ಕಾಲಿಗೆ ಬೀಳಲು ಮುಂದಾದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ತಬ್ಬಿಕೊಂಡ ಪ್ರಧಾನಿ ಮೋದಿ
ಚಂದ್ರಬಾಬು ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿಯವರ ಕಾಲಿಗೆ ಬೀಳಲು ಮುಂದಾದರು. ಆದರೆ ಬಿಡದ ಪ್ರಧಾನಿ ಮೋದಿ ಚಂದ್ರಬಾಬು ಅವರನ್ನು ತಬ್ಬಿಕೊಂಡು ಆಂಧ್ರ ಸಿಂ ಆಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದರು.
ವಿಜಯವಾಡ: ಆಂಧ್ರ ಪ್ರದೇಶ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಟಿಡಿಪಿ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೂಗುಚ್ಛ ನೀಡಿ ಸ್ವಾಗತಿಸಲು ಆಗಮಿಸಿದ್ದರು. ಈ ವೇಳೆ ಚಂದ್ರಬಾಬು ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿಯವರ ಕಾಲಿಗೆ ಬೀಳಲು ಮುಂದಾದರು. ಆದರೆ ಬಿಡದ ಪ್ರಧಾನಿ ಮೋದಿ ಚಂದ್ರಬಾಬು ಅವರನ್ನು ತಬ್ಬಿಕೊಂಡು ಆಂಧ್ರ ಸಿಂ ಆಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದರು.
ಇಂದು ಆಂಧ್ರ ಪ್ರದೇಶ ಸಿಎಂ ಆಗಿ ಎನ್ ಚಂದ್ರಬಾಬು ನಾಯ್ಡು ಅವರು ಹಾಗೂ ಡಿಸಿಎಂ ಆಗಿ ಟಾಲಿವುಡ್ ನಟ ಜನಸೇನಾ ಪಕ್ಷದ ಪವನ್ ಕಲ್ಯಾಣ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಅಮಿತ್ ಷಾ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅವರ ಪತ್ನಿ, ತೆಲುಗು ನಟ ನಂದಮುರಿ ಬಾಲಕೃಷ್ಣ, ನಟ ಚಿರಂಜೀವಿ, ನಿತಿನ್ ಗಡ್ಕರಿ, ತೆಲಂಗಾಣ ಮಾಜಿ ಗವರ್ನರ್ ತಮಿಳ್ ಸೆಲ್ವಿ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಆಂಧ್ರ ಪ್ರದೇಶ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಪವನ್ ಕಲ್ಯಾಣ್
ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗನ್ನವರಂ ಏರ್‌ಪೋರ್ಟ್ ಬಳಿ ಇರುವ ಕೆಸರಪಲ್ಲಿ ಐಟಿ ಪಾರ್ಕ್‌ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ರಾಜ್ಯಪಾಲರಾದ ಅಬ್ದುಲ್ ನಜೀರ್ ಅವರು ಸಿಎಂ, ಡಿಸಿಎಂ ಹಾಗೂ 24 ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಇಂದು ಮುಂಜಾನೆ ಮೇಲಷ್ಟೇ ಪ್ರಮಾಣ ವಚನ ಸ್ವೀಕರಿಸಲಿರುವ 24 ಸಚಿವರ ಪಟ್ಟಿ ಪ್ರಕಟಿಸಲಾಗಿತ್ತು. ಈ 24 ಸಚಿವರಲ್ಲಿ ಜನಸೇನಾದ ಮೂವರು ಹಾಗೂ ಬಿಜೆಪಿಯ ಒಬ್ಬರು ಸೇರಿದ್ದಾರೆ. ಉಳಿದ ಎಲ್ಲರೂ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಚಂದ್ರಬಾಬು ಅವರ ಪುತ್ರ, ಟಿಡಿಪಿ ಜನರಲ್ ಸೆಕ್ರೆಟರಿ ನಾರಾ ಲೋಕೇಶ್, ಟಿಡಿಪಿ ಆಂಧ್ರ ಪ್ರದೇಶ ಘಟಕದ ಅಧ್ಯಕ್ಷ ಕೆ. ಅಚ್ಚಂನಾಯ್ಡು ಹಾಗೂ ಜನಸೇನಾ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಚೇರ್‌ಮ್ಯಾನ್ ನಂದೆಂಡ್ಲಾ ಮನೋಹರ್ ಸೇರಿದಂತೆ ಒಟ್ಟು 24 ಜನ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅಣ್ಣಾಮಲೈ ಜೊತೆ ಸಂಘರ್ಷ, ವೇದಿಕೆಯಲ್ಲಿಯೇ ತಮಿಳು ನಾಯಕಿಗೆ ಅಮಿತ್ ಶಾ ಕ್ಲಾಸ್!
74 ವರ್ಷದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷವೂ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿತ್ತು. ನಿನ್ನೆ ಸಂಜೆ ಅಮಿತ್ ಶಾ ಹಾಗೂ ಜೆಪಿ ನಡ್ಡಾ ಜೊತೆಗಿನ ಮಾತುಕತೆ ನಂತರ ಚಂದ್ರಬಾಬು ನಾಯ್ಡು ಅವರು ಸಚಿವರ ಲಿಸ್ಟ್‌ನ್ನು ಅಂತಿಮಗೊಳಿಸಿದ್ದರು. ಬಿಜೆಪಿ ಶಾಸಕ ಸತ್ಯ ಕುಮಾರ್ ಯಾದವ್ ಅವರು ಆಂಧ್ರ ಪ್ರದೇಶ ಸರ್ಕಾರದಲ್ಲಿ ಸಚಿವರಾದ ಬಿಜೆಪಿಯ ಏಕೈಕ ನಾಯಕರಾಗಿದ್ದಾರೆ. ಹಾಗೆಯೇ ಜನಸೇನಾ ಪಕ್ಷದ ಪವನ್ ಕಲ್ಯಾಣ್ ನಂದೆಂಡ್ಲಾ ಮನೋಹರ್ ಹಾಗೂ ಕಂಡುಲಾ ದುರ್ಗೇಶ್ ಅವರು ಕೂಡ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನಾಯ್ಡು ಅವರ ಸಚಿವ ಸಂಪುಟದಲ್ಲಿ 17 ಹೊಸ ಮುಖಗಳಿಗೆ ಜಾಗ ನೀಡಲಾಗಿದೆ. ಉಳಿದವರು ಈ ಹಿಂದೆಯೂ ಸಚಿವರಾಗಿ ಕೆಲಸ ಮಾಡಿದ ಅನುಭವ ಇರುವವರಾಗಿದ್ದಾರೆ. ಹಾಗೆಯೇ ಸಚಿವ ಸಂಪುಟದಲ್ಲಿ ಮೂವರು ಮಹಿಳೆಯರಿಗೂ ಸ್ಥಾನ ನೀಡಲಾಗಿದೆ. ಹಿರಿಯ ನಾಯಕ ಎನ್ ಮೊಹಮ್ಮದ್ ಫಾರೂಕ್ ಅವರು ನಾಯ್ಡು ಸಂಪುಟದಲ್ಲಿರುವ ಏಕೈಕ ಮುಸ್ಲಿಂ ಸಚಿವರಾಗಿದ್ದಾರೆ.
ಹಾಗೆಯೇ ಸಚಿವರ ಪಟ್ಟಿಯಲ್ಲಿ 8 ಜನ ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗೆಯೇ ಮೂವರು ಪರಿಶಿಷ್ಟ ಜಾತಿಗೆ ಹಾಗೂ ಒಬ್ಬರು ಪರಿಶಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗೆಯೇ ಕಮ್ಮ ಹಾಗೂ ಕಾಪು ಸಮುದಾಯದ ತಲಾ ನಾಲ್ವರನ್ನು ನಾಯ್ಡು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಮೂವರು ರೆಡ್ಡಿ ಸಮುದಾಯದವರು ಒಬ್ಬರು ವೈಶ್ಯ(ವ್ಯಾಪಾರಿ) ಸಮುದಾಯಕ್ಕೆ ಸಮುದಾಯಕ್ಕೆ ಸೇರಿದವರಿಗೆ ಸಂಪುಟದಲ್ಲಿ ಜಾಗ ನೀಡಲಾಗಿದೆ. ಮುಖ್ಯಮಂತ್ರಿಯಾಗಿರುವ ಚಂದ್ರಬಾಬು ನಾಯ್ಡು ಅವರು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಪ್ರಬಲವಾಗಿರುವ ಕಮ್ಮ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗೆಯೇ ನಟ ಪವನ್ ಕಲ್ಯಾಣ್ ಅವರು ಕಾಪು ಸಮುದಾಯಕ್ಕೆ ಸೇರಿದ್ದಾರೆ.