ಸುತ್ತೂರು ಮಠ ಅನ್ನ, ಅಕ್ಷರ ದಾಸೋಹಕ್ಕೆ ಪ್ರಸಿದ್ಧಿ, ಕರ್ನಾಟಕ ಮಠದ ಶ್ರೇಷ್ಠತೆ ವಿವರಿಸಿದ ಮೋದಿ!
- ಸುತ್ತೂರು ಮಠಕ್ಕೆ ಭೇಟಿ ನೀಡಿರುವುದು ಅತೀ ಸಂತಸ ತಂದಿದೆ
- ಕರ್ನಾಟಕದ ಮಠಗಳ ಸೇವೆ ಪ್ರಶಂಸಿದ ಮೋದಿ
- ಸುತ್ತೂರು ಮಠದಲ್ಲಿ ಪ್ರಧಾನಿ ಮೋದಿ ಭಾಷಣ
ಮೈಸೂರು(ಜೂ.20) ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಅನ್ನದಾಸೋಹ, ಅಕ್ಷರದಾಸೋಹ ಮಾಡುತ್ತಿರುವ ಇಂತಹ ಮಠಕ್ಕೆ ಭೇಟಿ ನೀಡಿರುವುದು ಅತೀವ ಸಂತಸ ತಂದಿದೆ ಎಂದು ಮೋದಿ ಹೇಳಿದ್ದಾರೆ.
ಸುತ್ತೂರು ಮಠಕ್ಕೆ ಬೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೆಎಸ್ಎಸ್ ಸಂಸ್ಕೃತ ಪಾಠಶಾಲೆ ಹಾಗೂ ಹಾಸ್ಟೆಲ್ ಕಟ್ಟಡ ಉದ್ಘಾಟಿಸಿದರು. ಈ ವೇಳೆ ಮಠಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಸುತ್ತೂರು ಶ್ರೀಗಳು ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಇದೇ ವೇಳೆ ಉಡುಗೊರೆ ನೀಡಿ ಗೌರವಿಸಿದರು. ಈ ವೇಳೆ ಸುತ್ತೂರು ಶ್ರೀಗಳು ಮೋದಿ ಕಾರ್ಯಗಳನ್ನು, ಜಾಗತಿಕ ನಾಯಕನಾಗಿರುವ ಪ್ರಧಾನಿಯನ್ನು ಹಾಡಿ ಹೊಗಳಿದ್ದಾರೆ.
ಉಕ್ರೇನ್‌ನಲ್ಲಿ ಮಡಿದ ನವೀನ್ ಪೋಷಕರ ಭೇಟಿ ಮಾಡಿ ಸಾಂತ್ವನ ಹೇಳಿದ ಪ್ರಧಾನಿ ಮೋದಿ!
ಬಳಿಕ ಮಾತನಾಡಿದ ಮೋದಿ ಕನ್ನಡದಲ್ಲೇ ಮಾತು ಆರಂಭಿಸಿದರು. ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ, ಮಠಗಳ ಪರಂಪರೆ ಹಾಗೂ ಸಾಮಾಜಿಕ ಸೇವೆಯನ್ನು ಪ್ರಶಂಸಿದ್ದಾರೆ. ಕರ್ನಾಟಕದ ಲಿಂಗಾಯಿತ ಮಠಗಳ ಹೆಸರು ಉಲ್ಲೇಖಿಸಿ, ವಿಶೇಷತೆಗಳನ್ನು ವಿವರಿಸಿದ್ದಾರೆ. ಮೈಸೂರಿನಲ್ಲಿ ಸುತ್ತೂರು ಮಠ, ತುಮಕೂರಿನಲ್ಲಿ ಸಿದ್ಧಗಂಗಾ ಮಠ, ಸಿರಿಗೆರೆ ಮಠ, ರಂಭಾಪುರಿ ಮಠ, ಮೂರುಸಾವಿರ ಮಠ ಸೇರಿದಂತೆ ಕರ್ನಾಟಕದ ಮಠಗಳನ್ನು ಹೊಂದಿದ ಭವ್ಯ ನಾಡು ಕರ್ನಾಟಕ ಎಂದು ಮೋದಿ ಹೇಳಿದ್ದಾರೆ.
ಚಾಮುಂಡಿ ತಾಯಿಗೆ ನಮಿಸುತ್ತೇನೆ. ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು. ಇದೇ ವೇಳೆ ಮೈಸೂರಿನ ಸಂಸ್ಕೃತಿಕ ಪತ್ರಿಕೆ ಸುಧರ್ಮ ಕುರಿತು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಈ ಮಠಕ್ಕೆ ಭೇಟಿ ನೀಡುವ ಸೌಭಾಗ್ಯ ನನಗೆ ಸಿಕ್ಕಿದೆ. ಸುತ್ತೂರು ಸ್ವಾಮೀಜಿಗಳ ಮಾತುಗಳಿಂದ ಪ್ರಭಾವಿತನಾಗಿದ್ದೇನೆ. ಅವರ ಅಶಯದಂತೆ ಕೆಲಸ ಮಾಡುತ್ತೇನೆ. ಅವರ ಸ್ವಾಮಿಗಳ ಆಶಯ ತಲುಪಲು ಇನ್ನೂ ಬಹಳಷ್ಟು ಕೆಲಸ ನಾನು ಮಾಡಬೇಕಿದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ, ನಾವೆಲ್ಲ ಜೊತೆಯಾಗಿ ಉತ್ತಮ ಭಾರತಕ್ಕಾಗಿ ಕೆಲಸ ಮಾಡೋಣ ಎಂದು ಮೋದಿ ಹೇಳಿದ್ದಾರೆ.
ಚಿತ್ರಗಳಲ್ಲಿ: 33,000 ಕೋಟಿಗೂ ಹೆಚ್ಚು ಮೊತ್ತದ 19 ಯೋಜನೆಗಳನ್ನ ಉದ್ಘಾಟಿಸಿದ ಮೋದಿ
ಕಳೆದ 8 ವರ್ಷದಲ್ಲಿ ಕೇಂದ್ರ ಸರ್ಕಾರ ಅತ್ಯುತ್ತಮ ರಸ್ತೆ ನಿರ್ಮಾಣಕ್ಕೆ ಬರೋಬ್ಬರಿ 70,000 ಕೋಟಿ ರೂಪಾಯಿ ಅನುದಾನವನ್ನು ಕರ್ನಾಟಕಕ್ಕೆ ನೀಡಿದೆ. ಈ ಮೂಲಕ 5,000 ಕಿಲೋಮೀಟರ್ ರಸ್ತೆ ನಿರ್ಮಿಸಲಾಗಿದೆ. ಇಂದು ಬೆಂಗಳೂರಿನಲ್ಲಿ 7,000 ಕೋಟಿ ರೂಪಾಯಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಮೋದಿ ಹೇಳಿದರು.
ವಿಶೇಷ ಚೇತನರನ್ನು ಸ್ವಾವಲಂಬಿಗಳಾಗಿ ಮಾಡುವತ್ತ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಅವರಿಗೆ ಶಿಕ್ಷಣ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಕೇಂದ್ರ ಹಾಗೂ ಕರ್ನಾಟಕದ ಸರ್ಕಾರ ಜಂಟಿಯಾಗಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿದೆ. ಕೇಂದ್ರದ ಯೋಜನೆಗೆ ಕರ್ನಾಟಕದಿಂದ ಉತ್ತಮ ಸಹಕಾರ ಸಿಗುತ್ತಿದೆ. ಹೀಗಾಗಿ ಅಭಿವೃದ್ಧಿಯ ವೇಗ ಹೆಚ್ಚಿದೆ ಎಂದು ಮೋದಿ ಹೇಳಿದ್ದಾರೆ.
ಸುತ್ತೂರು ಮಠದಲ್ಲಿ ಮೋದಿ ಭಾಷಣ ಮುಗಿಸಿ ನೇರವಾಗಿ ಚಾಮಂಡಿ ಬೆಟ್ಟಕ್ಕೆ ತೆರಳಿದರು. ನಾಡದೇವತಗೆ ಪ್ರಧಾನಿ ಮೋದಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.