ಬ್ಲಿಂಕಿಟ್ ಮೂಲಕ ಲೈಂಗಿಕ ಕ್ಷೇಮ ಉತ್ಪನ್ನವನ್ನು ಆರ್ಡರ್ ಮಾಡಿದ್ದ ಯುವತಿಗೆ ಡೆಲಿವರಿ ಏಜೆಂಟ್ ಲೈಂಗಿಕ ಕಿರುಕುಳ ನೀಡಿದ್ದಾನೆ. ಉತ್ಪನ್ನವನ್ನು ನೋಡಿ ಯುವತಿಯ ವೈಯಕ್ತಿಕ ಸಂಖ್ಯೆಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದು, ದೂರಿನ ನಂತರ ಕಂಪನಿಯು ಆತನನ್ನು ಕೆಲಸದಿಂದ ವಜಾಗೊಳಿಸಿದೆ.

ನವದೆಹಲಿ (ಮೇ.27): ಆನ್‌ಲೈನ್‌ನಲ್ಲಿ ಸಂಪೂರ್ಣವಾಗಿ ಕಾನೂನುಬದ್ಧವಾಗಿರುವ ಲೈಂಗಿಕ ಕ್ಷೇಮ ಉತ್ಪನ್ನವೊಂದನ್ನು (Sexual Wellness Product) ತನ್ನ ಸ್ವಂತ ಮನೆಗೆ ಆರ್ಡರ್ ಮಾಡಿದ್ದ ಯುವತಿಯೊಬ್ಬಳಿಗೆ ಬ್ಲಿಂಕಿಟ್ (Blinkit) ಕ್ವಿಕ್-ಕಾಮರ್ಸ್ ಸಂಸ್ಥೆಯ ಡೆಲಿವರಿ ಏಜೆಂಟ್‌ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಯುವತಿಯ ಉತ್ಪನ್ನವನ್ನು ನೋಡಿ ಕಾಮದ ಮಾತುಗಳನ್ನಾಡಿದ ಆತನನ್ನು ಬ್ಲಿಂಕಿಟ್ ಸಂಸ್ಥೆ ತಕ್ಷಣವೇ ಕೆಲಸದಿಂದ ವಜಾಗೊಳಿಸಿದೆ.

Add Asianetnews Kannada as a Preferred SourcegooglePreferred

ಲಿಂಕ್ಡ್‌ಇನ್‌ನಲ್ಲಿ ತನ್ನ ಕಹಿ ಅನುಭವವನ್ನು ಹಂಚಿಕೊಂಡಿರುವ ಬ್ಲಿಂಕಿಟ್ ಗ್ರಾಹಕಿ ಪೂಜಾ ಜೋಶಿ, "ಒಬ್ಬ ಮಹಿಳೆಯಾಗಿ ನಾನು ಅತ್ಯಂತ ಆತಂಕಕಾರಿ ಘಟನೆಯನ್ನು ಎದುರಿಸಿದ್ದೇನೆ. ನಾನು ಬ್ಲಿಂಕಿಟ್ ಆ್ಯಪ್ ಮೂಲಕ ಲೈಂಗಿಕ ಕ್ಷೇಮ ಉತ್ಪನ್ನವೊಂದನ್ನು (ವೈಬ್ರೇಟರ್) ಆರ್ಡರ್ ಮಾಡಿದ್ದೆ" ಎಂದು ಬರೆದುಕೊಂಡಿದ್ದಾರೆ.

ಡೆಲಿವರಿ ಬಾಯ್ ಪಾರ್ಸೆಲ್ ನೀಡಲು ಮನೆ ಬಾಗಿಲಿಗೆ ಬಂದಾಗಲೇ ಆತನ ದೃಷ್ಟಿ ಮತ್ತು ನೋಟ ಅತ್ಯಂತ ಅಸಹಜವಾಗಿತ್ತು. ಅದನ್ನು ಕಂಡು ನಾನು ತಕ್ಷಣವೇ ಭಯಗೊಂಡು ಪಾರ್ಸೆಲ್ ಪಡೆದು ತರಾತುರಿಯಲ್ಲಿ ಬಾಗಿಲು ಮುಚ್ಚಿಕೊಂಡೆ. ಆ ನಂತರ ಗಮನಿಸಿದಾಗ ಆ ಪಾರ್ಸೆಲ್‌ನ ಸೀಲ್ ಮುರಿದಿರುವುದು (Unsealed) ನನಗೆ ಗೊತ್ತಾಯಿತು. ಅಂದರೆ ಆತ ಒಳಗೆ ಏನಿದೆ ಎಂಬುದನ್ನು ಮೊದಲೇ ನೋಡಿದ್ದ. ಇದಾಗಿ ಕೆಲವೇ ನಿಮಿಷಗಳಲ್ಲಿ ಅದೇ ಡೆಲಿವರಿ ಪಾಲುದಾರ ನನ್ನ ವೈಯಕ್ತಿಕ ನಂಬರ್‌ಗೆ ಫೋನ್ ಮಾಡಿದ ಎಂದು ಬರೆದುಕೊಂಡಿದ್ದಾರೆ.

ಫೋನ್ ಮಾಡಿದ ಆ ಕಾಮುಕ ಡೆಲಿವರಿ ಬಾಯ್, "ಅದನ್ನೆಲ್ಲ ಯಾಕೆ ಬಳಸುತ್ತೀರಾ ಮೇಡಂ, ನನ್ನನ್ನೇ ಬಳಸಿಕೊಳ್ಳಿ.. ನಿಮಗೆ ತುಂಬಾ ಮಜಾ ಕೊಡ್ತೀನಿ" (Ye sab kyun use kar rahi ho ma'am, mujhe kar lo use.. bhot maza dunga) ಎಂದು ಅತ್ಯಂತ ಹಸಿಬಿಸಿಯಾಗಿ ಲೈಂಗಿಕ ಆಫರ್ ನೀಡಿದ್ದಾನೆ. ಆತನ ಈ ಅಸಭ್ಯ ಮಾತು ಕೇಳಿ ಯುವತಿ ಆಘಾತಗೊಂಡಿದ್ದಾರೆ.

ದೂರು ನೀಡುವುದಾಗಿ ಎಚ್ಚರಿಕೆ ನೀಡಿದಾಗ ಕ್ಷಮೆ ಕೇಳಿದ ಸಿಬ್ಬಂದಿ!

ಕಾಮುಕನ ಮಾತುಗಳಿಂದ ದೃತಿಗೆಡದ ಯುವತಿ ಪೂಜಾ ಜೋಶಿ, ಆತನ ವಿರುದ್ಧ ತಕ್ಷಣವೇ ಕಂಪನಿ ಮತ್ತು ಪೊಲೀಸರಿಗೆ ದೂರು ನೀಡುವುದಾಗಿ ಫೋನ್‌ನಲ್ಲೇ ಎಚ್ಚರಿಸಿದ್ದಾರೆ. ಇದರಿಂದ ಹೆದರಿದ ಡೆಲಿವರಿ ಏಜೆಂಟ್ ತಕ್ಷಣವೇ ಕ್ಷಮೆಯಾಚಿಸಿದ್ದಾನೆ. ಆದರೆ, "ಆ ಕ್ಷಣದಲ್ಲಿ ನಾನು ಅನುಭವಿಸಿದ ಭಯ, ಆತಂಕ ಮತ್ತು ನನ್ನ ಗೌರವಕ್ಕೆ ಧಕ್ಕೆಯಾದ ಭಾವನೆಯನ್ನು ಆತನ ಒಂದು ಸಣ್ಣ ಕ್ಷಮಾಪಣೆಯಿಂದ ಖಂಡಿತವಾಗಿಯೂ ಸರಿಪಡಿಸಲು ಸಾಧ್ಯವಿಲ್ಲ" ಎಂದು ಪೂಜಾ ಜೋಶಿ ಆಕ್ರೋಶ ಹೊರಹಾಕಿದ್ದಾರೆ.

ನೆಟ್ಟಿಗರ ತೀವ್ರ ಆಕ್ರೋಶ: ಇದು ಉತ್ಪನ್ನದ ತಪ್ಪಲ್ಲ, ನೌಕರನ ಅಹಂಕಾರ

ಪೂಜಾ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕಾರ್ಪೊರೇಟ್ ವಲಯದ ಹಲವರು ಡೆಲಿವರಿ ಬಾಯ್ ವಿರುದ್ಧ ಕಿಡಿಕಾರಿದ್ದಾರೆ. ಶೀತಾನ್ಶ್ ಸಯಾಲ್ ಎಂಬ ಯೂಸರ್‌, "ಒಬ್ಬ ಮಹಿಳೆ ತನ್ನ ವೈಯಕ್ತಿಕ ಕ್ಷೇಮ ಉತ್ಪನ್ನವನ್ನು ಆರ್ಡರ್ ಮಾಡಿದ್ದಾಳೆ ಎಂದರೆ ಅದು ಯಾರೋ ಒಬ್ಬ ವ್ಯಕ್ತಿಗೆ ಕಾಮೆಂಟ್ ಮಾಡಲು, ಕಿರುಕುಳ ನೀಡಲು ಅಥವಾ ಲೈಂಗಿಕವಾಗಿ ಮುನ್ನಡೆಯಲು ನೀಡಿದ ಆಹ್ವಾನ ಖಂಡಿತಾ ಅಲ್ಲ" ಎಂದಿದ್ದಾರೆ.

"ಯಾವುದೇ ಮಹಿಳೆಯೂ ತನ್ನದೇ ಮನೆಗೆ ಸಂಪೂರ್ಣವಾಗಿ ಲೀಗಲ್ ಆಗಿರುವ ಉತ್ಪನ್ನವನ್ನು ತರಿಸಿಕೊಂಡಿದ್ದಕ್ಕೆ ಈ ರೀತಿ ಅಸುರಕ್ಷಿತ ಭಾವನೆ ಅನುಭವಿಸುವಂತಾಗಬಾರದು. ಇಲ್ಲಿ ಸಮಸ್ಯೆಯಿರುವುದು ಉತ್ಪನ್ನದಲ್ಲಲ್ಲ, ಆ ಡೆಲಿವರಿ ಬಾಯ್‌ನ ಅಹಂಕಾರ ಮತ್ತು ವಿಕೃತ ಮನಸ್ಥಿತಿಯಲ್ಲಿ" ಎಂದು ಮತ್ತೊಬ್ಬರು ಬೆಂಬಲಿಸಿದ್ದಾರೆ. ಪಿಒಎಸ್‌ಹೆಚ್ (POSH) ಸಲಹೆಗಾರ್ತಿ ಅನುಷಾ ಮಾಂಡವಿಲ್ಲಿ ಪ್ರತಿಕ್ರಿಯಿಸಿ, "ಇದು ಅತ್ಯಂತ ಭೀಕರ ಅನುಭವ. ನೀವು ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದಿದ್ದಕ್ಕೆ ನನಗೆ ವಿಷಾದವಿದೆ" ಎಂದಿದ್ದಾರೆ.

ಕ್ಷಮೆಯಾಚಿಸಿ ನೌಕರನನ್ನು ಕಿತ್ತೊಗೆದ ಬ್ಲಿಂಕಿಟ್

ಲಿಂಕ್ಡ್‌ಇನ್ ಪೋಸ್ಟ್ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತ ಬ್ಲಿಂಕಿಟ್ ಕಂಪನಿಯು ಪೂಜಾ ಜೋಶಿ ಅವರ ಪೋಸ್ಟ್‌ಗೆ ಅಧಿಕೃತವಾಗಿ ಕಮೆಂಟ್ ಮಾಡಿ ಕ್ಷಮೆಯಾಚಿಸಿದೆ. 'ಈ ಘಟನೆಯ ಬಗ್ಗೆ ಕೇಳಿ ನಮಗೆ ತೀವ್ರ ಆಘಾತವಾಗಿದೆ. ನಾವು ಗ್ರಾಹಕರ ಸುರಕ್ಷತೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ. ನಮ್ಮ ಸಿಬ್ಬಂದಿಯಿಂದ ನಿಮಗಾದ ಈ ಅತ್ಯಂತ ಅಸಭ್ಯ ವರ್ತನೆಗೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ" ಎಂದು ಬ್ಲಿಂಕಿಟ್ ತಿಳಿಸಿದೆ.

ಇದಾದ ಬೆನ್ನಲ್ಲೇ ಕಂಪನಿಯ ಉನ್ನತ ಅಧಿಕಾರಿಗಳು ಯುವತಿಯನ್ನು ವೈಯಕ್ತಿಕವಾಗಿ ಸಂಪರ್ಕಿಸಿದ್ದು, "ಆ ಡೆಲಿವರಿ ಪಾಲುದಾರನನ್ನು ತಕ್ಷಣವೇ ಕೆಲಸದಿಂದ ಕಿತ್ತೊಗೆಯಲಾಗಿದೆ (Fired). ಆತನ ವಿರುದ್ಧ ಕಠಿಣ ಆಂತರಿಕ ಕಾನೂನು ಕ್ರಮ ಜರುಗಿಸಲಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ವ್ಯವಸ್ಥೆಯ ಪರಾಮರ್ಶೆ ನಡೆಸಲಾಗುತ್ತಿದೆ" ಎಂದು ಭರವಸೆ ನೀಡಿದ್ದಾರೆ ಎಂದು ಗ್ರಾಹಕಿ ಪೂಜಾ ಜೋಶಿ ಸ್ಪಷ್ಟಪಡಿಸಿದ್ದಾರೆ.