ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಅಮೆರಿಕದ ಅಧಿಕಾರಿಯೊಬ್ಬರು ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿದ್ದಾರೆ.
ನವದೆಹಲಿ: ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಬಲಿ ಪಡೆದ ಭಯೋತ್ಪಾದಕ ದಾಳಿಯಿಂದ ಪಾಕಿಸ್ತಾನದ ಬಣ್ಣ ಜಾಗತಿಕ ಮಟ್ಟದಲ್ಲಿ ಬಯಲಾಗುತ್ತಿದೆ. ಘಟನೆಗೆ ಪ್ರಪಂಚದ ಎಲ್ಲಾ ಪ್ರಮುಖ ರಾಷ್ಟ್ರಗಳ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಈ ನಡುವೆ ಅಮರಿಕಾದ ಅಧಿಕಾರಿಯೊಬ್ಬರು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಅಲ್‌ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿದ್ದಾರೆ.
ಪೆಂಟಗನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್, ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿದ್ದಾರೆ ಮತ್ತು 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಇರುವ ಬಗ್ಗೆ ಅವರು ಟೀಕೆ ಮಾಡಿದ್ದಾರೆ.
ಉಗ್ರ ಒಸಾಮಾ ಬಿನ್ ಲಾಡೆನ್ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ವ್ಯತ್ಯಾಸವೆಂದರೆ ಒಸಾಮಾ ಬಿನ್ ಲಾಡೆನ್ ಗುಹೆಯಲ್ಲಿ ವಾಸಿಸುತ್ತಿದ್ದ ಮತ್ತು ಅಸಿಮ್ ಮುನೀರ್ ಅರಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಅದನ್ನು ಮೀರಿ, ಇಬ್ಬರೂ ಒಂದೇ ಆಗಿದ್ದಾರೆ ಮತ್ತು ಅವರ ಅಂತ್ಯವೂ ಒಂದೇ ಆಗಿರಬೇಕು ಎಂದು ಅಮೇರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಸಹೋದ್ಯೋಗಿಯಾಗಿರುವ ಮೈಕೆಲ್ ರೂಬಿನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಭಯೋತ್ಪಾದನೆಗೆ ಧರ್ಮ ಇಲ್ಲವಂತೆ!
ಪಹಲ್ಗಾಮ್ ದಾಳಿಗೆ ಒಂದೇ ಒಂದು ಪ್ರತಿಕ್ರಿಯೆ ಎಂದರೆ ಪಾಕಿಸ್ತಾನವನ್ನು ಭಯೋತ್ಪಾದನೆಯನ್ನು ಪ್ರಯೋಜಿಸುವ ರಾಷ್ಟ್ರ ಗುರುತಿಸುವುದು ಹಾಗೂ ಅಸಿಮ್ ಮುನೀರ್ ಅವರನ್ನು ಭಯೋತ್ಪಾದಕ ಎಂದು ಅಮೆರಿಕ ಔಪಚಾರಿಕವಾಗಿ ಘೋಷಿಸುವುದು ಎಂದು ಅವರು ಹೇಳಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ದಾಳಿಯೂ ಯಾವುದೇ ಹಠಾತ್ ಆಗಿ ನಡೆದ ಘಟನೆ ಎಂದು ಪಾಕಿಸ್ತಾನ ನೆಪ ಹೇಳಬಾರದು ಎಂದು ವಿವರಿಸಲು ಅವರು lipstick on a pig ಎಂಬ ಗಾದೆಯನ್ನು ಬಳಸಿದರು. (lipstick on a pig ಎಂಬ ಪದದ ಅರ್ಥ ಒಂದು ವಿಚಾರದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸದೆ, ಅದರ ಮೂಲಭೂತ ನ್ಯೂನತೆಗಳನ್ನು ಮರೆಮಾಚುವ ಅಥವಾ ಸುಧಾರಿಸುವ ಪ್ರಯತ್ನದಲ್ಲಿ ಯಾವುದನ್ನಾದರೂ ಮೇಲ್ನೋಟಕ್ಕೆ,ಸೌಂದರ್ಯವರ್ಧಕದಿಂದ ಬದಲಾವಣೆಗಳನ್ನು ಮಾಡುವುದಾಗಿದೆ). ಬಿಲ್ ಕ್ಲಿಂಟನ್ ಭಾರತಕ್ಕೆ ಹೋದಾಗ ಭಯೋತ್ಪಾದಕ ದಾಳಿ ನಡೆದಂತೆ, ಪಾಕಿಸ್ತಾನವು ಈಗ ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಭಾರತ ಪ್ರವಾಸದಿಂದ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿ ದಾಳಿ ಮಾಡಿ ಬಯಸುತ್ತಿದೆ ಎಂದು ತೋರುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಉಗ್ರರ ಗುಂಡಿನ ಗುರಿ ಪ್ರವಾಸಿಗರಷ್ಟೇ ಆಗಿರುವುದಿಲ್ಲ: ರಾಜೇಶ್ ಕಾರ್ಲಾ
ಇತ್ತ ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಜನಪ್ರಿಯ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ದಾಳಿಯಲ್ಲಿ ಸಾವನ್ನಪ್ಪಿದವರ ಶವಗಳು ಅವರ ಊರುಗಳನ್ನು ತಲುಪಿ ಅಂತಿಮ ವಿಧಿವಿಧಾನಗಳನ್ನು ನಡೆಯುತ್ತಿದ್ದರೆ ಇತ್ತ ಈ ಸಾವಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ವಿರುದ್ಧ ಹಲವಾರು ರಾಜತಾಂತ್ರಿಕ ಕ್ರಮಗಳನ್ನು ಘೋಷಿಸಿದೆ. 26 ಪ್ರವಾಸಿಗರನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಭಾರತ ಈಗಾಗಲೇ ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಸ್ಥಗಿತವೂ ಸೇರಿದಂತೆ ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿಗಳಿಗೆ 7 ದಿನಗಳೊಳಗೆ ಭಾರತ ಬಿಟ್ಟು ಹೊರಡುವಂತೆ ಸೂಚಿಸಲಾಗಿದೆ. ಜೊತೆಗೆ ಭಾರತದಲ್ಲಿರುವ ಪಾಕಿಸ್ತಾನಿ ಪ್ರವಾಸಿಗರಿಗೂ 48 ಗಂಟೆಗಳಲ್ಲಿ ದೇಶ ಬಿಡುವಂತೆ ಆದೇಶಿಸಲಾಗಿದೆ. ಇದರ ಜೊತೆ ಅಟ್ಟರಿ ವಾಘಾ ಗಡಿಯನ್ನು ಬಂದ್ ಮಾಡಲಾಗಿದ್ದು, ಭಾರತದ ಜೊತೆ ಇನ್ನು ಮುಂದೆ ಪಾಕಿಸ್ತಾನಕ್ಕೆ ಯಾವುದೇ ಒಳ್ಳೆಯ ಸಂಬಂಧಗಳು ಇರುವುದಿಲ್ಲ. ಇಂಡಸ್ ನದಿ ನೀರು ಒಪ್ಪಂದ ಪಾಕಿಸ್ತಾನದ ಪಾಲಿಗೆ ಬಹಳ ಮಹತ್ವದ್ದಾಗಿದೆ. ಪಾಕಿಸ್ತಾನ ಶೇಕಡಾ 80ರಷ್ಟು ಕೃಷಿ ಈ ನದಿ ನೀರನ್ನು ಅವಲಂಬಿಸಿರುವುದರಿಂದ ಪಾಕಿಸ್ತಾನದ ಮಾಧ್ಯಮಗಳಲ್ಲಿ ಭಾರತದ ಈ ನಿರ್ಧಾರ ಹೆಡ್‌ಲೈನ್‌ಗಳಾಗಿ ಪ್ರಕಟವಾಗಿವೆ.
