ಹೆರಿಗೆ ನೋವಿನಲ್ಲಿದ್ದ ಪತ್ನಿಯನ್ನು ನಗಿಸಲು ಪತಿಯೊಬ್ಬ ಮಾಡಿದ ವಿಶಿಷ್ಟ ಪ್ರಯತ್ನದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೃತ್ಯ ಮಾಡುವ ಮೂಲಕ ಪತ್ನಿಯನ್ನು ನಗಿಸಲು ಯತ್ನಿಸಿದ ಪತಿಯ ಪ್ರೀತಿಗೆ ಮೆಚ್ಚುಗೆ ವ್ಯಕ್ತವಾಗಿದೆ. 

ಮಗುವಿಗೆ ಜನ್ಮ ನೀಡುವುದು ಎಂದರೆ ಸುಲಭದ ಮಾತಲ್ಲ, ಅದು ಹೆಣ್ಣಿಗೆ ಪುನರ್ಜನ್ಮವಿದ್ದಂತೆ, ಈ ಸಂದರ್ಭದಲ್ಲಿ ಆಗುವ ನೋವು ಆತಂಕ ಅಷ್ಟಿಷ್ಟಲ್ಲ, ಹೆರಿಗೆ ನೋವಿನ ಮುಂದೆ ಬೇರೆ ಯಾವ ನೋವುಗಳು ನೋವೇ ಅಲ್ಲ ಎಂಬುದು ತಾಯಿಯದವರ ಅನುಭವದ ಮಾತುಗಳು, ಯಾರು ಎಷ್ಟು ಧೈರ್ಯ ತುಂಬಿದರು ಆ ಕ್ಷಣ ಹತ್ತಿರ ಬರುತ್ತಿದ್ದಂತೆ ಎದೆಯಲ್ಲಿ ನಡುಕ ಶುರುವಾಗುತ್ತದೆ. ಹೊಟ್ಟೆ ಕಿಬ್ಬೊಟ್ಟೆ ಸೊಂಟದಲ್ಲಿನ ನೋವಿನ ನರಕಯಾತನೆ ಸಹಿಸಲು ಸಾಧ್ಯವಾಗದಂತಿರುತ್ತದೆ. ಕೆಲವರು ಈ ನೋವು ತಡೆಯಲಾಗದೇ ಹಾಸ್ಪಿಟಲ್‌ನ ಮಹಡಿ ಹಾರುವಂತೆ ಕಿರುಚುತ್ತಾರೆ. ಇನ್ನು ಕೆಲವರು ಪಕ್ಕದಲ್ಲಿದ್ದ ನರ್ಸ್‌ಗೆ ಹೊಡೆಯಲು ಮುಂದಾಗುತ್ತಾರೆ. ಹೀಗೆ ನೋವಿನ ಪರಿಮಾಣದಲ್ಲಿ ವ್ಯತ್ಯಾಸವಿದ್ದರೂ ಹೆಣ್ಣಿಗೆ ಅದೊಂದು ಪುನರ್ಜನ್ಮವಿದ್ದಂತೆ ಸರಿ. 

ಹೆರಿಗೆ ನೋವಿನಿಂದ ಬಳಲುತ್ತಿದ್ದ ಪತ್ನಿಯ ನಗಿಸಿದ ಪತಿ…

ಈ ಸಂದರ್ಭದಲ್ಲಿ ಪ್ರೀತಿಯ ಸಂಗಾತಿ ಜೊತೆಗಿದ್ದರೆ ಹೆಣ್ಣು ಮಕ್ಕಳಿಗೊಂದು ಧೈರ್ಯ. ಬರೀ ಮಹಿಳೆಯರಿಗೆ ಮಾತ್ರವಲ್ಲ, ಹೆಂಡ್ತಿಯನ್ನು ಹೆರಿಗೆಗಾಗಿ ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯುತ್ತಿದ್ದಂತೆ ಗಂಡನಿಗೂ ಒಳಗೊಳಗೆ ಸಂಕಟವಾಗುತ್ತದೆಯಂತೆ. ಅದೇನೆ ಇರಲಿ ಈ ನೋವಿನ ಕ್ಷಣದಲ್ಲೂ ಹೆಂಡತಿಯನ್ನು ನಗಿಸಲು ಎಲ್ಲರಿಗೂ ಸಾಧ್ಯವಿಲ್ಲ. ಆದರೆ ಇಲ್ಲೊಬ್ಬ ಮಹಾನುಭವ ಹೆಂಡ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಹೆರಿಗೆ ಕೋಣೆಯಲ್ಲಿ ಹೆಂಡ್ತಿ ಹೆರಿಗೆಗಾಗಿ ಕಾಯುತ್ತಿದ್ದರೆ. ಆಕೆ ಆ ನೋವಲ್ಲೂ ನಗುವಂತೆ ಮಾಡಿದ್ದಾನೆ. ಆತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ಈ ನೋವಿನಲ್ಲೂ ಹೆಂಡ್ತಿಯನ್ನು ನಗಿಸುತ್ತಿರುವ ಗಂಡನ ಮನಸ್ಥಿತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮಾಷೆಯಾಗಿ ಡಾನ್ಸ್ ಮಾಡುತ್ತಾ ನೋವಿನಲ್ಲಿರುವ ಪತ್ನಿಯ ನಗಿಸಲು ಪತಿಯ ಯತ್ನ:

ವೀಡಿಯೋದಲ್ಲಿ ಕಾಣುವಂತೆ ಆತನೇನು ಮಹಾ ನೃತ್ಯಗಾರನಲ್ಲ, ಆದರೆ ಹೆಂಡ್ತಿಯನ್ನು ನೋವಿನಲ್ಲೂ ನಗಿಸುವುದಕ್ಕೆ ಆತ ಪ್ರಯತ್ನಿಸಿ ಸೊಟ್ಟ ಸೊಟ್ಟಗೆ ಡಾನ್ಸ್ ಮಾಡಿ ಪತ್ನಿಯ ನಗಿಸುವ ಪ್ರಯತ್ನ ಮಾಡಿದ್ದು, ಪತ್ನಿ ನೋವಿನಲ್ಲೂ ಗಂಡನ ನೃತ್ಯ ನೋಡಿ ನಗುವ ಪ್ರಯತ್ನ ಮಾಡಿದ್ದಾಳೆ. ಈ ವೀಡಿಯೋದಲ್ಲಿ ಪಂಜಾಬಿ ಹಾಡಿಗೆ ಗಂಡ ತನ್ನ ಮೈ ಕುಣಿಸುತ್ತಿದ್ದು, ಹಾಸಿಗೆ ಮೇಲೆ ಮಲಗಿರುವ ಪತ್ನಿಯ ತಲೆ ಸವರಿ ಮುತ್ತಿಟ್ಟಿದ್ದಾನೆ. ವರ್ಷದ ಹಿಂದಿನ ವೀಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಆಸ್ಪತ್ರೆಯ ಹಾಸಿಗೆಯ ಮೇಲೆ ಹೆರಿಗೆ ನೋವು ಅನುಭವಿಸುತ್ತಿದ್ದ ತನ್ನ ಹೆಂಡತಿಯನ್ನು ನಗಿಸಲು ವ್ಯಕ್ತಿಯೊಬ್ಬ ತನ್ನಿಂದ ಸಾಧ್ಯವಾದಷ್ಟು ಮೋಜಿನ ರೀತಿಯಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ಸಂತಸ ಮೂಡಿಸಿದೆ.ಒಂದು ವರ್ಷದ ಹಿಂದೆ ರಾಜೇಶ್ ರಾಜನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡು ವೈರಲ್ ಆಗಿದೆ.

ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್:

ಈ ವೀಡಿಯೋ ನೋಡಿದ ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಬಹುತೇಕ ಹೆಣ್ಮಕ್ಕಳೇ ಈ ವೀಡಿಯೋಗೆ ಕಾಮೆಂಟ್ ಮಾಡಿದ್ದು, ಆಕೆ ಆತನ ಡಾನ್ಸ್‌ನಿಂದ ಖುಷಿಯಾಗಿರುವಂತೆ ಕಾಣ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ನಾಟಕವನ್ನು ಈಗಲೇ ನಿಲ್ಲಿಸು ಎಂದು ಆಕೆ ಹೇಳುವಂತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ಗ್ರೇಟ್ ಸಹೋದರ ದೇವರು ನಿಮಗೆ ಒಳ್ಳೆದು ಮಾಡಲಿ ಎಂದು ಕಾಮೆಂಟ್ ಮಾಡಿದ್ದಾರೆ. ಮನುಷ್ಯ ಆಕೆಯನ್ನು ಶಾಂತವಾಗಿಸುವ ಪ್ರಯತ್ನ ಮಾಡ್ತಿದ್ದಾನೆ ನಿಮಗೆ ದೇವರು ಒಳ್ಳೆದಯ ಮಾಡಲಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅವನು ಆಕೆಯ ನೋವನ್ನು ಹಂಚಿಕೊಳ್ಳುತ್ತಾನೆ,ಉದಾತ್ತ ಆತ್ಮ ಇವರ ನವಜಾತ ಶಿಶು ಮತ್ತು ಕುಟುಂಬ ಹೇಗಿದೆ ಎಂದು ಯಾರಿಗಾದರೂ ತಿಳಿದಿದೆಯೇ?? ಎಂದು ಒಬ್ಬರು ಕುತೂಹಲದಿಂದ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬರು ಅವರಿಗೆ ಹೆಣ್ಣು ಮಗು ಜನಿಸಿದೆ. ಅವರ ಕುಟುಂಬ ತುಂಬಾ ಸಂತೋಷದಿಂದ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಪತ್ನಿಯ ನೋವನ್ನು ಹಂಚಿಕೊಳ್ಳಲು ಯತ್ನಿಸಿದ ಪತಿಯ ಪ್ರೀತಿಗೆ ಬಹುತೇಕ ಹೆಂಗೆಳೆಯರು ಭೇಷ್ ಎಂದಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

ಇದನ್ನೂ ಓದಿ: ಮ್ಯಾನೇಜರ್ ನಿರ್ಧಾರ ಖಂಡಿಸಿ ಕೇರಳದ ಕೆನರಾ ಬ್ಯಾಂಕ್‌ನಲ್ಲಿ ಗೋಮಾಂಸ ಉತ್ಸವ ಆಚರಿಸಿದ ಉದ್ಯೋಗಿಗಳು

ಇದನ್ನೂ ಓದಿ: ಆನೆಗೆ ಬಿಯರ್ ಕುಡಿಸಿದ ಪ್ರವಾಸಿಗ: ವಿಡಿಯೋ ವೈರಲ್ ಆಗ್ತಿದ್ದಂಗೆ ತೀವ್ರ ಆಕ್ರೋಶ

View post on Instagram