ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಾಂತ್ವನ ಹೇಳಿದರು. ದುರಂತದಲ್ಲಿ ಮಡಿದವರಿಗೆ ಅಂತಿಮ ನಮನ ಸಲ್ಲಿಸಿದ ಸಚಿವರು, ದಾಳಿಗೆ ಕಾರಣರಾದ ಒಬ್ಬರನ್ನು ಕೂಡ ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ನವದೆಹಲಿ: ನಿನ್ನೆ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಪ್ರವಾಸಿಗರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ನೋಡುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತಂತಹ ಘಟನೆ ನಡೆಯಿತು. ಬಹುತೇಕರು ತಮ್ಮ ಬದುಕಿನ ಖುಷಿಯ ಆಚರಣೆಗಾಗಿ ಭಾರತದ ಸ್ವಿಡ್ಜರ್ಲೆಂಡ್‌ ಎನಿಸಿರುವ ಪಹಲ್ಗಾಮ್‌ಗೆ ಪ್ರವಾಸ ಕೈಗೊಂಡಿದ್ದರು. ಆದರೆ ಅವರಾರಿಗೂ ಕೂಡ ಅದು ತಮ್ಮ ಬದುಕಿನ ದುರಂತ ಕ್ಷಣ ಅದು ಆಗಬಹುದು ಎಂಬ ಸಣ್ಣ ಊಹೆಯೂ ಇರಲಿಲ್ಲ, 7 ದಿನಗಳ ಹಿಂದಷ್ಟೇ ಮದುವೆಯಾದವರು, 2 ತಿಂಗಳಷ್ಟೇ ಮದುವೆಯಾದವರು, ಮಗನ ಶೈಕ್ಷಣಿಕ ಫಲಿತಾಂಶ ಬಂದ ಖುಷಿ ಆಚರಿಸಲು ಹೋದವರು ಹೀಗೆ ಅಲ್ಲಿಗೆ ಪತಿ ಮಕ್ಕಳೊಂದಿಗೆ ತೆರಳಿದ್ದ ಬಹುತೇಕ ಹೆಣ್ಣು ಮಕ್ಕಳು ಕ್ಷಣಗಳಲ್ಲಿ ವಿಧವೆಯರಾಗಿದ್ದು, ಗೃಹ ಸಚಿವರನ್ನು ನೋಡುತ್ತಿದ್ದಂತೆ ಅವರು ಕಣ್ಣೀರ ಕಟ್ಟೆಯೊಡೆಯಿತು. ತಮ್ಮವರ ಸಾವಿಗೆ ನ್ಯಾಯ ನೀಡುವಂತೆ ಅವರು ಗೃಹಸಚಿವರಿಗೆ ಕಣ್ಣೀರಿಡುತ್ತಲೇ ಮನವಿ ಮಾಡಿದರು. 

Scroll to load tweet…

ಘಟನೆಯಲ್ಲಿ ಮಡಿದವರಿಗೆ ಅಂತಿಮ ನಮನ ಸಲ್ಲಿಸಿದ ಸಚಿವರು ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡವರನ್ನು ಭೇಟಿಯಾದರು. ದಾಳಿಯಲ್ಲಿ ಬದುಕುಳಿದವರನ್ನು ಭೇಟಿಯಾದ ಅಮಿತ್ ಷಾ ಅವರ ನೋವಿನ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದರು. ಅವರಿಗೆ ಸಾಂತ್ವಾನ ಹೇಳಿದ ಗೃಹ ಸಚಿವ ಅಮಿತ್ ಷಾ ಈ ದುರಂತಕ್ಕೆ ಕಾರಣರಾದ ಒಬ್ಬರನ್ನು ಕೂಡ ಸುಮ್ಮನೇ ಬಿಡುವುದಿಲ್ಲ ಎಂದು ಸಂತ್ರಸ್ತರಿಗೆ ಭರವಸೆ ನೀಡಿದರು. 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದಾಗಿದೆ. ಭಾರತದ ಸ್ವಿಜರ್ಲೆಂಡ್ ಎಂದೇ ಕರೆಯಲ್ಪಡುವ ಕಾಶ್ಮೀರದ ಸುಂದರ ಸ್ಥಳಗಳಲ್ಲಿ ಒಂದಾದ ಪಹಲ್ಗಾಮ್‌ನ ಸುಂದರವಾದ ಬೈಸರನ್ ಹುಲ್ಲುಗಾವಲಿನಲ್ಲಿ ಈ ದಾಳಿ ನಡೆದಿದೆ. ಪ್ರವಾಸೋದ್ಯಮವೇ ಇಲ್ಲಿನ ಸ್ಥಳೀಯರ ಜೀವನಾಡಿ. ಆದರೆ ಭಯೋತ್ಪಾದಕರು ಪ್ರವಾಸಿಗರನ್ನೇ ಗುರಿಯಾಗಿಸಿ ಈ ಆಕ್ರಮಣ ನಡೆಸಿದ್ದಾರೆ. 

Scroll to load tweet…

ಇಂದು ಅಮಿತ್ ಷಾ ಅವರು, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಡಿಜಿಪಿ ನಳಿನ್ ಪ್ರಭಾತ್ ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ನಡೆಸಿದ್ದಾರೆ. ದುರಂತದಲ್ಲಿ ಮೃತರಾದವರ ಶವಗಳನ್ನು ಇಂದು ಮುಂಜಾನೆ ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ತರಲಾಯಿತು ಮತ್ತು ನಂತರ ಪೊಲೀಸ್ ನಿಯಂತ್ರಣ ಕೊಠಡಿಗೆ ಸಾಗಿಸಲಾಯಿತು. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಕೂಡ ಮೃತರಿಗೆ ಪುಷ್ಪ ನಮನ ಸಲ್ಲಿಸಿದರು. 

ಈ ದಾಳಿ ಖಂಡಿಸಿ ಕಾಶ್ಮೀರ ಕಣಿವೆಯಾದ್ಯಂತ ರಾಜಕೀಯ ಪಕ್ಷಗಳು ಮತ್ತು ವ್ಯಾಪಾರಿ ಸಂಘಗಳು ಬುಧವಾರ ಸಂಪೂರ್ಣ ಬಂದ್ ಆಚರಿಸಿದ್ದು, ಸಂತ್ರಸ್ತರಿಗೆ ಬೆಂಬಲ ಸೂಚಿಸಿ ಮತ್ತು ತಮ್ಮ ನಾಡಿನಲ್ಲಾದ ರಕ್ತಪಾತವನ್ನು ಖಂಡಿಸಿದ್ದಾರೆ. ಭಾರತೀಯ ಸೇನೆ ಮತ್ತು ಜೆ & ಕೆ ಪೊಲೀಸರು ಬೈಸರನ್ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಉಗ್ರರಿಗಾಗಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಈಗಾಗಲೇ ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರನ್ನು ಸದೆಬಡಿಯಲಾಗಿದೆ.

ಇದನ್ನೂ ಓದಿ: ಮೋದಿಯನ್ನು ಬೆಂಬಲಿಸುವಿರಾ ಎಂದು ಕೇಳಿ ಟೆಂಟ್‌ನಿಂದ ಎಳೆದು ಗುಂಡಿಕ್ಕಿದರು

ಇದನ್ನೂ ಓದಿ:ಕಣ್ಣೆದುರೇ ಭಗ್ನಗೊಂಡ ಕನಸು: ಮೇ.1ರಂದು 27ನೇ ಹುಟ್ಟುಹಬ್ಬ ಆಚರಿಸಬೇಕಿದ್ದ ಲೆಫ್ಟಿನೆಂಟ್

ಇದನ್ನೂ ಓದಿ: ಹಿಂದೂ ಗಂಡಸರೇ ಟಾರ್ಗೆಟ್‌: TCS ಉದ್ಯೋಗಿ US ಟೆಕ್ಕಿ, IB ಅಧಿಕಾರಿಯೂ ಪಹಲ್ಗಾಮ್‌ ದಾಳಿಗೆ ಬಲಿ