ಪುಣೆಯ ಕೇತನ್‌ ಅಗರ್ವಾಲ್‌ ಕೊಲೆ ಪ್ರಕರಣದಲ್ಲಿ, ಆತನ ಭಾವಿ ಪತ್ನಿ ಸಿಯಾ ಗೋಯಲ್‌ ಪ್ರಿಯಕರನ ಜೊತೆಗೂಡಿ ಹತ್ಯೆಗೈದಿದ್ದಾಳೆ. ಲೋಹಗಢ ಕೋಟೆಯ ಪ್ರಪಾತಕ್ಕೆ ತಳ್ಳುವ ಮುನ್ನ ಆಕೆ ಎರಡು ಬಾರಿ ವಿಫಲ ಯತ್ನ ನಡೆಸಿದ್ದಳು ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಈ ಸಂಚನ್ನು ಬಯಲಿಗೆಳೆದಿದ್ದಾರೆ.

Pune Ketan Agarwal Murder Case: ದೇಶದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿರುವ ಪುಣೆಯ ಕೇತನ್‌ ಅಗರ್ವಾಲ್‌ ಕೊಲೆ ಪ್ರಕರಣದ ಒಂದೊಂದೇ ಕತೆಗಳು ಹೊರಬರುತ್ತಿವೆ. ಭಾವಿ ಪತಿ ಕೇತನ್‌ನನ್ನು ಆತನ ಭಾವಿ ಪತ್ನಿ ಸಿಯಾ ಗೋಯಲ್‌ ಟ್ರೆಕ್ಕಿಂಗ್‌ಗೆ ಕರೆದೊಯ್ದ ಅಲ್ಲಿ ಪ್ರಿಯಕರನ ಜೊತೆಗೂಡಿ 400 ಅಡಿ ಆಳದ ಕಂದಕಕ್ಕೆ ತಳ್ಳಿ ಹತ್ಯೆಗೈಯುವ ಮುನ್ನ ಇಂಥದ್ದೇ 2 ಯತ್ನವನ್ನು ಮೊದಲು ಮಾಡಿದ್ದಳು. ಆದರೆ ಅವು ವಿಫಲವಾಗಿದ್ದವು. 3ನೇ ಯತ್ನದಲ್ಲಿ ಯಶ ಕಂಡಳು ಎಂದು ಪೊಲೀಸ್‌ ತನಿಖೆ ವೇಳೆ ಗೊತ್ತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೇ 31ಕ್ಕೆ ಮೊದಲ ಯತ್ನ:

ಮೊದಲಿಗೆ ಮೇ 31ರಂದು ಇಬ್ಬರೂ ಮಹಾರಾಷ್ಟ್ರದ ಲೋಹಗಢ ಕೋಟೆಗೆ ಚಾರಣಕ್ಕೆ ಹೋಗಿದ್ದಾಗ ಕೇತನ್‌ನನ್ನು ಗೊತ್ತಾಗದಂತೆ ಪ್ರಪಾತಕ್ಕೆ ತಳ್ಳಲು ಪ್ರಯತ್ನ ನಡೆಸಲಾಗಿತ್ತು, ಆದರೆ ಅದು ವಿಫಲವಾಯಿತು.

ಜೂ.14ಕ್ಕೆ 2ನೇ ಯತ್ನ:

ನಂತರ ಜೂನ್ 14 ರಂದು ಕೇತನ್ ಕೊಲ್ಲಲು ಎರಡನೇ ಪ್ರಯತ್ನ ನಡೆದಿತ್ತು. ಆಗಲೂ ಸಿಯಾ, ಕೇತನ್ ಅವರನ್ನು ಮಹಾರಾಷ್ಟ್ರದ ಲೋಹಗಢ ಕೋಟೆಗೆ ಕರೆದೊಯ್ದಿದ್ದಳು. ಸಿಯಾ ಪ್ರೇಮಿ ಚೇತನ್ ಚೌಧರಿ ಕೂಡ ಇದರಲ್ಲಿ ಕೈಜೋಡಿಸಿದ್ದ. ಹಾವಿನ ನೆಪ ಹೇಳಿದ ಸಿಯಾ, ಕೇತನ್‌ನನ್ನು ತಬ್ಬಿಕೊಳ್ಳುವ ನಾಟಕ ಆಡಿ ಪ್ರಪಾತಕ್ಕೆ ತಳ್ಳುವ ಯತ್ನ ನಡೆಸಿದ್ದಳು. ಆದರೆ ಕೇತನ್ ಬಚಾವ್ ಆಗಿದ್ದ. ಸಿಯಾ, ಹಾವು ಅಂತ ಕಿರಿಚಿದ್ದರಿಂದ ಆತನ ಗಮನ ಬೇರೆಡೆ ಹೋಗಿತ್ತು. ಹೀಗಾಗಿ ಇದೊಂದು ಸಂಚು ಎಂಬ ಸತ್ಯ ಕೇತನ್ ಅರಿವಿಗೆ ಬರ್ಲಿಲ್ಲ.

ಜೂ.19ಕ್ಕೆ 3ನೇ ಯತ್ನ:

ಕೊನೆಗೆ ಜೂನ್ 19 ರಂದು ಮಹಾಬಲೇಶ್ವರದ ಐಷಾರಾಮಿ ರೆಸಾರ್ಟ್ನಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಆಯೋಜಿಸಿ, ಅದೇ ನೆಪದಲ್ಲಿ ಲೋಹಗಢ ಕೋಟೆಗೆ ಪುನಃ ಪ್ರವಾಸಕ್ಕೆ ಕೇತನ್‌ನನ್ನು ಕರೆದೊಯ್ಯಲಾಯಿತು. ಆಗ ಕೇತನ್‌ನನ್ನು ಪ್ರಪಾತಕ್ಕೆ ತಳ್ಳಿ, ಇದೊಂದು ಅಪಘಾತ ಎಂಬಂತೆ ಕಥೆ ಕಟ್ಟಿದ್ದಳು. ಈ ಮೂಲಕ ಸಿಯಾ, ಕೇತನ್ ಕಥೆ ಮುಗಿಸೋದ್ರಲ್ಲಿ ಯಶಸ್ವಿಯಾಗಿದ್ದಳು ಎಂದು ಗೊತ್ತಾಗಿದೆ.

--ಏನಿದು ಪ್ರಕರಣ?:

ಸ್ವತಃ ರಿಯಲ್‌ ಎಸ್ಟೇಟ್‌ ಕಂಪನಿ ಹೊಂದಿದ್ದ ಕೇತನ್‌, ಜೂ.18ರಂದು ತಮ್ಮ ಭಾವಿ ಪತ್ನಿ ಸಿಯಾ ಜತೆ ಲೋಹಗಡ್‌ ಕೋಟೆಗೆ ಬಂದಿದ್ದರು. ಅಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದಾಗ 400 ಅಡಿ ಆಳದ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಕೂಡಲೇ ಲೊನಾವಲಾ ಪೊಲೀಸ್‌ ಠಾಣೆಗೆ ಧಾವಿಸಿದ ಸಿಯಾ, ಕೇತನ್‌ ಕಾಲುಜಾರಿ ಬಿದ್ದನೆಂದು ದೂರು ದಾಖಲಿಸಿದ್ದು, 3 ತಾಸಿನ ಕಾರ್ಯಾಚರಣೆ ಬಳಿಕ ದೇಹವನ್ನು ಮೇಲೆತ್ತಲಾಗಿತ್ತು. ಅದಾದ ಬೆನ್ನಲ್ಲೇ ಇನ್ಸ್‌ಟಾಗ್ರಾಂನಲ್ಲಿ ಸಿಯಾ, ‘ನಾನು ನಿನ್ನನ್ನು ಅಷ್ಟೊಂದು ಪ್ರೀತಿಸುತ್ತಿದ್ದೆ. ಆದರೆ ನೀನು ನನ್ನ ಜನ್ಮದಿನದಂದೇ ಬಿಟ್ಟುಹೋದೆ’ ಎಂಬ ಭಾವನಾತ್ಮಕ ಸ್ಟೋರಿ ಹಾಕಿದ್ದಳು.

ಹೂಡಿ ಧರಿಸಿ ಸಿಕ್ಕಿಬಿದ್ದ!

ಸಿಯಾಳ ಪ್ರಿಯಕರ ಚೇತನ್‌ ಚೌಧರಿ ಸಿಕ್ಕಿಬಿದ್ದಿದ್ದೂ ಒಂದು ಕುತೂಹಲಕಾರಿ ಕತೆ. ಸಿಯಾ ಹಾಗೂ ಭಾವಿ ಪತಿ ಕೇತನ್‌ನನ್ನು ಹುಡಿ ಧರಿಸಿದ ವ್ಯಕ್ತಿಯೊಬ್ಬ ಹಿಂಬಾಲಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ಸೆರೆಹಿಡಿದ್ದವು. ತಾಪಮಾನ 33 ಡಿಗ್ರಿ ಇದ್ದರೂ ಆ ವ್ಯಕ್ತಿ ಹೂಡಿ ಧರಿಸಿರುವುದು ಪೊಲೀಸರಿಗೆ ಅಸಾಮಾನ್ಯವೆನಿಸಿತು ಮತ್ತು ಅವನ ಒಟ್ಟಾರೆ ಅನುಮಾನಾಸ್ಪದ ಚಲನವಲನಗಳು ಸಂದೇಹ ಹುಟ್ಟು ಹಾಕಿ ಚೌಧರಿ ಬಂಧನಕ್ಕೆ ನಾಂದಿ ಹಾಡಿತು.

--ಬೆಂಗಳೂರು ರಿಂಗ್‌ ರೋಡ್ ಶುಭಾ ನೆನಪು

ಡಿಸೆಂಬರ್ 3, 2003 ರಂದು ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಹತ್ಯೆಯೊಂದು ನಡೆದಿತ್ತು. ಗಿರೀಶ್ ಎಂಬಾತನ ಜೊತೆ ನಿಶ್ಚಿತಾರ್ಥವಾಗಿದ್ದರೂ, ಪ್ರಿಯಕರ ಅರುಣ್ ವರ್ಮಾ ಜತೆ ಮದುವೆಯಾಗಲು ಶುಭಾ ಎಂಬಾಕೆ ಸಂಚು ರೂಪಿಸಿ ರಿಂಗ್‌ ರೋಡಲ್ಲಿ ಹತ್ಯೆ ಮಾಡಿಸಿದ್ದಳು. ಪುಣೆ ಘಟನೆ ಇದನ್ನೇ ನೆನಪಿಸುತ್ತಿದೆ.