ಆಂಧ್ರ ಪ್ರದೇಶ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಪವನ್ ಕಲ್ಯಾಣ್
ಆಂಧ್ರ ಪ್ರದೇಶ ಸಿಎಂ ಆಗಿ ಟಿಡಿಪಿಯ ಎನ್ ಚಂದ್ರಬಾಬು ನಾಯ್ಡು ಅವರು 4ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವಿಜಯವಾಡ: ಆಂಧ್ರ ಪ್ರದೇಶ ಸಿಎಂ ಆಗಿ ಟಿಡಿಪಿಯ ಎನ್ ಚಂದ್ರಬಾಬು ನಾಯ್ಡು ಅವರು 4ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಹಾಗೂ ಕುಪ್ಪಂನ ಶಾಸಕರಾಗಿರುವ ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರ ಪ್ರದೇಶ ರಾಜ್ಯಪಾಲ ಅಬ್ದುಲ್ ನಜೀರ್ ಅವರು ಪ್ರಮಾಣ ವಚನ ಬೋಧಿಸಿದರು.
ಕೃಷ್ಣಾ ಜಿಲ್ಲೆಯ ಕೆಸರಪಲ್ಲಿ ಐಟಿ ಪಾರ್ಕ್‌ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಸೇರಿದ್ದ ಸಾವಿರಾರು ಜನ ಅಭಿಮಾನಿಗಳ ಸಮ್ಮುಖದಲ್ಲಿ ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶ ಸಿಎಂ ಆಗಿ 4ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಹಾಗೆಯೇ ಜನಸೇನಾದ ಮುಖ್ಯಸ್ಥ, ಟಾಲಿವುಡ್ ನಟ ಪವನ್ ಕಲ್ಯಾಣ ಅವರು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾದ ಗಣ್ಯರು
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಜೆಪಿ ನಡ್ಡಾ, ನಿತಿನ್ ಗಡ್ಕರಿ, ಚಿರಾಗ್ ಪಾಸ್ವಾನ್, ಸಂಜಯ್ ಬಂಡಿ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಸಿಜೆಐ ಎನ್ ವಿ ರಮಣ, ನಟರಾದ ರಜನಿಕಾಂತ್ ಮತ್ತು ಚಿರಂಜೀವಿ, ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.
ಆಂಧ್ರದ ಸಿಎಂ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್
ನಾಯ್ಡು ಅವರ ಸಚಿವ ಸಂಪುಟದಲ್ಲಿ 17 ಹೊಸ ಮುಖಗಳಿಗೆ ಜಾಗ ನೀಡಲಾಗಿದೆ. ಉಳಿದವರು ಈ ಹಿಂದೆಯೂ ಸಚಿವರಾಗಿ ಕೆಲಸ ಮಾಡಿದ ಅನುಭವ ಇರುವವರಾಗಿದ್ದಾರೆ. ಹಾಗೆಯೇ ಸಚಿವ ಸಂಪುಟದಲ್ಲಿ ಮೂವರು ಮಹಿಳೆಯರಿಗೂ ಸ್ಥಾನ ನೀಡಲಾಗಿದೆ. ಹಿರಿಯ ನಾಯಕ ಎನ್ ಮೊಹಮ್ಮದ್ ಫಾರೂಕ್ ಅವರು ನಾಯ್ಡು ಸಂಪುಟದಲ್ಲಿರುವ ಏಕೈಕ ಮುಸ್ಲಿಂ ಸಚಿವರಾಗಿದ್ದಾರೆ.
ಹಾಗೆಯೇ ಸಚಿವರ ಪಟ್ಟಿಯಲ್ಲಿ 8 ಜನ ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗೆಯೇ ಮೂವರು ಪರಿಶಿಷ್ಟ ಜಾತಿಗೆ ಹಾಗೂ ಒಬ್ಬರು ಪರಿಶಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗೆಯೇ ಕಮ್ಮ ಹಾಗೂ ಕಾಪು ಸಮುದಾಯದ ತಲಾ ನಾಲ್ವರನ್ನು ನಾಯ್ಡು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಮೂವರು ರೆಡ್ಡಿ ಸಮುದಾಯದವರು ಒಬ್ಬರು ವೈಶ್ಯ(ವ್ಯಾಪಾರಿ) ಸಮುದಾಯಕ್ಕೆ ಸಮುದಾಯಕ್ಕೆ ಸೇರಿದವರಿಗೆ ಸಂಪುಟದಲ್ಲಿ ಜಾಗ ನೀಡಲಾಗಿದೆ. ಮುಖ್ಯಮಂತ್ರಿಯಾಗಿರುವ ಚಂದ್ರಬಾಬು ನಾಯ್ಡು ಅವರು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಪ್ರಬಲವಾಗಿರುವ ಕಮ್ಮ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗೆಯೇ ನಟ ಪವನ್ ಕಲ್ಯಾಣ್ ಅವರು ಕಾಪು ಸಮುದಾಯಕ್ಕೆ ಸೇರಿದ್ದಾರೆ.