ವಿನೂತನ ಹೋರಾಟಕ್ಕೆ ಪರಿಸರ ಪ್ರೇಮಿಗಳ ಚಿಂತನೆ 'ಸ್ಮಾಾರ್ಟ್‌ಸಿಟಿ'ಗಾಗಿ ಮರ ಹನನ ತಡೆಗೆ ಅಸ್ತ್ರ ಮರ ಕಡಿಯದಂತೆ ದೈವ ದೇವರಿಗೆ ಮೊರೆ
ಸಂದೀಪ್ ವಾಗ್ಲೆ, ಕನ್ನಡಪ್ರಭ ವಾರ್ತೆ
ಮಂಗಳೂರು(ಮಾ.14): ನಗರೀಕರಣ, ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿದುರುಳಿಸುವುದು ಎಲ್ಲೆಡೆ ಸಾಮಾನ್ಯ. ಈ ವೇಳೆ ಅನಗತ್ಯವಾಗಿ ಮರಗಳನ್ನು ಕಡಿಯುವುದೇ ಹೆಚ್ಚು. ನಿರಂತರವಾಗಿ ಮನವಿ ಮಾಡಿದರೂ ಮರ ಹನನ ಅವ್ಯಾಹತವಾಗಿ ನಡೆಯುತ್ತಿರುವುದರಿಂದ ರೋಸಿ ಹೋಗಿರುವ ಮಂಗಳೂರಿನ (Mangaluru) ಪರಿಸರ ಪ್ರೇಮಿಗಳು ಇದೀಗ ಮರ ಕಡಿಯುವವರ ವಿರುದ್ಧ ದೈವ ದೇವರ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಮರಗಳನ್ನು ಉಳಿಸಲು 'ಅಪ್ಪಿಕೋ ಚಳವಳಿ' ಸೇರಿದಂತೆ ಅನೇಕ ಯಶಸ್ವಿ ಚಳುವಳಿಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಇಂತಹ ಚಳವಳಿಗಳಿಗೆ ಈಗಿನ ಕಾಲಘಟ್ಟದಲ್ಲಿ ಆಡಳಿತ ಯಂತ್ರ ಮಹತ್ವ ನೀಡುವುದು ಕಡಿಮೆಯಾಗಿರುವುದರಿಂದ ಅನಿವಾರ್ಯವಾಗಿ ಈ ಪರಿಸರ ಪ್ರೇಮಿಗಳು ಮರ ಕಟುಕರ ವಿರುದ್ಧ ದೇವರಿಗೇ (God)ಅಹವಾಲು ಸಲ್ಲಿಸಲು ಮುಂದಾಗಿರುವುದು ವಿನೂತನ ರೀತಿಯ ಪ್ರತಿಭಟನೆ.
ಮರ ಉಳಿಸಲೆಂದೇ ಟ್ರೀ ಕಮಿಟಿ: ಪ್ರಸ್ತುತ ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿಗಳಿಗಾಗಿ ಅವ್ಯಾಹತವಾಗಿ ಮರಗಳನ್ನು(Tree) ಕಡಿಯಲಾಗುತ್ತಿದೆ. ರಸ್ತೆಗಳ ಅಗಲೀಕರಣ ನೆಪದಲ್ಲಿ ನೂರಾರು ವರ್ಷಗಳಿಂದ ಬಾಳಿ ಬದುಕಿ ನೆರಳು, ಹೂಹಣ್ಣು ನೀಡಿ ಸಲಹಿದ ಮರಗಳನ್ನು ರಾತ್ರಿ ಹಗಲಾಗುವುದರೊಳಗೆ ಕಡಿದುರುಳಿಸಲಾಗುತ್ತಿದೆ. ಈ ಮರಗಳನ್ನು ಉಳಿಸಲು ಮಂಗಳೂರಿನಲ್ಲಿ 'ಟ್ರೀ ಕಮಿಟಿ' ಎಂಬ ಶಶಿಧರ ಶೆಟ್ಟಿ (Shashidara Shetty) ಮುಂದಾಳತ್ವದ ಪರಿಸರ ಪ್ರೇಮಿಗಳ ತಂಡವೂ ರಚನೆಯಾಗಿದೆ.
Old Banyan Tree ನೆಲಕ್ಕುರಳಿದ 100 ವರ್ಷ ಹಳೆ ಆಲದ ಮರಕ್ಕೆ ಪುನರ್ಜನ್ಮ, ಪರಿಸರ ಪ್ರೇಮಿಗಳ ಕಾರ್ಯಕ್ಕೆ ಮೆಚ್ಚುಗೆ!
ಆದರೆ ಪರಿಸರ ಪ್ರೇಮಿಗಳ ಮನವಿಯನ್ನೂ ಮೀರಿ ಮರಗಳ ಹನನ ಆಗುತ್ತಲೇ ಇದೆ. ಇನ್ನೂ ಬಹಳಷ್ಟು ಕಡೆ ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ. ಈಗಾಗಲೇ ಬಹಳಷ್ಟು ಕಡೆ ಹನನದಿಂದ ಮರಗಳನ್ನು ಪರಿಸರ ಪ್ರೇಮಿಗಳು ರಕ್ಷಿಸಿದ್ದಾರೆ. ಆದರೆ ಇವರು ಚಾಪೆ ಅಡಿಯಲ್ಲಿ ನುಸುಳಿದರೆ ಅಧಿಕಾರಿಗಳು ರಂಗೋಲಿ ಅಡಿ ನುಸುಳಿ ಹಸಿರು ಪದರವನ್ನು ಸರ್ವನಾಶ ಮಾಡುತ್ತಿದ್ದಾಾರೆ. ಅದಕ್ಕಾಗಿಯೇ ಕೊನೆಯ ಹೋರಾಟವಾಗಿ ದೈವ ದೇವರುಗಳ ಮೊರೆ ಹೋಗಲು ಪರಿಸರ ಪ್ರೇಮಿಗಳು ಮುಂದಾಗಿದ್ದಾಾರೆ.
ದೈವ ಮೊರೆ ಹೀಗೆ.
'ಟ್ರೀ ಕಮಿಟಿ' (Tree Committee) ತಂಡವು ಅನಗತ್ಯವಾಗಿ ಕಡಿಯಲು ಉದ್ದೇಶಿಸಿರುವ ಮರಗಳನ್ನು ರಕ್ಷಿಸಿದೆ. ಕೆಲವೆಡೆ ಮರ ಕಡಿಯುವುದಿಲ್ಲ ಎಂದು ಅಧಿಕಾರಿಗಳು ಒಪ್ಪಿದರೂ ನಂತರ ರಾತ್ರೋರಾತ್ರಿ ಮರಗಳನ್ನು ಕಡಿದು ಹಾಕಿದ್ದೂ ನಡೆದಿದೆ. ಮರ ಉಳಿಸುವ ನಮ್ಮ ಪ್ರಯತ್ನ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ಮರ ಕಡಿಯುವವರಿಗೆ ದೇವರೇ ಪಾಠ ಕಲಿಸಲಿ ಎಂದು ಮೊರೆ ಹೋಗುವ ನಿರ್ಧಾರ ಮಾಡಿದ್ದೇವೆ ಎಂದು ಪರಿಸರವಾದಿ, ಸಹ್ಯಾದ್ರಿ ಸಂಚಯ ಸಂಘಟನೆಯ ದಿನೇಶ್ ಹೊಳ್ಳ (Dinesh Holla)ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಅಧಿಕಾರಿಗಳು ನಮ್ಮ ಮನವಿಯನ್ನೂ ಮೀರಿ ಅನಗತ್ಯವಾಗಿ ಮರ ಕಡಿಯಲು ಹಠ ತೊಟ್ಟರೆ ಕರಾವಳಿಯ ಪ್ರಬಲ 'ಕೊರಗಜ್ಜ'ನಿಗೆ ಮೊರೆ ಇಟ್ಟು, 'ಈ ಮರ ಕಡಿಯುವವರನ್ನು ದೈವವೇ ನೋಡಿಕೊಳ್ಳಲಿ’ ಎಂಬ ಬೋರ್ಡ್‌ನ್ನು ಮರಗಳಿಗೆ ಅಳವಡಿಸಲು ಯೋಜಿಸಿದ್ದೇವೆ ಎಂದವರು ಹೇಳಿದ್ದಾರೆ.
ಜಾಗತಿಕ ಸ್ಮಾರ್ಟ್‌ಸಿಟಿ ಸೂಚ್ಯಂಕ: ಭಾರತದ 4 ನಗರಗಳ ಸ್ಥಾನ ಇಳಿಕೆ
ಹಿಂದೆಯೂ ಫಲಿಸಿದ ಅಸ್ತ್ರ:
ಕೆಲವು ತಿಂಗಳ ಹಿಂದೆ ನಗರದ ಜ್ಯೋತಿ ಸರ್ಕಲ್ (Jyothi circle) ಬಳಿ ಇದ್ದ ಬೃಹತ್ ಹಾಲೆ ಮರವನ್ನು ರಸ್ತೆ ಅಗಲೀಕರಣ ನೆಪದಲ್ಲಿ ಕಡಿಯಲು ಅಧಿಕಾರಿಗಳು ಮುಂದಾಗಿದ್ದರು. ಆಗ ಇದೇ ಪರಿಸರ ಪ್ರೇಮಿಗಳು ‘ಈ ಮರ ಕಡಿದವರನ್ನು ಕದ್ರಿ ಮಂಜುನಾಥೇಶ್ವರ (Kadri Manjunateshwara) ನೋಡಿಕೊಳ್ಳಲಿ’ ಎಂಬ ಬೋರ್ಡ್ ಅಳವಡಿಸಿದ್ದರು. ದೇವರಿಗೆ ಮೊರೆಯಿಟ್ಟು ಅಳವಡಿಸಿದ ಬೋರ್ಡ್ ಧನಾತ್ಮಕ ಫಲಿತಾಂಶವನ್ನೇ ನೀಡಿತ್ತು. ಮರ ಕಡಿಯಲು ಮುಂದಾದವರೆಲ್ಲ ಈ ಬೋರ್ಡ್ ನೋಡಿ ಹಿಂಜರಿಕೆಯಿಂದ ಅದನ್ನು ಕಡಿಯುವುದು ಬಿಟ್ಟುಬಿಟ್ಟಿದ್ದಾಾರೆ. ಈಗಲೂ ಆ ಮರ ಹಾಗೆಯೇ ಇದೆ. ಈ ಧನಾತ್ಮಕ ಫಲಿತಾಂಶದ ಹಿನ್ನೆಲೆಯಲ್ಲಿ ಮಗದೊಮ್ಮೆ ಈ ಚಳವಳಿಯನ್ನು ವಿಸ್ತರಿಸುವ ಯೋಚನೆ ಪರಿಸರ ಪ್ರೇಮಿಗಳದ್ದು.
ಜಗತ್ತಿನ ಅನೇಕ ಕಡೆಗಳಲ್ಲಿ ಸ್ಮಾರ್ಟ್ ಸಿಟಿಗಳನ್ನು (Smartcity) ವ್ಯವಸ್ಥಿತವಾಗಿ ಮಾಡಿದ್ದಾರೆ. ಸೂಕ್ತವಾದ ಅಂತರ್ಜಲ ಮರುಪೂರಣ ವ್ಯವಸ್ಥೆ, ಹಸಿರೀಕರಣ, ಒಳಚರಂಡಿ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆದರೆ ಮಂಗಳೂರಿನಲ್ಲಿ ರಸ್ತೆಗಳಿಗೆ ಕಾಂಕ್ರಿಟ್ ಹಾಕುವುದು, ಅನಗತ್ಯವಾಗಿ ಮರಗಳನ್ನು ಕಡಿದು ರಸ್ತೆ ಅಗಲಗೊಳಿಸುವುದೇ ಸ್ಮಾಾರ್ಟ್ ಸಿಟಿ ಎಂದುಕೊಂಡ ಅಧಿಕಾರಿಗಳಿದ್ದಾರೆ. ರಸ್ತೆ ಇಕ್ಕೆಲದ ಚರಂಡಿಗಳಲ್ಲೂ ಮಳೆ ನೀರು ಇಂಗಲು ಅವಕಾಶವಿಲ್ಲದಂತೆ ಕಾಂಕ್ರಿಟ್‌ನಿಂದ ಮುಚ್ಚಿದ್ದಾಾರೆ. ಈಗಾಗಲೇ ಬರಪೀಡಿತ ಎಂದು ಘೋಷಿತವಾಗಿರುವ ದ.ಕ. ಜಿಲ್ಲೆಯನ್ನು ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಇನ್ನಷ್ಟು ಬರಪೀಡಿತವನ್ನಾಗಿ ಮಾಡಲು ಹೊರಟಿದ್ದಾರೆ. ಇಂಥ ಕೃತ್ಯಗಳನ್ನು ಸಾರ್ವಜನಿಕರೂ ವಿರೋಧಿಸಬೇಕು ಎಂದು ದಿನೇಶ್ ಹೊಳ್ಳ ಹೇಳುತ್ತಾರೆ.
ನಗರವನ್ನು ಸ್ಮಾರ್ಟ್ ಸಿಟಿ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಪರಿಸರದ ಬಗ್ಗೆ ಕಾಳಜಿ ಇಲ್ಲದ ಸ್ಮಾರ್ಟ್ ಸಿಟಿ ಯೋಜನೆಗಳು ಭವಿಷ್ಯದಲ್ಲಿ ಮಾರಕವಾಗಿ ಪರಿಣಮಿಸಲಿವೆ. ಮರ ಗಿಡಗಳನ್ನು ಉಳಿಸಿ, ಅಂತರ್ಜಲಕ್ಕೆ (groundwater) ಪೂರಕ ವ್ಯವಸ್ಥೆಗಳನ್ನು ಮಾಡಿ ಸ್ಮಾರ್ಟ್ ಸಿಟಿ ಪರಿಕಲ್ಪನೆ ಜಾರಿಯಾಗಬೇಕು. ಈಗಾಗಲೇ ಮಂಗಳೂರಿನ ಉಷ್ಣಾಾಂಶ 42 ಡಿಗ್ರಿ ಸೆಂಟಿಗ್ರೇಡ್ ದಾಟಿದೆ. ಹಾಗಾಗಿ ಇದ್ದ ಮರಗಳನ್ನು ಉಳಿಸಲು ದೇವರ ಮೊರೆ ಹೋಗಲು ನಿರ್ಧರಿಸಿದ್ದೇವೆ.
ದಿನೇಶ್ ಹೊಳ್ಳ, ಪರಿಸರವಾದಿ
