ಕೋಲ್ಕತ್ತಾದಲ್ಲಿ ಬಿಸಿಲಿನಿಂದ ಕುಸಿದು ಬಿದ್ದ ಕುದುರೆಗೆ ಮಾಲೀಕ ಥಳಿಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೇಟಾ ಇಂಡಿಯಾ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿ ಕುದುರೆಯನ್ನು ಆಶ್ರಯತಾಣಕ್ಕೆ ಕಳುಹಿಸಿದ್ದಾರೆ.
ಕೋಲ್ಕತ್ತಾ: ವಿಪರೀತ ಬಿಸಿಲು ಹಾಗೂ ಸುಸ್ತಿನಿಂದಾಗಿ ಕುದುರೆಯೊಂದು ರಸ್ತೆಯಲ್ಲಿ ಸಾಗುತ್ತಿದ್ದಾಗಲೇ ರಸ್ತೆ ಮಧ್ಯೆ ಕುಸಿದು ಬಿದ್ದಂತಹ ಘಟನೆ ನಡೆದಿದೆ. ಆದರೆ ಅದರ ಮಾಲೀಕ ಈ ಸಮಯದಲ್ಲಿ ಅದಕ್ಕೆ ನೀರು ಕೊಟ್ಟು ಸಹಾಯಕ್ಕೆ ಧಾವಿಸುವ ಬದಲು ಅದನ್ನು ಮೇಲೆಳಿಸುವುದಕ್ಕೆ ಥಳಿಸಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅನೇಕರು ಮಾಲೀಕನ ಕ್ರೌರ್ಯಕ್ಕೆ ಅಸಮಾಧಾನ ವ್ಯಕ್ಯಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಈ ಘಟನೆ ನಡೆದಿದೆ.
ಪೇಟಾ ಇಂಡಿಯಾ ಏಪ್ರಿಲ್ 29ರಂದು ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಕೋಲ್ಕತ್ತಾದಲ್ಲಿ ನಿರ್ಜಲೀಕರಣಗೊಂಡು ಕೃಶವಾಗಿದ್ದ ಕುದುರೆಯೊಂದು ಬಿಸಿಲಿನ ಹೊಡೆತಕ್ಕೆ ತುತ್ತಾಗಿ ಕುಸಿದು ಬಿತ್ತು. ತೀವ್ರವಾಗಿ ಕಡಿಮೆ ತೂಕ, ನಿರ್ಜಲೀಕರಣ ಮತ್ತು ನೋವಿನಿಂದ ಬಳಲುತ್ತಿರುವ ಕುದುರೆಗಳು ಪ್ರವಾಸಿಗರ ಆಕರ್ಷಣೆಯಾಗಬಾರದು ಎಂದು ಬರೆದು ಕೋಲ್ಕತ್ತಾ ಪೊಲೀಸರು, ಮಮತಾ ಬ್ಯಾನರ್ಜಿ, ಸೇರಿದಂತೆ ಹಲವರಿಗೆ ಟ್ಯಾಗ್ ಮಾಡಿದ್ದು, ದಯವಿಟ್ಟು ಕುದುರೆಯನ್ನು ಆಶ್ರಯತಾಣಕ್ಕೆ ಕಳುಹಿಸಿ ಮತ್ತು ಕ್ರೂರ ಕುದುರೆ ಎಳೆಯುವ ಬಂಡಿಗಳನ್ನು ಇ-ವಾಹನಗಳಾಗಿ ಬದಲಾಯಿಸಿ ಎಂದು ಮನವಿ ಮಾಡಿದ್ದರು. ಈ ವೀಡಿಯೋ ಸಾಕಷ್ಟು ವೈರಲ್ ಆಗಿ ಜನ ಇದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇದಾದ ನಂತರ ಕೋಲ್ಕತ್ತಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಎಫ್‌ಐಆರ್ ದಾಖಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಪೂಜಾ ಹೆಗ್ಡೆ ಕೂಡ ಕಳವಳ ವ್ಯಕ್ತಪಡಿಸಿ ಟ್ವಿಟ್ ಮಾಡಿದ್ದಾರೆ. ಸುಸ್ತು ಹಾಗೂ ಬಿಸಿಲಾಘಾತ ತಾಳಲಾರದೇ ಬಿದ್ದ ಕುದುರೆಯನ್ನು ಮತ್ತೆ ಮೇಲೇದು ಸಾಗುವಂತೆ ಒತ್ತಾಯಿಸಲಾಯಿತು. ಇಂತಹ ಕ್ರೌರ್ಯವನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿದ ಅವರು ಪಶ್ಚಿಮ ಬಂಗಾಳ ಸಿಎಂ ಹಾಗೂ ಕೋಲ್ಕತ್ತಾ ಪೊಲೀಸರಿಗೆ ಆಗ್ರಹಿಸಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಕ್ರೌರ್ಯ, ಇವರು ಈ ಕುದುರೆಗೆ ಆಹಾರವನ್ನಾದರೂ ನೀಡುತ್ತಾರೋ ಇಲ್ಲವೋ ಎಂದು ಪ್ರಶ್ನಿಸಿದ್ದಾರೆ. ಇಂತಹವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಕೋಲ್ಕತ್ತಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 24-4-2025ರಂದು ಭವಾನಿಪುರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ. ಪೇಟಾ ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ ಅಡಿ ಪ್ರಕರಣ ದಾಖಲಾಗಿದೆ. ಆರೋಪಿಯವ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಈ ಕುದುರೆಯನ್ನು ದಿನವೂ ತಪಾಸಣೆ ಇರುವ ಪ್ರಾಣಿಗಳ ಆಶ್ರಯ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಆರೋಗ್ಯವಾಗಿದೆ. ಈ ಬಗ್ಗೆ ಗಮನ ಸೆಳೆದ ಎಲ್ಲರಿಗೂ ಧನ್ಯವಾದಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಕ್ರಮಕ್ಕೆ ಈಗ ಪೇಟಾ ಇಂಡಿಯಾ ಧನ್ಯವಾದ ಹೇಳಿದೆ.
ಹಂದಿಗೆ ಹಾಕಿದ್ದ ಕೇಬಲ್ ಉರುಳಿಗೆ ಸಿಲುಕಿದ್ದರು ಬದುಕಿ ಮರಿಗಳಿಗೆ ಜನ್ಮ ನೀಡಿದ ಹುಲಿ
ಕಾಡು ಹಂದಿಗಳ ಹಾವಳಿ ತಪ್ಪಿಸುವುದಕ್ಕಾಗಿ ಹಳ್ಳಿಗಳ ಕಡೆ ಹಂದಿ ಹಿಡಿಯಲು ಲೋಹದ ಕೇಬಲ್ ವಯರ್‌ಗಳನ್ನು(ಉರುಳು) ಇಟ್ಟಿರುತ್ತಾರೆ. ಈ ಉರುಳಿನಲ್ಲಿ ಕಾಡು ಹಂದಿಯ ಬದಲು ಇತರ ಪ್ರಾಣಿಗಳು ಸಿಲುಕಿ ಸಾವನ್ನಪ್ಪಿದ ಘಟನೆಗಳೂ ನಡೆದಿವೆ. ಈಗ ಇಂತಹದ್ದೇ ಉರುಳಿನಲ್ಲಿ ಸಿಲುಕಿದ ಹುಲಿಯೊಂದು ಜೀವಂತವಾಗಿ ಬದುಕುಳಿದಿದ್ದಲ್ಲದೇ ಮರಿಗಳಿಗೂ ಜನ್ಮ ನೀಡಿ ಅವುಗಳ ಪೋಷಣೆ ಮಾಡುತ್ತಿರುವ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಪಿಲಿಭೀತ್‌ನ ಟೆರೈ ಪೂರ್ವ ಅರಣ್ಯ ವಿಭಾಗದ ಸುರೈ ಅರಣ್ಯ ವ್ಯಾಪ್ತಿಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಸೊಂಟದಲ್ಲಿ ಕೇಬಲ್ ಸಿಲುಕಿಕೊಂಡು ಗಾಯಗಳಾಗಿದ್ದರೂ ಈ ಹೆಣ್ಣು ಹುಲಿ ಸಂತಾನೋತ್ಪತಿ ಕ್ರಿಯೆ ನಡೆಸಿ ಮರಿಗಳಿಗೂ ಜನ್ಮ ನೀಡಿದೆ. ಹಿಂಗಾಲುಗಳ ಮುಂದೆ ಸೊಂಟದ ಜಾಗದಲ್ಲಿ ಈ ಕೇಬಲ್ ಸಿಲುಕಿಕೊಂಡಿತ್ತು. ಆದರೂ ಈ ಹುಲಿ ಮರಿಗಳಿಗೆ ಜನ್ಮ ನೀಡಿ ಜೀವಂತವಾಗಿ ಬದುಕುಳಿದಿರುವುದು ವನ್ಯಜೀವಿ ತಜ್ಞರಿಗೆ ಅಚ್ಚರಿ ಮೂಡಿಸಿದೆ.


