ಪಾಕಿಸ್ತಾನದಲ್ಲಿ ಸಿಂದೂ ಉಪನದಿಗಳ ನೀರಿನ ಕೊರತೆಯಿಂದ ಡ್ಯಾಂಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೀರಿನ ಬಿಡುಗಡೆಯಲ್ಲಿ ಶೇ.15ರಷ್ಟು ಇಳಿಕೆಯಾಗಿದ್ದು, ಖಾರಿಫ್‌ ಬೆಳೆಗೆ ನೀರಿನ ಅಭಾವ ಎದುರಾಗುವ ಆತಂಕ ಎದುರಾಗಿದೆ.

ನವದೆಹಲಿ (ಜೂ.9): ಭಾರತದೊಂದಿಗಿನ ಸಂಘರ್ಷ ಪಾಕಿಸ್ತಾನವನ್ನು ನಿರಂತರ ಬಾಯಾರುವಂತೆ ಮಾಡುತ್ತಿದೆ. ಪಹಲ್ಗಾಂ ದಾಳಿಯ ಬಳಿಕ ತಡೆಹಿಡಿಯಲಾಗಿರುವ ಸಿಂದೂ ಉಪನದಿಗಳ ನೀರು ಸಿಗದೆ ಪಾಕಿಸ್ತಾನದ ನದಿಗಳು ಒಣಗತೊಡಗಿವೆ. ಹೀಗಿರುವಾಗ, ಅಲ್ಲಿನ ಡ್ಯಾಂಗಳಿಂದ ಬಿಡುಗಡೆಯಾಗುವ ನೀರಿನ ಪ್ರಮಾಣದಲ್ಲಿ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.15ರಷ್ಟು ಕುಸಿತವಾಗಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಜೂ.5 ರಂದು 1.24 ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.44 ಲಕ್ಷ ಕ್ಯೂಸೆಕ್‌ನಷ್ಟು ನೀರು ಬಿಡಲಾಗಿತ್ತು. ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿರುವ ತರ್ಬೆಲಾ ಅಣೆಕಟ್ಟಿನಲ್ಲಿ ನೀರಿನ ಮಟ್ಟ 1,465 ಮೀ.ಗೆ ಇಳಿದಿದೆ. ಇದರ ಡೆಡ್‌ ಲೆವೆಲ್‌ (ಕನಿಷ್ಠ ಬಿಡುಗಡೆ ಮಾಡಲು ಸಾಧ್ಯವಾಗುವ ನೀರು) 1,402 ಮೀ. ಇದೆ. 638 ಮೀ ಡೆಡ್‌ಲೆವೆಲ್‌ ಇರುವ ಚಶ್ಮಾ ಡ್ಯಾಂನಿಂದ 644 ಮೀ. ನೀರು ಬಿಡುಗಡೆಯಾಗಿದೆ. ಸಿಂದೂ ನದಿಯ ಮೇಲೆ ಅವಲಂಬಿತವಾಗಿರುವ ಅನ್ಯ ಜಲಾಶಯಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.

ಕೃಷಿಗೆ ಸಮಸ್ಯೆ:

ಇದು ಖಾರಿಫ್‌ ಸಾಗುವಳಿಯ ಕಾಲವಾಗಿದ್ದು, ಹೊಲಗದ್ದೆಗಳಿಗೆ ಸಕಾಲಕ್ಕೆ ನೀರು ಸಿಗದಿದ್ದರೆ ಪಾಕಿಸ್ತಾನದ ಕೃಷಿ ಕ್ಷೇತ್ರಕ್ಕೆ ಅಪಾರ ಹಾನಿಯಾಗುತ್ತದೆ. ಆ ದೇಶಕ್ಕೆ ಮುಂಗಾರು ಪ್ರವೇಶವಾಗುವುದು ಇನ್ನೂ ತಡವಾಗಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತದೆ. ಸಾಲದ್ದಕ್ಕೆ, ಜೂ.8ರಿಂದ ಪಾಕಿಸ್ತಾನದಲ್ಲಿ ಉಷ್ಣ ಮಾರುತ ಶುರುವಾಗಲಿದೆ ಎನ್ನಲಾಗಿದೆ.