ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ನಂತರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಶಿಕ್ಷಣ ಖಾತೆಯ ಹೆಚ್ಚುವರಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಇದೊಂದು ದೊಡ್ಡ ಇಲಾಖೆಯಾಗಿದ್ದು, ಅದರ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಅವರು ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ನವದೆಹಲಿ (ಜು.27): ಕೇಂದ್ರ ಪಡಿತರ, ಗ್ರಾಹಕ ವ್ಯವಹಾರ ಹಾಗೂ ನವೀಕೃತ ಇಂಧನ ಸಚಿವ ಪ್ರಹ್ಲಾದ ಜೋಶಿ ಅವರು, ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ತರುವಾಯ ತಮಗೆ ಹೆಚ್ಚುವರಿಯಾಗಿ ವಹಿಸಲಾಗಿರುವ ಶಿಕ್ಷಣ ಸಚಿವ ಖಾತೆಯ ಅಧಿಕಾರವನ್ನು ಭಾನುವಾರ ವಹಿಸಿಕೊಂಡರು.
ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರು ಇಲಾಖಾ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪ್ರಧಾನಿಯವರು ಈ ಜವಾಬ್ದಾರಿಯನ್ನು ನನಗೆ ಪೂರ್ಣ ವಿಶ್ವಾಸದಿಂದ ವಹಿಸಿದ್ದಾರೆ. ನಾನು ನಿನ್ನೆ ಕರ್ನಾಟಕದಲ್ಲಿದ್ದೆ. ನಾನು ನಿನ್ನೆ ರಾತ್ರಿ ಇಲ್ಲಿಗೆ ತಲುಪಿ ಇಂದು ಬೆಳಿಗ್ಗೆ ಅಧಿಕಾರ ವಹಿಸಿಕೊಂಡೆ’ ಎಂದರು.
‘ಇದು ನನಗೆ ಹೊಸ ವಿಷಯವಾಗಿದೆ. ಇದು ಬಹಳ ದೊಡ್ಡ ಇಲಾಖೆ. ಅಧಿಕಾರಿಗಳ ಜತೆ ಚರ್ಚಿಸಿ ಮಾಹಿತಿ ಸಂಗ್ರಹಿಸಿದ್ದೇನೆ. ಸಚಿವಾಲಯದ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಆದ್ದರಿಂದ ನಾನು ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡ ನಂತರ ನಿಮ್ಮೊಂದಿಗೆ ವಿವರವಾಗಿ ಮಾತನಾಡುತ್ತೇನೆ’ ಎಂದರು.
ಶನಿವಾರ ರಾಜೀನಾಮೆ ನೀಡಿದ್ದ ಧರ್ಮೇಂದ್ರ ಪ್ರಧಾನ್
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಜಂತರ್‌ಮಂತರ್‌ನಲ್ಲಿ ಜಿರಳೆ ಪಕ್ಷ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್ ಶನಿವಾರ ಶಿಕ್ಷಣ ಖಾತೆಗೆ ರಾಜೀನಾಮೆ ನೀಡಿದ್ದರು. ಹೀಗಾಗಿ ಜೋಶಿ ಅವರಿಗೆ ಶನಿವಾರ ರಾತ್ರಿ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ನೀಡಲಾಗಿತ್ತು.


