ಪರೀಕ್ಷಾ ಸುಧಾರಣೆಗೆ ಕೇಂದ್ರ ಸರ್ಕಾರ ರಚಿಸಿದ ಹೈಪವರ್ ಟಾಸ್ಕ್ ಫೋರ್ಸ್‌ನಲ್ಲಿರುವ ಐಐಟಿ ಮಡ್ರಾಸ್ ನಿರ್ದೇಶಕ ವಿ ಕಾಮಕೋಟಿ ಸದಸ್ಯರಾಗಿದ್ದಾರೆ. ಇದೇ ಕಾಮಕೋಟಿ ವಿರುದ್ದ ಪ್ರಿಯಾಂಕಾ ಗಾಂಧಿ ನಾಲಗೆ ಹರಿಬಿಟ್ಟಿದ್ದಾರೆ. ವಿ ಕಾಮಕೋಟಿ ಸಾಧನೆಗಳೇನು?

ನವದೆಹಲಿ (ಜು.29) ನೀಟ್ ಪ್ರಶ್ನೆ ಪತ್ರಿಕೆ ಲೀಕ್, ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಪೊಲೀಸರ ಕ್ರಮಗಳನ್ನು ಖಂಡಿಸಿ ಕಾಂಗ್ರೆಸ್ ಸದನದ ಒಳಗೆ, ಸದನದ ಹೊರಗೆ ಭಾರಿ ಹೋರಾಟ ನಡೆಸುತ್ತಿದೆ. ಇದರ ನಡುವೆ ಸಂಸದೆ ಪ್ರಿಯಾಂಕಾ ಗಾಂಧಿಯ ಟೀಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.ಪರೀಕ್ಷಾ ಸುಧಾರಣೆಯ ಟಾಸ್ಕ್ ಫೋರ್ಸ್ ತಂಡದ ಸದಸ್ಯ, ಐಐಟಿ ಮದ್ರಾಸ್ ನಿರ್ದೇಶಕ ವಿ ಕಾಮಕೋಟಿಯನ್ನು ಗೋಮೂತ್ರ ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿಯನ್ನು ಟ್ರೋಲ್ ಮಾಡಲಾಗುತ್ತಿದೆ. ಐಐಟಿ ಮದ್ರಾಸ್ ನಿರ್ದೇಶಕನ ಸಾಧನೆಗಳನ್ನು ಮಂದಿಟ್ಟು, ನಿಮ್ಮ ಸಾಧನೆ ಏನು ಎಂದು ಪ್ರಿಯಾಂಕಾ ಗಾಂಧಿಗೆ ಮರು ಪ್ರಶ್ನೆ ಹಾಕಿದ್ದಾರೆ.

ಪ್ರಿಯಾಂಕಾ ಗಾಂಧಿ ಗೂಮೂತ್ರ ಆರೋಪವೇನು?

ನಂದನ್ ನೀಲಕಣಿ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಸುಧಾರಣೆಗೆ ಟಾಸ್ಕ್ ಫೋರ್ಸ್ ರಚಿಸಿದೆ. ಈ ಟಾಸ್ಕ್ ಫೋರ್ಸ್‌ನಲ್ಲಿ ಐಐಟಿ ಮದ್ರಾಸ್ ನಿರ್ದೇಶಕ ವಿ ಕಾಮಕೋಟಿ ಕೂಡ ಪ್ರಮುಖ ಸದಸ್ಯರಾಗಿದ್ದಾರೆ. ಮೋದಿ ವಿರುದ್ಧ ಟೀಕಿಸುವ ಭರದಲ್ಲಿ ಟಾಸ್ಕ್ ವಿರುದ್ದವೂ ಕೆಂಡ ಕಾರಿದ್ದಾರೆ. ಟಾಸ್ಕ್ ಫೋರ್ಸ್ ತಂಡದಲ್ಲಿ ಒಬ್ಬರು ಗೂ ಮೂತ್ರ ತಜ್ಞರು. ಇವರು ಶಿಕ್ಷಣ ಹಾಗೂ ಪರೀಕ್ಷಾ ಸುಧಾರಣೆಗೆ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದರು.

ಐಐಟಿ ಮದ್ರಾಸ್ ನಿರ್ದೇಶಕ ಪ್ರೊ ವಿ ಕಾಮಕೋಟಿ ಭಾರತದ ಕಂಪ್ಯೂಟರ್ ವಿಜ್ಞಾನಿ ಎಂದೇ ಗುರುತಿಸಿಕೊಂಡಿದ್ದಾರೆ. ಮೈಕ್ರೋಪ್ರೊಸೆಸರ್ ಶಕ್ತಿ (SHAKTI) ಅಭಿವೃದ್ಧಿಪಡಿಸಿದ ಸಾಧಕ. 2025ರಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ವೇಳೆ ಕಾಮಕೋಟಿ ಗೋಮೂತ್ರ ಕುರಿತು ಹೇಳಿಕೆ ನೀಡಿದ್ದರು. ದೇಶಿಯ ತಳಿಯ ಹಸುವಿನ ಗೋಮೂತ್ರದಲ್ಲಿ ಬ್ಯಾಕ್ಟಿರಿಯಾ ವಿರೋಧಿ ಹಾಗೂ ಶಿಲೀಂದ್ರ ವಿರೋಧಿ ಔಷಧಿ ಗುಣಗಳಿವೆ ಎಂದ್ದರು.

ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಎಸ್ ಹಾಗೂ PhD ಮಾಡಿರುವ ವಿ ಕಾಮಕೋಟಿ, 2001ರಲ್ಲಿ ಮದ್ರಾಸ್ ಐಐಟಿ ಉಪನ್ಯಾಸಕನಾಗಿ ಸೇರಿಕೊಂಡಿದ್ದರು. 2022ರಲ್ಲಿ ಐಐಟಿ ಮದ್ರಾಸ್ ನಿರ್ದೇಶಕನಾಗಿ ಬಡ್ತಿ ಹೊಂದಿದ್ದಾರೆ. ಕಂಪ್ಯೂಟರ್ ಆರ್ಕಿಟೆಕ್ಟ್, ಮಾಹಿತಿ ಭದ್ರತೆ, ಹಾಗೂ VLSI ಅಭಿವೃದ್ಧಿಗೊಳಿಸಿದ ಸಾಧಕ. ರಾಷ್ಟ್ರೀಯ ಸೆಕ್ಯೂರಿಟಿ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಕೇಂದ್ರ ಆರ್ಟಿಪೀಶಿಯಲ್ ಇಂಟಲಿಜೆನ್ಸ್ ಟಾಸ್ಕ್ ಫೋರ್ಸ್ ತಂಡದ ಸದಸ್ಯರಾಗಿದ್ದಾರೆ.

ಕಾಮಕೋಟಿ ಸಾಧನೆ ಹಾಗೂ ಸೇವೆ ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಲಿದೆ. ಇನ್ನು DRDO ಅಕಾಡೆಮಿ ಎಕ್ಸಲೆನ್ಸ್ ಪ್ರಶಸ್ತಿ, ಇಂಡಿಯನ್ ಎಲೆಕ್ಟ್ರಾನಿಕ್ ಹಾಗೂ ಸೆಮಿಕಂಡಕ್ಟರ್ ಟೆಕ್ನೋ ಪ್ರಶಸ್ತಿ, IBM ಪ್ರಶಸ್ತಿ, ACCS ಜೀವನಮಾನ ಶ್ರೇಷ್ಠ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದೀಗ ಕಾಮಕೋಟಿ ಸಾಧನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಚರ್ಚಿಸಲಾಗುತ್ತಿದೆ. ಇದೇ ವೇಳೆ ಪ್ರಿಯಾಂಕಾ ಗಾಂಧಿ ನಿಮ್ಮ ಸಾಧನೆ ಏನು ಹೇಳಿ ಎಂದು ಪ್ರಶ್ನಿಸಲಾಗುತ್ತಿದೆ.