ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದ ನೌಕಾಪಡೆಯ ಲೆಫ್ಟಿನೆಂಟ್ 26 ವರ್ಷದ ವಿನಯ್ ನರ್ವಾಲ್ ಅವರು ತಮ್ಮ ವೀಸಾ ಸಮಸ್ಯೆಯಿಂದಾಗಿ ಕೊನೆ ಗಳಿಗೆಯಲ್ಲಿ ಜಮ್ಮುಕಾಶ್ಮೀರದ ಪಹಲ್ಗಾಮ್‌ಗೆ ಭೇಟಿ ನೀಡಿದ್ದರು. ಒಂದು ವೇಳೆ ಅವರ ವೀಸಾಗೆ ಅಡ್ಡಿಯಾಗದೇ ಇದ್ದಿದ್ದಲ್ಲಿ ಅವರು ಪತ್ನಿಯೊಂದಿಗೆ ಯುರೋಪ್ ಪ್ರವಾಸ ಮಾಡುವವರಿದ್ದರು. ಆದರೆ ವಿಧಿ ಬೇರೆಯೇ ಕತೆ ಬರೆದಿತ್ತು.
ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದ ನೌಕಾಪಡೆಯ ಲೆಫ್ಟಿನೆಂಟ್ 26 ವರ್ಷದ ವಿನಯ್ ನರ್ವಾಲ್ ಅವರು ತಮ್ಮ ವೀಸಾ ಸಮಸ್ಯೆಯಿಂದಾಗಿ ಕೊನೆ ಗಳಿಗೆಯಲ್ಲಿ ಜಮ್ಮುಕಾಶ್ಮೀರದ ಪಹಲ್ಗಾಮ್‌ಗೆ ಭೇಟಿ ನೀಡಿದ್ದರು. ಒಂದು ವೇಳೆ ಅವರ ವೀಸಾಗೆ ಅಡ್ಡಿಯಾಗದೇ ಇದ್ದಿದ್ದಲ್ಲಿ ಅವರು ಪತ್ನಿಯೊಂದಿಗೆ ಯುರೋಪ್ ಪ್ರವಾಸ ಮಾಡುವವರಿದ್ದರು. ಆದರೆ ವಿಧಿ ಬೇರೆಯೇ ಕತೆ ಬರೆದಿತ್ತು. ವೀಸಾ ಸಮಸ್ಯೆಯಿಂದಾಗಿ ಅವರ ವಿದೇಶ ಪ್ರವಾಸ ರದ್ದಾಗಿ ಜಮ್ಮು ಕಾಶ್ಮೀರದ ಪಹಲ್ಗಾಮ್‌ಗೆ ಬಂದ ಅವರು ಅಲ್ಲೇ ಉಸಿರು ಚೆಲ್ಲಿದ್ದಾರೆ. ಹರ್ಯಾಣದ ಕರ್ನಾಲ್‌ನವರಾದ ವಿನಯ್ ಕೇವಲ 7 ದಿನಗಳ ಹಿಂದಷ್ಟೇ ಹಿಮಾಂಶಿ ನರ್ವಾಲ್ ಅವರನ್ನು ಮದುವೆಯಾಗಿದ್ದರೂ ಹನಿಮೂನ್‌ಗಾಗಿ ಏಪ್ರಿಲ್ 21ರ ಸೋಮವಾರ ಅವರು ಪಹಲ್ಗಾಮ್‌ಗೆ ಬಂದಿದ್ದರು.ಈ ಭಯೋತ್ಪಾದಕ ದಾಳಿಯಲ್ಲಿ ಹಿಮಾಂಶಿ ನರ್ವಾಲ್ ಬದುಕುಳಿದಿದ್ದು, ಕಣ್ಣ ಎದುರೇ ನಡೆದ ಭಯಾನಕ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.
ನಾನು ನನ್ನ ಪತಿಯೊಂದಿಗೆ ಭೇಲ್ ಪುರಿ ತಿನ್ನುತ್ತಿದ್ದಾಗ ಒಬ್ಬ ವ್ಯಕ್ತಿ ಬಂದು ನನ್ನ ಪತಿ ಮುಸ್ಲಿಂ ಅಲ್ಲ ಎಂದು ಹೇಳಿ ಗುಂಡು ಹಾರಿಸಿದನು ಎಂದು ಹಿಮಾಂಶಿ ಹೇಳುತ್ತಿರುವ ವೀಡಿಯೊವೊಂದು ಈಗ ವೈರಲ್ ಆಗಿದೆ. ಮಂಗಳವಾರ ಸಂಜೆ ಘಟನೆಯ ಬಗ್ಗೆ ವಿನಯ್ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದಾರೆ. ಅವರ ಮೃತದೇಹವನ್ನು ಇಂದು ಕರ್ನಾಲ್‌ಗೆ ತರಲಾಗುವುದು ಎಂದು ನಿರೀಕ್ಷಿಸಲಾಗಿದೆ. ಮೂಲತಃ ಕರ್ನಾಲ್‌ನ ಭುಸ್ಲಿ ಗ್ರಾಮದವರಾದ ವಿನಯ್ ಅವರ ಕುಟುಂಬ ಅಲ್ಲಿನ ಸೆಕ್ಟರ್ 7ರಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ:ಹಿಂದೂ ಗಂಡಸರೇ ಟಾರ್ಗೆಟ್: TCS ಉದ್ಯೋಗಿ US ಟೆಕ್ಕಿ, IB ಅಧಿಕಾರಿಯೂ ಪಹಲ್ಗಾಮ್ ದಾಳಿಗೆ ಬಲಿ
ಎಂಜಿನಿಯರಿಂಗ್ ಪದವೀಧರರಾಗಿದ್ದ ವಿನಯ್ ನರ್ವಾಲ್ ಮೂರು ವರ್ಷಗಳ ಹಿಂದಷ್ಟೇ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಆಗಿ ಸೇರಿದ್ದರು ಅವರನ್ನು ಕೇರಳದ ಕೊಚ್ಚಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ವಿನಯ್ ಅವರ ತಂದೆ ರಾಜೇಶ್ ಕುಮಾರ್, ಪಾಣಿಪತ್‌ನಲ್ಲಿ ಕಸ್ಟಮ್ಸ್ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಅಜ್ಜ ಹವಾ ಸಿಂಗ್ ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ 2004 ರಲ್ಲಿ ನಿವೃತ್ತರಾಗಿದ್ದಾರೆ. ತಾಯಿ ಆಶಾ ದೇವಿ ಮತ್ತು ಅಜ್ಜಿ ಬಿರು ದೇವಿ ಗೃಹಿಣಿಯರಾಗಿದ್ದಾರೆ. ಸೋದರಿ ಸೃಷ್ಟಿ ದೆಹಲಿಯಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಗೆ ಸಿದ್ಧರಾಗುತ್ತಿದ್ದರು.
ಎರಡು ತಿಂಗಳ ಹಿಂದಷ್ಟೇ ವಿನಯ್ ಕುಟುಂಬವು ಗುರ್ಗಾಂವ್‌ನ ಹಿಮಾಂಶಿ ಅವರೊಂದಿಗೆ ಇವರ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಿಮಾಂಶಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದು, ಮಕ್ಕಳಿಗೆ ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹಿಮಾಂಶಿ ತಂದೆ ಸುನಿಲ್ ಕುಮಾರ್ ಗುರ್ಗಾಂವ್‌ನಲ್ಲಿ ಅಬಕಾರಿ ಮತ್ತು ತೆರಿಗೆ ಇಲಾಖೆ ಅಧಿಕಾರಿಯಾಗಿದ್ದಾರೆ.
ಇದನ್ನೂ ಓದಿ:ಪಹಲ್ಗಾಮ್ ದುರಂತ: ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ
ಕುಟುಂಬ ಸದಸ್ಯರು ನೀಡಿದ್ದ ಮಾಹಿತಿ ಪ್ರಕಾರ, ವಿನಯ್ ಮಾರ್ಚ್ 28 ರಿಂದ ಮದುವೆಗಾಗಿ ರಜೆ ತೆಗೆದುಕೊಂಡಿದ್ದರು. ಏಪ್ರಿಲ್ 16 ರಂದು ಮಸ್ಸೂರಿಯಲ್ಲಿ ಇವರ ಮದುವೆ ನಡೆದು ಮತ್ತು ಏಪ್ರಿಲ್ 19 ರಂದು ಕರ್ನಾಲ್‌ನಲ್ಲಿ ಆರತಕ್ಷತೆ ಆಯೋಜಿಸಿದ್ದರು. ಇದಾದ ನಂತರ ಅವರು ಯುರೋಪಿನಲ್ಲಿ ಹನಿಮೂನ್‌ಗೆ ಪ್ಲಾನ್ ಮಾಡಿದ್ದರು. ಆದರೆ ವೀಸಾ ಸಮಸ್ಯೆಗಳಿಂದಾಗಿ ಅದನ್ನು ರದ್ದುಗೊಳಿಸಿದ್ದರು. ಇದರ ಬದಲಾಗಿ ಏಪ್ರಿಲ್ 21 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದ ಜೋಡಿ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿರುವ ಹೋಟೆಲ್‌ನಲ್ಲಿ ತಂಗಿದ್ದರು. ಅಲ್ಲಿ ಊಟ ಮಾಡಿದ ನಂತರ, ಅವರು ಭಯೋತ್ಪಾದಕ ದಾಳಿ ನಡೆದ ಸ್ಥಳಕ್ಕೆ ಹೋಗಿದ್ದರು ಎಂದು ಕುಟುಂಬ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಮೇ 1 ರಂದು ವಿನಯ್ ಹುಟ್ಟುಹಬ್ಬವಿತ್ತು. ಜಮ್ಮು ಮತ್ತು ಕಾಶ್ಮೀರದಿಂದ ಹಿಂದಿರುಗಿದ ನಂತರ ವಿನಯ್ ತಮ್ಮ 27 ನೇ ಹುಟ್ಟುಹಬ್ಬವನ್ನು ಮನೆಯವರೊಂದಿಗೆ ಆಚರಿಸಿಕೊಳ್ಳಬೇಕಿತ್ತು. ಜೋಡಿ ಹನಿಮೂನ್‌ನಿಂದ ಹಿಂದಿರುಗಿದ ನಂತರ ಕುಟುಂಬವು ದೊಡ್ಡ ಪಾರ್ಟಿಯನ್ನು ಯೋಜಿಸಿತ್ತು. ನಂತರ ಮೇ3 ರಂದು ವಿನಯ್ ಮತ್ತು ಹಿಮಾಂಶಿ ಕೊಚ್ಚಿಗೆ ಹಿಂತಿರುಗಬೇಕಿತ್ತು. ಅಲ್ಲಿ ಅವರು ವಿಶ್ರಾಂತಿ ಗೃಹವನ್ನು ಕೂಡ ಬುಕ್ ಮಾಡಿದ್ದರು ಆದರೆ ವಿಧಿಯಾಟ ಬೇರೆಯೇ ಆಗಿತ್ತು.
ಇತ್ತೀಚೆಗೆ ನಡೆದ ವಿವಾಹದ ಕಾರಣ ಮನೆ ಸಂತೋಷದಿಂದ ತುಂಬಿತ್ತು. ಮಂಗಳವಾರ ಸಂಜೆ ಭಯೋತ್ಪಾದಕರು ವಿನಯ್ ಅವರ ಹೆಸರು ಕೇಳಿ ಗುಂಡು ಹಾರಿಸಿದರು, ಆದರೆ ಹಿಮಾಂಶಿ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು ಎಂದು ನಮಗೆ ತಿಳಿಯಿತು ಎಂದು ನೆರೆ ಮನೆಯ ನರೇಶ್ ಬನ್ಸಾಲ್ ದುಃಖ ವ್ಯಕ್ತಪಡಿಸಿದ್ದಾರೆ. ವಿನಯ್ ಕರ್ನಾಲ್‌ನ ಸಂತ ಕಬೀರ್ ಶಾಲೆಯಲ್ಲಿ ವ್ಯಾಸಂಗ ಮಾಡಿ ನಂತರ ದೆಹಲಿಯಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರು ಶಾಲಾ ದಿನಗಳಿಂದಲೇ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (ಸಿಡಿಎಸ್) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ. ನಂತರ ಅವರು ಎಸ್‌ಎಸ್‌ಬಿಗೆ ತಯಾರಿ ನಡೆಸಿ ಮೂರು ವರ್ಷಗಳ ಹಿಂದೆ ನೌಕಾಪಡೆಗೆ ಆಯ್ಕೆಯಾದರು ಎಂದು ವಿನಯ್ ಅವರ ಅಜ್ಜ ಹವಾ ಸಿಂಗ್ ಹೇಳಿದ್ದಾರೆ. 
