ಹಿರಿಯ ಶಾಸಕರಾದ ಬಿ.ಕೆ. ಸಂಗಮೇಶ್ ಮತ್ತು ಬೇಳೂರು ಗೋಪಾಲಕೃಷ್ಣ ಅವರ ತೀವ್ರ ಪೈಪೋಟಿಯ ನಡುವೆಯೂ ಮಧು ಬಂಗಾರಪ್ಪ ಮತ್ತೊಮ್ಮೆ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಲೇಖನವು ಅವರ ಆಕಸ್ಮಿಕ ರಾಜಕೀಯ ಪ್ರವೇಶ, ಸವಾಲುಗಳನ್ನು ಮೆಟ್ಟಿನಿಂತ ರೀತಿ ಮತ್ತು ಸಚಿವ ಸ್ಥಾನ ಸಿಗದಿದ್ದಕ್ಕೆ ಇತರ ನಾಯಕರ ಅಸಮಾಧಾನವನ್ನು ವಿವರಿಸುತ್ತದೆ.

ಗೋಪಾಲ್‌ ಯಡಗೆರೆ, ಕನ್ನಡಪ್ರಭ ವಾರ್ತೆ

ಶಿವಮೊಗ್ಗ: ಮಧು ಬಂಗಾರಪ್ಪ ಮತ್ತೆ ಲಾಟರಿ ಹೊಡೆದಿದ್ದಾರೆ. ಜಿಲ್ಲೆಯ ಇಬ್ಬರು ಹಿರಿಯ ಶಾಸಕರನ್ನು ಬದಿಗೆ ಸರಿಸಿ ಮತ್ತೊಮ್ಮೆ ಸಚಿವ ಸ್ಥಾನ ಪಡೆಯುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ಸೊರಬ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಬೀಗಿದ್ದ ಅವರು ಮೊದಲ ಹಂತದಲ್ಲಿಯೇ ಸಚಿವ ಸ್ಥಾನ ಪಡೆಯುವ ಬಗ್ಗೆ ಸಾಕಷ್ಟು ಅನುಮಾನಗಳಿದ್ದವು. ಎರಡನೇ ಹಂತದಲ್ಲಿಯಂತೂ ಇದು ಇನ್ನೂ ಕಠಿಣ ಎನ್ನುವ ಸ್ಥಿತಿಗೆ ಬಂದು ತಲುಪಿತ್ತು. ಆದರೆ ಮಧು ಅದನ್ನೂ ಸಾಧಿಸಿ ಮುನ್ನಡೆದಿದ್ದಾರೆ.

ಅದರಲ್ಲಿಯೂ ನಾಲ್ಕು ಬಾರಿ ಶಾಸಕರಾಗಿರುವ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್‌, ಮೂರು ಬಾರಿ ಶಾಸಕರಾಗಿರುವ ಸಾಗರದ ಬೇಳೂರು ಗೋಪಾಲಕೃಷ್ಣ ಪ್ರಮುಖವಾಗಿ ಪ್ರತಿಸ್ಪರ್ಧಿಯಾಗಿದ್ದರು. ಅವರಿಬ್ಬರನ್ನು ಕೂಡ ಸುಲಭವಾಗಿ ಕಡೆಗಣಿಸುವಂತಿರಲಿಲ್ಲ. ಆದರೆ ಈ ಎಲ್ಲ ಅಡೆತಡೆಗಳನ್ನು ಗೆದ್ದು ನಗೆ ಬೀರಿದ್ದಾರೆ.

ಜಾತಿವಾರು ಹಂಚಿಕೆಯಲ್ಲಿ ಕಳೆದ ಬಾರಿ ಅವಕಾಶ ತಪ್ಪಿಸಿಕೊಂಡ, ಹೈಕಮಾಂಡ್‌ ಗೆ ಅತ್ಯಂತ ಆಪ್ತರೂ ಆದ ಹಿರಿಯ ರಾಜಕಾರಣಿ ಬಿ. ಕೆ. ಹರಿಪ್ರಸಾದ್ ಸಚಿವ ಸ್ಥಾನ ಪಡೆಯುವಲ್ಲಿ ಸಹಜವಾಗಿ ಮುಂಚೂಣಿಯಲ್ಲಿದ್ದರು. ಆದರೆ, ಅವರು ಕೆಪಿಸಿಸಿ ಅಧ್ಯಕ್ಷರಾಗುವ ಮೂಲಕ ತಮ್ಮ ಸ್ಪರ್ಧೆಯನ್ನು ಮೊದಲ ಸುತ್ತಿನಲ್ಲಿಯೇ ಅಂತ್ಯಗೊಳಿಸಿದ್ದು, ಈ ಮಧು ಮತ್ತು ಬೇಳೂರು ಅವರಿಗೆ ಖುಷಿ ತಂದಿತ್ತು. ಆದರೆ ಬೇಳೂರು ಗೋಪಾಲಕೃಷ್ಣ ಅವರಿಗೆ ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ.

ಆದರೆ ಬಿ.ಕೆ. ಸಂಗಮೇಶ್‌ ಅವರಿಗೆ ಮಾತ್ರ ಯಾಕೆ ನಿರಾಕರಿಸಲಾಯಿತು ಎಂಬುದು ಈಗಲೂ ನಿಗೂಢ. ಹಲವಾರು ಸಂದರ್ಭಗಳಲ್ಲಿ ಪಕ್ಷ ನಿಷ್ಠೆ ಪ್ರದರ್ಶಿಸಿದ ಅವರಿಗೆ ಕೊನೆಗೂ ಏನೂ ಸಿಗದೆ ನಿರಾಶರಾಗಿ ರಾಜಕೀಯ ಅಂತ್ಯದತ್ತ ತೆರಳುವುದು ಅನಿವಾರ್ಯವಾಗಿದೆ.

ಮಧು ಬಂಗಾರಪ್ಪಗೆ ಸಚಿವ ಸ್ಥಾನ ದಕ್ಕಿದ್ದು ಹೇಗೆ?:

ಮೊದಲ ಹಂತದಲ್ಲಿ ಹೇಗೋ ಮಾಡಿ ಮಧು ಬಂಗಾರಪ್ಪ ಅವರು ಸಿದ್ಧರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡರು. ಮುಖ್ಯವಾಗಿ ಹೀಗೆ ಪಡೆದ ಸಚಿವ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ತಾವು ಇದಕ್ಕೆ ಅರ್ಹ ಎಂದು ಸಾಬೀತುಪಡಿಸಿದ್ದು ಬಹಳ ವಿಶೇಷ. ಇವರಿಗೆ ಸಚಿವ ಸ್ಥಾನ, ಅದರಲ್ಲಿಯೂ ಪ್ರಾಥಮಿಕ ಶಿಕ್ಷಣದಂತಹ ಖಾತೆ ನೀಡಿದಾಗ ಬಹುತೇಕರು ಮೂಗಿನ ಮೇಲೆ ಬೆರಳಿಟ್ಟಿದ್ದರು. ಮಧು ಬಂಗಾರಪ್ಪನವರಿಗೆ ಇಂತಹ ಖಾತೆ ನಿರ್ವಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಅವರ ಕನ್ನಡ ಉಚ್ಚಾರಣೆ ಮತ್ತು ಹೇರ್‌ ಸ್ಟೈಲ್‌ ಅನ್ನು ಕೂಟ ಟ್ರೋಲ್‌ ಮಾಡಿದ್ದರು. ಆದರೆ ಇದಕ್ಕೆ ಮಧು ಬಂಗಾರಪ್ಪ ಖಡಕ್‌ ಮಾತಿನಲ್ಲಿ ಪ್ರತ್ಯುತ್ತರ ನೀಡಿದ್ದರು.

ರಾಜಕೀಯ ಹೆಜ್ಜೆ:

ಮಧು ಬಂಗಾರಪ್ಪನವರ ರಾಜಕೀಯ ಪ್ರವೇಶವೇ ಒಂದು ಆಕಸ್ಮಿಕ. ದಿ.ಎಸ್‌. ಬಂಗಾರಪ್ಪನವರಿಗೆ ಪ್ರೀತಿಯ ಪುತ್ರನಾದರೂ ಹಿರಿಯ ಮಗ ಕುಮಾರ್‌ ಬಂಗಾರಪ್ಪ ಅದಾಗಲೇ ಸೊರಬದಲ್ಲಿ ಬಂಗಾರಪ್ಪ ಉತ್ತರಾಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಆದರೆ 2004 ರಲ್ಲಿ ಬಂಗಾರಪ್ಪನವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಸಂದರ್ಭದಲ್ಲಿ ಅವರ ಜೊತೆ ಇಬ್ಬರು ಪುತ್ರರು ಕೂಡ ಬಿಜೆಪಿ ಸೇರಿದ್ದರು. ಆದರೆ ಅಷ್ಟರಲ್ಲಾಗಲೇ ಕುಟುಂಬದಲ್ಲಿ ಎದ್ದ ಬಿರುಗಾಳಿಯಿಂದಾಗಿ ಬಂಗಾರಪ್ಪನವರು ತಮ್ಮ ಹಿರಿಯ ಪುತ್ರ ಕುಮಾರ್‌ ಬಂಗಾರಪ್ಪನವರನ್ನು ಬಿಜೆಪಿಯೊಳಗೆ ಬಿಟ್ಟುಕೊಳ್ಳಲಿಲ್ಲ. ಇದರಿಂದ ಕುಮಾರ್‌ ಬಂಗಾರಪ್ಪ 24 ಗಂಟೆಯ ಒಳಗೆ ಮರಳಿ ಕಾಂಗ್ರೆಸ್ ಗೂಡು ಸೇರಿದರು.

ಇದರಿಂದಾಗಿ ಮಧು ಬಂಗಾರಪ್ಪನವರಿಗೆ ರಾಜಕೀಯ ಜಾಕ್ ಪಾಟ್‌ ಹೊಡೆಯಿತು. 2004 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮಧು ಬಂಗಾರಪ್ಪ ಅವರು ಸೊರಬ ಕ್ಷೇತ್ರದಿಂದ ಸ್ಪರ್ಧಿಸಿ ಸ್ವತಃ ಸೋದರ ಕುಮಾರ್‌ ಬಂಗಾರಪ್ಪ ಮತ್ತು ಹರತಾಳು ಹಾಲಪ್ಪ ಅವರನ್ನು ಎದುರಿಸಿದರೂ ಗೆಲ್ಲಲಾಗಲಿಲ್ಲ. 2008 ರಲ್ಲಿ ಬಂಗಾರಪ್ಪನವರು ಸಮಾಜವಾದಿ ಪಾರ್ಟಿ ಸೇರಿದ್ದರಿಂದ ಅದೇ ಚಿಹ್ನೆಯಡಿಯಲ್ಲಿ ಮಧು ಬಂಗಾರಪ್ಪನವರೂ ಸ್ಪರ್ಧಿಸಿದರು. ಆಗಲೂ ಗೆಲ್ಲಲಾಗಲಿಲ್ಲ. ಬಳಿಕ ಬಂಗಾರಪ್ಪನವರು ಜೆಡಿಎಸ್‌ ಪಕ್ಷ ಸೇರಿದರು. ಹೀಗಾಗಿ ಮಧು ಬಂಗಾರಪ್ಪನವರು 2013 ರಲ್ಲಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿದರು. ಬಂಗಾರಪ್ಪ ಮೊದಲ ಬಾರಿ ಗೆದ್ದು ಬೀಗಿದರು.

ಪುನಃ 2018 ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದರು. ಆದರೆ ಗೆಲ್ಲಲಾಗಲಿಲ್ಲ. ಸೋದರರ ನಡುವಿನ ಕಾಳಗದಲ್ಲಿ ಮಧು ಸೋಲನ್ನು ಒಪ್ಪಿಕೊಳ್ಳುವಂತಾಯಿತು. ಆದರೆ 2023 ರಲ್ಲಿ ಮಧು ಬಂಗಾರಪ್ಪ ಮತ್ತೆ ಗೆಲುವಿನ ನಗೆ ಬೀರಿದರು. ಸಚಿವರಾದರೂ ಕೂಡ!

ಅಸಮಾಧಾನ ಸ್ಫೋಟ

ತಮಗೆ ಸಚಿವ ಸ್ಥಾನ ಸಿಗದೆ ಇದ್ದುದರಿಂದ ಬೇಳೂರು ಗೋಪಾಲಕೃಷ್ಣ ಮತ್ತು ಬಿ.ಕೆ. ಸಂಗಮೇಶ್‌ ಇಬ್ಬರಿಂದಲೂ ಅಸಮಾಧಾನ ಸ್ಫೋಟಗೊಂಡಿದೆ.

ಹಿರಿಯ ಸಚಿವರಾಗಿ ತಮಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರು ಹೈಕಮಾಂಡ್‌ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಬೆಂಬಲಿಗರ ಜೊತೆ ಚರ್ಚಿಸುವುದಾಗಿ ಹೇಳಿದ್ದಾರೆ.

ಇತ್ತ ಬೇಳೂರು ಗೋಪಾಲಕೃಷ್ಣ ಅವರಂತೂ ತೀರಾ ನಿರಾಶೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ನಿಗಮ ಮಂಡಳಿ ಮತ್ತು ಶಾಸಕ ಸ್ಥಾನ ಎರಡಕ್ಕೂ ರಾಜೀನಾಮೆ ನೀಡುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಇಬ್ಬರೂ ಕೂಡ ಕೊನೆಗಳಿಗೆಯಲ್ಲಿ ಹೈಕಮಾಂಡ್‌ ಮತ್ತು ಮುಖ್ಯಮಂತ್ರಿಗಳ ಮನವೊಲಿಕೆಗೆ ಸೋತು ಒಪ್ಪಿಕೊಳ್ಳುವ ಸಾಧ್ಯತೆ ಇದ್ದೇ ಇದೆ.