Asianet Suvarna News Asianet Suvarna News

ಜೈಲಿನಲ್ಲಿ ಬರ್ಬರ ಹತ್ಯೆಗೀಡಾದ ದೆಹಲಿ ಕೋರ್ಟ್‌ ಶೂಟೌಟ್‌ ಆರೋಪಿ: ಗ್ಯಾಂಗ್‌ಸ್ಟರ್ ದೇಹದ ಮೇಲೆ 92 ಗಾಯದ ಗುರುತು!

ಗ್ಯಾಂಗ್‌ಸ್ಟರ್‌ನನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮತ್ತೋರ್ವ ಖೈದಿ ರೋಹಿತ್ ಕೂಡ ದಾಳಿಯಲ್ಲಿ ಗಾಯಗೊಂಡಿದ್ದು, ಸದ್ಯ ಆತ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

delhi court shootout accused killed in jail body had 92 injury marks ash
Author
First Published May 2, 2023, 7:43 PM IST

ನವದೆಹಲಿ (ಮೇ 2, 2023): ದೆಹಲಿಯ ತಿಹಾರ್ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ವೊಬ್ಬನನ್ನು ಜೈಲಿನಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇಂದು ಬೆಳಗ್ಗೆ ದೆಹಲಿಯ ತಿಹಾರ್ ಜೈಲಿನಲ್ಲಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರು ನಡೆಸಿದ ದಾಳಿಯಲ್ಲಿ ಟಿಲ್ಲು ತಾಜ್‌ಪುರಿಯಾ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಇನ್ನು, ಗ್ಯಾಂಗ್‌ಸ್ಟರ್‌ ಮೃತದೇಹದಲ್ಲಿ 92 ಗಾಯದ ಗುರುತುಗಳಿವೆ ಎಂದು ಪ್ರಾಥಮಿಕ ಶವಪರೀಕ್ಷೆ ವರದಿ ತಿಳಿಸಿದೆ. ಸುನೀಲ್‌ ಮಾನ್ ಅಲಿಯಾಸ್ ಟಿಲ್ಲು ತಾಜ್‌ಪುರಿಯಾನನ್ನು ಗ್ಯಾಂಗ್‌ಸ್ಟರ್‌ ಯೋಗೇಶ್ ತುಂಡಾ ಮತ್ತು ಆತನ ಸಹಾಯಕರು ಹೆಚ್ಚಿನ ಭದ್ರತೆಯ ಜೈಲಿನಲ್ಲಿ ಹರಿತವಾದ ಆಯುಧಗಳಿಂದ ಥಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ಯಾಂಗ್‌ಸ್ಟರ್‌ನನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮತ್ತೋರ್ವ ಖೈದಿ ರೋಹಿತ್ ಕೂಡ ದಾಳಿಯಲ್ಲಿ ಗಾಯಗೊಂಡಿದ್ದು, ಸದ್ಯ ಆತ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಇದನ್ನು ಓದಿ: ಗ್ಯಾಂಗ್‌ಸ್ಟರ್‌ನ ಮತ್ತಷ್ಟು ರಹಸ್ಯ ಬಯಲು: ಅತೀಕ್‌ ಕಚೇರಿಯಲ್ಲಿ ರಕ್ತಸಿಕ್ತ ಚಾಕು, ರಕ್ತದ ಕಲೆಯ ದುಪ್ಪಟ್ಟಾ ಪತ್ತೆ

ಯೋಗೇಶ್ ತುಂಡಾ, ದೀಪಕ್ ತೀತಾರ್, ರಿಯಾಜ್ ಖಾನ್ ಮತ್ತು ರಾಜೇಶ್ ಅವರು ಜೈಲಿನ ಮೊದಲ ಮಹಡಿಯಲ್ಲಿರುವ ಅವರ ವಾರ್ಡ್‌ನ ಕಬ್ಬಿಣದ ಗ್ರಿಲ್‌ಗಳನ್ನು ಮುರಿದಿದ್ದಾರೆ. ಹಾಗೂ, ಅವರು ತಮ್ಮ ಇತರ ಗ್ಯಾಂಗ್ ಸದಸ್ಯರೊಂದಿಗೆ ನೆಲ ಅಂತಸ್ತಿನ ವಾರ್ಡ್‌ನಲ್ಲಿ ಇರಿಸಲಾಗಿದ್ದ ಟಿಲ್ಲು ತಾಜ್‌ಪುರಿಯಾ ಅವರ ಮೇಲೆ ಅದೇ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಸ್ಪರ್ಧಿ ಗೋಗಿ ಗ್ಯಾಂಗ್‌ನ ನಾಲ್ವರು ಸದಸ್ಯರು ನೆಲ ಮಹಡಿಗೆ ಇಳಿಯಲು ಬೆಡ್‌ಶೀಟ್‌ಗಳನ್ನು ಬಳಸಿದ್ದಾರೆ ಎಂದೂ ತಿಳಿದುಬಂದಿದೆ.

2021 ರ ರೋಹಿಣಿ ಕೋರ್ಟ್ ಶೂಟೌಟ್‌ನಲ್ಲಿ ಗ್ಯಾಮಗ್‌ಸ್ಟರ್‌ ಜಿತೇಂದರ್ ಗೋಗಿಯನ್ನು ಹತ್ಯೆ ಮಾಡಿದಾಗ ಟಿಲ್ಲು ತಾಜ್‌ಪುರಿಯಾ ಪ್ರಮುಖ ಸಂಚುಕೋರನಾಗಿದ್ದಾನೆ ಎಂದು ಹೇಳಲಾಗಿದೆ. 2021 ರ ಸೆಪ್ಟೆಂಬರ್ 24 ರಂದು ರೋಹಿಣಿ ನ್ಯಾಯಾಲಯದ ಒಳಗೆ ವಕೀಲರಂತೆ ವೇಷಧರಿಸಿದ ಟಿಲ್ಲು ತಾಜ್‌ಪುರಿಯಾ ಗ್ಯಾಂಗ್‌ನ ಇಬ್ಬರು ಸದಸ್ಯರು ಜಿತೇಂದರ್ ಗೋಗಿಯನ್ನು ಗುಂಡಿಕ್ಕಿ ಕೊಂದರು. ನಂತರ ಪೊಲೀಸರು ನಡೆಸಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಅವರಿಬ್ಬರನ್ನೂ ಹತ್ಯೆ ಮಾಡಿದ್ದರು. 

ಇದನ್ನೂ ಓದಿ: ಅತೀಕ್‌ ಹತ್ಯೆಗೆ ಪ್ರತೀಕಾರದ ಎಚ್ಚರಿಕೆ ನೀಡಿದ ಅಲ್‌ಖೈದಾ: ಗ್ಯಾಂಗ್‌ಸ್ಟರ್‌ನನ್ನು ಹುತಾತ್ಮ ಎಂದ ಉಗ್ರ ಸಂಘಟನೆ

 "ನ್ಯಾಯಾಲಯದೊಳಗೆ ಜಿತೇಂದರ್ ಗೋಗಿಯ ಮೇಲೆ ಇಬ್ಬರು ವಕೀಲರ ವೇಷದಲ್ಲಿ ಗುಂಡು ಹಾರಿಸಿದರು. ಆಗ ಪೊಲೀಸರು ಪ್ರತಿದಾಳಿ ನಡೆಸಿ ಆ ಇಬ್ಬರು ದಾಳಿಕೋರರನ್ನು ಕೊಂದರು. ಇದು ಗ್ಯಾಂಗ್ ವಾರ್ ಅಲ್ಲ" ಎಂದು ಪೊಲೀಸರು ಆ ವೇಳೆ ಮಾಧ್ಯಮಗಳಿಗೆ ತಿಳಿಸಿದ್ದರು.

ಜಿತೇಂದರ್ ಗೋಗಿ ಗ್ಯಾಂಗ್ ಮತ್ತು ಟಿಲ್ಲು ಗ್ಯಾಂಗ್ ನಡುವಿನ ವರ್ಷಗಳ ಪೈಪೋಟಿಯ ಪರಿಣಾಮವೇ ಈ ಶೂಟಿಂಗ್. ಜಿತೇಂದರ್ ಗೋಗಿಯನ್ನು ಕೊಲ್ಲುವ ಸೂಚನೆಯನ್ನು ಟಿಲ್ಲು ತಾಜ್‌ಪುರಿಯ ಫೋನ್‌ನಲ್ಲಿ ನೀಡಿದ್ದ ಎಂದೂ ಪೊಲೀಸರು ತಿಳಿಸಿದ್ದರು. ಇನ್ನು, ಜೈಲಿನಲ್ಲಿ ಹತ್ಯೆಗೀಡಾಗಿರುವ ಟಿಲ್ಲು ತಾಜ್‌ಪುರಿಯ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಅತೀಕ್‌, ಅಶ್ರಫ್‌ ಹತ್ಯೆ ಪ್ರಕರಣದ ದೃಶ್ಯವನ್ನು ಇಂಚಿಂಚಾಗಿ ಮರುಸೃಷ್ಟಿ ಮಾಡಲಿರೋ ಎಸ್‌ಐಟಿ

ತಿಹಾರ್ ಜೈಲಿನಲ್ಲಿ ಒಂದು ತಿಂಗಳಲ್ಲಿ ನಡೆದ ಹಿಂಸಾಚಾರ ಮತ್ತು ಗುಂಪು ಪೈಪೋಟಿಯ ಎರಡನೇ ಪ್ರಕರಣ ಇದಾಗಿದೆ. ಕಳೆದ ತಿಂಗಳು, ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಅವರ ಆಪ್ತ ಸಹಾಯಕ ಪ್ರಿನ್ಸ್ ತೆವಾಟಿಯಾನನ್ನು ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರು ತಿಹಾರ್ ಜೈಲಿನಲ್ಲಿ ಹತ್ಯೆ ಮಾಡಿದ್ದರು. 

ಇದನ್ನೂ ಓದಿ: ದೊಡ್ಡ ಡಾನ್‌ ಆಗಲು ದೊಡ್ಡ ತಲೆಯನ್ನೇ ತೆಗೆಯಬೇಕೆಂದು ಯುಪಿ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಹತ್ಯೆ!

Follow Us:
Download App:
  • android
  • ios