ಮಳೆಗಾಲ ಮುಗಿಯುತ್ತಿದ್ದಂತೆ ಗೋವಾ ಪ್ರವಾಸಕ್ಕೆ ಪ್ಲಾನ್ ಮಾಡಿದ್ದೀರಾ? ಗೋವಾ ಹೋದಾಗ ಕ್ಯಾಸಿನೋಗೆ ಭೇಟಿ ನೀಡದೆ ಬರುವುದು ಹೇಗೆ ಎಂದು ಆಲೋಚಿಸುತ್ತಿದ್ದೀರಾ?ಪ್ರವೇಶ ಬ್ಯಾನ್ ಸೇರಿದಂತೆ ಹಲವು ನಿರ್ಬಂಧಗಳು ಜಾರಿಯಾಗಿದೆ. ಯಾರಿಗೆಲ್ಲಾ ಬ್ಯಾನ್?
ಗೋವಾ (ಆ.05) ಭಾರತದ ಪ್ರವಾಸಿ ತಾಣಗಳಲ್ಲಿ ಗೋವಾ ಮುಂಚೂಣಿಯಲ್ಲಿರುವ ಪ್ರಸಿದ್ಧ ತಾಣ. ಕಡಲ ಕಿನಾರೆ, ಪಾರ್ಟಿ ವೈಬ್, ಸುಂದರ ತಾಣ, ಕಯಾಕಿಂಗ್,ಬೋಟಿಂಗ್ ಸೇರಿದಂತೆ ಹಲವು ಕಾರಣಗಳಿಂದ ಗೋವಾ ಅತೀ ಹೆಚ್ಚು ಮಂದಿಯ ನೆಚ್ಚಿನ ತಾಣವಾಗಿದೆ. ಇದೀಗ ಮಳೆಕಾಲ ಕಳೆಯುತ್ತಿದ್ದಂತೆ ಗೋವಾ ಪ್ರವಾಸಕ್ಕೆ ಹಲವರು ಸಜ್ಜಾಗುತ್ತಾರೆ. ಇನ್ನು ಗೋವಾ ಪ್ರವಾಸದಲ್ಲಿ ಒಮ್ಮೆಯಾದಾರೂ ಕ್ಯಾಸಿನೋ ಅನುಭವ ಪಡೆಯದೆ ಮರಳುವವರ ಸಂಖ್ಯೆ ಕಡಿಮೆ. ಇದೀಗ ಗೋವಾದಲ್ಲಿ ಹೊಸ ನಿಯಮಗಳು ಜಾರಿಯಾಗುತ್ತಿದೆ. ಕ್ಯಾಸಿನೋ ಪ್ರವೇಶಕ್ಕೆ ಕಠಿಣ ನಿಯಮಗಳು ಜಾರಿಯಾಗುತ್ತಿದೆ.
ಪ್ರವೇಶ ಬ್ಯಾನ್ ಕುರಿತು GSPCR ಆದೇಶವೇನು?
ಗೋವಾ ಮಕ್ಕಳ ರಕ್ಷಣೆ ಹಾಗೂ ಹಕ್ಕುಗಳ ಆಯೋಗ (GSPCR) ಮಹತ್ವದ ಆದೇಶವನ್ನು ಸರ್ಕಾರಕ್ಕೆ ನೀಡಿದೆ. ಗೋವಾದಲ್ಲಿ ತೆಲುವ ಕ್ಯಾಸಿನೋ ಪ್ರವೇಶಕ್ಕೆ 18 ವರ್ಷ ತುಂಬಿರಬೇಕು. 18 ವರ್ಷಕ್ಕಿಂತ ಕೆಳಗಿನವರಿಗೆ ಗೋವಾದಲ್ಲಿ ನೌಕೆಯಲ್ಲಿರುವ ಕ್ಯಾಸಿನೋ ಪ್ರವೇಶಕ್ಕೆ ಅವಕಾಶವಿಲ್ಲ. ಮಕ್ಕಳು ಹಡುಗಳ ಕ್ಯಾಸಿನೋ ಪ್ರವೇಶಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲು GSPCR ಆದೇಶ ನೀಡಿದೆ. ಇತ್ತ ಸರ್ಕಾರ GSPCR ಆದೇಶವನ್ನು ಪಾಲಿಸುವುದಾಗಿ ಹೇಳಿದೆ.
ತೇಲುವ ಕ್ಯಾಸಿನೋ ಒಳಗೆ ಪ್ರವೇಶ ಮಾತ್ರವಲ್ಲ, ಕ್ಯಾಸಿನೋ ಆವರಣಕ್ಕೂ ಮಕ್ಕಳಿಗೆ ಪ್ರವೇಶವಿಲ್ಲ. 18 ವರ್ಷದೊಳಗಿನ ಯಾರಿಗೂ ಗೋವಾದಲ್ಲಿ ಕ್ಯಾಸಿನೋ ಹತ್ತಿರಕ್ಕೂ ಸುಳಿಯಲು ಅವಕಾಶವಿಲ್ಲ. 2003 ಗೋವಾ ಮಕ್ಕಳ ಕಾಯ್ದೆ ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸಲು ಆದೇಶ ನೀಡಲಾಗಿದೆ.
ಕ್ಯಾಸಿನೋದ ಮಕ್ಕಳ ಗೇಮಿಂಗ್ ಝೋನ್ ಕೂಡ ಬ್ಯಾನ್
ಗೋವಾಗೆ ಕುಟುಂಬ ಸಮೇತ ಪ್ರವಾಸ ಬರುವವರು ಮಕ್ಕಳನ್ನು ಹಡುಗಳ ತೇಲುವ ಕ್ಯಾಸಿನೋದಲ್ಲಿರುವ ಗೇಮಿಂಗ್ ಝೋನ್‌ನಲ್ಲಿ ಬಿಡುತ್ತಾರೆ. ಅದರ ಪಕ್ಕದಲ್ಲೇ ಪೋಷಕರು ಕ್ಯಾಸಿನೋ ಆಟದಲ್ಲಿ ಬ್ಯೂಸಿಯಾಗುತ್ತಾರೆ. ಮಕ್ಕಳು ಪೋಷಕರನ್ನು ನೋಡಿ ಕ್ಯಾಸಿನೋ ಗೀಳಿಗೆ ಬೀಳುವ ಅಪಾಯವಿದೆ. ಹೀಗಾಗಿ ಯಾವುದೇ ಕಾರಣಕ್ಕೆ ಮಕ್ಕಳಿಗೆ ಒಳ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಆದೇಶ ನೀಡಿದೆ.
ಹಡುಗಳ ಕ್ಯಾಸಿನೋಗಳಲ್ಲಿ ಮಕ್ಕಳ ಪ್ರವೇಶ ಕಡ್ಡಾಯವಾಗಿ ನಿರ್ಬಂಧಿಸುವುದು ಮಾತ್ರವಲ್ಲ, ಅಧಿಕಾರಿಗಳು ತಪಾಸಣೆ ಮಾಡಬೇಕು. ಈ ನಿಯಮದಲ್ಲಿ ಸಣ್ಣ ಲೋಪ ಕಂಡಬಂದರೂ, ನಿಯಮ ಉಲ್ಲಂಘಿಸಿದರೂ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು GSPCR ಖಡಕ್ ಆದೇಶ ನೀಡಿದೆ.


