ಆಪರೇಷನ್ ಸಿಂಧೂರದಿಂದ ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆ ಕೇವಲ ಬೂಟಾಟಿಕೆ ಎಂದು ಜಗತ್ತಿಗೆ ಸಾಬೀತಾಯಿತು. ಭಾರತೀಯ ಸೇನೆ ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿದರೂ, ಪಾಕಿಸ್ತಾನ ಅಣ್ವಸ್ತ್ರ ಪ್ರಯೋಗಿಸಲಿಲ್ಲ.

ಪರೇಷನ್ ಸಿಂಧೂರದಿಂದ ಭಾರತ ಸಾಧಿಸಿದ್ದೇನು ಅಂತ ನೋಡಿದ್ರೆ, ಪಾಕಿಸ್ತಾನದ ಅಣ್ವಸ್ತ್ರದ ಬೂಟಾಟಿಕೆಯನ್ನ ಬಯಲು ಮಾಡಿದ್ದು. ಭಾರತೀಯ ಸೇನೆಯ ಕಾರ್ಯಾಚರಣೆ ಪರಮಾಣು ಬಾಂಬ್​ ದಾಳಿಯ ಮಾತುಗಳು ಕೇವಲ ಬಡಾಯಿ ಅನ್ನೋದು ಜಗತ್ತಿಗೇ ಅರ್ಥವಾಗಿದೆ. ಯಾಕಂದ್ರೆ ಅಣ್ವಸ್ತ್ರ ದೇಶವೊಂದರ ಮೇಲೆ ಇಷ್ಟು ದೊಡ್ಡ ಮಟ್ಟದ ದಾಳಿ ನಡೆಸಿದ ಮೊದಲ ದೇಶ ಭಾರತ. ಪಾಕಿಸ್ತಾನದ ಮಿಲಿಟರಿ ಹೆಡ್ಡಾಫೀಸು ರಾವಲ್ಪಿಂಡಿಯ ನೂರ್ ಖಾನ್ ಏರ್‌ಬೇಸ್‌ನಲ್ಲಿದ್ದ ನ್ಯೂಕ್ಲಿಯರ್ ಕಮಾಂಡ್ ಅಥಾರಿಟಿಯ ಸಮೀಪಕ್ಕೇ ಭಾರತ ದಾಳಿ ಮಾಡಿತ್ತು. ಪಾಕಿಸ್ತಾನದ 23 ಸೇನಾ ನೆಲೆ, ಉಗ್ರ ನೆಲೆಗಳ ಮೇಲೆ ಭಾರತ ಹಿಂದೆಂದೂ ಮಾಡದಂತಾ ದಾಳಿ ಮಾಡಿದರೂ ಪಾಕಿಸ್ತಾನ ಈಗ ಅಣ್ವಸ್ತ್ರದ ಮಾತನಾಡುತ್ತಿಲ್ಲ. ಆಪರೇಷನ್ ಸಿಂಧೂರಕ್ಕೆ ಮೊದಲು ದಾಳಿ ಮಾಡಿದ್ರೆ, ಅಣ್ವಸ್ತ್ರದ ಕ್ಷಿಪಣಿಗಳು ಭಾರತದೊಳಕ್ಕೆ ನುಗ್ಗಿ ಬಿಡುತ್ವೆ ಅಂತ ಪಾಕಿಸ್ತಾನದ ಮಂತ್ರಿಗಳು ತಲೆಗೊಬ್ಬರಂತೆ ಮಾತನಾಡಿದ್ದರು. ಪಾಕಿಸ್ತಾನಿ ಮೂಲದ ಪತ್ರಕರ್ತರೇ ಹೆಚ್ಚಿರೋ ಅಂತಾರಾಷ್ಟ್ರೀಯ ನ್ಯೂಸ್ ಚಾನಲ್ ಮತ್ತು ಪತ್ರಿಕೆಗಳ ಮೂಲಕ ಪಾಕಿಸ್ತಾನ ನ್ಯೂಕ್ಲಿಯರ್ ಕಮಿಟಿ ಜತೆ ಸಭೆ ನಡೆಸಲು ಮುಂದಾಗಿದೆ ಅನ್ನುವ ಸುದ್ದಿಗಳನ್ನು ಹಬ್ಬಿಸಲಾಯ್ತು. ಆದ್ರೆ ಇದು ಕೇವಲ ಬುರುಡೆ ಅನ್ನೋದು ಸಾಬೀತಾಗಿದೆ. ಪಾಕಿಸ್ತಾನದ ಯಾವ ನಗರಗಳೂ ಈಗ ಭಾರತಕ್ಕೆ ದೂರವಲ್ಲ. ರಾವಲ್ಪಿಂಡಿಯಿಂದ ಕರಾಚಿಯವರೆಗೂ ಭಾರತದ ಮಿಸೈಲ್​ಗಳು ನುಗ್ಗಿವೆ. ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನದ ಮೂಲೆ ಮೂಲೆಯನ್ನೂ ಭಾರತದ ಕ್ಷಿಪಣಿಗಳು ತಲುಪಿವೆ. 

1998ರ ನಂತರ ಭಾರತ-ಪಾಕ್ ಮಧ್ಯೆ ಸಂಘರ್ಷಗಳು ನಡೆದಾಗಲೆಲ್ಲಾ ಅಣ್ವಸ್ತ್ರದ ಪ್ರಸ್ತಾಪವಾಗುತ್ತಿತ್ತು. ಪಾಕಿಸ್ತಾನದ ಬಳಿ ಪರಮಾಣು ಬಾಂಬ್ ಇದೆ, ಆ ದೇಶವನ್ನು ಎದುರು ಹಾಕಿಕೊಳ್ಳುವುದು ಅಷ್ಟು ಸುಲಭವಲ್ಲ ಅನ್ನೋದೇ ದೊಡ್ಡ ಚರ್ಚೆಯಾಗ್ತಿತ್ತು. ಪರಮಾಣು ಶಸ್ತ್ರಾಸ್ತ್ರ ಇದೆ ಅನ್ನೋದನ್ನೇ ಗುರಾಣಿ ಮಾಡಿಕೊಂಡಿದ್ದ ಪಾಕಿಸ್ತಾನ, ಅದರ ನೆರಳಲ್ಲಿ ಭಾರತದ ವಿರುದ್ಧ ಉಗ್ರರ ಮೂಲಕ ಪರೋಕ್ಷ ಯುದ್ಧಕ್ಕಿಳಿಯಿತು. 1999ರಲ್ಲಿ ಪಾಕಿಸ್ತಾನಿ ಉಗ್ರರು ಇಂಡಿಯನ್ ಏರ್​ಲೈನ್ಸ್ ವಿಮಾನವನ್ನ ಕಾಂದಹಾರ್‌​ಗೆ ಅಪಹರಿಸಿದಾಗ, ಸಂಸತ್ ಭವನದ ಮೇಲೆ ದಾಳಿಯದಾಗ, ಗುಜರಾತ್‌ನ ಅಕ್ಷರಧಾಮಕ್ಕೆ ಉಗ್ರರು ನುಗ್ಗಿದಾಗಲೂ ಪಾಕಿಸ್ತಾನದ ವಿರುದ್ಧ ಸೇನಾ ಕಾರ್ಯಾಚರಣೆ ಬೇಡ, ಅದರ ಬಳಿ ಅಣ್ವಸ್ತ್ರ ಇದೆ ಅಂತ ಜಗತ್ತಿನ ಹಲವು ದೇಶಗಳು ಭಾರತಕ್ಕೆ ಉಪದೇಶ ಮಾಡ್ತಿದ್ದವು. 

ಅಷ್ಟೇ ಯಾಕೆ 2008ರಲ್ಲಿ ಪಾಕಿಸ್ತಾನದ ಲಷ್ಕರ್ ಉಗ್ರರು ಮುಂಬೈಗೆ ನುಗ್ಗಿ ಭಾರತೀಯ ಮಾರಣಹೋಮ ನಡೆಸಿದಾಗಲೂ ಪಾಕಿಸ್ತಾನಕ್ಕೆ ಭಾರತ ಸಾಕ್ಷ್ಯ ಕೊಟ್ಟು ಸುಮ್ಮನಾಗಿತ್ತು. ಪಾಕ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಮಾಡುವ ಪ್ರಸ್ತಾಪವೇ ಆಗ್ತಿರಲಿಲ್ಲ, ಅದಕ್ಕೆ ಕಾರಣ ಪಾಕಿಸ್ತಾನದ ಬಳಿ ಅಣ್ವಸ್ತ್ರ ಇದೆ ಅನ್ನೋ ಭಯ.

ನಮ್ಮ ಬಳಿ ಅಣ್ವಸ್ತ್ರ ಇದೆ ಅನ್ನೋದನ್ನ ದೊಡ್ಡಮಟ್ಟಕ್ಕೆ ಗುರಾಣಿಯನ್ನಾಗಿಸಿದ್ದು ಪಾಕಿಸ್ತಾನದ ಮಿಲಿಟರಿ ಜನರಲ್‌ಗಳು. ಈ ಭ್ರಮೆಯನ್ನ ಸ್ವಲ್ಪಮಟ್ಟಿಗೆ ಕಳಚಿದ್ದು, 2016ರ ಉರಿ ದಾಳಿ ನಂತರ ನಡೆದ ಸರ್ಜಿಕಲ್ ಸ್ಟ್ರೈಕ್. ನೀವು ಉಗ್ರರ ಮೂಲಕ ದಾಳಿ ಮಾಡಿದ್ರೆ ನಾವು ಸುಮ್ಮನಿರಲ್ಲ ಅಂತ ಭಾರತ ಸ್ಪಷ್ಟವಾಗಿ ತೋರಿಸಿದ ಮೊದಲ ಉದಾಹರಣೆ ಅದು. 2019ರ ಪುಲ್ವಾಮಾ ದಾಳಿ ಆ ನಂತರ ನಡೆದ ಭಾರತ ಮಾಡಿದ ಏರ್‌ಸ್ಟ್ರೈಕ್ ಪಾಕಿಸ್ತಾನದ ಅಣ್ವಸ್ತ್ರದ ಗುರಾಣಿಗೆ ಸ್ವಲ್ಪ ಪ್ರಮಾಣದ ಪೆಟ್ಟುಕೊಟ್ಟಿತ್ತು. ಆದ್ರೆ ಈಗಿನ ಆಪರೇಷನ್ ಸಿಂಧೂರ ಪಾಕಿಸ್ತಾನದ ಅಣ್ವಸ್ತ್ರ ದಾಳಿಯ ಬೆದರಿಕೆ ಕೇವಲ ಬೂಟಾಟಿಕೆ ಅನ್ನೋದನ್ನ ಬಯಲು ಮಾಡಿದೆ. ಆಪರೇಷನ್ ಸಿಂಧೂರದ ಯಶಸ್ಸು, ಪಾಕ್ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಹೋರಾಡಲು ಭಾರತಕ್ಕೆ ಮುಲಾಜಿಲ್ಲದೇ ಬಡಿದಾಡಲು ಇನ್ನಷ್ಟು ಶಕ್ತಿ ಕೊಟ್ಟಂತಾಗಿದೆ. 

1974ರಲ್ಲಿ ಸ್ಮೈಲಿಂಗ್ ಬುದ್ದ ಹೆಸರಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ಮಾಡಿ ಯಶಸ್ವಿಯಾದ ಮರುಕ್ಷಣವೇ ಪಾಕಿಸ್ತಾನ ತಾನೂ ಅಣ್ವಸ್ತ್ರ ಹೊಂದಲು ಪ್ರಯತ್ನ ಆರಂಭಿಸಿತು. ಹುಲ್ಲನ್ನು ತಿಂದು ಹಸಿವಿನಲ್ಲಾದರೂ ಇರುತ್ತೇವೆ, ಆದ್ರೆ ಅಣು ಬಾಂಬ್ ಅಭಿವೃದ್ಧಿಪಡಿಸಿಯೇ ತೀರುತ್ತೇವೆ ಎಂದಿದ್ದರು ಜುಲ್ಫಿಕರ್ ಆಲಿ ಬುಟ್ಟೋ. 1998ರಲ್ಲಿ ಚೀನಾದ ಸಹಾಯದಿಂದ ಪಾಕಿಸ್ತಾನ ಪರಮಾಣು ಬಾಂಬ್ ಪರೀಕ್ಷೆ ಮಾಡಿತ್ತು. ಆಗಿನಿಂದ ಪರಮಾಣು ಬಾಂಬ್ ಇದೆ ಅನ್ನುವ ಹೆಸರಲ್ಲಿ ಬ್ಲಾಕ್ ಮೇಲ್ ಮಾಡಿಕೊಂಡು ಉಗ್ರರನ್ನ ಭಾರತದೊಳಗೆ ನುಗ್ಗಿಸುವ ಕೆಲಸ ನಡೆದೇ ಇತ್ತು. ಈಗ ಆಪರೇಷನ್ ಸಿಂಧೂರ, ಪಾಕಿಸ್ತಾನದ ಈ ಬ್ಲಾಕ್ ಮೇಲೆ ಇನ್ನು ನಡೆಯಲ್ಲ, ಅಣ್ವಸ್ತ್ರಗಳಿದ್ದರೂ ಪಾಕಿಸ್ತಾನವನ್ನ ಶಿಕ್ಷಿಸಬಹುದು ಅನ್ನೋದನ್ನ ಜಗತ್ತಿಗೆ ತೋರಿಸಿದೆ.