ಪ್ರಧಾನಿ ಮೋದಿ ವಿರುದ್ಧ ದೂರು ನೀಡಬೇಕೆಂದ ಪಾಕ್ ನಟಿ: ದೆಹಲಿ ಪೊಲೀಸರ ಪ್ರತಿಕ್ರಿಯೆ ವೈರಲ್
ತನ್ನ ದೇಶದಲ್ಲಿ ಅವ್ಯವಸ್ಥೆ ಮತ್ತು ಭಯೋತ್ಪಾದನೆಯನ್ನು ಹರಡುತ್ತಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (R&AW) ವಿರುದ್ಧ ದೂರು ದಾಖಲಿಸಲು ಪಾಕಿಸ್ತಾನ ನಟಿ ಉದ್ದೇಶಿಸಿದ್ದರು.
ಹೊಸದೆಹಲಿ (ಮೇ 10, 2023): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೆಹಲಿ ಪೊಲೀಸರಿಗೆ ದೂರು ದಾಖಲಿಸಲು ಆನ್‌ಲೈನ್ ಲಿಂಕ್ ಬೇಕು ಎಂದು ಪಾಕಿಸ್ತಾನಿ ನಟ ಸೆಹರ್ ಶಿನ್ವಾರಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ಇದಕ್ಕೆ ದೆಹಲಿ ಪೊಲೀಸರು ತಕ್ಕ ಉತ್ತರವನ್ನೂ ನೀಡಿದ್ದಾರೆ. ಇನ್ನು, ನೆಟ್ಟಿಗರು ಸಹ ಆ ನಟಿಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ತನ್ನ ದೇಶದಲ್ಲಿ ಅವ್ಯವಸ್ಥೆ ಮತ್ತು ಭಯೋತ್ಪಾದನೆಯನ್ನು ಹರಡುತ್ತಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (R&AW) ವಿರುದ್ಧ ದೂರು ದಾಖಲಿಸಲು ನಟಿ ಉದ್ದೇಶಿಸಿದ್ದರು ಎಂದು ತಿಳಿದುಬಂದಿದೆ. "ದೆಹಲಿ ಪೊಲೀಸರ ಆನ್‌ಲೈನ್ ಲಿಂಕ್ ಯಾರಿಗಾದರೂ ತಿಳಿದಿದೆಯೇ? ನನ್ನ ದೇಶವಾದ ಪಾಕಿಸ್ತಾನದಲ್ಲಿ ಅವ್ಯವಸ್ಥೆ ಮತ್ತು ಭಯೋತ್ಪಾದನೆಯನ್ನು ಹರಡುತ್ತಿರುವ ಭಾರತದ ಪ್ರಧಾನಿ ಮತ್ತು ಭಾರತೀಯ ಗುಪ್ತಚರ ಸಂಸ್ಥೆ RAW ವಿರುದ್ಧ ನಾನು ದೂರು ಸಲ್ಲಿಸಬೇಕಾಗಿದೆ. ಭಾರತೀಯ ನ್ಯಾಯಾಲಯಗಳು ಮುಕ್ತವಾಗಿದ್ದರೆ (ಅವರು ಹೇಳಿಕೊಳ್ಳುವಂತೆ ), ಭಾರತೀಯ ಸುಪ್ರೀಂ ಕೋರ್ಟ್ ನನಗೆ ನ್ಯಾಯ ಒದಗಿಸಲಿದೆ ಎಂದು ನನಗೆ ಖಾತ್ರಿಯಿದೆ ಎಂದೂ ಪಾಕಿಸ್ತಾನಿ ನಟಿ ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: T20 World Cup: ಭಾರತವನ್ನು ಜಿಂಬಾಬ್ವೆ ಸೋಲಿಸಿದರೆ ನಾನು ಆ ದೇಶದವರನ್ನೇ ಮದುವೆಯಾಗ್ತೀನಿ ಎಂದ ಪಾಕ್ ನಟಿ..!
ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಮಂಗಳವಾರ ಇಸ್ಲಾಮಾಬಾದ್‌ನ ಹೈಕೋರ್ಟ್‌ನಲ್ಲಿ ಭದ್ರತಾ ಪಡೆಗಳು ಬಂಧಿಸಿದ ನಂತರ ಪಾಕಿಸ್ತಾನ ನಟಿ ಈ ಟ್ವೀಟ್ ಮಾಡಿದ್ದಾರೆ. ಇಮ್ರಾನ್ ಖಾನ್ ಬಂಧನದ ನಂತರ, ಪಾಕಿಸ್ತಾನದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದು, ಹಲವರು ಇಮ್ರಾನ್ ಖಾನ್ ಬಿಡುಗಡೆಗಾಗಿ ಆಗ್ರಹಿಸುತ್ತಿದ್ದರು.
ಪಾಕಿಸ್ತಾನಿ ನಟಿಯ ಈ ಟ್ವೀಟ್‌ಗೆ ದೆಹಲಿ ಪೊಲೀಸರು ಬುದ್ಧಿವಂತ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಎಲ್ಲಾ ಸಾಮಾಜಿಕ ಮಾಧ್ಯಮ ಜಾಲತಾಣಗಳನ್ನು ಮುಚ್ಚಿದಾಗ ಟ್ವೀಟ್ ಮಾಡುವುದನ್ನು ಹೇಗೆ ಮುಂದುವರಿಸಬಹುದು ಎಂದೂ ದೆಹಲಿ ಪೊಲೀಸರು ಪ್ರಶ್ನಿಸಿದ್ದಾರೆ. "ಪಾಕಿಸ್ತಾನದಲ್ಲಿ ನಮಗೆ ಇನ್ನೂ ನ್ಯಾಯವಾಪ್ತಿಯಿಲ್ಲ ಎಂದು ನಾವು ಅಂದುಕೊಂಡಿದ್ದೇವೆ. ಆದರೆ, ನಿಮ್ಮ ದೇಶದಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿರುವಾಗ ನೀವು ಹೇಗೆ ಟ್ವೀಟ್ ಮಾಡುತ್ತಿದ್ದೀರಿ ಎಂದು ತಿಳಿಯಲು ಬಯಸುತ್ತೇವೆ!" ಎಂದು ದೆಹಲಿ ಪೊಲೀಸ್ ಹ್ಯಾಂಡಲ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: Breaking: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ
ದೆಹಲಿ ಪೊಲೀಸರ ಈ ಟ್ವೀಟ್‌ಗೆ 3 ಮಿಲಿಯನ್ ವೀಕ್ಷಣೆಗಳು ಮತ್ತು ಸುಮಾರು 50,000 ಲೈಕ್‌ಗಳು ಬಂದಿದ್ದು, ನೆಟ್ಟಿಗರು ನಾನಾ ಪ್ರತಿಕ್ರಿಯೆಗಳನ್ನೂ ನೀಡುತ್ತಿದ್ದಾರೆ. ಅಲ್ಲದೆ, ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಕಳೆದ ವರ್ಷ ಈಕೆ ಟಿ 20 ವಿಶ್ವಕಪ್ ಪಂದ್ಯಾವಳಿ ವೇಳೆಯೂ ಸಿಕ್ಕಾಪಟ್ಟೆ ಟ್ರೋಲ್‌ಗೊಳಗಾಗಿದ್ದಳು. ಭಾರತ - ಜಿಂಬಾಬ್ವೆ ಪಂದ್ಯದಲ್ಲಿ ಜಿಂಬಾಬ್ವೆ ಭಾರತವನ್ನು ಸೋಲಿಸಿದರೆ ನಾನು ಆ ದೇಶದ ವ್ಯಕ್ತಿಯೊಬ್ಬರನ್ನು ಮದುವೆಯಾಗ್ತೀನಿ ಎಂದು ಟ್ವೀಟ್ ಮಾಡಿದ್ದಳು.
ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಕೇಸ್: ತಾನು ನಿರಪರಾಧಿ, ವಿಚಾರಣೆ ಎದುರಿಸಲು ಸಿದ್ಧ ಎಂದ ಅಫ್ತಾಬ್ ಪೂನಾವಾಲ
ನವೆಂಬರ್ 6 ರಂದು ನಡೆಯಲಿರುವ ಭಾರತ - ಜಿಂಬಾಬ್ವೆ ಪಂದ್ಯ ಹಲವರ ಕುತೂಹಲ ಕೆರಳಿಸಿತ್ತು. ಅದಕ್ಕೆ ಕಾರಣ, ಜಿಂಬಾಬ್ವೆ ಪಾಕ್ ತಂಡವನ್ನು ಮಣಿಸಿತ್ತು. ಅಲ್ಲದೆ, ಬಾಂಗ್ಲಾದೇಶ ಹಾಗೂ ಭಾರತ ವಿರುದ್ಧದ ಪಂದ್ಯದಲ್ಲಿ ನಟಿ ಸೆಹರ್ ಶಿನ್ವಾರಿ ಭಾರತ ಸೋಲಲೆಂದು ಆಶಿಸಿ ನಾನಾ ಟ್ವೀಟ್‌ಗಳನ್ನು ಮಾಡಿದ್ದಳು. ಆದರೂ, ಅಂತಿಮವಾಗಿ ಟೀಂ ಇಂಡಿಯಾ ಗೆಲುವು ಸಾಧಿಸಿತು. ನಂತರ ಆಕೆಯ ಈ ಟ್ವೀಟ್ ವೈರಲ್ ಆಗಿದ್ದು, ನೆಟ್ಟಿಗರು ಪಾಕಿಸ್ತಾನ ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ಬರ್ಬರ ಹತ್ಯೆಗೀಡಾದ ದೆಹಲಿ ಕೋರ್ಟ್ ಶೂಟೌಟ್ ಆರೋಪಿ: ಗ್ಯಾಂಗ್‌ಸ್ಟರ್ ದೇಹದ ಮೇಲೆ 92 ಗಾಯದ ಗುರುತು!