆ ಪ್ರಾಥಮಿಕ ಚಿಕಿತ್ಸೆ ಪಡೆದು ನವಂಬರ್ 25ರಂದು ಖಾನ್‌ಪುರಕ್ಕೆ ಕರೆತರುವ ವೇಳೆ ಮಾರ್ಗಮಧ್ಯೆಯೇ ಅಜೀಮ್ ಸಾವನ್ನಪ್ಪಿದ್ದಾರೆ. ಮಗನ ಸಾವಿನ ನಂತರ ನವಂಬರ್ 29ರಂದು ಅಪ್ಪನ ಆರೋಗ್ಯವೂ ಕ್ಷೀಣಿಸಲಾರಂಭಿಸಿದ್ದು ಉತ್ತರಪ್ರದೇಶದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಇಲ್ಲಿ ಅವರು ಮಾರನೇ ದಿನವೇ ಪ್ರಾಣ ಬಿಟ್ಟಿದ್ದಾರೆ. ಆದರೆ ಇದೆಲ್ಲವನ್ನೂ ಮುಚ್ಚಿಟ್ಟೆ ಕುಟುಂಬ ಮೃತರ ಅಂತ್ಯಕ್ರಿಯೆ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ.
