5 ತಿಂಗಳ ಬಳಿಕ ಕೋಮಾದಿಂದ ಹೊರಬಂದ ಗುಜರಾತ್ ಸಿಎಂ ಪುತ್ರನ ಭೇಟಿಯಾದ ಪ್ರಧಾನಿ ಮೋದಿ
ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಪುತ್ರ ಅನುಜ್ ಪಟೇಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಭೇಟಿ ಮಾಡಿದ್ದಾರೆ.
ನವದೆಹಲಿ (ಅಕ್ಟೋಬರ್ 31, 2023): ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಪುತ್ರ ಅನುಜ್ ಪಟೇಲ್ ರನ್ನು ಭೇಟಿಯಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ತೀವ್ರ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿಕೊಂಡಿದ್ದಾರೆ.
ಈ ವರ್ಷದ ಆರಂಭದಲ್ಲಿ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಪುತ್ರ ಅನುಜ್ ಪಟೇಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಭೇಟಿ ಮಾಡಿದ್ದಾರೆ. ಬಳಿಕ, ಈ ಸಂಬಂಧ ಗುಜರಾತ್ ಸಿಎಂ ಅವರು ತಮ್ಮ ಮಗ ಮತ್ತು ಪ್ರಧಾನಿ ಮೋದಿಯವರ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, "ಇಂದು, ಪ್ರಧಾನಿ ನರೇಂದ್ರಭಾಯಿ ಮೋದಿ ಅವರು ನನ್ನ ಮಗ ಅನುಜ್ ಆರೋಗ್ಯದ ಬಗ್ಗೆ ವಿಚಾರಿಸಿದರು. ಕುಟುಂಬದ ಎಲ್ಲ ಸದಸ್ಯರಿಗೆ ಶಕ್ತಿಯನ್ನು ನೀಡುವ ಮೂಲಕ ಅನುಜ್ ಉತ್ಸಾಹವನ್ನು ಹೆಚ್ಚಿಸಿದರು. ಈ ಕ್ಷಣದಲ್ಲಿ, ನಾನು ಪ್ರಧಾನ ಮಂತ್ರಿಗೆ ಪ್ರಾಮಾಣಿಕವಾಗಿ ಕೃತಜ್ಞನಾಗಿದ್ದೇನೆ’’ ಎಂಬ ಕ್ಯಾಪ್ಷನ್ ಅನ್ನು ಗುಜರಾತ್ ಸಿಎಂ ಹಂಚಿಕೊಂಡಿದ್ದಾರೆ.
ಇದನ್ನು ಓದಿ: Mann Ki Baat: ‘ವೋಕಲ್ ಫಾರ್ ಲೋಕಲ್’ಗೆ ಮೋದಿ ಒತ್ತು; ಯುಪಿಐ ಬಳಸಿ ಎಂದೂ ಪ್ರಧಾನಿ ಕರೆ
ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಮಗನಿಗೆ ಏಪ್ರಿಲ್ 30 ರಂದು ಬ್ರೈನ್ ಸ್ಟ್ರೋಕ್ ಸಂಭವಿಸಿದ್ದ ಕಾರಣ ಅವರು ಕೋಮಾಗೆ ಹೋಗಿದ್ದರು. ಆರಂಭದಲ್ಲಿ, ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಅಹಮದಾಬಾದ್‌ನ ಕೆಡಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅವರ ವೈದ್ಯಕೀಯ ಸ್ಥಿತಿಯ ತೀವ್ರತೆಯನ್ನು ಪರಿಗಣಿಸಿ, ಕೆಡಿ ಆಸ್ಪತ್ರೆಯ ವೈದ್ಯರು ಅವರನ್ನು ಉನ್ನತ ಚಿಕಿತ್ಸೆಗಾಗಿ ಮುಂಬೈನ ಹಿಂದೂಜಾ ಆಸ್ಪತ್ರೆಗೆ ವರ್ಗಾಯಿಸಲು ಶಿಫಾರಸು ಮಾಡಿದರು.
ಬಳಿಕ, ಈ ತುರ್ತು ವರ್ಗಾವಣೆಗೆ ಅನುಕೂಲವಾಗುವಂತೆ ಭೂಪೇಂದ್ರ ಪಟೇಲ್ ಸರ್ಕಾರಿ ಏರ್ ಆಂಬುಲೆನ್ಸ್ ವ್ಯವಸ್ಥೆ ಮಾಡಿದರು. ಹಿಂದೂಜಾ ಆಸ್ಪತ್ರೆಯಲ್ಲಿ ತನ್ನ ಮೊದಲ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ಅನುಜ್ ಪ್ರಜ್ಞೆಯನ್ನು ಮರಳಿ ಪಡೆದರು ಮತ್ತು ಅವರ ಆರೋಗ್ಯ ಸ್ಥಿರವಾಯಿತು. ಇನ್ನು, ತೀವ್ರ ನಿಗಾ ಘಟಕದಲ್ಲಿದ್ದ ಮತ್ತು ಚೇತರಿಕೆಯ ನಂತರ, ಅವರನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಅಂದಿನಿಂದ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: 6ಜಿಯಲ್ಲೂ ಭಾರತ ಆಗಲಿದೆ ವಿಶ್ವನಾಯಕ; 2014ರಲ್ಲೇ ಜನ ಹಳೆಯ ಮೊಬೈಲ್ ಬಿಸಾಕಿದ್ದಾರೆ: ಮೋದಿ
ಈ ಹಿನ್ನೆಲೆ ತಮ್ಮ ಭೇಟಿಯ ವೇಳೆ ಪ್ರಧಾನಿ ಮೋದಿ ಅನುಜ್ ಪಟೇಲ್ ಆರೋಗ್ಯ ಮತ್ತು ಚೇತರಿಕೆಯ ಪ್ರಗತಿಯನ್ನು ವಿಚಾರಿಸಿದರು.