ಹೆಂಡತಿ ಮನೆಯವರ ಕಿರುಕುಳ ಹಾಗೂ ಪೊಲೀಸ್ ಲಂಚದ ಬೇಡಿಕೆಯಿಂದ ಬೇಸತ್ತ ಪತಿಯೊಬ್ಬ ಪ್ಯಾಂಟ್ ಮೇಲೆ ಡೆತ್‌ನೋಟ್ ಬರೆದು ಸಾವಿಗೆ ಶರಣಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಹೆಂಡತಿ ಮನೆಯವರ ಕಿರುಕುಳದಿಂದ ಬೇಸತ್ತ ಪತಿಯೊಬ್ಬ ತಾನು ಧರಿಸಿದ್ದ ಬಿಳಿ ಬಣ್ಣದ ಪ್ಯಾಂಟ್‌ ಮೇಲೆಯೇ ನೀಲಿ ಇಂಕ್‌ನ ಪೆನ್‌ನಿಂದ ಡೆತ್‌ನೋಟ್‌ ಬರೆದು ಸಾವಿಗೆ ಶರಣಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆತ ತನ್ನ ಪತ್ನಿಯ ನೆಂಟರು ಹಾಗೂ ಇಬ್ಬರು ಪೊಲೀಸ್ ಕಾನ್ಸ್ಟೇಬಲ್‌ಗಳು ತನ್ನ ಮೇಲೆ ಹಲ್ಲೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಈ ಘಟನೆಯಿಂದ ನೊಂದು ಸಾವಿಗೆ ಶರಣಾಗಿರುವುದಾಗಿ ಆತ ತನ್ನ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಫಾರುಕಾಬಾದ್‌ನ ಛೆಡ್ಡಾ ನಗ್ಲಾ ಪ್ರದೇಶದ ಮಹಿಳೆಯೊಬ್ಬರು ತನ್ನ ಪತಿ ದಿಲೀಪ್ ರಾಜ್‌ಪುತ್ ಕುಡಿದು ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಸೋಮವಾರ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಮಧ್ಯೆ ಸಾವಿಗೂ ಮೊದಲು ದಿಲೀಪ್ ರಾಜ್‌ಪುತ್ ಬರೆದ ಡೆತ್‌ನೋಟ್ ಪ್ರಕಾರ, ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಆತ ತನ್ನ ತಂದೆಯ ಜೊತೆ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಅಲ್ಲಿದ್ದ ಕಾನ್ಸ್‌ಟೇಬಲ್ ಆತನ ಬಳಿ ಈ ಪ್ರಕರಣವನ್ನು ಇತ್ಯರ್ಥ ಪಡಿಸುವುದಕ್ಕೆ 50,000 ರೂಪಾಯಿ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ದಿಲೀಪ್ ಒಪ್ಪದೇ ಇದ್ದಾಗ ದಿಲೀಪ್ ಮೇಲೆ ಪೊಲೀಸ್ ಕಾನ್ಸ್‌ಟೇಬಲ್ ಹಲ್ಲೆ ಮಾಡಿದ್ದಾನೆ.

ಹೀಗೆ ಥಳಿಸಿದ ನಂತರ ಮತೊಬ್ಬ ಕಾನ್ಸ್‌ಟೇಬಲ್ ಮಹೇಶ್ ಉಪಾಧ್ಯಾಯ ಅಲ್ಲಿಗೆ ಲಂಚದ ಮೊತ್ತವನ್ನು 40 ಸಾವಿರಕ್ಕೆ ಇಳಿಕೆ ಮಾಡಿದ್ದಾನೆ. ಇದಕ್ಕೆ ದಿಲೀಪ್ ಒಪ್ಪಿದ ನಂತರ ಆತನನ್ನು ಬಿಟ್ಟು ಕಳುಹಿಸಿದ್ದಾರೆ.

ಇತ್ತ ಪೊಲೀಸ್ ಠಾಣೆಯಿಂದ ಮನೆಗೆ ಬಂದ ದಿಲೀಪ್ ತಾನು ಧರಿಸಿದ್ದ ಪ್ಯಾಂಟ್ ಮೇಲೆಯೇ ನೀಲಿ ಇಂಕ್‌ನ ಪೆನ್‌ನಲ್ಲಿ ತನ್ನ ಹೆಂಡತಿಯ ತಂದೆ ವನ್ವರಿ ಲಾಲಾ, ಆಕೆಯ ಸಹೋದರ ರಾಜು, ಮತ್ತು ಅವರ ಸೋದರ ಮಾವ ರಜನೇಶ್ ರಜಪೂತ್ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳು ನೀಡಿದ ಕಿರುಕುಳ ಮತ್ತು ಹಣಕ್ಕಾಗಿ ಬೇಡಿಕೆಯ ಬಗ್ಗೆ ಬರೆದು, ನಂತರ ತನ್ನ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಇತ್ತ ದಿಲೀಪ್ ನೇಣಿಗೆ ಶರಣಾಗಿರುವುದು ಮರುದಿನ ಬೆಳಗ್ಗೆ ಕುಟುಂಬದವರಿಗೆ ಗೊತ್ತಾಗಿದ್ದು, ಕುಟುಂಬದವರು ಪೊಲೀಸರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಶವ ತೆಗೆಯುವುದಕ್ಕೂ ಬಿಡದೇ ಪೊಲೀಸ್ ಕಾನ್ಸ್‌ಟೇಬಲ್‌ಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ದಿಲೀಪ್ ಹಾಗೂ ಆತನ ಹೆಂಡ್ತಿ ಮಧ್ಯೆ ಜಗಳವಾಗಿತ್ತು. ಜಗಳದ ಬಳಿಕ ಆತ ತನ್ನ ಪತ್ನಿಯನ್ನು ಅತ್ತೆ ಮನೆಗೆ ಕರೆದೊಯ್ದಿದ್ದ, ಈ ವೇಳೆ ಆತನ ಹೆಂಡತಿ ಹಾಗೂ ಅವರ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಬಂದು ದಿಲೀಪ್‌ನನ್ನು ಕರೆದೊಯ್ದಿದ್ದರು. ಈ ವೇಳೆ ಪ್ರಕರಣ ಮುಚ್ಚಿ ಹಾಕಲು 50 ಸಾವಿರ ಲಂಚಕ್ಕೆ ಅವರು ಬೇಡಿಕೆ ಇಟ್ಟಿದ್ದರು. ನಂತರ 40 ಸಾವಿರ ಕೊಟ್ಟ ನಂತರವೇ ಅವರು ಆತನನ್ನು ಬಿಟ್ಟು ಕಳುಹಿಸಿದರು. ಆತ ತನ್ನ ಪ್ಯಾಂಟ್ ಮೇಲೆ ಬರೆದ ಡೆತ್‌ನೋಟ್‌ನಲ್ಲಿ ಎಲ್ಲಾ ವಿವರ ಇದೆ ಎಂದು ದಿಲೀಪ್ ಚಿಕ್ಕಪ್ಪ ಹೇಳಿದ್ದಾರೆ.

ಆತನ ಪತ್ನಿ ಮನೆಯವರ ಮಾತು ಕೇಳಿ ಆತನಿಗೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ದಿಲೀಪ್ ತಂದೆ ದೂರಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎಸ್‌ಪಿ ಆರತಿ ಸಿಂಗ್ ಮಾತನಾಡಿದ್ದು, ಗಂಡ ಹೆಂಡತಿಗೆ ಹೊಡೆದಿದ್ದಾನೆ ಎಂದು ನಿನ್ನೆ ದೂರೊಂದು ಸಲ್ಲಿಕೆಯಾಗಿತ್ತು. ಹಾಗೂ ಹೆಂಡತಿ ಮನೆಯವರು ಪೊಲೀಸ್ ಠಾಣೆಗೆ ಬಂದಿದ್ದರು.

ಎರಡೂ ಕಡೆಯವರು ರಾಜಿ ಮಾಡಿಕೊಳ್ಳಲು ನಾವು ಸಹಾಯ ಮಾಡಿದೆವು. ಆದರೆ ಆ ವ್ಯಕ್ತಿ ತನ್ನ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ಅವನ ದೇಹದ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ. ದೂರಿನಲ್ಲಿ, ಆ ವ್ಯಕ್ತಿಯ ಕುಟುಂಬದವರು ನೀಡಿದ ದೂರಿನಲ್ಲಿ ಅವನ ಹೆಂಡತಿಯ ಮೂವರು ಸಂಬಂಧಿಕರು ಮತ್ತು ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಹೆಸರಿಸಿದೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದ್ದು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.