ಪ್ರಧಾನಿ ಮೋದಿಯವರ ಹೇಳಿಕೆಗೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದ್ದು, ದ್ವೇಷ ಭಾಷಣ ಪ್ರಾದೇಶಿಕ ಶಾಂತಿಗೆ ಅಪಾಯಕಾರಿ ಎಂದು ಹೇಳಿದೆ. ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದಿದ್ದಾರೆ.

ನವದೆಹಲಿ (ಮೇ.27): ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಹೇಳಿಕೆಗೆ ಪಾಕಿಸ್ತಾನ ಭಾರೀ ಆಕ್ಷೇಪ ವ್ಯಕ್ತಪಡಿಸಿದೆ. ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿದ್ದು, ಪ್ರಧಾನಿ ಮೋದಿ ಮಾಡಿರುವ ದ್ವೇಷ ಭಾಷಣ ಪರಮಾಣು ಶಕ್ತಿ ಹೊಂದಿರುವ ರಾಷ್ಟ್ರದ ನಾಯಕನಿಗೆ ತಕ್ಕದ್ದಲ್ಲ ಎಂದು ಹೇಳಿದೆ.

ಆಗಿದ್ದೇನೆಂದರೆ, ಸೋಮವಾರ ಗುಜರಾತ್‌ನಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾರತದ ಮೇಲೆ ಕೆಟ್ಟ ಕಣ್ಣು ಹಾಕುವ ಯಾರನ್ನೂ ಯಾವುದೇ ಬೆಲೆ ತೆತ್ತರೂ ಬಿಡುವುದಿಲ್ಲ ಎಂದು ಹೇಳಿದ್ದರು. ಪಾಕಿಸ್ತಾನದ ಜನ ಶಾಂತಿಯುತವಾಗಿ ಬದುಕಬೇಕು. ನಿಮ್ಮ ಪಾಲಿಗೆ ಬಂದ ಅನ್ನವನ್ನು, ರೊಟ್ಟಿಯನ್ನು ತಿಂದು ಬದುಕಬೇಕು. ಭಾರತದ ಮೇಲೆ ಕಣ್ಣು ಹಾಕಲು ಬಂದರೆ, ನಮ್ಮ ಬುಲೆಟ್‌ಗಳು ಯಾವಾಗಲೂ ಸಿದ್ಧ ಇರುತ್ತದೆ' ಎಂದು ಅವರು ಎಚ್ಚರಿಸಿದರು.

ಇದಕ್ಕೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದ್ದು, 'ಮೋದಿಯವರ ಹೇಳಿಕೆ ದ್ವೇಷವನ್ನು ಹರಡುವುದಲ್ಲದೆ ಪ್ರಾದೇಶಿಕ ಶಾಂತಿಗೆ ಅಪಾಯವನ್ನುಂಟುಮಾಡುತ್ತದೆ. ನಾವು ಶಾಂತಿಯನ್ನು ಬಯಸುತ್ತೇವೆ, ಆದರೆ ನಮಗೆ ಬೆದರಿಕೆ ಹಾಕಿದರೆ, ನಾವು ಪ್ರತಿಕ್ರಿಯಿಸುತ್ತೇವೆ' ಎಂದು ಹೇಳಿದೆ.

ಭಾರತ ಸರ್ಕಾರ ಕಾಶ್ಮೀರದ ಗಮನವನ್ನು ಬೇರೆಡೆ ಸೆಳೆಯಲು ಬಯಸುತ್ತಿದೆ: ಪಾಕ್‌ ಆರೋಪ

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯಿಂದ ಗಮನ ಬೇರೆಡೆ ಸೆಳೆಯಲು ಭಾರತ ಸರ್ಕಾರ ಇಂತಹ ಹೇಳಿಕೆಗಳನ್ನು ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಪಾಕಿಸ್ತಾನವನ್ನು ಶಾಂತಿಯ ಬೆಂಬಲಿಗ ಎಂದು ಹೇಳಿಕೊಂಡಿದ್ದು, ವಿಶ್ವಸಂಸ್ಥೆಯ ಕಾರ್ಯಾಚರಣೆಗಳಲ್ಲಿ ಮುಂಚೂಣಿಯಲ್ಲಿದ್ದೇನೆ ಮತ್ತು ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ ಎಂದು ಹೇಳಿದರು.

ಭಾರತವು ಭಯೋತ್ಪಾದನೆಯ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುತ್ತಿದ್ದರೆ, ತನ್ನ ದೇಶದಲ್ಲಿ ಹೆಚ್ಚುತ್ತಿರುವ ಬಹುಸಂಖ್ಯಾತತೆ, ಧಾರ್ಮಿಕ ಅಸಹಿಷ್ಣುತೆ ಮತ್ತು ಅಲ್ಪಸಂಖ್ಯಾತರ ವಿರುದ್ಧದ ಅನ್ಯಾಯದ ಬಗ್ಗೆ ಗಮನ ಹರಿಸಬೇಕು ಎಂದು ಪಾಕಿಸ್ತಾನ ಹೇಳಿದೆ.

ಮಾತುಕತೆಗೆ ಸಿದ್ದ ಎಂದ ಪಾಕ್‌ ಪ್ರಧಾನಿ

ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಸೋಮವಾರ ಭಾರತದೊಂದಿಗೆ ಕಾಶ್ಮೀರ ಮತ್ತು ಜಲ ಭದ್ರತೆಯಂತಹ ವಿಷಯಗಳ ಕುರಿತು ಮಾತುಕತೆ ನಡೆಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಶೆಹಬಾಜ್‌ ಷರೀಫ್ ಇರಾನ್‌ಗೆ ಭೇಟಿ ನೀಡಿದ್ದು, ರಾಜಧಾನಿ ಟೆಹ್ರಾನ್‌ನಲ್ಲಿ ಇರಾನ್ ಅಧ್ಯಕ್ಷ ಮಸೌದ್ ಪಜ್ಕಿಯಾನ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಭಾರತದೊಂದಿಗಿನ ಮಿಲಿಟರಿ ಸಂಘರ್ಷದ ಸಮಯದಲ್ಲಿ ಇರಾನ್ ನೀಡಿದ ಬೆಂಬಲಕ್ಕಾಗಿ ಷರೀಫ್ ಪಜ್ಕಿಯಾನ್ ಅವರಿಗೆ ಧನ್ಯವಾದ ಅರ್ಪಿಸಿದರು. ಎರಡೂ ದೇಶಗಳು ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳನ್ನು ಹೊಂದಿವೆ ಎಂದು ಅವರು ಒತ್ತಿ ಹೇಳಿದರು. ಪಾಕಿಸ್ತಾನದ ಪ್ರಧಾನಿ ಮೇ 25 ರಿಂದ ಮೇ 30 ರವರೆಗೆ ಟರ್ಕಿ, ಇರಾನ್, ಅಜೆರ್ಬೈಜಾನ್ ಮತ್ತು ತಜಿಕಿಸ್ತಾನ್ ಪ್ರವಾಸದಲ್ಲಿದ್ದಾರೆ. ಇಲ್ಲಿ ಅವರು ಭಾರತದೊಂದಿಗಿನ ಉದ್ವಿಗ್ನತೆಯ ಕುರಿತು ಪಾಕಿಸ್ತಾನದ ಪರವಾಗಿ ವಾದ ಮಂಡಿಸಲಿದ್ದಾರೆ. ಮೇ 29-30 ರಂದು ತಜಿಕಿಸ್ತಾನ್‌ನ ರಾಜಧಾನಿ ದುಶಾನ್ಬೆಯಲ್ಲಿ ನಡೆಯಲಿರುವ ಹಿಮನದಿಗಳ ಕುರಿತಾದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿಯೂ ಷರೀಫ್ ಭಾಗವಹಿಸಲಿದ್ದಾರೆ.

ಪಹಲ್ಗಾಮ್ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ನಿಲ್ಲಿಸಿದ ಭಾರತ

ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ 5 ಭಯೋತ್ಪಾದಕರು 26 ಪ್ರವಾಸಿಗರನ್ನು ಗುಂಡಿಕ್ಕಿ ಕೊಂದರು. ಮರುದಿನ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಪಾಕಿಸ್ತಾನಕ್ಕೆ ಪಾಠ ಕಲಿಸಲು ಭಾರತ 5 ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿತು.

ಇದರಲ್ಲಿ, 65 ವರ್ಷಗಳಷ್ಟು ಹಳೆಯದಾದ ಸಿಂಧೂ ಜಲ ಒಪ್ಪಂದವನ್ನು ನಿಲ್ಲಿಸಲಾಯಿತು. ಅಟ್ಟಾರಿ ಚೆಕ್ ಪೋಸ್ಟ್ ಅನ್ನು ಮುಚ್ಚಲಾಯಿತು. ವೀಸಾಗಳನ್ನು ನಿಲ್ಲಿಸಲಾಯಿತು ಮತ್ತು ಹೈಕಮಿಷನರ್‌ಗಳನ್ನು ತೆಗೆದುಹಾಕಲಾಯಿತು. ಇದರ ನಂತರ, ಮೇ 7 ರಂದು, 'ಆಪರೇಷನ್ ಸಿಂದೂರ್' ಅಡಿಯಲ್ಲಿ ಭಾರತವು ವಾಯುದಾಳಿಯಿಂದ ಪಾಕಿಸ್ತಾನದಲ್ಲಿನ ಅನೇಕ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿತು. ಎರಡೂ ದೇಶಗಳ ನಡುವಿನ ಸಂಘರ್ಷ 4 ದಿನಗಳವರೆಗೆ ಮುಂದುವರೆದ ಬಳಿಕ ಕದನ ವಿರಾಮ ಘೋಷಣೆಯಾಗಿತ್ತು.