ಬಿಜೆಪಿ ಹಿರಿಯ ನಾಯಕರ ಜೊತೆ ಪ್ರಧಾನಿ ಮೋದಿ ಸಭೆ ಗೋವಾಗೆ ಪ್ರಮೋದ್ ಸಾವಂತ್ ಮತ್ತೆ ಸಿಎಂ ಮಣಿಪುರಕ್ಕೆ ಬೀರೆನ್ ಸಿಂಗ್, ಉತ್ತರಖಂಡಕ್ಕೆ ಯಾರು?

ನವದೆಹಲಿ(ಮಾ.21): ಉತ್ತರಾಖಂಡ ಹಾಗೂ ಗೋವಾ ಮುಖ್ಯಮಂತ್ರಿಗಳ ಆಯ್ಕೆ ಕೊಂಚ ಜಟಿಲವಾಗಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದು ಅಖಾಡಕ್ಕೆ ಇಳಿದು ಭಾನುವಾರ ರಾತ್ರಿ ಬಿಜೆಪಿ ಹಿರಿಯ ನಾಯಕರ ಜತೆ ಮೋದಿ ಸಭೆ ನಡೆಸಿದರು.

ಸಭೆಯಲ್ಲಿ ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್‌ ಸಾವಂತ್‌ ಅವರನ್ನು ಹೆಸರಿಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಸೋಮವಾರ ಸಂಜೆ 4 ಗಂಟೆಗೆ ಪಣಜಿಯಲ್ಲಿ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಬಳಿಕ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

ಇದೇ ವೇಳೆ, ಉತ್ತರಾಖಂಡದಲ್ಲಿ ಸೋತ ಹಾಲಿ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಅವರಿಗೆ ಸಿಎಂ ಪಟ್ಟನೀಡಬೇಕೇ ಬೇಡವೇ ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಸೋಮವಾರ ಡೆಹ್ರಾಡೂನ್‌ನಲ್ಲಿ ನಡೆಯಲಿರುವ ಶಾಸಕಾಂಗ ಸಭೆಯ ನಂತರ ಘೋಷಣೆ ಹೊರಬೀಳಲಿದೆ.

ಮುಂದಿನ 5 ವರ್ಷದಲ್ಲಿ ಭಾರತದಲ್ಲಿ 3.2 ಲಕ್ಷ ಕೋಟಿ ಹೂಡಿಕೆ ಮಾಡಲಿರುವ ಜಪಾನ್!

ಪ್ರಧಾನಿ ನಡೆಸಿದ ಸಭೆಯಲ್ಲಿ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ರಾಜನಾಥ ಸಿಂಗ್‌, ಅಮಿತ್‌ ಶಾ ಹಾಜರಿದ್ದರು.

ಇಂದು ಗೋವಾ ಸಿಎಂ ಆಯ್ಕೆ ಸಾಧ್ಯತೆ
ಗೋವಾ ಹೊಸ ಮುಖ್ಯಮಂತ್ರಿ ಆಯ್ಕೆ ಕುರಿತು ಸೋಮವಾರ ಶಾಸಕಾಂಗ ಪಕ್ಷದ ಸಭೆ ಏರ್ಪಾಡಾಗಿದ್ದು, ಸಂಜೆಯ ವೇಳೆಗೆ ಮುಖ್ಯಮಂತ್ರಿ ಯಾರೆಂಬ ಘೋಷಣೆ ಆಗುವ ಸಾಧ್ಯತೆ ಇದೆ. ಹಾಲಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೆಸರು ಮುಂಚೂಣಿಯಲ್ಲಿದ್ದು, ಅವರ ಹೆಸರೇ ಘೋಷಣೆ ಆಗುವ ನಿರೀಕ್ಷೆ ಇದೆ.ಈ ನಡುವೆ ಮಾ.23ರಿಂದ 25ರ ನಡುವಿನ ಅವಧಿಯಲ್ಲಿ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಗೋವಾದಲ್ಲಿ ಚುನಾವಣೆ ಮುಗಿದು 10 ದಿಗಳು ಕಳೆದರೂ ಮುಖ್ಯಮಂತ್ರಿ ಆಯ್ಕೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾದ ಹಾಲಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮತ್ತು ಸಚಿವ ವಿಶ್ವಜಿತ್‌ ರಾಣೆ ಅವರು ಕೇಂದ್ರ ಗೃಹ ಸಚಿವ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಂಜೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾವಂತ್‌ ಹೆಸರು ಅಂತಿಮಗೊಳಿಸಲಾಯಿತು ಎಂದು ತಿಳಿದುಬಂದಿದೆ.

ಆ ಅಡ್ಡಿ ನಿವಾರಣೆ ಬಳಿಕವೇ ಉತ್ತರದ ಸಿಂಹಾಸನ ಏರಲಿದ್ದಾರೆ ಗೋರಖ್‌ಪುರದ ಸನ್ಯಾಸಿ!

ಬಳಿಕ ಮಾತನಾಡಿದ ಸಾವಂತ್‌, ‘ಸೋಮವಾರ ಕೇಂದ್ರೀಯ ವೀಕ್ಷಕರು ಗೋವಾಗೆ ಆಗಮಿಸಲಿದ್ದು, ಹೊಸ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ’ ಎಂದಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದ ತನವಡೆ ಅವರು, ‘23ರಿಂದ 25ರ ನಡುವೆ ಪ್ರಮಾಣವಚನ ನಡೆಯಲಿದೆ’ ಎಂದಿದ್ದಾರೆ. 40 ಶಾಸಕ ಬಲದ ಗೋವಾ ವಿಧಾನಸಭೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದಿದೆ. ಪಕ್ಷಕ್ಕೆ ಪಕ್ಷೇತರರು ಹಾಗೂ ಎಂಜಿಪಿ ಬೆಂಬಲವಿದೆ.

ಉತ್ತರಾಖಂಡ: ನಾಳೆ ಸಿಎಂ ಆಯ್ಕೆ ಸಾಧ್ಯತೆ
ಉತ್ತರಾಖಂಡದ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಬಿಜೆಪಿ ಶಾಸಕಾಂಗ ಪಕ್ಷ ಸೋಮವಾರ ಡೆಹ್ರಾಡೂನ್‌ನಲ್ಲಿ ಸಭೆ ಸೇರುವ ಸಾಧ್ಯತೆಗಳಿವೆ.ಚುನಾವಣೆಯಲ್ಲಿ ಸೋತರೂ ಬಿಜೆಪಿ ಮತ್ತೊಮ್ಮೆ ಪುಷ್ಕರ್‌ ಸಿಂಗ್‌ ಧಾಮಿಯನ್ನೇ ಮುಖ್ಯಮಂತ್ರಿಯಾಗಿ ಘೋಷಿಸುವ ಬಗ್ಗೆ ಹೈಕಮಾಂಡ್‌ ಪರಿಶೀಲಿಸುತ್ತಿದೆ. ಶಾಸಕರಾದ ಸತ್ಪಾಲ್‌ ಮಹಾರಾಜ್‌, ಧನ್‌ಸಿಂಗ್‌ ರಾವತ್‌, ರಾಜ್ಯಸಭಾ ಸದಸ್ಯ ಅನಿಲ್‌ ಬಾಲುನಿ ಹೆಸರು ಕೂಡಾ ಸಂಭಾವ್ಯ ಸಿಎಂ ಪಟ್ಟಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.‘ಕೇಂದ್ರೀಯ ವೀಕ್ಷಕರಾದ ರಾಜನಾಥ್‌ ಸಿಂಗ್‌ ಹಾಗೂ ಮೀನಾಕ್ಷಿ ಲೇಖಿ ಭಾನುವಾರ ಅಥವಾ ಸೋಮವಾರ ಡೆಹ್ರಾಡೂನ್‌ಗೆ ಆಗಮಿಸಲಿದ್ದಾರೆ. ಮಂಗಳವಾರ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ’ ಎಂದು ರಾಜ್ಯ ಬಿಜೆಪಿ ವಕ್ತಾರ ಶಾದಾಬ್‌ ಶಮ್ಸ್‌ ತಿಳಿಸಿದ್ದಾರೆ.