ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನ ಪ್ರೊಫೆಸರ್ ಪುಷ್ಪರಾಜ್ ಅವರು ಪ್ರಭುದೇವ್ ಅವರ ಮುಕ್ಕಾಲ ಮುಕಾಬಲ ಹಾಡಿಗೆ ನೃತ್ಯ ಮಾಡಿದ್ದು, ಅವರ ವೀಡಿಯೋ ಈಗ ಭಾರಿ ವೈರಲ್ ಆಗ್ತಿದೆ.

ಪ್ರತಿಭೆ ಹಾಗೂ ಕಲೆ ಯಾರ ಸ್ವತ್ತು ಕೂಡ ಅಲ್ಲ, ಪ್ರತಿಭೆ ಇರುವ ಯಾರಿಗೆ ಬೇಕಾದರೂ ಇಂದು ಸಾಮಾಜಿಕ ಜಾಲತಾಣಗಳು ಒಳ್ಳೆಯ ವೇದಿಕೆ ಒದಗಿಸುತ್ತವೆ. ಸಾಮಾಜಿಕ ಜಾಲತಾಣಗಳು ಬಂದ ನಂತರವಂತೂ ಅನೇಕ ಹೊಸ ಹೊಸ ಪ್ರತಿಭೆಗಳು ಸಾಮಾಜಿಕ ಜಾಲತಾಣದಲ್ಲಿ ಹೊರಬಂದಿದ್ದು, ಒಬ್ಬರಿಗೊಬ್ಬರು ಸ್ಪರ್ಧೆ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಈ ಕಾಲಘಟ್ಟದಲ್ಲಿ ಯಾರು ಹೇಗೆ ಬೇಕಾದರೂ ವೈರಲ್ ಆಗಬಹುದು. ಹಾಗೆಯೇ ಇಲ್ಲೊಬ್ಬರು ಕಾಲೇಜು ಪ್ರೊಫೆಸರ್ ತಮ್ಮ ಡಾನ್ಸ್ ಟ್ಯಾಲೆಂಟ್‌ನಿಂದಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. 

ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಾಜಿ ಕಾಲೇಜಿನ ಪ್ರೊಫೆಸರ್ ಬಿಂದಾಸ್ ಡಾನ್ಸ್‌:

ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಾಜಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಪುಷ್ಪಾರಾಜ್ ಎಂಬುವವರೇ ಹೀಗೆ ಬಿಂದಾಸ್ ಆಗಿ ಡಾನ್ಸ್ ಮಾಡುವ ಮೂಲಕ ಕಾಲೇಜು ವಿದ್ಯಾರ್ಥಿಗಳನ್ನು ಮಾತ್ರವಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದವರು.

ಪ್ರಭುದೇವ್ ಅವರ ಮುಕ್ಕಾಲ ಮುಕಾಬುಲ ಹಾಡಿಗೆ ಎನರ್ಜಿಟಿಕ್ ಡಾನ್ಸ್‌:

ಅಂದಹಾಗೆ ಈ ಫ್ರೊಫೆಸರ್ ಪುಷ್ಪರಾಜ್ ಅವರು ತಮಿಳಿನ ಐಕಾನಿಕ್, ಪ್ರಭುದೇವ್ ನಟನೆಯ ಕಾದಲನ್ ಸಿನಿಮಾದ ಎವರ್‌ಗ್ರೀನ್ ಹಾಡಾದ ಮುಕ್ಕಾಲ ಮುಕ್ಕಾಬಲ ಹಾಡಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಪ್ರೊಫೆಸರ್ ಸ್ಟೇಜ್ ಮೇಲೆ ಎನರ್ಜಿಕ್ ಡಾನ್ಸ್‌ ಮಾಡಿದರೆ ಕೆಳಗಿದ್ದ ಅವರ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಸಿಳ್ಳೆ ಹೊಡೆದು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ಪ್ರೊಫೆಸರ್ ಅವರ ಡಾನ್ಸ್ ವೀಡಿಯೋವನ್ನು ಇನ್ಸ್ಟ್ರಾಗ್ರಾಮ್‌ನಲ್ಲಿ ಗಟಲ್ಬಮ್‌ ಎಂಬ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಲಕ್ಷಾಂತರ ಜನ ವೀಕ್ಷಿಸಿ ಮಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಪ್ರಾಧ್ಯಾಪಕರಿಂದ ಮತ್ತೊಂದು ಅದ್ಭುತ ಪ್ರದರ್ಶನ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವೀಡಿಯೋ ನೋಡಿದ ಅನೇಕರು ಪ್ರೊಫೆಸರ್ ಟ್ಯಾಲೆಂಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೈಕೆಲ್ ಜಾಕ್ಸನ್ ಎಂದು ಕರೆದ ನೆಟ್ಟಿಗರು:

ನಟ ಪ್ರಭುದೇವ್ ರೀತಿಯೇ ಪುಷ್ಪರಾಜ್ ನೃತ್ಯ ಮಾಡಿದ್ದಾರೆ. ಆದರೆ ಡಾನ್ಸ್‌ನ ಮಧ್ಯದಲ್ಲಿ ಅವರ ಒಂದು ಶೂ ಕಳಚಿಕೊಂಡಿದ್ದು, ಆದರೂ ಕ್ಯಾರೇ ಎನ್ನದ ಪುಷ್ಪರಾಜ್ ಕೆಲ ಸೆಕೆಂಡ್ ಡಾನ್ಸ್ ಮಾಡಿ ತಮ್ಮ ಮತ್ತೊಂದು ಶೂವನ್ನು ಕಳಚಿ ಪಕ್ಕಕ್ಕೆ ಇಟ್ಟು ಕುಣಿದಿದ್ದಾರೆ. ಇವರ ಈ ನೃತ್ಯಕ್ಕೆ ಅಲ್ಲಿ ಸೇರಿದ ಜನ ಕೂಗು ಹಾಕಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಕೆಲವರು ಅವರನ್ನು ಡಾನ್ಸ್‌ ಮಾಸ್ಟರ್ ಎಂದು ಕರೆದರೆ ಮತ್ತೆ ಕೆಲವರು ಮೈಕೆಲ್ ಜಾಕ್ಸನ್ ಎಂದಿದ್ದಾರೆ. ಅವರು ಇನ್ನೊಂದು ಶೂವನ್ನು ಕಳಚಿದ ರೀತಿಯೂ ತುಂಬಾ ಸ್ಟೈಲಿಶ್ ಆಗಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಬ್ರದರ್ ತಪ್ಪಾದ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ವೃತ್ತಿಯಿಂದ ಪ್ರೊಫೆಸರ್ ಆಸಕ್ತಿಯಿಂದಾಗಿ ಡಾನ್ಸರ್ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಕಾಲೇಜಿನಲ್ಲಿ ಪ್ರೊಫೆಸರ್‌ಗಳು ಮಕ್ಕಳು ಎಲ್ಲರೂ ಟ್ಯಾಲೆಂಟ್‌ಗಳೇ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಅಂದಹಾಗೆ ಪ್ರೊಫೆಸರ್ ಪುಷ್ಪರಾಜ್ ಡಾನ್ಸ್ ಮೂಲಕ ವೈರಲ್ ಆಗ್ತಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಅವರ ಒಂದು ಡಾನ್ಸ್‌ ವೈರಲ್ ಆಗಿತ್ತು. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

ಇದನ್ನೂ ಓದಿ: ಮ್ಯಾನೇಜರ್ ನಿರ್ಧಾರ ಖಂಡಿಸಿ ಕೇರಳದ ಕೆನರಾ ಬ್ಯಾಂಕ್‌ನಲ್ಲಿ ಗೋಮಾಂಸ ಉತ್ಸವ ಆಚರಿಸಿದ ಉದ್ಯೋಗಿಗಳು

ಇದನ್ನೂ ಓದಿ: ವಿಚಿತ್ರವಾಗಿ ಡಾನ್ಸ್ ಮಾಡಿ ಹೆರಿಗೆ ನೋವಿನಲ್ಲೂ ಹೆಂಡ್ತಿ ಮುಖದಲ್ಲಿ ನಗು ತರಿಸಿದ ಗಂಡ: ವೀಡಿಯೋ ಭಾರಿ ವೈರಲ್

View post on Instagram