ಪುರಿ ಜಗನ್ನಾಥ ದೇವಸ್ಥಾನದಲ್ಲಿ ಅರ್ಚಕರು ಹಣಕ್ಕಾಗಿ ಪೀಡಿಸುತ್ತಾರೆ ಮತ್ತು ಧರ್ಮವನ್ನು ವ್ಯಾಪಾರವನ್ನಾಗಿ ಮಾಡಿದ್ದಾರೆ ಎಂದು ಯುವತಿಯೊಬ್ಬಳು ವಿಡಿಯೋ ಮೂಲಕ ಆರೋಪಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿ/ಪುರಿ (ಏ.23): ನನ್ನ ಪುರಿ ಜಗನ್ನಾಥ ದೇವಸ್ಥಾನದ ದರ್ಶನ ಸಂಪೂರ್ಣ ಹಾಳಾಯಿತು. ಇಲ್ಲಿನ ಅರ್ಚಕರು ಧರ್ಮವನ್ನು ಹಣ ಮಾಡುವ ಸಾಧನವನ್ನಾಗಿ ಮಾಡಿಕೊಂಡಿದ್ದಾರೆ..." - ಇದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಯುವತಿಯೊಬ್ಬಳ ಆಕ್ರೋಶಭರಿತ ಮಾತುಗಳು.
ಭಾರತದ ಪವಿತ್ರ ಚಾರ್ ಧಾಮ್‌ಗಳಲ್ಲಿ ಒಂದಾದ ಒಡಿಶಾದ ಪುರಿ ಜಗನ್ನಾಥ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಮನಃಶಾಂತಿ ಅರಸಿ ಬರುತ್ತಾರೆ. ಆದರೆ, ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದು ದೇವಸ್ಥಾನಗಳಲ್ಲಿ ಬೆಳೆಯುತ್ತಿರುವ 'ವಿಐಪಿ ಸಂಸ್ಕೃತಿ' ಮತ್ತು 'ಹಣದ ಪ್ರಭಾವ'ದ ಬಗ್ಗೆ ಕರಾಳ ಮುಖವನ್ನು ಅನಾವರಣಗೊಳಿಸಿದೆ.
ಯುವತಿಯ ಆರೋಪವೇನು?
ವೈರಲ್ ವಿಡಿಯೋದಲ್ಲಿರುವ ಯುವತಿ ತಾನು ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದಾಗ ಎದುರಿಸಿದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾಳೆ. 'ದೇವಸ್ಥಾನದ ಒಳಗೆ ಹೋದ ಕ್ಷಣದಿಂದ ಹೊರಬರುವವರೆಗೆ ಪ್ರತಿಯೊಂದಕ್ಕೂ ಹಣ ಕೇಳುತ್ತಾರೆ. ವಿಐಪಿ ಆರತಿ, ವಿಐಪಿ ದರ್ಶನ ಎಂದು ಹೆಸರು ಹೇಳಿ ಭಕ್ತರಿಂದ ಹಣ ಕೀಳಲಾಗುತ್ತಿದೆ. ಅರ್ಚಕರು ಅಕ್ಷರಶಃ ನಿಮ್ಮ ಕೈಯಿಂದ ಹಣವನ್ನು ಕಿತ್ತುಕೊಳ್ಳುತ್ತಾರೆ. ಇದು ದರ್ಶನವಲ್ಲ, ಇದೊಂದು ವ್ಯವಹಾರ' ಎಂದು ಆಕೆ ನೇರವಾಗಿ ಆರೋಪಿಸಿದ್ದಾಳೆ. ಅಷ್ಟೇ ಅಲ್ಲದೆ, ಅತಿಯಾದ ಕೋಪ ಮತ್ತು ಬೇಸರದಿಂದ 'ಸನಾತನ ಧರ್ಮ ಹಾಳಾಗಿ ಹೋಗಿದೆ' ಎಂಬ ಕಟು ಮಾತುಗಳನ್ನು ಆಕೆ ಆಡಿದ್ದಾಳೆ.
ಆಧ್ಯಾತ್ಮದ ವ್ಯಾಪಾರೀಕರಣ:
ಈ ವಿಡಿಯೋ ಎಕ್ಸ್ (X) ಮತ್ತು ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದಂತೆ, ನೆಟ್ಟಿಗರು ಎರಡು ಬಣಗಳಾಗಿ ವಿಭಜನೆಗೊಂಡಿದ್ದಾರೆ. ಒಂದು ವರ್ಗದ ಜನರು ಯುವತಿಯ ಮಾತನ್ನು ಬೆಂಬಲಿಸಿದ್ದಾರೆ. "ದೊಡ್ಡ ದೇವಸ್ಥಾನಗಳಲ್ಲಿ ಸಾಮಾನ್ಯ ಭಕ್ತರಿಗೆ ಬೆಲೆಯೇ ಇಲ್ಲದಂತಾಗಿದೆ. ಹಣ ಇದ್ದವರಿಗೆ ಮಾತ್ರ ದರ್ಶನ ಎನ್ನುವಂತಾಗಿದೆ. ದೇವಸ್ಥಾನಗಳು ಪಂಡಿತರ ವೈಯಕ್ತಿಕ ಲಾಭದ ಕೇಂದ್ರಗಳಾಗಿವೆ" ಎಂದು ಹಲವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ‘ಧರ್ಮದ ಹೆಸರಿನಲ್ಲಿ ನಡೆಯುವ ಇಂತಹ ಲೂಟಿಯನ್ನು ನಿಲ್ಲಿಸಬೇಕು' ಎಂಬ ಕೂಗು ಕೇಳಿಬರುತ್ತಿದೆ.
ಪರ-ವಿರೋಧ ಚರ್ಚೆ:
ಮತ್ತೊಂದೆಡೆ, ಯುವತಿಯ ಹೇಳಿಕೆಗೆ ತೀವ್ರ ವಿರೋಧವೂ ವ್ಯಕ್ತವಾಗಿದೆ. 'ದೇವಸ್ಥಾನದಲ್ಲಿ ನೀಡುವ ಹಣ ದಕ್ಷಿಣೆ ಎಂದು ಪರಿಗಣಿಸಲ್ಪಡುತ್ತದೆ. ಅದನ್ನು ಬಲವಂತವಾಗಿ ಪಡೆದರೆ ಅದು ತಪ್ಪು, ಆದರೆ ಇಡೀ ಸನಾತನ ಧರ್ಮವನ್ನೇ ದೂಷಿಸುವುದು ಸರಿಯಲ್ಲ' ಎಂದು ಕೆಲವರು ಆಕ್ಷೇಪಿಸಿದ್ದಾರೆ. ಇನ್ನು ಕೆಲವು ನೆಟ್ಟಿಗರು, 'ಯುವತಿ ಕೇವಲ ಅಗ್ಗದ ಪಬ್ಲಿಸಿಟಿಗಾಗಿ ಇಂತಹ ವಿಡಿಯೋ ಮಾಡುತ್ತಿದ್ದಾಳೆ, ಹಿಂದೂ ಧರ್ಮವನ್ನು ಅವಹೇಳನ ಮಾಡುವುದು ಆಕೆಯ ಉದ್ದೇಶ' ಎಂದು ಟೀಕಿಸಿದ್ದಾರೆ.
ಮರೆಯಾಗುತ್ತಿರುವ ನಂಬಿಕೆ:
ಭಕ್ತರು ದೇವಸ್ಥಾನಗಳಿಗೆ ಹೋಗುವುದು ಕಷ್ಟಗಳನ್ನು ದೇವರ ಮುಂದೆ ಹೇಳಿಕೊಂಡು ಸಮಾಧಾನ ಪಡೆಯಲು. ಆದರೆ, ಗರ್ಭಗುಡಿಯ ಮುಂದೆಯೇ ಅರ್ಚಕರು ಹಣಕ್ಕಾಗಿ ಚೌಕಾಶಿ ನಡೆಸಿದರೆ ಭಕ್ತರ ನಂಬಿಕೆಗೆ ಧಕ್ಕೆ ಬರುವುದು ಸಹಜ. ಪುರಿ ಜಗನ್ನಾಥ ದೇವಾಲಯದಲ್ಲಿ ಈ ಹಿಂದೆಯೂ ಇಂತಹ ಆರೋಪಗಳು ಕೇಳಿಬಂದಿದ್ದರೂ, ಈ ಬಾರಿ ಯುವತಿಯ ವಿಡಿಯೋ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ದೇವಸ್ಥಾನದ ಆಡಳಿತ ಮಂಡಳಿಗಳು ಮತ್ತು ಸರ್ಕಾರಗಳು ಈ 'ವಿಐಪಿ ಸಂಸ್ಕೃತಿ' ಮತ್ತು ದರ್ಶನದ ಹೆಸರಿನಲ್ಲಿ ನಡೆಯುವ ಅಕ್ರಮ ವಸೂಲಿಗೆ ಕಡಿವಾಣ ಹಾಕದಿದ್ದರೆ, ಆಧ್ಯಾತ್ಮಿಕ ಕೇಂದ್ರಗಳು ಕೇವಲ ಪ್ರವಾಸಿ ತಾಣಗಳಾಗಿ ಅಥವಾ ವ್ಯಾಪಾರ ಕೇಂದ್ರಗಳಾಗಿ ಉಳಿಯುವ ಅಪಾಯವಿದೆ. ಭಕ್ತಿ ಅನ್ನೋದು ಹೃದಯದಿಂದ ಬರಬೇಕೇ ಹೊರತು ಜೇಬಿನಿಂದಲ್ಲ ಎಂಬ ಸತ್ಯವನ್ನು ಈ ವಿಡಿಯೋ ನೆನಪಿಸಿದೆ.


