ಉತ್ತರ ಭಾರತದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮನೆಗಳು ಕುಸಿದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ, ಪಂಜಾಬ್‌ನಲ್ಲಿ ಕುಸಿದ ಮನೆಯಲ್ಲಿ ಫ್ಯಾನ್ ಮಾತ್ರ ದೃಢವಾಗಿ ನಿಂತ ದೃಶ್ಯ ವೈರಲ್ ಆಗಿದೆ.
ಮನೆಯೇ ಬಿದ್ದರೂ ದೃಢವಾಗಿ ನಿಂತ ಫ್ಯಾನ್:
ಪಂಜಾಬ್, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ಕಡೆ ಮಳೆ ಈ ಬಾರಿ ಭಾರಿ ಅವಾಂತರವನ್ನು ಸೃಷ್ಟಿಸಿದೆ ಹಲವು ಕಡೆಗಳಲ್ಲಿ ಮನೆಗಳು ಕುಸಿದಿದ್ದರೆ, ರಸ್ತೆಗಳೂ ಕೊಚ್ಚಿ ಹೋಗಿದ್ದು, ಸಂಚಾರ ದುಸ್ತರವಾಗಿದೆ. ಪಂಜಾಬ್‌ನ ಫಿರೋಜ್‌ಪುರದಲ್ಲೂ ಪ್ರವಾಹ ಪೀಡಿತ ಪ್ರದೇಶದಲ್ಲಿ ಮನೆ ಕುಸಿತಗೊಂಡಿದ್ದು ಆದರೆ ಮನೆಯಲ್ಲಿ ಅಳವಡಿಸಿದ್ದ ಸೀಲಿಂಗ್ ಫ್ಯಾನೊಂದು ಕೆಳಗೆ ಬೀಳದೇ ಭದ್ರವಾಗಿ ನಿಂತಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಪ್ರವಾಹ ಪೀಡಿತ ಗಟ್ಟಿ ರಾಜೊಕೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಇದರ ವೀಡಿಯೋ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ವೈರಿಂಗ್ ಮಾಡಿದ ಇಲೆಕ್ಟ್ರೀಷಿಯನ್‌ಗೆ ಒಂದು ಪದಕ ನೀಡುವಂತೆ ಮನವಿ ಮಾಡಿದ್ದಾರೆ.
ಉಕ್ಕೇರಿದ ನದಿಗಳು ಹಲವು ಗ್ರಾಮಗಳು ಜಲಾವೃತ:
ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾದ ಕಾರಣ ನದಿಗಳು ಮತ್ತು ಹೊಳೆಗಳು ಉಕ್ಕಿ ಹರಿಯುತ್ತಿರುವುದರಿಂದ ಪಂಜಾಬ್ ತೀವ್ರ ಪ್ರವಾಹಕ್ಕೆ ಸಿಲುಕಿದೆ. ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳು ಹಲವಾರು ಗ್ರಾಮಗಳನ್ನು ಮುಳುಗಿಸಿವೆ. ಇದರಿಂದಾಗಿ ಗುರುದಾಸ್ಪುರ್, ಪಠಾಣ್ ಕೋಟ್, ಫಜಿಲ್ಕಾ, ಕಪುರ್ತಲಾ, ತರ್ನ್ ತರಣ್, ಫಿರೋಜ್ಪುರ್, ಹೋಶಿಯಾರ್‌ಪುರ್ ಮತ್ತು ಅಮೃತಸರ ಜಿಲ್ಲೆಗಳ ಹೆಚ್ಚಿನ ಭಾಗಗಳು ಜಲಾವೃತಗೊಂಡಿವೆ.
ಸೇನೆ, ಎನ್‌ಡಿಆರ್‌ಎಫ್, ಬಿಎಸ್‌ಎಫ್, ಪಂಜಾಬ್ ಪೊಲೀಸರಿಂದ ರಕ್ಷಣಾ ಕಾರ್ಯ
ಸೇನೆ, ಎನ್‌ಡಿಆರ್‌ಎಫ್, ಬಿಎಸ್‌ಎಫ್, ಪಂಜಾಬ್ ಪೊಲೀಸ್ ಮತ್ತು ಜಿಲ್ಲಾ ಅಧಿಕಾರಿಗಳಿಂದ ಈ ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ಯುದ್ಧೋಪಾದಿಯಲ್ಲಿ ಮುಂದುವರೆದಿವೆ. ಇದಕ್ಕೂ ಮೊದಲು, ಪಶ್ಚಿಮ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ಮನೋಜ್ ಕಟಿಯಾರ್ ಅವರು ಪ್ರವಾಹ ಪೀಡಿತ ಗಡಿ ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿಯ ಅವಲೋಕನ ಮಾಡಿದರು. ರಕ್ಷಣಾ ಕಾರ್ಯಾಚರಣೆಯನ್ನುಪರಿಶೀಲಿಸಿದರು. ಪ್ರವಾಹ ಪೀಡಿತ ನಾಗರಿಕರು ಮತ್ತು ಪರಿಹಾರ ತಂಡಗಳೊಂದಿಗೆ ಮಾತುಕತೆ ನಡೆಸಿ, ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ಸೇನೆಯ ಸಂಪೂರ್ಣ ಬೆಂಬಲದ ಬಗ್ಗೆ ನಾಗರಿಕರಿಗೆ ಭರವಸೆ ನೀಡಿದರು.
ಜನರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆ:
ಈ ನಡುವೆ ಬಿಯಾಸ್ ನದಿಯ ನೀರಿನ ಮಟ್ಟದಲ್ಲಿ ಮತ್ತಷ್ಟು ಏರಿಕೆಯಾಗಿದ್ದು, 2.35 ಲಕ್ಷ ಕ್ಯೂಸೆಕ್‌ಗಳನ್ನು ತಲುಪಿರುವುದರಿಂದ ಕಪುರ್ತಲಾ ಜಿಲ್ಲಾಡಳಿತವು ಸುಲ್ತಾನ್‌ಪುರ ಲೋಧಿ ಪ್ರದೇಶಕ್ಕೆ ಪ್ರವಾಹದ ಎಚ್ಚರಿಕೆ ನೀಡಿದೆ. ಜಿಲ್ಲಾಧಿಕಾರಿ ಅಮಿತ್ ಕುಮಾರ್ ಪಾಂಚಾಲ್ ಅವರು ತಗ್ಗು ಪ್ರದೇಶಗಳ ನಿವಾಸಿಗಳು ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹೇಳಿದ್ದಾರೆ., ಜೀವಗಳನ್ನು ರಕ್ಷಿಸುವುದು ಜಿಲ್ಲಾಡಳಿತದ ಮೊದಲ ಆದ್ಯತೆಯಾಗಿದೆ ಎಂದು ಅವರು ಒತ್ತಿ ಹೇಳಿದರು. ಸೇನೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ತಂಡಗಳು ಪ್ರವಾಹ ಪೀಡಿತ ಗ್ರಾಮಸ್ಥರನ್ನು ಸ್ಥಳಾಂತರಿಸುತ್ತಿದ್ದು, ಕಪುರ್ತಲಾ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆಗಳು ಜಾರಿಯಲ್ಲಿವೆ.
ಇನ್ನೊಂದೆಡೆ ಅಮೃತಸರದಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಯಿಯನ್ನು ಓರ್ವ ವೃದ್ಧ ಹಾಗೂ ಯುವಕ ರಕ್ಷಿಸಿದ ವೀಡಿಯೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಇದನ್ನೂ ಓದಿ: ಮುಕ್ಕಾಲ ಹಾಡಿಗೆ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಾಜಿ ಕಾಲೇಜಿನ ಪ್ರೊಫೆಸರ್ ಬಿಂದಾಸ್ ಡಾನ್ಸ್
ಇದನ್ನೂ ಓದಿ: ವಿಚಿತ್ರವಾಗಿ ಡಾನ್ಸ್ ಮಾಡಿ ಹೆರಿಗೆ ನೋವಿನಲ್ಲೂ ಹೆಂಡ್ತಿ ಮುಖದಲ್ಲಿ ನಗು ತರಿಸಿದ ಗಂಡ: ವೀಡಿಯೋ ಭಾರಿ ವೈರಲ್
