ತಂಟೆಗೆ ಬಂದರೆ ಸುಮ್ಮನಿರಲ್ಲ; ಪಾಕ್, ಚೀನಾಗೆ Modi ಎಚ್ಚರಿಕೆ..!
ಯುದ್ಧ ನಮ್ಮ ಕೊನೆಯ ಆಯ್ಕೆ, ಆದರೆ ಸವಾಲೊಡ್ಡಿದರೆ ವೈರಿಗಳ ಭಾಷೆಯಲ್ಲೇ ದಿಟ್ಟ ಉತ್ತರ ನೀಡ್ತೇವೆ ಎಂದು ಪಾಕ್, ಚೀನಾಗೆ ಪ್ರಧಾನಿ ಮೋದಿ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದೂ ಮೋದಿ ವಾರ್ನಿಂಗ್ ಕೊಟ್ಟಿದ್ದಾರೆ.
ಕಾರ್ಗಿಲ್: ‘ಯುದ್ಧ (War) ಎಂಬುದು ನಮ್ಮ ಕೊನೆಯ ಆಯ್ಕೆ. ನಮ್ಮ ಮೊದಲ ಆದ್ಯತೆ ಏನಿದ್ದರೂ ಶಾಂತಿ (Peace). ಆದರೆ ನಮ್ಮ ಸಶಸ್ತ್ರ ಪಡೆಗಳಿಗೆ (Armed Forces) ಶಕ್ತಿ ಇದೆ. ಭಾರತದ (India) ಮೇಲೆ ಯಾರಾದರೂ ಕೆಟ್ಟ ದೃಷ್ಟಿ ಬೀರಿದರೆ ನಾವು ಅದಕ್ಕೆ ತಕ್ಕ ಶಾಸ್ತಿ ಮಾಡಲಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಎಚ್ಚರಿಸಿದ್ದಾರೆ. ಈ ಮೂಲಕ ಸದಾ ತಂಟೆಗೆ ಬರುವ ಪಾಕಿಸ್ತಾನ (Pakistan) ಹಾಗೂ ಚೀನಾಗೆ (China) ಅವರು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಸತತ 9ನೇ ಬಾರಿಗೆ ಯೋಧರ ಜತೆ ದೀಪಾವಳಿ ಆಚರಿಸಿದ ಮೋದಿ, ಈ ಸಲ ಕಾರ್ಗಿಲ್‌ಗೆ ಭೇಟಿ ನೀಡಿದರು. ಈ ವೇಳೆ ಸುದೀರ್ಘ ಭಾಷಣ ಮಾಡಿದ ಅವರು, ‘ನಾನು ಕಾರ್ಗಿಲ್ ಯುದ್ಧವನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಇಂದು ಕರ್ತವ್ಯವು ಮತ್ತೆ ನನ್ನನ್ನು ಕಾರ್ಗಿಲ್‌ಗೆ ಕರೆದಿದೆ. ಕಾರ್ಗಿಲ್‌ನಲ್ಲಿ ನಮ್ಮ ಯೋಧರು ಉಗ್ರವಾದದ ಬೇರನ್ನೇ ಕಿತ್ತು ಹಾಕಿದರು. ಕಾರ್ಗಿಲ್, ದ್ರಾಸ್, ಬಟಾಲಿಕ್, ಟೈಗರ್ ಹಿಲ್‌ಗಳು ನಮ್ಮ ಯೋಧರ ವೀರತೆಗೆ ಸಾಕ್ಷಿಯಾದವು. ವಿಜಯದ ಘೋಷಣೆಗಳ ಸದ್ದು ಕಿವಿಯಲ್ಲಿ ಗುನುಗುನಿಸುತ್ತಿದೆ. ಕಾರ್ಗಿಲ್ ಯುದ್ಧದ ನಂತರ ಆಚರಿಸಿದ ದೀಪಾವಳಿಯ ನೆನಪು ಇಂದೂ ಇದೆ. ಯೋಧರು ನನ್ನ ಕುಟುಂಬ ಇದ್ದಂತೆ. ಯೋಧರು ಇಲ್ಲದಿದ್ದರೆ ನಾವು ಇಷ್ಟು ಸಂಭ್ರಮದಿಂದ ದೀಪಾವಳಿ ಆಚರಿಸುತ್ತಿರಲಿಲ್ಲ’ ಎಂದು ಬಣ್ಣಿಸಿದರು.
ಇದನ್ನು ಓದಿ: PM Modi In Kargil: ಶಕ್ತಿ ಇಲ್ಲದೆ ಶಾಂತಿ ಸಾಧ್ಯವಿಲ್ಲ: ಪ್ರಧಾನಿ ಮೋದಿ
ಶಾಂತಿಗೆ ಆದ್ಯತೆ:
‘ಯುದ್ಧ ಎಂಬುದು ನಮ್ಮ ಕಡೆಯ ಆಯ್ಕೆ. ಅದು ರಾಮನು ಲಂಕೆಯಲ್ಲಿ ನಡೆಸಿದ ಯುದ್ಧ ಆಗಬಹುದು ಅಥವಾ ಮಹಾಭಾರತದ ಕುರುಕ್ಷೇತ್ರದ ಯುದ್ಧವೇ ಆಗಿರಬಹುದು. ಕೊನೆಯ ಕ್ಷಣದವರೆಗೂ ನಾವು ಯುದ್ಧ ನಿಲ್ಲಿಸಲು ಯತ್ನಿಸುತ್ತೇವೆ. ನಾವು ಯಾವತ್ತೂ ವಿಶ್ವಶಾಂತಿಯ ಪರ. ಭಾರತಕ್ಕೆ ಜಗತ್ತಿನಲ್ಲಿ ಗೌರವ ಇದೆ. ಹೆಚ್ಚುತ್ತಿರುವ ಭಾರತದ ಶಕ್ತಿಯು ವಿಶ್ವಶಾಂತಿ ಕಾಪಾಡುವಲ್ಲಿ ಸಹಕರಿಸುತ್ತದೆ. ಶಕ್ತಿ ಇಲ್ಲದೇ ಹೋದರೆ ಶಾಂತಿ ಅಸಾಧ್ಯ’ ಎಂದರು.
‘ಉಕ್ರೇನ್ ಯುದ್ಧದಲ್ಲಿ ನಮ್ಮ ರಾಷ್ಟ್ರಧ್ವಜವು ಅನೇಕರಿಗೆ ಸುರಕ್ಷಾ ಗುರಾಣಿ ಆಯಿತು’ ಎಂದ ಮೋದಿ, ಭಾರತಕ್ಕೆ ವಿಶ್ವಮಟ್ಟದಲ್ಲಿ ಹೇಗೆ ಗೌರವವಿದೆ ಎಂಬುದನ್ನು ಉದಾಹರಿಸಿದರು.
ಇದನ್ನೂ ಓದಿ: ಚೀನಾ ಗಡಿಯ ಕಾರ್ಮಿಕರ ಶೆಡ್‌ನಲ್ಲಿ ರಾತ್ರಿ ಕಳೆದ Modi: ಸರಳತೆ ಮೆರೆದ ಪ್ರಧಾನಿ
ತಂಟೆಗೆ ಬಂದರೆ ಹುಷಾರ್:
ಆದರೆ ಇದೇ ವೇಳೆ, ‘ನಮ್ಮ ಗಡಿ ವಿಷಯಕ್ಕೆ ಬಂದಾಗ ನಾವು ವೈರಿಗಳ ವಿರುದ್ಧ ಕಠಿಣ ನಿಲುವು ಕೈಗೊಳ್ಳುತ್ತೇವೆ. ನಮಗೆ ಸವಾಲು ಹಾಕಿದರೆ ವೈರಿಗಳ ಭಾಷೆಯಲ್ಲೇ ನಮ್ಮ ಮೂರೂ ಪಡೆಗಳು ದಿಟ್ಟ ಉತ್ತರ ಕೊಡುತ್ತವೆ’ ಎಂದು ಪಾಕಿಸ್ತಾನ ಹಾಗೂ ಚೀನಾ ಹೆಸರೆತ್ತದೇ ಪರೋಕ್ಷವಾಗಿ ಎಚ್ಚರಿಸಿದರು.
ದೇಶದ ಬಲ ಹೆಚ್ಚಿಸಲು ಕ್ರಮ:
‘ಗಡಿಗಳು ಸುರಕ್ಷಿತವಿದ್ದಾಗ ದೇಶ, ಆರ್ಥಿಕತೆ ಸುರಕ್ಷಿತವಾಗಿರುತ್ತವೆ. ಸಮಾಜ ಕೂಡ ವಿಶ್ವಾಸದಿಂದ ಇರುತ್ತದೆ. ಕಳೆದ 8 ವರ್ಷದಲ್ಲಿ ಕೈಗೊಂಡ ಕ್ರಮಗಳಿಂದ ನಮ್ಮ ದೇಶದ ಆರ್ಥಿಕತೆ ವಿಶ್ವದಲ್ಲಿ ನಂ.10 ಸ್ಥಾನದಿಂದ ನಂ.5 ಸ್ಥಾನಕ್ಕೆ ಏರಿದೆ’ ಎಂದು ಹರ್ಷಿಸಿದರು.
‘ಕಳೆದ 8 ವರ್ಷದಲ್ಲಿ ಸರ್ಕಾರವು ಆಂತರಿಕ ಹಾಗೂ ಬಾಹ್ಯ ವೈರಿಗಳನ್ನು ಸಮರ್ಥವಾಗಿ ಎದುರಿಸಿದೆ. ನಕ್ಸಲಿಸಂ ಹಾಗೂ ಉಗ್ರವಾದದ ನಿರ್ಮೂಲನೆಗೆ ಕ್ರಮ ಜರುಗಿಸಲಾಗಿದೆ. 8 ವರ್ಷದಲ್ಲಿ ಹೊಸ ತಂತ್ರಜ್ಞಾನ ಬಳಸಿ ಪಡೆಗಳ ಬಲ ಹೆಚ್ಚಿಸಲಾಗಿದೆ. ಗಡಿಯಲ್ಲಿ ಮೂಲಸೌಕರ್ಯ ಹೆಚ್ಚಿಸಿ ಗಡಿ ಬಲಪಡಿಸಲಾಗಿದೆ. ಮಹಿಳೆಯರನ್ನೂ ಸಶಸ್ತ್ರ ಪಡೆಗಳಿಗೆ ನೇಮಿಸಿಕೊಳ್ಳಲಾಗಿದೆ. ಮಹಿಳಾ ನೇಮಕ ನಮ್ಮ ಹೊಸ ಶಕ್ತಿ’ ಎಂದು ಬಣ್ಣಿಸಿದರು.
ಇದನ್ನೂ ಓದಿ: ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಕಾರ್ಗಿಲ್ ತಲುಪಿದ ಪ್ರಧಾನಿ ಮೋದಿ!
‘ದಶಕಗಳಿಂದ ಸೇನೆಯು ಸುಧಾರಣಾ ಕ್ರಮಗಳಿಗೆ ಕಾದಿತ್ತು. ಅದು ಈಗ ನೆರವೇರತೊಡಗಿದೆ. ಆತ್ಮನಿರ್ಭರ ಭಾರತ ಚಿಂತನೆಗೆ ಅನುಗುಣವಾಗಿ ವಿದೇಶಿ ಶಸ್ತ್ರಾಸ್ತ್ರಗಳ ಮೇಲಿನ ಅವಲಂಬನೆ ಕಡಿಮೆ ಆಗುತ್ತಿದೆ. ಸ್ವದೇಶಿ ಶಸ್ತ್ರಾಸ್ತ್ರ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ಹೇಳಿದರು.
ಇದೇ ವೇಳೆ, ‘ಹಿಂದಿನ ಸರ್ಕಾರಗಳಲ್ಲಿ ಭ್ರಷ್ಟಾಚಾರ ಹಾಗೂ ದುರಾಡಳಿತ ಇತ್ತು. ಇದು ನಮ್ಮ ದೇಶದ ಬೆಳವಣಿಗೆಗೆ ಅಡ್ಡಿ ಆಯಿತು’ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮೇಲೆ ಕಿಡಿಕಾರಿದರು.