ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನಕ್ಕೆ 8500 ಕೋಟಿ ರು. ಐಎಂಎಫ್ ಸಾಲ ಕೊಡಿಸಲು ನೆರವಾಗುವ ಷರತ್ತು ಹಾಕಿ ಕದನ ವಿರಾಮಕ್ಕೆ ಒಪ್ಪಿಸಿದರು ಎಂದು ತಿಳಿದು ಬಂದಿದೆ.
ನವದೆಹಲಿ (ಮೇ.11): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನಕ್ಕೆ 8500 ಕೋಟಿ ರು. ಐಎಂಎಫ್ ಸಾಲ ಕೊಡಿಸಲು ನೆರವಾಗುವ ಷರತ್ತು ಹಾಕಿ ಕದನ ವಿರಾಮಕ್ಕೆ ಒಪ್ಪಿಸಿದರು ಎಂದು ತಿಳಿದು ಬಂದಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ಪಾಕ್ ಸ್ಥಿತಿ ಸಂಕಷ್ಟದಲ್ಲಿದೆ. ಹೀಗಾಗಿ ಅದು ಸುಮಾರು 25000 ಕೋಟಿ ರು. ಸಾಲಕ್ಕೆ ಬೇಡಿಕೆ ಇರಿಸಿತ್ತು. ‘ಈ ಪೈಕಿ ಮೊದಲ ಕಂತು 8500 ಕೋಟಿ ರು. ಬಿಡುಗಡೆ ಆಗಬೇಕಾದರೆ ನಾವು ಸಹಾಯ ಮಾಡುತ್ತೇವೆ. ಮೊದಲು ಕದನವಿರಾಮಕ್ಕೆ ಒಪ್ಪಿ’ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್‌ಗೆ ಟ್ರಂಪ್ ಒತ್ತಡ ಹೇರಿದರು ಎನ್ನಲಾಗಿದೆ.
ವಿಧಿಯಿಲ್ಲದೇ ಇದಕ್ಕೆ ಸಮ್ಮತಿಸಿದ ಷರೀಫ್ ಕದನವಿರಾಮಕ್ಕೆ ಸಮ್ಮತಿಸಿದರು ಎನ್ನಲಾಗಿದೆ.ಇದೇ ವೇಳೆ ಇನ್ನೂ ಸುಮಾರು 1.7 ಲಕ್ಷ ರು. ಹಣ ಪಾಕ್‌ಗೆ ಬರಬೇಕಿದೆ. ಉಳಿದ ಹಣ ಪಾಕಿಸ್ತಾನವು ಉಗ್ರವಾದ ಹತ್ತಿಕ್ಕುವ ವಿಚಾರದಲ್ಲಿ ಯಾವ ಅನುಸರಣೆ ತಾಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಮೂಲಗಳು ಹೇಳಿವೆ.
ದಿಲ್ಲಿ ಮೇಲೂ ದಾಳಿಗೆ ಪಾಕ್ ಯತ್ನ: ಇಸ್ಲಾಮಾಬಾದ್ ಮೇಲೆ ಭಾರತದ ದಾಳಿಯನ್ನು ತಡೆಯಲಾಗದೇ ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಪಾಕಿಸ್ತಾನ ಇದಕ್ಕೆ ಪ್ರತಿಯಾಗಿ ನವದೆಹಲಿ ಮೇಲೂ ದಾಳಿಗೆ ಯತ್ನಿಸಿ ವಿಫಲಗೊಂಡ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ನವದೆಹಲಿಯನ್ನು ಗುರಿಯಾಗಿಸಿ ಪಾಕಿಸ್ತಾನದ ಹಾರಿಬಿಟ್ಟ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾರತದ ವಾಯುರಕ್ಷಣಾ ವ್ಯವಸ್ಥೆಗಳು ಪಂಜಾಬ್ ಗಡಿಯಲ್ಲೇ ಹೊಡೆದುರುಳಿಸಿವೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ, ‘ಶನಿವಾರ ನಸುಕಿನ 1.40ಕ್ಕೆ ಪಾಕಿಸ್ತಾನ ಅತಿವೇಗದ ಕ್ಷಿಪಣಿಯನ್ನು ಉಡಾಯಿಸಿತ್ತು. ಪಂಜಾಬ್ ಮೇಲೆ ಇದು ಹಾರಿ ಬರುವಾಗ ಇದನ್ನು ನಾವು ವಾಯುರಕ್ಷಣಾ ವ್ಯವಸ್ಥೆ ಬಳಸಿ ನಿಷ್ಕ್ರಿಯಗೊಳಿಸಿದೆವು’ ಎಂದರು.
ಸಿಂಧು ನದಿ ಒಪ್ಪಂದಕ್ಕೆ ತಡೆ ರದ್ದಿಲ್ಲ: ಪಾಕ್ ಉಗ್ರವಾದ ನಿಲ್ಲಿಸುವವರೆಗೆ ಮುಂದುವರಿಕೆ
ಇದಲ್ಲದೆ, ‘ಪಾಕಿಸ್ತಾನವು ಭಾರೀ ಕ್ಷಮತೆಯ ಕ್ಷಿಪಣಿಗಳನ್ನು ಬಳಸಿ ಶ್ರೀನಗರ, ಅವಂತಿಪುರ ಮತ್ತು ಉಧಂಪುರದಲ್ಲಿನ ವೈದ್ಯಕೀಯ ಘಟಕಗಳ ಮೇಲೆ ದಾಳಿಗೆ ಪ್ರಯತ್ನಿಸಿತ್ತು. ಪಾಕಿಸ್ತಾನದ ಕ್ರಮಗಳಿಗೆ ಸೂಕ್ತ ಉತ್ತರ ನೀಡಲಾಗಿದೆ’ ಎಂದು ಖುರೇಷಿ ಹೇಳಿದರು. ಪಶ್ಚಿಮದ ಗಡಿಯಲ್ಲಿರುವ ಭಾರತದ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನವು ಡ್ರೋನ್‌ಗಳು, ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳು, ಜೆಟ್‌ಗಳನ್ನು ಬಳಸಿದೆ. ಪಾಕಿಸ್ತಾನದ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ, ಭಾರತವು ತಕ್ಕುದಾದ ರೀತಿಯಲ್ಲಿ ಪ್ರತಿಕ್ರಿಯಿಸಿದೆ ಎಂದು ಇದೇ ವೇಳೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾಹಿತಿ ನೀಡಿದ್ದಾರೆ.


