ಅಸ್ಸಾಂನಲ್ಲಿ ಭೀಕರ ಪ್ರವಾಹಕ್ಕೆ 82 ಮಂದಿ ಸಾವು ಪ್ರವಾಹದ ನಡುವೆ ಬುಟ್ಟಿಯಲ್ಲಿ ಮಗು ಹೊತ್ತು ಸಾಗಿದ ತಂದೆ ಪ್ರವಾಹಕ್ಕೆ ತತ್ತರಿಸಿದ ಜನ, ಪ್ರವಾಹದಲ್ಲಿ ಕೊಚ್ಚಿ ಹೋದ ಪೊಲೀಸ್
ಗುವಾಹಟಿ(ಜೂ.21): ಅಸ್ಸಾಂನಲ್ಲಿ ಸುರಿಯುತ್ತಿರುವ ಮಹಾ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭೀಕರ ಪ್ರವಾಹಕ್ಕೆ ಈಗಾಗಲೇ 82 ಮಂದಿ ಸಾವನ್ನಪ್ಪಿದ್ದಾರೆ. ಅಸ್ಸಾಂನ ಬಹುತೇಕ ಕಡೆ ಪ್ರವಾಹದ ನೀರು ನುಗ್ಗಿದೆ. ಇದರ ನಡುವೆ ತನ್ನ ಮುದ್ದಿನ ಕಂದನನ್ನು ಬುಟ್ಟಿಯಲ್ಲಿ ಹೊತ್ತುಕೊಂಡು ಪ್ರವಾಹ ದಾಟಿದ ದೃಶ್ಯ ಹೃದಯಸ್ಪರ್ಶಿಯಾಗಿತ್ತು.
ಅಸ್ಸಾಂನ ಸಿಲ್ಚಾರ್‌ನಲ್ಲಿ ಪ್ರಾವಹದಿಂದ ಮನೆಗಳು ಜಲಾವೃತಗೊಂಡಿದೆ. ಹೀಗಾಗಿ ಮನೆಯೊಳಗೆ ಸಿಲುಕಿದವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಈ ವೇಳೆ ಕೆಲ ದಿನಗಳ ಹಿಂದೆ ಹುಟ್ಟಿದ ತನ್ನು ಮುದ್ದಿನ ಕಂದನನ್ನು ಬುಟ್ಟಿಯಲ್ಲಿ ಇಟ್ಟ ತಂದೆ, ಬುಟ್ಟಿ ಹೊತ್ತು ಕೊಂಡು ಸೊಂಟದವರಿಗೆ ನೀರನ್ನು ದಾಟಿದ್ದಾರೆ.
ಮಳೆಯಿಂದ ಜಲಾವೃತವಾದ ರಸ್ತೆ: ಸ್ಕೂಟರ್ ಸಮೇತ ಮ್ಯಾನ್‌ಹೋಲ್‌ಗೆ ಬಿದ್ದ ದಂಪತಿ
ಪುರಾಣದಲ್ಲಿ ಆಗಷ್ಟೇ ಹುಟ್ಟಿದ್ದ ಭಗವಾನ್ ಶ್ರೀ ಕೃಷ್ಣನನ್ನು ತಲೆ ಮೇಲೆ ವಾಸುದೇವ ತುಂಬಿ ಹರಿಯುತ್ತಿದ್ದ ಯುಮುನಾ ನದಿಯನ್ನು ದಾಡಿದ ಕತೆಗೆ ಹೋಲುವಂತಿದೆ. ಅಸ್ಸಾಂನ ಬಹುತೇಕ ಕಡೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಮನೆ ಮಹಡಿ ಮೇಲೆ, ಎತ್ತರದ ಪ್ರದೇಶದ ಮೇಲೆ ಕುಳಿತು ರಕ್ಷಣೆಗಾಗಿ ಮೊರೆ ಇಡುತ್ತಿರು ವ ದೃಶ್ಯ ಸಾಮಾನ್ಯವಾಗಿದೆ. ರಕ್ಷಣಾ ತಂಡದ ಬೋಟ್‌ಗಳಲ್ಲಿ ರಕ್ಷಣೆ ಕಾರ್ಯಗಳು ನಡೆಯುತ್ತಿದೆ.
ಆಸ್ಸಾಂನಲ್ಲಿ ಪ್ರವಾಹದ ಪರಿಸ್ಥಿತಿಯು ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 11 ಮಂದಿ ಪ್ರವಾಹದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆಯು 82ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಕರೆ ಮಾಡಿ ರಾಜ್ಯದಲ್ಲಿ ಪ್ರವಾಹದ ಸ್ಥಿತಿಗತಿ ಕುರಿತು ವಿಚಾರಿಸಿದ್ದಾರೆ.
ಕಳೆದ 1 ವಾರದಿಂದಲೂ ಆಸ್ಸಾಂನಲ್ಲಿ ಭೀಕರ ಪ್ರವಾಹದಿಂದ ತತ್ತರಿಸುತ್ತಿದ್ದು, 32 ಜಿಲ್ಲೆಗಳ ಸುಮಾರು 47 ಲಕ್ಷ ಜನರು ಪ್ರವಾಹದಿಂದಾಗಿ ಬಾಧಿತರಾಗಿದ್ದಾರೆ ಎಂದು ಆಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ನೌಗಾಂವ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ವೇಳೆ ಪೊಲೀಸರು ಪ್ರವಾಹದಲ್ಲಿ ಕೊಚ್ಚಿ ಹೋದ ಘಟನೆಯು ವರದಿಯಾಗಿದೆ. 7ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ಕೊಪಿಲಿ, ಪುಥಿಮಾರಿ, ಪಗ್ಲಾಡಿಯಾ, ಬೆಕಿ ಬರಾಕ್, ಕುಶಿಯಾರಾ ನದಿಗಳು ಅಪಾಯದ ಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಹರಿಯುತ್ತಿದ್ದು, ಕಾಮರೂಪ ಹಾಗೂ ಕರೀಂಗಂಜ್‌ನಲ್ಲಿ ಭೂಕುಸಿತ ಸಂಭವಿಸಿದೆ. 1.13 ಲಕ್ಷ ಹೆಕ್ಟೇರ್ ಕೃಷಿಭೂಮಿ ಮುಳುಗಡೆಯಾಗಿದ್ದು, 5,232 ಪ್ರಾಣಿಗಳು ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿವೆ.
ಪ್ರವಾಹಕ್ಕೆ ಈಶಾನ್ಯ ಭಾರತ ತತ್ತರ, ಸತತ 5ನೇ ದಿನವೂ ಭಾರಿ ಮಳೆ!
ಅಮಿತ್ ಶಾ ಕರೆ:
ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಶರ್ಮಾ ಅವರಿಗೆ ಮುಂಜಾನೆಯಿಂದ 2 ಬಾರಿ ಕರೆಮಾಡಿ ರಾಜ್ಯದ ಪ್ರವಾಹದ ಪರಿಸ್ಥಿತಿ ಬಗ್ಗೆ ವಿಚಾರಿಸಿದ್ದಾರೆ. ‘ಗೃಹ ಸಚಿವಾಲಯದಿಂದ ಅಧಿಕಾರಿಗಳ ತಂಡವು ಶೀಘ್ರವೇ ರಾಜ್ಯಕ್ಕೆ ಆಗಮಿಸಿ ನೈಸರ್ಗಿಕ ವಿಕೋಪದಿಂದಾದ ಹಾನಿಯ ಮೌಲ್ಯಮಾಪನ ನಡೆಸಲಿದೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ’ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.
ವರುಣನ ಆರ್ಭಟಕ್ಕೆ ಮೇಘಾಲಯ ಕೂಡಾ ತತ್ತರಿಸಿದ್ದು, ಭೂಕುಸಿತದಿಂದಾಗಿ 2 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಿಗೆ ಭಾರೀ ಹಾನಿಯಾಗಿದೆ. ಸಂಚಾರ ಸ್ಥಗಿತವಾಗಿದ್ದು ಸುಮಾರು 5 ಲಕ್ಷ ಜನರು ಬಾಧಿತರಾಗಿದ್ದಾರೆ.ಕಳೆದ ಒಂದು ವಾರದಲ್ಲಿ ಸುಮಾರು 18 ಜನರು ಮೃತಪಟ್ಟಿದ್ದು, ಮುಖ್ಯಮಂತ್ರಿ ಕೊನಾರ್ಡ್ ಸಂಗ್ಮಾ ಮೃತರ ಕುಟುಂಬಕ್ಕೆ 4 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.
