ಪುಣೆಯಲ್ಲಿ 23 ವರ್ಷದ ಎಂಜಿನಿಯರ್ ಓರ್ವ ಕಚೇರಿಯ ಮೇಲ್ಛಾವಣಿಯಿಂದ ಹಾರಿ ಸಾವಿಗೆ ಶರಣಾಗಿದ್ದಾನೆ.
ಪುಣೆ: 23 ವರ್ಷದ ಇಂಜಿನಿಯರ್ ಓರ್ವ ಕಚೇರಿಯಲ್ಲಿ ನಡೆಯುತ್ತಿದ್ದ ಮೀಟಿಂಗ್‌ನಿಂದ ಅರ್ಧದಲ್ಲೇ ಹೊರಗೆ ಬಂದವನೇ ಸೀದಾ ಸಂಸ್ಥೆಯ ಮೇಲ್ಛಾವಣಿಗೆ ಹೋಗಿ ಕಟ್ಟಡದಿಂದ ಹಾರಿ ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ಪುಣೆಯಲ್ಲಿ ನಡೆದಿದೆ. ಮೃತ ಯುವಕನನ್ನು 23 ವರ್ಷ ಪಿಯೂಷ್ ಅಶೋಕ್ ಕವಡೆ ಎಂದು ಗುರುತಿಸಲಾಗಿದೆ. ಈತ ಕಳೆದ ವರ್ಷ ಜುಲೈನಿಂದ ಪುಣೆಯ ಹಿಂಜೆವಾಡಿಯ ಐಟಿ ಹಬ್‌ನಲ್ಲಿರುವ ಅಟ್ಲಾಸ್ ಕೊಪ್ಕೊ(ಇಂಡಿಯಾ)ದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ.
ಬೆಳಗ್ಗೆ 9.30ಕ್ಕೆ ಆತ ಕಟ್ಟಡದಿಂದ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದು, ತನ್ನ ಕುಟುಂಬಕ್ಕಾಗಿ ಪತ್ರವೊಂದನ್ನು ಬರೆದಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಯುವಕನಿಗೇನಾದರು ಕೆಲಸದ ಒತ್ತಡವಿತ್ತ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಪುಣೆಯ ಅಸಿಸ್ಟೆಂಟ್ ಪೊಲೀಸ್ ಕಮೀಷನರ್ ಸುನೀಲ್ ಕುರ್ದೆ, ಮೊದಲ ನೋಟದಲ್ಲಿ, ಅಂತಹ ಲಕ್ಷಣಗಳು ಕಂಡು ಬಂದಿಲ್ಲ ತನಿಖೆ ನಡೆಯುತ್ತಿದೆ, ಆದರೆ ಇನ್ನೂ ಅವರು ಡೆತ್‌ನೋಟ್‌ನಲ್ಲಿ ಬರೆದಿರುವುದನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತದೆ ಎಂದಿದ್ದಾರೆ.
ಮೂಲತಃ ಮಹಾರಾಷ್ಟ್ರದ ನಾಸಿಕ್‌ನವನಾದ ಈತ ತನ್ನ ಸಂಸ್ಥೆಯ ಕಟ್ಟಡದ 7ನೇ ಮಹಡಿಯಿಂದ ಹಾರಿ ಸಾವಿಗೆ ಶರಣಾಗಿದ್ದಾನೆ. ಮೀಟಿಂಗ್‌ನಿಂದ ಹೊರ ಹೋಗುವ ವೇಳೆ ಆತ ಎದೆನೋವಿನ ಕಾರಣ ನೀಡಿದ್ದ ಎಂಬುದು ತಿಳಿದು ಬಂದಿದೆ. ಘಟನೆಯಿಂದ ಪಿಯೂಷ್ ಸಹೋದ್ಯೋಗಿಗಳು, ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ.
ಡೆತ್‌ನೋಟ್‌ನಲ್ಲಿ ಪಿಯೂಷ್ ಜೀವನದಲ್ಲಿನ ಸೋಲಿನ ಬಗ್ಗೆತೀವ್ರ ವಿಷಾದ ವ್ಯಕ್ತಪಡಿಸಿದ್ದಾನೆ. ನಾನು ಜೀವನದಲ್ಲಿ ಎಲ್ಲೆಡೆ ವಿಫಲನಾಗಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಬರೆದಿರುವ ಆತ, ತಮ್ಮ ತಂದೆಗೆ ಬರೆದ ಸಂದೇಶದಲ್ಲಿ, ನಾನು ತಮ್ಮ ಮಗನಾಗಲು ಅರ್ಹರಲ್ಲ, ನನ್ನ ಕೃತ್ಯಗಳಿಗೆ ಕ್ಷಮೆಯಾಚಿಸುವುದಾಗಿ ಆತ ಬರೆದುಕೊಂಡಿದ್ದಾನೆ. ಕೊನೆಯ ಪತ್ರದಲ್ಲಿ ಆತ ಸಂಪೂರ್ಣವಾಗಿ ಕುಟುಂಬ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಭಾವುಕನಾಗಿದ್ದಾನೆ. ಆತನ ಸಾವಿಗೆ ಯಾವುದೇ ಕೆಲಸಕ್ಕೆ ಸಂಬಂಧಿಸಿದ ಒತ್ತಡ ಅಥವಾ ವೃತ್ತಿಪರ ಸಮಸ್ಯೆಗಳು ಕಾರಣವೆಂದು ಎಲ್ಲೂ ಆತ ಉಲ್ಲೇಖಿಸಿಲ್ಲ.
ಬಿಂದಾಸ್ ಆಗಿ ಕೈಯಲ್ಲಿ ಕೀ ತಿರುಗಿಸಿಕೊಂಡು ಬಂದು ಒಮ್ಮೆಗೆ ಕಟ್ಟಡದಿಂದ ಹಾರಿದ ವಿದ್ಯಾರ್ಥಿನಿ
ಹಾಗೆಯೇ ಗುಜರಾತ್‌ನಲ್ಲಿ ನಡೆದ ಇನ್ನೊಂದು ಸಾವಿಗೆ ಶರಣಾದ ಪ್ರಕರಣದಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬಳು ಪ್ರಾಣ ಬಿಟ್ಟಿದ್ದಾಳೆ. ಅಹ್ಮದಾಬಾದ್‌ನ ನವರಂಗಪುರದಲ್ಲಿರುವ ಸೋಮ್ ಲಲಿತ್ ಶಾಲೆಯ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಮಧ್ಯಾಹ್ನ ಶಾಲಾ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿ ದುರಂತವಾಗಿ ಸಾವನ್ನಪ್ಪಿದ್ದಾಳೆ. ಈ ಘಟನೆ ಶಾಲೆಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಹೀಗೆ ಕಟ್ಟಡದಿಂದ ಇದ್ದಕ್ಕಿದ್ದಂತೆ ಕೆಳಗೆ ಹಾರುವ ಮೊದಲು ಆಕೆ ಶಾಂತವಾಗಿ ಕೀಯೊಂದನ್ನು ತನ್ನ ಬೆರಳಿನಲ್ಲಿ ತಿರುಗಿಸುತ್ತಾ ಹೋಗಿದ್ದು, ಇದ್ದಕ್ಕಿದ್ದಂತೆ ಕೆಳಗೆ ಹಾರಿದ್ದಾಳೆ.
ಕಟ್ಟಡದಿಂದ ಕೆಳಗೆ ಹಾರುವ ಮೊದಲಿನ ಆಕೆಯ ವರ್ತನೆ ವಿಚಿತ್ರವಾಗಿದ್ದು, ಅನೇಕರನ್ನು ದಂಗುಬಡಿಸಿದೆ. ಆಕೆ ಕಟ್ಟಡದಿಂದ ಕೆಳಗೆ ಹಾರಿದ್ದನ್ನು ನೋಡಿದ ಇತರ ವಿದ್ಯಾರ್ಥಿನಿಯರು ಗಾಬರಿಯಾಗಿ ಕಿರುಚಿ ಕೆಳಗೆ ಓಡಿದ್ದಾರೆ. ಘಟನೆಯಿಂದ ಬಾಲಕಿಗೆ ತೀವ್ರವಾದ ಗಾಯಗಳಾಗಿದ್ದವು ತಲೆಗೆ ಗಾಯವಾಗುವುದರ ಜೊತೆ ದೇಹದ ಹಲವು ಮೂಳೆಗಳು ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಿದ್ದರು ರಾತ್ರಿ 10 ಗಂಟೆ ಸುಮಾರಿಗೆ ಆಕೆ ಸಾವನ್ನಪ್ಪಿದ್ದಳು.
ಈ ವಿದ್ಯಾರ್ಥಿನಿ ಒಂದು ತಿಂಗಳ ವೈದ್ಯಕೀಯ ರಜೆ ತೆಗೆದುಕೊಂಡು ಕೇವಲ 15 ದಿನಗಳ ಹಿಂದಷ್ಟೇ ಶಾಲೆಗೆ ಮರಳಿದ್ದಳು ಎಂದು ಶಾಲಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಘಟನೆ ನಡೆದ ದಿನ, ಅವಳು ದುಃಖಿತಳಾಗಿ ತರಗತಿಯಲ್ಲಿ ಕೂಗುತ್ತಿದ್ದಳು ಎಂದು ವರದಿಯಾಗಿದೆ ಎಂದು ಪೊಲೀಸರೊಂದಿಗೆ ಶಾಲಾ ಪ್ರಾಂಶುಪಾಲರಾದ ಲೀನಾ ಅರೋರಾ ಮಾಹಿತಿ ಹಂಚಿಕೊಂಡಿದ್ದಾರೆ.
ಮೃತ ಯುವತಿ ನರನಪುರ ನಿವಾಸಿಯಾಗಿದ್ದು, ಅಲ್ಲಿ ಆಕೆ ಪೋಷಕರ ಜೊತೆ ವಾಸಿಸುತ್ತಿದ್ದರು. ಈ ದುರಂತ ಘಟನೆಯು ಸಮುದಾಯದಲ್ಲಿ ಭಯ, ಆಘಾತ ಮೂಡಿಸಿದ್ದು, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಶೈಕ್ಷಣಿಕ ಪರಿಸರದಲ್ಲಿ ಭಾವನಾತ್ಮಕ ಯೋಗಕ್ಷೇಮದ ಬಗ್ಗೆ ಹೊಸ ಕಳವಳಗಳನ್ನು ಹುಟ್ಟುಹಾಕಿದೆ.
