ಬೆಂಕಿ ಅನಾಹುತ... ಭಯಗೊಂಡು ಓಡುತ್ತಿರುವ ಕುದುರೆಗಳ ವಿಡಿಯೋ ವೈರಲ್
- ಅಮೆರಿಕಾದ ಟೆಕ್ಸಾಸ್‌ನಲ್ಲಿ ಅಗ್ನಿ ಅನಾಹುತ
- 300 ಎಕರೆ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ
- ಬೆಂಕಿಯಿಂದ ತಪ್ಪಿಸಿಕೊಳ್ಳಲು ಓಡುತ್ತಿರುವ ಕುದುರೆಗಳು
ಅಮೆರಿಕ(ಫೆ.17): ಅಮೆರಿಕಾದ ಟೆಕ್ಸಾಸ್‌ನಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಇದರಿಂದ ತಪ್ಪಿಸಿಕೊಳ್ಳಲು ಡಜನ್‌ಗೂ ಹೆಚ್ಚು ಕುದುರೆಗಳು ಸ್ಥಳದಿಂದ ಬೇರೆಡೆಗೆ ಓಡುತ್ತಿರುವುದನ್ನು ಕಾಣಬಹುದು. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟೆಕ್ಸಾಸ್‌ನ ವೆಸ್ಟ್‌ಕೌಂಟಿಯಲ್ಲಿ 300 ಎಕರೆ ಜಾಗದಲ್ಲಿ ಬೆಂಕಿ ಸಂಭವಿಸಿದ್ದು, ಈ ವೇಳೆ ಹೆದರಿದ ಡಜನ್‌ಗೂ ಹೆಚ್ಚು ಕುದುರೆಗಳು ಅಲ್ಲಿಂದ ದೂರ ಓಡುತ್ತಿರುವುದು ಕಂಡು ಬಂದಿದೆ.ಘಟನಾ ಸ್ಥಳದಲ್ಲಿದ್ದ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಜೀವ ಹಾನಿ ಸಂಭವಿಸಿದ್ದ ಬಗ್ಗೆ ವರದಿಯಾಗಿಲ್ಲ.
ಬಿಬಿಸಿ ಶೇರ್ ಮಾಡಿದ ವಿಡಿಯೋದಲ್ಲಿ ಭಾರಿ ಬೆಂಕಿ ಸ್ಥಳವನ್ನು ಆವರಿಸಿರುವುದು ಕಂಡು ಬಂದಿದೆ. ಬೆಂಕಿಯಿಂದ ದಟ್ಟ ಹೊಗೆ ಅವರಿಸಿದ್ದು, ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಕುದುರೆಗಳು ಓಡುತ್ತಿರುವುದು ಕಂಡು ಬಂದಿದೆ. ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ಬೆಂಕಿ ನಂದಿಸುತ್ತಿರುವುದು ಕಂಡು ಬಂದಿದೆ. ಪ್ಯಾರಡೈಸ್ ಫೈರ್ ಡಿಪಾರ್ಟ್‌ಮೆಂಟ್, ಟಾರೆಂಟ್ ಕೌಂಟಿ ಫೈರ್ ಮಾರ್ಷಲ್, ಹಾಗೂ ಫೋರ್ಟ್ ವರ್ತ್ ಫೈರ್ ಡಿಪಾರ್ಟ್‌ಮೆಂಟ್ ಜಂಟಿಯಾಗಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದು, ಈ ಪ್ರದೇಶದಲ್ಲಿ ವಿಮಾನದ ಮೂಲಕ ಅಗ್ನಿ ಶಮನಗೊಳಿಸುವ ದ್ರವವನ್ನು ಹಾಕುವ ಮೂಲಕ ಬೆಂಕಿಯನ್ನು ನಂದಿಸಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಟೆಕ್ಸಾಸ್ ಗವರ್ನರ್ ಕಚೇರಿಯು ಫೆಬ್ರುವರಿ 14 ರಂದು ಅಗ್ನಿ ಅನಾಹುತ ಸಂಭವಿಸುವ ಎಚ್ಚರಿಕೆಯನ್ನು ನೀಡಿತ್ತು. ಪತ್ರಿಕಾ ಪ್ರಕಟಣೆಯಲ್ಲಿ ರಾಷ್ಟ್ರೀಯ ಹವಾಮಾನ ಸೇವೆ (NWS)ಯೂ ಏರುತ್ತಿರುವ ಬಿಸಿಲಿನ ಝಳ ಹಾಗೂ ವಿಪರೀತ ಗಾಳಿಯಿಂದಾಗಿ ಫೆಬ್ರವರಿ 15 ರಂದು ನಿರ್ಣಾಯಕ ಬೆಂಕಿಯ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿತ್ತು. ಅಲ್ಲದೇ ಪ್ಯಾನ್‌ಹ್ಯಾಂಡಲ್, ಪರ್ಮಿಯನ್ ಬೇಸಿನ್, ಪಶ್ಚಿಮ ಟೆಕ್ಸಾಸ್ ಹಾಗೂ ದಕ್ಷಿಣ ಟೆಕ್ಸಾಸ್‌ಗೆ ಈ ವಾರದಲ್ಲಿ ಅಗ್ನಿ ಅನಾಹುತ ಸಂಭವಿಸುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಷ್ಟಪತಿ ಜೊತೆ 2 ದಶಕಗಳ ಕಾಲ ಸೇವೆ ಸಲ್ಲಿಸಿದ ವಿರಾಟ್‌ಗೆ ಭಾವಪೂರ್ಣ ಬೀಳ್ಕೊಡುಗೆ
ಟೆಕ್ಸಾಸ್ ರಾಜ್ಯವು ಹವಾಮಾನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವುದನ್ನು ಮುಂದುವರೆಸಿದೆ ಮತ್ತು ನಮ್ಮ ಸಮುದಾಯಗಳ ಮೇಲೆ ಪರಿಣಾಮ ಬೀರುವ ಯಾವುದೇ ಸಂಭಾವ್ಯ ಕಾಡ್ಗಿಚ್ಚು ಅನಾಹುತವನ್ನು ಎದುರಿಸಲು ಸಂಪೂರ್ಣ ಸಿದ್ಧವಾಗಿದೆ ಎಂದು ಗವರ್ನರ್ ಗ್ರೆಗ್ ಅಬಾಟ್ (Greg Abbott) ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಲೋನ್ ಸ್ಟಾರ್ ಸ್ಟೇಟ್(Lone Star State)ನಾದ್ಯಂತ ಬಲವಾದ ಗಾಳಿ ಮತ್ತು ಹೆಚ್ಚಿದ ಬೆಂಕಿಯ ಅಪಾಯಗಳ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಟೆಕ್ಸಾಸ್ ಜನತೆ ತಮ್ಮ ಪ್ರೀತಿಪಾತ್ರರನ್ನು ಸುರಕ್ಷಿತವಾಗಿರಿಸಲು ಹವಾಮಾನ ಅರಿವು ಮತ್ತು ಹವಾಮಾನ ಇಲಾಖೆಯ ಸ್ಥಳೀಯ ಅಧಿಕಾರಿಗಳು ನೀಡುವ ಮಾರ್ಗದರ್ಶನವನ್ನು ಗಮನಿಸಲು ನಿರ್ದೇಶನ ನೀಡಲಾಗುತ್ತಿದೆ ಎಂದು ಅಬಾಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ರೈಲಿಗೆ ಸ್ಪರ್ಧೆ ನೀಡಿದ ಕುದುರೆ... ಚಲಿಸುತ್ತಿರುವ ರೈಲುಗಳ ಮಧ್ಯೆ ಓಟ: ವಿಡಿಯೋ ವೈರಲ್