ಜಮ್ಮು ಕಾಶ್ಮೀರದಲ್ಲಿ ಪ್ರವಾಹದಿಂದ ಕೊಚ್ಚಿ ಹೋದ ಸೇತುವೆಯನ್ನು ಭಾರತೀಯ ಸೇನೆ ಕೇವಲ 12 ಗಂಟೆಗಳಲ್ಲಿ ಪುನರ್ನಿರ್ಮಿಸಿದೆ. ಈ ಸಾಧನೆಯಿಂದ ಸಂಚಾರ ವ್ಯವಸ್ಥೆ ಸುಗಮಗೊಂಡಿದೆ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗೆ ಅನುಕೂಲವಾಗಿದೆ. ಸೇನೆಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಭೂಕಂಪ, ಪ್ರವಾಹ ಸೇರಿದಂತೆ ಯಾವುದೇ ಅನಾಹುತ ಸಂಭವಿಸಿದರೂ ಜನರ ರಕ್ಷಣೆಗೆ ಮೊದಲು ಧಾವಿಸಿ ಬರುವುದು ಭಾರತೀಯ ಸೇನೆ. ಅದೇ ರೀತಿ ಪ್ರವಾಹ ಪೀಡಿತ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ಪ್ರವಾಹದಿಂದಾಗಿ ಕೊಚ್ಚಿ ಹೋದ ಸೇತುವೆಯನ್ನು ಕೇವಲ 12 ಗಂಟೆಯಲ್ಲಿ ನಿರ್ಮಿಸಿ ಸಾಧನೆ ಮಾಡಿದೆ. ಜಮ್ಮು ಕಾಶ್ಮೀರದಲ್ಲಿ ಆಗಸ್ಟ್ 26ರಂದು ಸುರಿದ ಭಾರಿ ಮಳೆಗೆ ಜಮ್ಮು ನಗರದ ತಾವಿ ನದಿಗೆ ನಿರ್ಮಿಸಲಾಗಿದ್ದ ಪ್ರಮುಖ ಸೇತುವೆ ಸಂಖ್ಯೆ 4 ಕೊಚ್ಚಿ ಹೋಗಿತ್ತು. ಇದರಿಂದ ರಕ್ಷಣಾ ಕಾರ್ಯಾಚರಣೆ ಸೇರಿದಂತೆ ಸಂಚಾರಕ್ಕೆ ತೊಂದರೆಯಾಗಿತ್ತು. ಆದರೆ ಈಗ ಭಾರತೀಯ ಸೇನೆ ಕೇವಲ 12 ಗಂಟೆಗಿಂತಲೂ ಕಡಿಮೆ ಅವಧಿಯಲ್ಲಿ ಈ 110 ಅಡಿ ಎತ್ತರದ ಬೈಲಿ ಸೇತುವೆಯನ್ನು ನಿರ್ಮಾಣ ಮಾಡುವ ಮೂಲಕ ನಾಗರಿಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ.

12 ಗಂಟೆಯಲ್ಲಿ ಸೇತುವೆ ನಿರ್ಮಿಸಿದ ಭಾರತೀಯ ಸೇನೆ:

ಈ ವಿಚಾರಕ್ಕೆ ಸಂಬಂಧಿಸಿದಂತೆ ಸೇನೆಯ ಟೈಗರ ಡಿವಿಜನ್‌ನ ಜಿಒಸಿ ಮೇಜರ್ ಜನರಲ್ ಮುಖೇಶ್ ಬನ್ವಾಲ್ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಜಮ್ಮುವಿನಲ್ಲಿ ಸಂಚಾರಕ್ಕೆ ಜೀವನಾಡಿ ಎನಿಸಿದ್ದ, ತಾವಿ ಸೇತುವೆ ಸಂಖ್ಯೆ 4ಕ್ಕೆ ಸಂಪೂರ್ಣ ಹಾನಿಯಾಗಿತ್ತು. ಇದರ ದುರಸ್ಥಿಗೆ ಹೆಚ್ಚಿನ ಸಮಯ ಬೇಕಾದ್ದರಿಂದ ಸೇನೆಯ ಟೈಗರ್ ಡಿವಿಷನ್‌ನ ಎಂಜಿನಿಯರ್‌ಗಳು 110 ಅಡಿ ಬೈಲಿ ಸೇತುವೆಯನ್ನು ಈ ಸವಾಲಿನ ಸ್ಥಳದಲ್ಲೂ ಕೇವಲ 12 ಗಂಟೆ ಸಮಯದಲ್ಲಿ ಮಾಡಿ ಮುಗಿಸಿದರುು. ಹಾಗೂ ಈ ರಸ್ತೆಯಲ್ಲಿ ಮತ್ತೆ ವಾಹನಗಳು ಸಂಚರಿಸುವುದಕ್ಕೆ ಅನುವು ಮಾಡಿಕೊಟ್ಟರು.

ಪ್ರವಾಹ ಸ್ಥಳದಲ್ಲಿ ಸಿಲುಕಿದ್ದ ಹಲವರ ರಕ್ಷಣೆ:

ಆಗಸ್ಟ್ 26ರಂದು ಸೇನೆಯ ರೈಸಿಂಗ್ ಸ್ಟಾರ್‌ ಕಾರ್ಪ್ಸ್‌ ಪಡೆಗಳು ಇಲ್ಲಿನ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿಯೂ ಸೇನೆ ಮತ್ತು ಐಎಎಫ್ ಹೆಲಿಕಾಪ್ಟರ್‌ಗಳ ಬೆಂಬಲದೊಂದಿಗೆ ಈ ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಪ್ರತಿಕೂಲ ಸ್ಥಿತಿಯಲ್ಲಿಯೂ ಸುಮಾರು ಸಾವಿರ ಜನರನ್ನು ಈ ಸ್ಥಳದಿಂದ ರಕ್ಷಣೆ ಮಾಡಲಾಗಿದೆ. ಮಕ್ಕಳು ಹಾಗೂ ಅರೆಸೈನಿಕ ಸಿಬ್ಬಂದಿ ಸೇರಿದಂತೆ ಪ್ರವಾಹ ಸ್ಥಳದಲ್ಲಿ ಸಿಲುಕಿದವರನ್ನು ರಕ್ಷಿಸಲಾಗಿದೆ. ಅಲ್ಲದೇ ಈ ಪ್ರದೇಶದಲ್ಲಿ ಪರ್ಯಾಯ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಅಳವಡಿಸುವ ಮೂಲಕ ಜಮ್ಮು ಮತ್ತು ಶ್ರೀನಗರ ನಡುವಿನ ನಿರ್ಣಾಯಕವಾದಂತಹ ಸಂವಹನ ಸಂಪರ್ಕಗಳನ್ನು ಪುನಃಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು, ನಾಗರಿಕ ಅಧಿಕಾರಿಗಳ ಸಮನ್ವಯದೊಂದಿಗೆ ಪೀಡಿತ ಕುಟುಂಬಗಳಿಗೆ ವೈದ್ಯಕೀಯ ನೆರವು, ಆಹಾರ ಮತ್ತು ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜಮ್ಮು ಹಾಗೂ ಶ್ರೀನಗರದ ಮಧ್ಯೆ ಜೀವನಾಡಿಯಾಗಿರುವ ಈ ಸೇತುವೆ:

ಜಮ್ಮು ನಗರದ ಮೂಲಕ ಹರಿಯುವ ತಾವಿ ನದಿಯು ಧಾರಾಕಾರ ಮಳೆಯಿಂದಾಗಿ ಉಕ್ಕಿ ಹರಿದ ಪರಿಣಾಮ ಜಮ್ಮುವಿನಲ್ಲಿ ವ್ಯಾಪಕ ಪ್ರವಾಹ ಉಂಟಾಗಿ ತಗ್ಗು ಪ್ರದೇಶಗಳು ಮುಳುಗಿ, ನೂರಾರು ನಿವಾಸಿಗಳು ಸ್ಥಳಾಂತರಗೊಂಡಿದ್ದರು ಅಲ್ಲದೇ ಅಲ್ಲಿ ಗಮನಾರ್ಹ ಮೂಲಸೌಕರ್ಯಕ್ಕೆ ಹಾನಿಯಾಗಿದೆ. ಜಮ್ಮು ಶ್ರೀನಗರ ನಡುವಿನ ಹೆದ್ದಾರಿ ಭಾಗವಾಗಿರುವ ಸೇತುವೆ ಸಂಖ್ಯೆ 4, ಸೂಕ್ಷ್ಮ ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ನಾಗರಿಕ ಸಂಚಾರ, ಪ್ರವಾಸೋದ್ಯಮ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಪ್ರಮುಖ ನಾಡಿಯಾಗಿ ಕಾರ್ಯನಿರ್ವಹಿಸುತ್ತದೆ.ಹೀಗಾಗಿ ಇದರ ಕುಸಿತವು ಪರಿಹಾರ ಪ್ರಯತ್ನಗಳು ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿತ್ತು. ಆದರೆ ಸೇನೆಯ ತ್ವರಿತ ಕ್ರಮವು ದೀರ್ಘಕಾಲದ ಬಿಕ್ಕಟ್ಟನ್ನು ತಪ್ಪಿಸಿದೆ.

ಇದನ್ನೂ ಓದಿ: ಪೆಪ್ಸಿಯಿಂದ ಮ್ಯಾಕ್‌ಡೋನಲ್ಡ್‌ವರೆಗೆ: ಟ್ರಂಪ್ ತೆರಿಗೆಯಿಂದಾಗಿ ಅಮರಿಕನ್ ಕಂಪನಿಗಳಿಗೆ ಭಾರತೀಯರ ಸ್ವದೇಶಿ ಬಿಸಿ

ಇದನ್ನೂ ಓದಿ: HALನಲ್ಲಿ 42 ವರ್ಷಗಳ ಸೇವೆಯ ಬಳಿಕ ನಿವೃತ್ತಿ: ಬದುಕು ನೀಡಿದ ಸಂಸ್ಥೆಗೆ ಉದ್ಯೋಗಿಯ ಭಾವುಕ ವಿದಾಯ