ತಮಿಳುನಾಡಿನಲ್ಲಿ ವರದಕ್ಷಿಣೆ ಮತ್ತು ಮಾವನ ಲೈಂಗಿಕ ಕಿರುಕುಳದಿಂದ ಬೇಸತ್ತ 32ವರ್ಷದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆ ಸಾಯುವ ಮುನ್ನ ವೀಡಿಯೊ ಮಾಡಿ ಈ ಆರೋಪ ಮಾಡಿದ್ದಾರೆ.
ಚೆನ್ನೈ: ವರದಕ್ಷಿಣೆ ಕಿರುಕುಳವೂ ಸೇರಿದಂತೆ ಗಂಡನ ಅಪ್ಪನೇ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ 32 ಹರೆಯದ ಗೃಹಿಣಿಯೊಬ್ಬಳು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ 32 ವರ್ಷದ ಮಹಿಳೆ ರಂಜಿತಾ ಬೆಂಕಿ ಹಚ್ಚಿಕೊಂಡಿದ್ದು, ಕೂಡಲೇ ಆಕೆಯನ್ನು ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರು 70 ಶೇಕಡಾ ಸುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.
ಮಾವನೇ ತಬ್ಬಿಕೊಂಡ ಹೇಗೆ ಸಹಿಸಲಿ?
ಕೊನೆಯುಸಿರೆಳೆಯುವ ಮೊದಲು ಆಕೆ ಮಾಡಿದ ವೀಡಿಯೋದಲ್ಲಿ ಆಕೆಯ ಮುಖವೂ ಸಂಪೂರ್ಣ ಸುಟ್ಟು ಹೋಗಿದ್ದು, ದುರ್ಬಲಗೊಂಡ ಧ್ವನಿಯಲ್ಲಿ ಆಕೆ ನನ್ನ ಮಾವನೇ ನನ್ನನ್ನು ತಬ್ಬಿಕೊಂಡರು, ಅದನ್ನು ನನಗೆ ಸಹಿಸಲಾಗಲಿಲ್ಲ, ಇದೇ ಕಾರಣಕ್ಕೆ ನಾನು ಬೆಂಕಿ ಹಚ್ಚಿಕೊಂಡೆ ಎಂದು ಹೇಳಿಕೊಂಡಿದ್ದಾಳೆ. ಆ ಮಹಿಳೆಯ ಪುತ್ರ 7ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನೂ ಕೂಡ ಆಕೆಯ ಆರೋಪಕ್ಕೆ ಮತ್ತೊಂದು ವೀಡಿಯೋ ಮೂಲಕ ಧ್ವನಿಗೂಡಿಸಿದ್ದು, ಮಾವನ ಲೈಂಗಿಕ ಕಿರುಕುಳದ ಬಗ್ಗೆ ತನ್ನ ಬಳಿ ಅಮ್ಮ ಹೇಳಿಕೊಂಡಿದ್ದಾಗಿ ಹೇಳಿದ್ದಾನೆ.
ತವರಿಗೂ ಹೋಗಲು ಬಿಡದೇ ಕಿರುಕುಳ
ಮಾವನಿಂದ ಲೈಂಗಿಕ ಕಿರುಕುಳ ಮಾತ್ರವಲ್ಲದೇ ಗಂಡ ಹಾಗೂ ಅತ್ತೆ ಮನೆಯವರು ತನಗೆ ವರದಕ್ಷಿಣೆಗಾಗಿಯೂ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ರಂಜಿತಾಳ ಸೋದರಿ ಅಲಗಸುಂದರಿ ಮಾಧ್ಯಮಗಳ ಬಳಿ ಮಾತನಾಡಿದ್ದು, ತನ್ನ ಸೋದರಿಗೆ ಕಳೆದ 14 ವರ್ಷಗಳಿಂದ ಅವರು ಕಿರುಕುಳ ನೀಡುತ್ತಿದ್ದಾರೆ. ಅವರು ಭೂಮಿ ಹಾಗೂ ಚಿನ್ನಕ್ಕೆ ಬೇಡಿಕೆ ಇಡುತ್ತಿದ್ದರು, ಇದರ ಜೊತೆಗೆ ತನ್ನ ಸೋದರಿಗೆ ಆಕೆಯ ಮಾವನೇ ಲೈಂಗಿಕ ಕಿರುಕುಳ ನೀಡುತ್ತಿದ್ದ, ಇದರ ಬಗ್ಗೆ ಆಕೆ ಈ ಹಿಂದೆಯೂ ಹೇಳಿಕೊಂಡಿದ್ದಳು, ಇತ್ತ ಆಕೆಯ ಗಂಡ ಕುಡಿದು ಬಂದು ಆಕೆಯನ್ನು ಥಳಿಸುತ್ತಿದ್ದ ಅಲ್ಲದೇ ಮನೆಯವರ ಬೇಡಿಕೆ ಈಡೇರಿಸುವಂತೆ ಆಗ್ರಹಿಸುತ್ತಿದ್ದ. ಆತ ಆಕೆಯನ್ನು ತವರು ಮನೆಗೆ ಹೋಗುವುದಕ್ಕೂ ಬಿಡುತ್ತಿರಲಿಲ್ಲ, ಒಂದು ವೇಳೆ ಆಕೆಯನ್ನು ನಾವು ಭೇಟಿ ಆದರೆ ಆಕೆಯನ್ನು ಮನೆಯೊಳಗೆ ಸೇರಿಸಿಕೊಳ್ಳುವುದಿಲ್ಲ ಎಂದು ಬೆದರಿಕೆಯೊಡ್ಡುತ್ತಿದ್ದ ಎಂದು ರಂಜಿತಾಳ ಸೋದರಿ ಅಲಗಸುಂದರಿ ಅಳಲು ತೋಡಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತ ಮಹಿಳೆಯ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆಕೆ ತನ್ನ ಮಾವನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಆ ಬಗ್ಗೆ ನಾವು ತನಿಖೆ ಮಾಡುತ್ತಿದ್ದೇವೆ. ಹಾಗೆಯೇ ವರದಕ್ಷಿಣೆ ಪ್ರಕರಣದ ಬಗ್ಗೆ ಕೇಳಿದಾಗ, ಅವರು ಮದುವೆಯಾಗಿ 13 ವರ್ಷಗಳೇ ಕಳೆದಿವೆ ಹೀಗಾಗಿ ತಾಂತ್ರಿಕವಾಗಿ ಅದು ವರದಕ್ಷಿಣೆ ನಿಗ್ರಹ ಕಾಯ್ದೆಯಡಿ ಬರುವ ಸಾಧ್ಯತೆ ಕಡಿಮೆ ಆದರೆ ನಾವು ಎಲ್ಲಾ ಆಯಾಮಗಳಿಂದ ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಈ ಘಟನೆ ಈಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ವಿವಾಹವಾಗಿ ಹೋದ ಮನೆಯಲ್ಲಿ ಮಾವನ ಈ ರೀತಿ ಕಿರುಕುಳ ನೀಡಿದರೆ ಬದುಕುವುದು ಹೇಗೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
