ಪ್ರಯಾಗ್‌ರಾಜ್‌ನ ಬೀದಿಬದಿ ವ್ಯಾಪಾರಿಯೊಬ್ಬರು ಅಡುಗೆ ಅನಿಲದ ಕೊರತೆಗೆ ಪರಿಹಾರವಾಗಿ, ಬಳಸಿ ಎಸೆದ ಎಂಜಿನ್ ಆಯಿಲ್‌ನಿಂದ ಉರಿಯುವ 'ಮ್ಯಾಜಿಕ್ ಸ್ಟೌವ್' ಅನ್ನು ಕಂಡುಹಿಡಿದಿದ್ದಾರೆ. ಗ್ಯಾಸ್ ಸಿಲಿಂಡರ್ ಅವಲಂಬನೆಯಿಲ್ಲದೆ ತಮ್ಮ ಜಿಲೇಬಿ ವ್ಯಾಪಾರವನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದಾರೆ.
ಪ್ರಯಾಗ್‌ರಾಜ್ (ಮಾ.31): ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಬೀದಿಬದಿ ವ್ಯಾಪಾರಿಯೊಬ್ಬರು ಅಡುಗೆ ಅನಿಲದ (LPG) ಅಭಾವಕ್ಕೆ ಭರ್ಜರಿ ಪರ್ಯಾಯವೊಂದನ್ನು ಕಂಡುಹಿಡಿದಿದ್ದಾರೆ. ಬಳಸಿ ಎಸೆದ ಎಂಜಿನ್ ಆಯಿಲ್ (Waste Engine Oil) ಮೂಲಕ ಉರಿಯುವ 'ಮ್ಯಾಜಿಕ್ ಸ್ಟೌವ್' ಸಿದ್ಧಪಡಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ.
ಭಾರತದಲ್ಲಿ 'ಜುಗಾಡ್' ಹೊಸದೇನಲ್ಲ. ಆದರೆ, ಅಮನ್ ಗುಪ್ತಾ ಎಂಬ ಜಿಲೇಬಿ ವ್ಯಾಪಾರಿಯ ಈ ಪ್ರಯತ್ನ ಈಗ ವಿಶೇಷ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಅಡುಗೆ ಅನಿಲದ ಅಭಾವದ ವದಂತಿಗಳಿಂದಾಗಿ ಗ್ಯಾಸ್ ಏಜೆನ್ಸಿಗಳ ಮುಂದೆ ಕಿಲೋಮೀಟರ್ ಉದ್ದದ ಸಾಲುಗಳು ಕಂಡುಬರುತ್ತಿವೆ. ಇದರಿಂದ ಹೋಟೆಲ್, ದಾಬಾ ಮತ್ತು ಸಣ್ಣ ಉದ್ಯಮಿಗಳು ಕಷ್ಟಕ್ಕೀಡಾಗಿದ್ದಾರೆ. ಇಂತಹ ಸಮಯದಲ್ಲಿ ಅಮನ್ ತಮ್ಮ ಉದ್ಯಮವನ್ನು ಮುಂದುವರಿಸಲು ಈ ವಿನೂತನ ದಾರಿ ಕಂಡುಕೊಂಡಿದ್ದಾರೆ.
ಹೇಗೆ ಕೆಲಸ ಮಾಡುತ್ತೆ ಈ ಸ್ಟೌವ್?
ನಗರದಲ್ಲಿ ಜನಪ್ರಿಯ ಜಿಲೇಬಿ ಅಂಗಡಿ ನಡೆಸುವ ಅಮನ್ ಗುಪ್ತಾ, ಕಲ್ಲಿದ್ದಲು, ಸೌದೆ ಅಥವಾ ಎಲ್‌ಪಿಜಿ ಬಳಸುವ ಬದಲಿಗೆ ವಾಹನಗಳ ಸರ್ವಿಸಿಂಗ್ ನಂತರ ವ್ಯರ್ಥವಾಗಿ ಚೆಲ್ಲುವ "ಬರ್ನ್ಟ್ ಮೊಬಿಲ್ ಆಯಿಲ್" (Burnt Mobil Oil) ಅನ್ನು ಇಂಧನವಾಗಿ ಬಳಸುತ್ತಿದ್ದಾರೆ. ಎಲ್‌ಪಿಜಿ ಸಿಲಿಂಡರ್ ಸಿಗದ ಕಾರಣ ಅಮನ್ ಅವರ ಅಂಗಡಿ ಸತತ ನಾಲ್ಕು ದಿನಗಳ ಕಾಲ ಮುಚ್ಚಲ್ಪಟ್ಟಿತ್ತು. ಇದರಿಂದ ಕಂಗಾಲಾದ ಅವರು ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡಿದ್ದರು.
ಹಲವು ಬಾರಿ ವಿಫಲರಾದರೂ ಸತತ ಪ್ರಯತ್ನದ ನಂತರ, ಎಲ್‌ಪಿಜಿ ಸ್ಟೌವ್‌ನಷ್ಟೇ ತೀವ್ರವಾಗಿ ಉರಿಯುವ ಜ್ವಾಲೆಯನ್ನು ಸೃಷ್ಟಿಸುವ ಸ್ಟೌವ್ ಸಿದ್ಧಪಡಿಸುವಲ್ಲಿ ಯಶಸ್ವಿಯಾದರು. ಈಗ ಅವರು ಸ್ಥಳೀಯ ಗ್ಯಾರೇಜ್‌ಗಳಿಂದ ವ್ಯರ್ಥ ಎಂಜಿನ್ ಆಯಿಲ್ ಸಂಗ್ರಹಿಸಿ ತರುತ್ತಾರೆ ಮತ್ತು ಯಾವುದೇ ಗ್ಯಾಸ್ ಸಿಲಿಂಡರ್ ಅವಲಂಬನೆಯಿಲ್ಲದೆ ವ್ಯವಹಾರ ನಡೆಸುತ್ತಿದ್ದಾರೆ.
ಅಮನ್ ಅವರ ಈ ಚಾಕಚಕ್ಯತೆಯನ್ನು ನೋಡಲು ಸ್ಥಳೀಯರು ತಂಡೋಪತಂಡವಾಗಿ ಬರುತ್ತಿದ್ದಾರೆ. "ನಾನು ಕಳೆದ 10-15 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಸಂಕಷ್ಟದ ಸಮಯದಲ್ಲಿ ಇವರು ತೋರಿದ ಸೃಜನಶೀಲತೆ ಶ್ಲಾಘನೀಯ. ಇಂತಹ ಪರಿಹಾರಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು," ಎಂದು ಅವರ ಖಾಯಂ ಗ್ರಾಹಕರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರಾಚ್ಯದ ಸಂಘರ್ಷಗಳಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಇಂಧನ ಮಾರ್ಗಗಳಿಗೆ ಅಡ್ಡಿಯಾಗಿರುವುದರಿಂದ, ಭಾರತ ಸರ್ಕಾರವು ನಗರ ಪ್ರದೇಶಗಳಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಕೆಗೆ ಉತ್ತೇಜನ ನೀಡುತ್ತಿದೆ ಮತ್ತು ಅನಿಲ ಲಭ್ಯವಿಲ್ಲದ ಪ್ರದೇಶಗಳಿಗೆ ಎಲ್‌ಪಿಜಿ ಪೂರೈಕೆಗೆ ಆದ್ಯತೆ ನೀಡುತ್ತಿದೆ.


