ಪ್ರವಾಸೋದ್ಯಮವೇ ಕಾಶ್ಮೀರದ ಆರ್ಥಿಕತೆಯ ಜೀವನಾಡಿ. ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆ ದಿಢೀರ್ ಏರಿಕೆ ಕಂಡಿತ್ತು. 2020ರಲ್ಲಿ 3.5 ದಶಲಕ್ಷ ಮಂದಿ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದರೆ, 2021ರಲ್ಲಿ ಈ ಸಂಖ್ಯೆ 11.3 ದಶಲಕ್ಷ ತಲುಪಿತ್ತು.
- ರಾಜೇಶ್ ಕಾರ್ಲಾ, ಹಿರಿಯ ಪತ್ರಕರ್ತ
ಪಹಲ್ಗಾಮ್‌ನಲ್ಲಿ ನಡೆದ ಹೇಡಿ ಉಗ್ರ ದಾಳಿಯು ಕಾಶ್ಮೀರದಲ್ಲಿ ದುರ್ಲಭವಾದ, ಆದರೂ ಕಷ್ಟಪಟ್ಟು ಸಂಪಾದಿಸಿದ ಶಾಂತಿಗೆ ಮತ್ತೊಮ್ಮೆ ಭಂಗವುಂಟು ಮಾಡಿತು. ಪ್ರವಾಸಿಗರ ಮೇಲಿನ ಶಸ್ತ್ರಸಜ್ಜಿತ ಉಗ್ರರ ದಾಳಿಯಿಂದಾಗಿ ಪ್ರಶಾಂತವಾದ ಮೋಜಿನ ರಜೆಯು ಭಯಾನಕತೆಯ ರೂಪಪಡೆಯಿತು. ಈ ಮೂಲಕ ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿರುವ ನಿರ್ದಿಷ್ಟ ಧರ್ಮದ ಜನರಿಗೆ ಪರೋಕ್ಷವಾದ ಸಂದೇಶವನ್ನು ರವಾನಿಸಲಾಯಿತು. ಅಮಾಯಕ ಜೀವಗಳು ಬಲಿಯಾದವು, ದಾಳಿಯ ರೂವಾರಿಗಳ ಸಂದೇಶ ಮಾತ್ರ ಸ್ಪಷ್ಟವಾಗಿತ್ತು; ಭೀತಿ ಸೃಷ್ಟಿಸುವುದು, ಧ್ರುವೀಕರಣ ಮತ್ತು ಆರ್ಥಿಕ ಹೊಡೆತ.
ಕಾಶ್ಮೀರವು ಪುನರುತ್ಥಾನ ಮತ್ತು ಸುಧಾರಣೆಯ ಹಾದಿಯಲ್ಲಿದ್ದಾಗಲೇ ಈ ಹೀನಾಯ ಕೃತ್ಯ ನಡೆದಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು 2019ರಲ್ಲಿ ರದ್ದುಗೊಳಿಸಿದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಭದ್ರತಾ ವಿಚಾರದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಬದಲಾವಣೆಯಾಗಿತ್ತು. ಇದೀಗ ನಡೆದ ಈ ದಾಳಿಯು ಹಲವು ವರ್ಷಗಳ ಪ್ರಗತಿಯನ್ನು ಅಳಿಸಿಹಾಕುವ ಮತ್ತು ತಮ್ಮ ಬದುಕು ಮರುಕಟ್ಟಿಕೊಳ್ಳಲು ಕಷ್ಟಪಟ್ಟು ಕೆಲಸಮಾಡಿದ ಬಹುಸಂಖ್ಯಾತ ಶಾಂತಿ ಪ್ರಿಯ ಕಾಶ್ಮೀರಿಗರನ್ನು ಶಿಕ್ಷಿಸುವ ಬೆದರಿಕೆಯೊಡ್ಡುತ್ತದೆ.
ಪಹಲ್ಗಾಂ ದುರಂತ: ಪತ್ರಿಕೆ ಓದಿ ಮಗನ ಸಾವಿನ ಸುದ್ದಿ ತಿಳಿದ ತಂದೆ!
ಪ್ರವಾಸೋದ್ಯಮ ಆಧರಿತ ಆರ್ಥಿಕತೆಗೆ ಈಗ ಹಾನಿ: ಪ್ರವಾಸೋದ್ಯಮವೇ ಕಾಶ್ಮೀರದ ಆರ್ಥಿಕತೆಯ ಜೀವನಾಡಿ. ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆ ದಿಢೀರ್ ಏರಿಕೆ ಕಂಡಿತ್ತು. 2020ರಲ್ಲಿ 3.5 ದಶಲಕ್ಷ ಮಂದಿ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದರೆ, 2021ರಲ್ಲಿ ಈ ಸಂಖ್ಯೆ 11.3 ದಶಲಕ್ಷ ತಲುಪಿತ್ತು. 2023ರಲ್ಲಿ ದಾಖಲೆಯ 21.1 ದಶಲಕ್ಷ ಮಂದಿ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದರು. ಭಾರತ ಸ್ವಾತಂತ್ರ್ಯಗೊಂಡ ನಂತರ ಕಾಶ್ಮೀರಕ್ಕೆ ಇಷ್ಟು ಪ್ರಮಾಣದಲ್ಲಿ ಜನ ಭೇಟಿ ಕೊಟ್ಟದ್ದು ಇದೇ ಮೊದಲು. ಪ್ರವಾಸಿಗರ ಸಂಖ್ಯೆಯಲ್ಲಿನ ಈ ಹೆಚ್ಚಳ ಸ್ಥಳೀಯ ವ್ಯಾಪಾರ, ಹೋಟೆಲ್, ಹೌಸ್‌ಬೋಟ್‌ಗಳು, ಟ್ಯಾಕ್ಸಿ ಸೇವೆಗಳು, ಕರಕುಶಲ ವಸ್ತುಗಳ ಮಾರಾಟಗಾರರಿಗೆ ಹೊಸ ಜೀವ ನೀಡಿದರೆ, ಕಾಶ್ಮೀರದಾದ್ಯಂತ ಪ್ರವಾಸಿ ಗೈಡ್‌ಗಳು ಪ್ರವರ್ಧಮಾನಕ್ಕೆ ಬರುವಂತೆ ಮಾಡಿತು.
ಸದ್ಯ ಪ್ರವಾಸೋದ್ಯಮದ ಆದಾಯವು ಜಮ್ಮು ಮತ್ತು ಕಾಶ್ಮೀರದ ಒಟ್ಟು ಜಿಡಿಪಿಯ ಶೇ.8.5ರಷ್ಟಿದೆ, ಕಳೆದ ಕೆಲ ವರ್ಷಗಳ ಹಿಂದೆ ಇದು ಶೇ.7.8ರಷ್ಟಿತ್ತು. ಆದರೆ, ಕೇವಲ ಈ ಒಂದೇ ಒಂದು ಘಟನೆ ಪರಿಸ್ಥಿತಿಯನ್ನು ಬದಲಾಯಿಸಿತು. ಯಾವಾಗ ಉಗ್ರರ ದಾಳಿ ನಡೆಯುತ್ತದೆಯೋ ಆಗ ಪ್ರವಾಸಿಗರು ಕಡಿಮೆಯಾಗುತ್ತಾರೆ. ಪ್ರವಾಸದ ಪ್ಲ್ಯಾನ್ ತಕ್ಷಣದಿಂದಲೇ ರದ್ದು ಮಾಡುತ್ತಾರೆ. ಪ್ರವಾಸಿ ಮಾರ್ಗಸೂಚಿಗಳೂ ಬಿಡುಗಡೆಯಾಗುತ್ತವೆ. ಹೋಟೆಲ್ ಬುಕ್ಕಿಂಗ್ ಕುಸಿಯುತ್ತದೆ, ಪ್ರವಾಸಿಗರಿಂದ ಬರುವ ಆದಾಯದ ಮೇಲೆ ಹೆಚ್ಚು ಅವಲಂಬಿತವಾದ ಈ ಪ್ರದೇಶದಲ್ಲಿ ಇದರಿಂದಾಗುವ ನಷ್ಟ ತ್ವರಿತ ಮತ್ತು ವಿನಾಶಕಾರಿಯಾಗಿರುತ್ತದೆ. ಕಾಶ್ಮೀರ ಕಣಿವೆಯಲ್ಲಿ ಪ್ರಶಾಂತವಾದ ಬೇಸಿಗೆಕಾಲ ಅಂದರೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮತ್ತು ಉದ್ಯಮದಲ್ಲಿ ತೇಜಿ. ಆದರೆ ಉಗ್ರರ ದಾಳಿಯಿಂದಾಗಿ ಕಾಶ್ಮೀರವು ಖಾಲಿ ಶಿಕಾರಾಗಳು(ದಾಲ್ ಸರೋವರದಲ್ಲಿನ ವಿಶಿಷ್ಟ ಮರದ ದೋಣಿ) ಮತ್ತು ಖಾಲಿ ಮಾರುಕಟ್ಟೆಗಳಿಗೆ ಸಾಕ್ಷಿಯಾಗಬೇಕಾಗುತ್ತದೆ.
ಭಯೋತ್ಪಾದನೆಯ ಆರ್ಥಿಕ ಹೊರೆ: ಈ ಕೃತ್ಯ ಮಾನವರಿಗಷ್ಟೇ ಸೀಮಿತವಾಗಿರುವುದಿಲ್ಲ, ಇದು ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಪಹಲ್ಗಾಮ್‌ನ ಹುಲ್ಲುಗಾವಲಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ಕುದುರೆ ಜತೆಗಾರರು ಇನ್ನು ಖಾಲಿ ಕೂರಬೇಕಾಗುತ್ತದೆ. ಪ್ರವಾಸಿಗರಿಗಾಗಿ ಸ್ಟಾಕ್ ಸಂಗ್ರಹಿಸಿಟ್ಟುಕೊಂಡ ಅಂಗಡಿಗಳು ನೊಣ ಹೊಡೆಯಬೇಕಾಗುತ್ತದೆ. ಒಂದೇ ಒಂದು ಭಯೋತ್ಪಾದನಾ ದಾಳಿಯ ಅಡ್ಡಪರಿಣಾಮ ಹತ್ತಾರು ಸಾವಿರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಇದು ಕ್ರೂರ ವ್ಯಂಗ್ಯ: ಆಶ್ರಯ, ಮಾಹಿತಿ ಮತ್ತು ಸೈದ್ಧಾಂತಿಕ ಬೆಂಬಲದ ಮೂಲಕ ಭಯೋತ್ಪಾದನಾ ಸಂಘಟನೆಗಳಿಗೆ ನೆರವು ನೀಡುವ ಕೆಲವೇ ಕೆಲ ಸ್ಥಳೀಯರು ಯಾವುದೇ ಮಹತ್ ಸಾಧನೆಯನ್ನೇನೂ ಮಾಡುವುದಿಲ್ಲ, ಬದಲಾಗಿ ಅವರದ್ದೇ ಜನರ ಜೀವನೋಪಾಯವನ್ನೇ ಹಾಳು ಮಾಡುತ್ತಾರೆ. ಯಾರ ಜತೆಗಿದ್ದೇವೆಯೋ ಅದೇ ಸಮುದಾಯದಕ್ಕೆ ಹಾನಿ ಮಾಡುತ್ತಾರೆ. ಉಗ್ರರು ಹಾರಿಸುವ ಗುಂಡಿನ ಗುರಿ ಮೇಲ್ನೋಟಕ್ಕೆ ಪ್ರವಾಸಿಗರಷ್ಟೇ ಆಗಿರಬಹುದು. ಆದರೆ ಅದು ಗೈಡ್‌ಗಳ ಆದಾಯ, ವಿದ್ಯಾರ್ಥಿಗಳಿಗೆ ಶಾಂತಿಯಿಂದ ಓದುವ ಅವಕಾಶ ಮತ್ತು ಉತ್ತಮ ಕಾಶ್ಮೀರದಲ್ಲಿ ಜೀವಿಸಬೇಕೆನ್ನುವ ಮಗುವೊಂದರ ಭವಿಷ್ಯವನ್ನೂ ಬಲಿಪಡೆಯುತ್ತದೆ.
ಕಣಿವೆಯ ಮರುನಿರ್ಮಾಣ ಕಾರ್ಯಕ್ಕೀಗ ರಿಸ್ಕ್: 2019ರ ಬಳಿಕ ಕಾಶ್ಮೀರದಲ್ಲಿ ಕಂಡ ಪ್ರಗತಿಯನ್ನು ತಳ್ಳಿಹಾಕಲು ಸಾಧ್ಯವೇ ಇಲ್ಲ. ಕಣಿವೆಯಲ್ಲಿ ಹಲವು ಕಾಲೇಜುಗಳು ಮತ್ತು ಶಾಲೆಗಳು ತೆರೆದವು, ಏಮ್ಸ್ ಜಮ್ಮು, ಐಐಎಂ ಜಮ್ಮುವಿನ ಶ್ರೀನಗರ ಕ್ಯಾಂಪಸ್ ಮತ್ತು ಹೊಸ ಮೆಡಿಕಲ್ ಕಾಲೇಜುಗಳು ಉನ್ನತ ಶಿಕ್ಷಣ, ಆರೋಗ್ಯಸೇವೆಗೆ ಅವಕಾಶಗಳ ಬಾಗಿಲು ತೆರೆದವು. ಚೀನಾಬ್ ರೈಲ್ವೆ ಬ್ರಿಡ್ಜ್ ಮತ್ತು ಹೊಸ ಸುರಂಗ ಮಾರ್ಗಗಳು ಸಂಪರ್ಕ, ಆರ್ಥಿಕ ಅವಕಾಶಗಳು ಹಾಗೂ ಹೊಸ ಭರವಸೆಯನ್ನು ಸೃಷ್ಟಿಸಿದವು. ಇದರ ಜತೆಗೆ, ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಇತರೆ ಭಾಗಗಳೊಂದಿಗೆ ಸಂಪರ್ಕಿಸುವ ರೈಲ್ವೆ ಲಿಂಕ್ ಪೂರ್ಣಗೊಂಡ ಬಳಿಕ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪರಿಚಯಿಸಲು ಭಾರತೀಯ ರೈಲು ಸಿದ್ಧತೆ ನಡೆಸುತ್ತಿದೆ. ಬುಲೆಟ್ ರೈಲು ಯೋಜನೆಗಾಗಿ ರೈಲುಗಾಡಿಯ ಖರೀದಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ಮೊದಲ ಬಾರಿಗೆ ಕಾಶ್ಮೀರಕ್ಕೆ ವಿದೇಶಿ ಹೂಡಿಕೆ ಪ್ರವೇಶಿಸಿದೆ. ದುಬೈನ ಎಮ್ಮಾರ್ ಗ್ರೂಪ್‌ನಂಥ ಅಂತಾರಾಷ್ಟ್ರೀಯ ಸಂಸ್ಥೆಗಳು ಮಾಲ್‌ಗಳು ಹಾಗೂ ಐಟಿ ಮೂಲಸೌಲಭ್ಯಗಳಲ್ಲಿ ಹೂಡಿಕೆ ಮಾಡುತ್ತಿದೆ. ಇವೆಲ್ಲ ಕೇವಲ ಆರ್ಥಿಕ ಸೂಚ್ಯಂಕಗಳಲ್ಲ, ಬದಲಾಗಿ ಕಾಶ್ಮೀರದ ಸಾಮರ್ಥ್ಯದ ಮೇಲಿನ ಬದಲಾದ ನಂಬಿಕೆಯ ಸಂಕೇತಗಳಾಗಿವೆ. ಆದರೆ ಭಯೋತ್ಪಾದನೆ ಈ ನಂಬಿಕೆಗೇ ಕೊಡಲಿಯೇಟು ನೀಡಲು ಯತ್ನಿಸುತ್ತಿದೆ. ಪಹಲ್ಗಾವ್ ದಾಳಿ ಕೇವಲ ಅಮಾಯಕ ಪ್ರವಾಸಿಗರ ಮೇಲಿನ ದಾಳಿಯಲ್ಲ, ಬದಲಾಗಿ ಶಾಂತಿಯುತ, ಆಧುನಿಕ ಮತ್ತು ಸಮೃದ್ಧ ಕಾಶ್ಮೀರದ ಚಿಂತನೆಯ ಮೇಲಿನ ದಾಳಿಯಾಗಿದೆ. ಇದರ ಗುರಿ ಕಣಿವೆ ಪ್ರದೇಶವನ್ನು ವಾಪಸ್ ಕತ್ತಲ ಕೂಪಕ್ಕೆ ತಳ್ಳುವುದಷ್ಟೇ ಅಲ್ಲದೆ, ಪ್ರವಾಸಿಗರರ ಜತೆಗೆ ಹೂಡಿಕೆದಾರರು, ಶಿಕ್ಷಣ ನೀಡುವವರು ಮತ್ತು ಸುಧಾರಣಾವಾದಿಗಳನ್ನೂ ಬೆದರಿಸುವುದಾಗಿದೆ.
ಸೂತ್ರಧಾರಿಗಳು ಮತ್ತು ಬೆಂಬಲ ನೀಡುವವರು: ಈ ಘಟನೆ ಹಿಂಸಾಚಾರದ ಒಂದು ಪ್ರತ್ಯೇಕ ಘಟನೆಯಲ್ಲ, ಬದಲಾಗಿ ಗಡಿಯಾಚೆಗಿನ ಸರ್ಕಾರಿ ಪ್ರಾಯೋಜಿತ ಹಿಂಸಾಚಾರದ ವಿಸ್ತೃತ ಸಂಚಿನ ಭಾಗವಾಗಿದೆ. ತಮ್ಮ ಆಂತರಿಕ ವೈಫಲ್ಯಗಳನ್ನು ಮುಚ್ಚಿಹಾಕಲು ಕೆಲ ವ್ಯಕ್ತಿಗಳು ಹಿಂದಿನಿಂದಲೂ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಒಂದು ಸಾಧನವಾಗಿ ಬಳಸಿಕೊಳ್ಳುತ್ತಿದ್ದಾರೆ. ಭಯೋತ್ಪಾದನಾ ಸಂಘಟನೆಗಳಿಗೆ ಭಾರತದ ಹೊರಗಿನಿಂದ ಬೆಂಬಲ ಮತ್ತು ಶಸ್ತ್ರಾಸ್ತ್ರಗಳನ್ನು ನೀಡಲಾಗುತ್ತದೆ. ಕಣಿವೆ ರಾಜ್ಯದಲ್ಲಿ ಶಾಂತಿಯನ್ನು ಅಸ್ಥಿರಗೊಳಿಸುವುದೇ ಅವರ ಉದ್ದೇಶವಾಗಿದೆ. ಕಾಶ್ಮೀರದೊಳಗಿರುವ ಭಯೋತ್ಪಾದಕರ ಸಹಾನುಭೂತಿದಾರರು ಒಂದು ವಿಚಾರ ಅರ್ಥ ಮಾಡಿಕೊಳ್ಳಬೇಕು: ಅವರು ಯಾವುದೇ ಉದ್ದೇಶಕ್ಕಾಗಿ ಹೋರಾಡುವುದಿಲ್ಲ, ಅವರು ತಮ್ಮದೇ ಜನರಿಗೆ ಹಾನಿ ಮಾಡುತ್ತಿದ್ದಾರೆ. ಪ್ರತಿ ಬಾರಿಯೂ ಅವರು ಉಗ್ರರಿಗೆ ನೆರವು ನೀಡಿದಾಗ, ಅವರು ಅಭಿವೃದ್ಧಿ, ಶಾಂತಿಯಿಂದ ಮುನ್ನಡೆಯುತ್ತಿರುವ ಕಾಶ್ಮೀರವನ್ನು ಹಿಂದಕ್ಕೆ ತಳ್ಳುತ್ತಿರುತ್ತಾರೆ.
ನೀನು ಮುಸ್ಲಿಮಾ ಅಂತ ಕೇಳಿದರು, ಇಲ್ಲ ಎನ್ನುತ್ತಿದ್ದಂತೆ ಗುಂಡಿಕ್ಕಿದರು: ಬೆಂಗಳೂರಿನ ಭರತ್ ಅತ್ತೆ ಕಣ್ಣೀರು
ಸವಾಲು ಮತ್ತು ಸಂಕಲ್ಪ: ಈ ನೋವಿನ ನಡುವೆಯೂ ದೃಢವಾದ ಸಂಕಲ್ಪವೊಂದು ಹೆಚ್ಚುತ್ತಿದೆ. ಸ್ಥಳೀಯ ಧ್ವನಿಗಳು ಒಟ್ಟಾಗಿ ದಾಳಿಯನ್ನು ಖಂಡಿಸುತ್ತಿವೆ. ಕಾಶ್ಮೀರದ ಜನ ಸಹಜಸ್ಥಿತಿಗೆ ಮರಳಬೇಕೆಂದು ಬಯಸುತ್ತಾರೆಯೇ ಹೊರತು ಹಿಂದಿನಂತೆ ಹಿಂಸಾಚಾರಕ್ಕೆ ತಿರುಗಬೇಕೆಂದಲ್ಲ. ಅವರಿಗೆ ಕೆಲಸ, ಶಾಲೆಗಳು, ಪ್ರವಾಸಿಗರು, ಉದ್ಯಮಗಳು ಬೇಕೇ ಹೊರತು ಕರ್ಫ್ಯೂಗಳು, ದಾಳಿಗಳು ಮತ್ತು ಸೈರನ್‌ಗಳಲ್ಲ. ಸರ್ಕಾರವು ಭದ್ರತಾ ಕಾರ್ಯಾಚರಣೆ ಮೂಲಕವಷ್ಟೇ ಅಲ್ಲದೆ, ಅಭಿವೃದ್ಧಿಯ ಪ್ರಯತ್ನಗಳ ಭರವಸೆಗಳ ಮೂಲಕವೂ ಪ್ರತಿಕ್ರಿಯಿಸಬೇಕು. ಶಾಲೆಗಳ ನಿರ್ಮಾಣ ಮುಂದುವರಿಸಬೇಕು, ಉದ್ದಿಮೆಗಳನ್ನು ಆರಂಭಿಸಬೇಕು, ಕಾಶ್ಮೀರ ಕಣಿವೆಯನ್ನು ವಿಶ್ವದೊಂದಿಗೆ ಜೋಡಿಸಬೇಕು. ಯಾಕೆಂದರೆ ಭಯೋತ್ಪಾದನೆಗೆ ಪ್ರಗತಿಯೇ ಪ್ರಬಲವಾದ ಪ್ರತಿಕ್ರಿಯೆಯಾಗಿದೆ.
