ನಾಯಿ ದಾಳಿಯ ಮತ್ತೊಂದು ಭಯಾನಕ ವಿಡಿಯೋ ವೈರಲ್: ಹಸುವನ್ನು ಕಚ್ಚಿ ಎಳೆದಾಡಿದ ಪಿಟ್ಬುಲ್ ಶ್ವಾನ
ಶ್ವಾನಗಳಲ್ಲೇ ಅಪಾಯಕಾರಿ ಎಂದು ಕರೆಯಲಾಗುವ ಪಿಟ್‌ಬುಲ್ ತಳಿಯ ಶ್ವಾನವೊಂದು ಹಸುವಿನ ಮೇಲೆ ದಾಳಿ ಮಾಡಿರುವ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಯ ಮೂಡಿಸುತ್ತಿದೆ.
ಕಾನ್ಪುರ: ಇತ್ತೀಚೆಗೆ ಶ್ವಾನಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚು ಹೆಚ್ಚು ವರದಿಯಾಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ಪುಟ್ಟ ಬಾಲಕನ ಮೇಲೆ ಅಪಾರ್ಟ್‌ಮೆಂಟ್‌ನ ಲಿಫ್ಟ್ ಒಳಗೆ ಮಹಿಳೆಯೋರ್ವರ ಸಾಕುನಾಯಿ ದಾಳಿ ಮಾಡಿತ್ತು. ಇದರಿಂದ ಬಾಲಕ ಗಂಭೀರ ಗಾಯಗೊಂಡಿದ್ದ, ಇದರ ವಿಡಿಯೋ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಜನಾಕ್ರೋಶಕ್ಕೆ ಕಾರಣವಾಗಿತ್ತು. ಈ ಮಧ್ಯೆ ಶ್ವಾನಗಳಲ್ಲೇ ಅಪಾಯಕಾರಿ ಎಂದು ಕರೆಯಲಾಗುವ ಪಿಟ್‌ಬುಲ್ ತಳಿಯ ಶ್ವಾನವೊಂದು ಹಸುವಿನ ಮೇಲೆ ದಾಳಿ ಮಾಡಿರುವ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಯ ಮೂಡಿಸುತ್ತಿದೆ.
ಉತ್ತರಪ್ರದೇಶದ (Uttar Pradesh) ಕಾನ್ಪುರ (Kanpur) ಬಳಿಯ ಸರ್ಸಿಯ ಘಾಟ್‌ನಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಕಾಣಿಸುವಂತೆ ಸರ್ಸಿಯ ಘಾಟ್‌ನಲ್ಲಿ ಕೆಸರು ನೀರು ತುಂಬಿದ್ದು, ಅಲ್ಲೇ ಕೆಲವರು ಸ್ನಾನ ಮಾಡುತ್ತಿರುತ್ತಾರೆ. ಅಲ್ಲೇ ಪಕ್ಕದಲ್ಲಿ ಹಸುವೊಂದರ ಮೇಲೆ ಈ ಪಿಟ್ಬುಲ್ (Pitbull dog) ಶ್ವಾನ ಇದೇ ಸಮಯದಲ್ಲಿ ದಾಳಿ ಮಾಡಿದೆ. ಹಸುವಿನ ದವಡೆಯನ್ನು ಕಚ್ಚಿ ಹಿಡಿದುಕೊಂಡಿದೆ. ಈ ವೇಳೆ ಅಲ್ಲೇ ಇದ್ದ ಒಬ್ಬರು ನಾಯಿ ಬಾಯಿಯಿಂದ ಹಸುವನ್ನು ಬಿಡಿಸಲು ಯತ್ನಿಸುತ್ತಾರೆ. ಆದರೆ ಶ್ವಾನ ಏನೇ ಮಾಡಿದರು ಹಸುವಿನ ಮೇಲಿನ ತನ್ನ ಹಿಡಿತವನ್ನು ಬಿಡಲು ಸಿದ್ಧವಿಲ್ಲ. ಅಲ್ಲೇ ಇದ್ದ ಇನ್ನಿಬ್ಬರು ದೊಣ್ಣೆ ಕೋಲುಗಳನ್ನು ತೆಗೆದುಕೊಂಡು ಶ್ವಾನವನ್ನು ಹೊಡೆದರೂ ಕೂಡ ಶ್ವಾನ ಹಸುವನ್ನು ಸುಮ್ಮನೇ ಬಿಡಲು ಸಿದ್ಧವಿಲ್ಲ. ಕೊನೆಗೂ ಹಸು ನೀರಿನತ್ತ ಹೋಗುತ್ತದೆ. ಇದೇ ವೇಳೆ ಅಲ್ಲೇ ಇದ್ದವರು ಶ್ವಾನವನ್ನು ನೀರಿನಲ್ಲಿ ಮುಳುಗಿಸಿದ್ದಾರೆ. ಈ ವೇಳೆ ಅದು ಹಸುವನ್ನು ತನ್ನ ಹಿಡಿತದಿಂದ ಬಿಟ್ಟಿದೆ.
ಲಿಫ್ಟ್‌ನಲ್ಲಿ ಬಾಲಕನನ್ನು ಕಚ್ಚಿದ ನಾಯಿ, ಹೃದಯವೇ ಇಲ್ಲದ ಕಟುಕಿಯಂತೆ ನಿಂತಿದ್ಲು ಮಹಿಳೆ !
ಈ ವಿಡಿಯೋ ನೋಡಿದ ಅನೇಕರು ಆಘಾತಗೊಂಡಿದ್ದಾರೆ. ಈ ಪಿಟ್‌ಬುಲ್ ತಳಿಯ ನಾಯಿಯೂ ಬಹಳ ಅಪಾಯಕಾರಿಯಾಗಿದ್ದು, ಸಿಟ್ಟಿಗೆದ್ದರೆ ಸಾಕಿದ ಮಾಲೀಕನ ಮೇಲೆ ದಾಳಿ ಮಾಡಲು ಕೂಡ ಅದು ಹೇಸುವುದಿಲ್ಲ. ಇದನ್ನು ಸಾಕುವುದಕ್ಕೆ ಅನೇಕ ದೇಶಗಳಲ್ಲಿ ನಿಷೇಧ ಹೇರಲಾಗಿದೆ. ಇದರ ಅಪಾಕಾರಿ ವರ್ತನೆಯೇ ಇದಕ್ಕೆ ಕಾರಣ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಅನೇಕರು ಪಿಟ್ಬುಲ್ ನಾಯಿಯನ್ನು ಸಾಕುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಾದರೆ ಏಕೆ ಸಾಕಬೇಕು ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಕೆಲ ಜನರು ಅನಗತ್ಯವಾಗಿ ಶ್ವಾನದ ಮೇಲೆ ಭಾರಿ ಭಾವುಕರಾಗಿರುತ್ತಾರೆ. ಅವುಗಳನ್ನು ಎಲ್ಲಿಡಬೇಕೋ ಅಲ್ಲೇ ಇಡಬೇಕು. ಅವುಗಳಿಂದಾಗಿ ಮತ್ತೊಂದು ಜೀವಕ್ಕೆ ಹಾನಿಯಾಗಬಾರದು ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಝೋಮ್ಯಾಟೋ ಡೆಲಿವರಿ ಬಾಯ್ ಖಾಸಗಿ ಅಂಗ ಕಚ್ಚಿದ ಜರ್ಮನ್ ಶೆಫರ್ಡ್ ಶ್ವಾನ: ಭಯಾನಕ ವಿಡಿಯೋ
ಕೆಲ ದಿನಗಳ ಹಿಂದಷ್ಟೇ ಕೇರಳದಲ್ಲಿ(Kerala) ಕೋಜಿಕೋಡ್‌ನಲ್ಲಿ 7ನೇ ತರಗತಿಯ ಬಾಲಕನ ಮೇಲೆ ಬೀದಿ ನಾಯಿ ಅಮಾನುಷವಾಗಿ ದಾಳಿ ಮಾಡಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದ್ದಂತೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. 12 ವರ್ಷದ ಬಾಲಕನ ಮೇಲೆ ಆತನ ಮನೆ ಮುಂದೆಯೇ ಶ್ವಾನಗಳು ಭಯಾನಕವಾಗಿ ದಾಳಿ ನಡೆಸಿದ್ದವು. ಈ ಬಗ್ಗೆ ನೆಟ್ಟಿಗರೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಇದೇನು ಗಾಡ್ಸ್ ಓನ್ ಕಂಟ್ರಿ ಡಾಗ್ಸ್ ಓನ್ ಕಂಟ್ರಿ ಆಗಿದೆಯೇ ಎಂದು ಪ್ರಶ್ನಿಸಿದ್ದರು. ಅಲ್ಲದೇ ಕೇರಳದಲ್ಲಿ ಕೇವಲ ಈ ವರ್ಷವೊಂದರಲ್ಲೇ ಬೀದಿ ನಾಯಿಗಳ ದಾಳಿಯಿಂದ ಒಂದು ಲಕ್ಷ ಜನ ಗಾಯಗೊಂಡಿದ್ದಾರಂತೆ, ಅಲ್ಲದೇ ಇಲ್ಲಿ ರೇಬಿಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆಯೂ ದಾಖಲೆಯ ಸಂಖ್ಯೆಯಲ್ಲಿದೆ. ಅನೇಕರ ಪಾಲಿಗೆ ರೇಬಿಸ್ ಇಂಜೆಕ್ಷನ್ ಕೆಲಸ ಮಾಡುತ್ತಿಲ್ಲ. ಮನುಷ್ಯರ ಮೇಲೆ ಅಲ್ಲದೇ ಪ್ರಾಣಿಗಳ ಮೇಲೆಯೂ ನಾಯಿಗಳು ದಾಳಿ ಮಾಡುತ್ತಿವೆ. ಇಂತಹ ಶ್ವಾನಗಳನ್ನು ರಕ್ಷಿಸಬೇಕು ಎಂದು ಬೊಬ್ಬೆ ಹೊಡೆಯುತ್ತಿರುವ ಶ್ವಾನಗಳ ಹೋರಾಟಗಾರರಿಗೆ ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.